ಮಣಿಕಂಠ ಅಯ್ಯಪ್ಪ ಸ್ವಾಮಿಯಾಗಿದ್ದು ಹೇಗೆ ಗೊತ್ತಾ? How Manikanta Became Lord Ayyappa?

Lord Ayyappa story in Kannada, Sabarimala temple history Kannada, Manikanta life story in Kannada, Significance of 18 steps in Sabarimala Kannada, Ayyappa Swamy miracles in Kannada, Sabarimala pilgrimage rules in Kannada, Story of Mahishi and Ayyappa Kannada, Malikapurathamma story in Kannada, Why Ayyappa is a Brahmachari in Kannada, Meaning of Irumudi in Kannada

How Manikanta became the deity of Sabarimala in Kannada

ಸ್ವಾಮಿಯೇ ಶರಣಂ ಅಯ್ಯಪ್ಪ!” ಈ ಮಂತ್ರ ಕಿವಿಗೆ ಬಿದ್ದರೆ ಸಾಕು, ಮೈ ರೋಮಾಂಚನವಾಗುತ್ತೆ. ಕೋಟ್ಯಂತರ ಭಕ್ತರ ಆರಾಧ್ಯ ದೈವ, ಪಂದಳದ ರಾಜಕುಮಾರ, ಶಬರಿಮಲೆಯ ಒಡೆಯ ಮಣಿಕಂಠನ ಶಕ್ತಿ ಎಂತದ್ದು ಗೊತ್ತಾ? ಸಾಕ್ಷಾತ್ ಈಶ್ವರ ಮತ್ತು ವಿಷ್ಣುವಿನ ಸಂಗಮದಿಂದ ಹುಟ್ಟಿದ ಈ ಮಗು, ಹುಲಿಯನ್ನೇ ಪಳಗಿಸಿ ಮಹೀಶಿಯನ್ನೇ ಕೊಂದದ್ದು ಹೇಗೆ?

ಶಬರಿಮಲೆಯ ಆರಾಧ್ಯ ದೈವ, ಪಂದಳದ ರಾಜಕುಮಾರ ಮಣಿಕಂಠನ ಜೀವನ ಚರಿತ್ರೆ ಮತ್ತು ಶಬರಿಮಲೆಯ ಪೌರಾಣಿಕ ಹಿನ್ನೆಲೆಯನ್ನು ಈ ಲೇಖನದಲ್ಲಿ ವಿವರವಾಗಿ ತಿಳಿಯೋಣ ಬನ್ನಿ.

ಅಯ್ಯಪ್ಪ ಸ್ವಾಮಿ ಮಣಿಕಂಠನ ಅಸಲಿ ಕಥೆ! The Real Story of Manikanta!

ಅಯ್ಯಪ್ಪ ಸ್ವಾಮಿಯ ದಿವ್ಯ ಜನನ

ದುಷ್ಟ ಶಕ್ತಿಗಳ ಅಟ್ಟಹಾಸ ಮಿತಿಮೀರಿದಾಗ, ಪರಾಶಕ್ತಿಯು ದುರ್ಗೆಯ ಅವತಾರ ತಾಳಿ ಮಹಿಷಾಸುರನನ್ನು ಸಂಹರಿಸುತ್ತಾಳೆ. ಈ ಘಟನೆಯಿಂದ ರಕ್ಕಸ ಕುಲವೇ ನಡುಗುತ್ತದೆ. ಆದರೆ ಮಹಿಷಾಸುರನ ತಂಗಿಯಾದ ಮಹಿಷಿ, ತನ್ನ ಅಣ್ಣನ ಸಾವಿಗೆ ದೇವತೆಗಳೇ ಕಾರಣ ಎಂದು ಭಾವಿಸಿ, ಅವರ ಮೇಲೆ ಸೇಡು ತೀರಿಸಿಕೊಳ್ಳಲು ನಿರ್ಧರಿಸುತ್ತಾಳೆ. ದೇವತೆಗಳನ್ನು ಸೋಲಿಸಲು ತನಗೆ ಸಾವು ಬರಬಾರದಂತಹ ಒಂದು ವಿಶೇಷ ವರ ಬೇಕೆಂದು ಅವಳು ನಿಶ್ಚಯಿಸುತ್ತಾಳೆ.

ಮಹಿಷಿಯು ದಟ್ಟವಾದ ಅರಣ್ಯಕ್ಕೆ ಹೋಗಿ, ಅನ್ನಾಹಾರಗಳನ್ನು ತ್ಯಜಿಸಿ ಸೃಷ್ಟಿಕರ್ತ ಬ್ರಹ್ಮನನ್ನು ಕುರಿತು ಸಾವಿರಾರು ವರ್ಷಗಳ ಕಾಲ ಘೋರ ತಪಸ್ಸು ಮಾಡುತ್ತಾಳೆ. ಕೊನೆಗೆ ಪ್ರತ್ಯಕ್ಷನಾದ ಬ್ರಹ್ಮದೇವನು, “ಮಹಿಷಿ, ನಿನ್ನ ತಪಸ್ಸಿಗೆ ಮೆಚ್ಚಿದೆ, ನಿನಗೆ ಬೇಕಾದ ವರವನ್ನು ಕೇಳು” ಎನ್ನುತ್ತಾನೆ. ಮೊದಲು ಅವಳು ತನಗೆ ಸಾವೇ ಬರಬಾರದು ಎಂದು ಕೇಳುತ್ತಾಳೆ. ಆದರೆ ಹುಟ್ಟಿದ ಮೇಲೆ ಸಾವು ನಿಶ್ಚಿತ ಎಂದು ಬ್ರಹ್ಮ ತಿಳಿಸಿದಾಗ, ಅವಳು ಅತ್ಯಂತ ಚಾಣಾಕ್ಷತನದಿಂದ ಒಂದು ತಂತ್ರ ಹೂಡುತ್ತಾಳೆ.

ಪ್ರಕೃತಿ ನಿಯಮದಂತೆ ಮಗು ಹುಟ್ಟಬೇಕಾದರೆ ಗಂಡು ಮತ್ತು ಹೆಣ್ಣಿನ ಮಿಲನವಾಗಬೇಕು. ಆದ್ದರಿಂದ ಅವಳು ಬ್ರಹ್ಮನ ಬಳಿ “ದೇವನೇ, ನನಗೆ ಸಾವು ಬರುವುದಿದ್ದರೆ ಅದು ವಿಷ್ಣು ಮತ್ತು ಶಿವ ಅವರ ಮಿಲನದಿಂದ ಹುಟ್ಟಿದ ಮಗುವಿನಿಂದ ಮಾತ್ರ ಸಾಧ್ಯವಾಗಬೇಕು. ಅಂತಹ ಮಗು ಹುಟ್ಟಿದ ನಂತರ 12 ವರ್ಷಗಳ ಕಾಲ ಭೂಮಿಯ ಮೇಲೆ ಸಾಮಾನ್ಯ ಮನುಷ್ಯನಂತೆ ಜೀವಿಸಿರಬೇಕು” ಎಂದು ವರ ಕೇಳುತ್ತಾಳೆ. ಗಂಡು ಮತ್ತು ಗಂಡಿನ ಮಿಲನದಿಂದ ಮಗು ಜನಿಸಲು ಸಾಧ್ಯವೇ ಇಲ್ಲ ಎಂಬ ಅಹಂಕಾರ ಮತ್ತು ದರ್ಪ ಅವಳಲ್ಲಿತ್ತು. ಬ್ರಹ್ಮದೇವನು “ತಥಾಸ್ತು” ಎಂದು ಅವಳು ಕೇಳಿದ ವರವನ್ನು ನೀಡುತ್ತಾನೆ.

ವರವನ್ನು ಪಡೆದ ಮಹಿಷಿ ತಾನು ಅಜೇಯಳೆಂದು ಭಾವಿಸುತ್ತಾಳೆ. ಅವಳು ಇಂದ್ರಲೋಕದ ಮೇಲೆ ದಾಳಿ ಮಾಡಿ ದೇವತೆಗಳನ್ನು ಅಲ್ಲಿಂದ ಓಡಿಸುತ್ತಾಳೆ. ಋಷಿ-ಮುನಿಗಳ ಯಜ್ಞಯಾಗಾದಿಗಳನ್ನು ಧ್ವಂಸ ಮಾಡುತ್ತಾ, ಭೂಲೋಕದಲ್ಲಿ ಅಧರ್ಮದ ಹಾದಿ ಹಿಡಿಯುತ್ತಾಳೆ. ತನ್ನನ್ನು ಯಾರೂ ಕೊಲ್ಲಲು ಸಾಧ್ಯವಿಲ್ಲ ಎಂಬ ಗರ್ವದಿಂದ ಅವಳು ದೇವತೆಗಳಿಗೆ ನೀಡಿದ ಕಿರುಕುಳ ಅಸಹನೀಯವಾಗುತ್ತದೆ.

ದೇವತೆಗಳೆಲ್ಲರೂ ಸೇರಿ ಕೊನೆಗೆ ಕೈಲಾಸ ಮತ್ತು ವೈಕುಂಠಕ್ಕೆ ಧಾವಿಸಿ, ಮಹಿಷಿಯ ವರದ ರಹಸ್ಯವನ್ನು ಭೇದಿಸಿ ಜಗತ್ತನ್ನು ರಕ್ಷಿಸುವಂತೆ ಹರಿ-ಹರರಲ್ಲಿ ಪ್ರಾರ್ಥಿಸುತ್ತಾರೆ. ಇದೇ ಮುಂದೆ ಮೋಹಿನಿ ಅವತಾರ ಮತ್ತು ಮಣಿಕಂಠನ ಜನನಕ್ಕೆ ನಾಂದಿಯಾಗುತ್ತದೆ.

ಜಗತ್ತನ್ನು ಮಹಿಷಿಯ ಕಾಟದಿಂದ ರಕ್ಷಿಸಲು ವಿಷ್ಣುವು ಅತ್ಯಂತ ಸುಂದರವಾದ ‘ಮೋಹಿನಿ’ ಅವತಾರವನ್ನು ತಾಳುತ್ತಾನೆ. ಶಿವ ಮತ್ತು ಮೋಹಿನಿಯ ಮಿಲನದಿಂದ, ಪಂಪಾ ನದಿಯ ತೀರದಲ್ಲಿ ಒಂದು ಗಂಡು ಮಗು ಜನಿಸುತ್ತದೆ.

ಪಂದಳದ ರಾಜಕುಮಾರನಾಗಿ ಮಣಿಕಂಠ

ಪಂದಳ ದೇಶದ ರಾಜ ರಾಜಶೇಖರ ಪಾಂಡಿಯನ್ ಒಬ್ಬ ಧರ್ಮಿಷ್ಠ ರಾಜನಾಗಿದ್ದರೂ ಮಕ್ಕಳಿಲ್ಲ ಎಂಬ ಕೊರಗು ಅವನನ್ನು ಕಾಡುತ್ತಿರುತ್ತದೆ. ಒಂದು ದಿನ ರಾಜನು ತನ್ನ ಸೈನಿಕರೊಂದಿಗೆ ಪಂಪಾ ನದಿಯ ದಟ್ಟವಾದ ಅರಣ್ಯದಲ್ಲಿ ಬೇಟೆಯಾಡಲು ಹೋಗುತ್ತಾನೆ. ಹಕ್ಕಿಗಳ ಚಿಲಿಪಿಲಿ ಮತ್ತು ನದಿಯ ಸದ್ದಿನ ನಡುವೆ, ರಾಜನಿಗೆ ಪುಟ್ಟ ಮಗುವಿನ ಅಳುವಿನ ಧ್ವನಿ ಕೇಳಿಸುತ್ತದೆ.

ನದಿಯ ದಡದಲ್ಲಿ ತೇಜಸ್ವಿಯಾಗಿ ಹೊಳೆಯುತ್ತಿದ್ದ ಆ ಮಗುವನ್ನು ಕಂಡ ರಾಜನಿಗೆ ಆಶ್ಚರ್ಯವೋ ಆಶ್ಚರ್ಯ. ಆ ಮಗು ಸಾಮಾನ್ಯ ಮಗು ವಾಗಿರಲಿಲ್ಲ; ಅದರ ಸುತ್ತ ಒಂದು ದೈವಿಕ ಪ್ರಭೆಯಿತ್ತು. ಎಲ್ಲಕ್ಕಿಂತ ಮುಖ್ಯವಾಗಿ, ಆ ಪುಟ್ಟ ಬಾಲಕನ ಕುತ್ತಿಗೆಯಲ್ಲಿ ಒಂದು ಚಿನ್ನದ ಮಣಿ ಮಿಂಚುತ್ತಿತ್ತು. ಇದೇ ಕಾರಣಕ್ಕೆ ಆ ಮಗುವಿಗೆ ಮುಂದೆ ‘ಮಣಿಕಂಠ’ ಎಂಬ ಹೆಸರು ಬಂದಿತು. ಕಾಡು ಮೃಗಗಳ ನಡುವೆ ಈ ಹಸುಗೂಸು ಇಷ್ಟು ಸುರಕ್ಷಿತವಾಗಿ, ನಗುನಗುತ ಇರುವುದನ್ನು ಕಂಡು ರಾಜನು ಮಂತ್ರಮುಗ್ಧನಾಗುತ್ತಾನೆ.

ಅದೇ ಕ್ಷಣದಲ್ಲಿ ಅಲ್ಲಿಗೆ ಒಬ್ಬ ಸನ್ಯಾಸಿ ಪ್ರತ್ಯಕ್ಷರಾಗುತ್ತಾರೆ. ಆ ಸನ್ಯಾಸಿಯು ರಾಜನಿಗೆ “ಈ ಮಗುವಿನ ಬಗ್ಗೆ ಚಿಂತಿಸಬೇಡ. ಇವನು ದೈವದತ್ತವಾದ ಮಗು. ಇವನನ್ನು ಅರಮನೆಗೆ ಕರೆದೊಯ್ದು ನಿನ್ನ ಸ್ವಂತ ಮಗನಂತೆ ಸಾಕು. ಇವನಿಗೆ 12 ವರ್ಷ ತುಂಬಿದಾಗ ಇವನ ಅವತಾರದ ನಿಜವಾದ ರಹಸ್ಯ ಮತ್ತು ಶಕ್ತಿ ನಿನಗೆ ತಿಳಿಯುತ್ತದೆ” ಎಂದು ಹೇಳುತ್ತಾನೆ.

ಇದನ್ನು ಕೇಳಿದ ರಾಜನ ಕಣ್ಣಲ್ಲಿ ಆನಂದಬಾಷ್ಪ ಸುರಿಯುತ್ತದೆ. ಮಗುವಿಲ್ಲದ ತನ್ನ ಬದುಕಿಗೆ ಸಾಕ್ಷಾತ್ ಭಗವಂತನೇ ಪ್ರಸಾದ ನೀಡಿದ್ದಾನೆ ಎಂದು ಭಾವಿಸಿ, ಮಣಿಕಂಠನನ್ನು ಎದೆಗೆ ಅಪ್ಪಿಕೊಂಡು ಅರಮನೆಗೆ ರಾಜಗೌರವದೊಂದಿಗೆ ಕರೆತರುತ್ತಾನೆ. ಇಲ್ಲಿಂದಲೇ ಶುರುವಾಗುತ್ತೆ ನೋಡಿ, ಪಂದಳದ ರಾಜಕುಮಾರ ಮಣಿಕಂಠನ ಪವಾಡಗಳ ಸರಣಿ!

ಅರಮನೆಯ ಪಿತೂರಿ ಮತ್ತು ಹುಲಿ ಹಾಲಿನ ಸಾಹಸ

ಪಂದಳದ ಅರಮನೆಯಲ್ಲಿ ಮಣಿಕಂಠನು ಸಕಲ ಕಲೆಗಳಲ್ಲಿ ಪಾರಂಗತನಾಗಿ ಬೆಳೆಯುತ್ತಾನೆ. ಆದರೆ ಅವನ ಅಸಾಧಾರಣ ಬೆಳವಣಿಗೆಯನ್ನು ಕಂಡು ಅಸೂಯೆಪಟ್ಟ ಮಂತ್ರಿ, ರಾಣಿಯ ಮನಸ್ಸನ್ನು ಕೆಡಿಸುತ್ತಾನೆ. ಮಣಿಕಂಠನಿಗೆ ಪಟ್ಟಾಭಿಷೇಕವಾದರೆ ರಾಣಿಯ ಸ್ವಂತ ಮಗನಿಗೆ ಅನ್ಯಾಯವಾಗುತ್ತದೆ ಎಂದು ನಂಬಿಸುತ್ತಾನೆ. ಇದರ ಪರಿಣಾಮವಾಗಿ ರಾಣಿಯು ತನಗೆ ತಡೆಯಲಾಗದಷ್ಟು ಹೊಟ್ಟೆನೋವು ಬಂದಿದೆ ಎಂದು ನಾಟಕವಾಡುತ್ತಾಳೆ. ರಾಜಕುಮಾರನನ್ನು ಕಾಡಿಗೆ ಕಳುಹಿಸಿ ಅಲ್ಲಿ ಪ್ರಾಣಿಗಳ ಕೈಯಲ್ಲಿ ಸಾಯಿಸುವುದು ಮಂತ್ರಿಯ ಗುರಿಯಾಗಿರುತ್ತದೆ. ಅದಕ್ಕಾಗಿಯೇ, “ಹುಲಿಯ ಹಾಲು ತಂದರೆ ಮಾತ್ರ ರಾಣಿಯ ಪ್ರಾಣ ಉಳಿಯುತ್ತದೆ” ಎಂಬ ಸುಳ್ಳನ್ನು ವೈದ್ಯರ ಮೂಲಕ ಹೇಳಿಸಲಾಗುತ್ತದೆ.

ತನ್ನ ತಾಯಿಯ ಪ್ರಾಣ ಉಳಿಸಲು ಮಣಿಕಂಠನು ಕಿಂಚಿತ್ತೂ ಯೋಚಿಸದೆ ದಟ್ಟವಾದ ಅರಣ್ಯಕ್ಕೆ ಕಾಲಿಡುತ್ತಾನೆ. ರಾಜಶೇಖರ ಪಾಂಡಿಯನ್ ತನ್ನ ಮಗನನ್ನು ಕಳುಹಿಸಲು ಇಷ್ಟವಿಲ್ಲದಿದ್ದರೂ, ಮಣಿಕಂಠನ ದೃಢ ನಿರ್ಧಾರಕ್ಕೆ ಒಪ್ಪಬೇಕಾಗುತ್ತದೆ. ಕೈಯಲ್ಲಿ ಬಿಲ್ಲು-ಬಾಣ ಹಿಡಿದು, ಹೆಗಲ ಮೇಲೆ ಸಣ್ಣ ಬುತ್ತಿ ಹೊತ್ತು ಮಣಿಕಂಠನು ಪಂಪಾ ನದಿಯ ದಡಕ್ಕೆ ತಲುಪುತ್ತಾನೆ. ಅಲ್ಲಿ ಅಯ್ಯಪ್ಪನ ಆಗಮನಕ್ಕಾಗಿ ಕಾಯುತ್ತಿದ್ದ ಮಹಿಷಿಯು ಅಟ್ಟಹಾಸದಿಂದ ಅಡ್ಡ ಬರುತ್ತಾಳೆ.

ಮಹಿಷಿಯು ತನಗೆ ಸಾವು ಬರಲು ಸಾಧ್ಯವೇ ಇಲ್ಲ ಎಂಬ ಗರ್ವದಿಂದ ಮಣಿಕಂಠನ ಮೇಲೆ ಆಕ್ರಮಣ ಮಾಡುತ್ತಾಳೆ. ಆದರೆ ಮಣಿಕಂಠನು ಸಾಮಾನ್ಯ ಬಾಲಕನಲ್ಲ, ಅವನು ಹರಿ-ಹರರ ತೇಜಸ್ಸು!

ಇಬ್ಬರ ನಡುವೆ ಭೀಕರ ಯುದ್ಧ ನಡೆಯುತ್ತದೆ. ಮಣಿಕಂಠನು ದೈವಿಕ ಬಾಣಗಳನ್ನು ಪ್ರಯೋಗಿಸಿ ಮಹಿಷಿಯನ್ನು ಅಸಹಾಯಕಳನ್ನಾಗಿ ಮಾಡುತ್ತಾನೆ. ಅಂತಿಮವಾಗಿ ಮಣಿಕಂಠನು ಮಹಿಷಿಯ ಮೇಲೆ ಜಿಗಿದು ಅವಳನ್ನು ಕೆಡವಿ ಸಂಹರಿಸುತ್ತಾನೆ. ಮಹಿಷಿಯು ಮಣಿಕಂಠನ ಪಾದದ ಅಡಿಯಲ್ಲಿ ಪ್ರಾಣ ಬಿಡುವ ಮೂಲಕ ತನ್ನ ಶಾಪದಿಂದ ಮುಕ್ತಿ ಪಡೆಯುತ್ತಾಳೆ.

ಮಹಿಷಿಯ ಸಂಹಾರವಾದ ಕೂಡಲೇ ದೇವಲೋಕದಲ್ಲಿ ಹೂಮಳೆ ಸುರಿಯುತ್ತದೆ. ದೇವತೆಗಳೆಲ್ಲರೂ ಪ್ರತ್ಯಕ್ಷರಾಗಿ ಮಣಿಕಂಠನನ್ನು ಸ್ತುತಿಸುತ್ತಾರೆ. ಜಗತ್ತನ್ನು ಕಾಡುತ್ತಿದ್ದ ಅತಿದೊಡ್ಡ ಅಧರ್ಮದ ಶಕ್ತಿಯನ್ನು ಕೇವಲ 12 ವರ್ಷದ ಬಾಲಕ ಕೊನೆಗಾಣಿಸಿದ್ದನ್ನು ಕಂಡು ಪ್ರಕೃತಿಯೇ ಸಂಭ್ರಮಿಸುತ್ತದೆ. ಮಹಿಷಿಯ ಸಾವಿನೊಂದಿಗೆ ದೇವತೆಗಳಿಗೆ ಸ್ವರ್ಗ ಮರಳಿ ಸಿಗುತ್ತದೆ ಮತ್ತು ಭೂಲೋಕದಲ್ಲಿ ಶಾಂತಿ ನೆಲೆಸುತ್ತದೆ. ಈ ವಿಜಯದ ನಂತರವೇ ಮಣಿಕಂಠನು ತಾನು ಹುಲಿಗಳ ಮೇಲೆ ಸವಾರಿ ಮಾಡುತ್ತಾ ಅರಮನೆಗೆ ಮರಳುವ ಮೂಲಕ ತನ್ನ ನಿಜವಾದ ಅವತಾರದ ಶಕ್ತಿಯನ್ನು ಜಗತ್ತಿಗೆ ತೋರಿಸುತ್ತಾನೆ.

ಶಬರಿಮಲೆ ಮತ್ತು 18 ಮೆಟ್ಟಿಲುಗಳ ರಹಸ್ಯ

ತನ್ನ ಅವತಾರ ಕಾರ್ಯ ಮುಗಿದ ಮೇಲೆ ಮಣಿಕಂಠನು ತಾನು ಕಾಡಿಗೆ ಮರಳುವ ಸಮಯ ಬಂದಿದೆ ಎಂದು ಹೇಳುತ್ತಾನೆ. ರಾಜನ ಕೋರಿಕೆಯಂತೆ ತನಗಾಗಿ ಒಂದು ಮಂದಿರ ಕಟ್ಟಲು ಅಪ್ಪಣೆ ನೀಡುತ್ತಾನೆ. ಒಂದು ಬಾಣವನ್ನು ಬಿಟ್ಟು ಅದು ಎಲ್ಲಿ ಬೀಳುತ್ತೋ ಅಲ್ಲಿ ದೇವಸ್ಥಾನ ಕಟ್ಟಲು ಹೇಳುತ್ತಾನೆ. ಆ ಬಾಣ ಬಿದ್ದ ಜಾಗವೇ ಶಬರಿಮಲೆ. ಇಲ್ಲಿಗೆ ಬರುವ ಭಕ್ತರು 41 ದಿನಗಳ ಕಾಲ ಕಠಿಣ ವ್ರತ ಮಾಡಬೇಕು.

ಮಾಲೆ ಹಾಕಿದ ಮೇಲೆ ಮಾಂಸಾಹಾರ, ಕೆಟ್ಟ ಆಲೋಚನೆ ಬಿಟ್ಟು ಶುದ್ಧ ಬ್ರಹ್ಮಚರ್ಯ ಪಾಲಿಸಬೇಕು. ತಲೆಯ ಮೇಲೆ “ಇರುಮುಡಿ” ಹೊತ್ತು ಬರಿಗಾಲಲ್ಲಿ ನಡೆಯುತ್ತಾ ಆ 18 ಮೆಟ್ಟಿಲು ಹತ್ತಿದಾಗ ಸಿಗುವ ಮೋಕ್ಷದ ಅನುಭವವೇ ಬೇರೆ. ಈ 18 ಮೆಟ್ಟಿಲುಗಳು ನಮ್ಮ ಪಂಚೇಂದ್ರಿಯಗಳು, ರಾಗ-ದ್ವೇಷಗಳು ಮತ್ತು ಅಷ್ಟಸಿದ್ಧಿಗಳನ್ನು ಜಯಿಸುವುದಕ್ಕೆ ಸಂಕೇತವಾಗಿವೆ.

ಶಬರಿಮಲೆ ಯಾತ್ರೆಯಲ್ಲಿ ಅಯ್ಯಪ್ಪನ ದರ್ಶನಕ್ಕಿಂತಲೂ ಮುಖ್ಯವಾದದ್ದು ನಾವು ತಲೆಯ ಮೇಲೆ ಹೊರುವ ಆ ‘ಇರುಮುಡಿ’. ಆದರೆ ಈ ಇರುಮುಡಿ ಹೊರುವ ಪದ್ಧತಿ ಶುರುವಾಗಿದ್ದು ಹೇಗೆ ಗೊತ್ತಾ? ಇದರ ಹಿಂದೆ 800 ವರ್ಷಗಳ ಇತಿಹಾಸವಿದೆ.

ಹಿಂದಿನ ಕಾಲದಲ್ಲಿ ಶಬರಿಮಲೆ ಎಂದರೆ ಇಂದಿನಂತೆ ರಸ್ತೆಗಳಿರಲಿಲ್ಲ. ಅದು ದಟ್ಟವಾದ ಅರಣ್ಯ, ಕಾಡು ಮೃಗಗಳ ವಾಸಸ್ಥಾನವಾಗಿತ್ತು. ಪಂದಳದ ರಾಜ ರಾಜಶೇಖರ ಪಾಂಡಿಯನ್ ಅಯ್ಯಪ್ಪನಿಗಾಗಿ ಮಂದಿರ ಕಟ್ಟಿದ ನಂತರ, ಭಕ್ತರು ಕಾಡಿನ ಹಾದಿಯಲ್ಲಿ ದಿನಗಟ್ಟಲೆ ನಡೆದು ಬರಬೇಕಿತ್ತು. ಆ ದಾರಿಯಲ್ಲಿ ಯಾವುದೇ ಹಳ್ಳಿ ಅಥವಾ ಅಂಗಡಿಗಳಿರಲಿಲ್ಲ. ಆಗ ಭಕ್ತರು ದೇವರಿಗೆ ಅರ್ಪಿಸುವ ಪೂಜಾ ಸಾಮಗ್ರಿ ಮತ್ತು ತಮಗೆ ದಾರಿಯುದ್ದಕ್ಕೂ ಬೇಕಾಗುವ ಆಹಾರವನ್ನು ಹೊತ್ತೊಯ್ಯಲು ಅನುಕೂಲವಾಗುವಂತೆ ಸಿದ್ಧಪಡಿಸಿದ್ದೇ ಈ ‘ಇರುಮುಡಿ’.

ಇರುಮುಡಿ ಎಂದರೆ ಕೇವಲ ಚೀಲವಲ್ಲ, ಅದು ಮನುಷ್ಯನ ಜೀವನದ ಎರಡು ಮುಖಗಳು. ಅದರ ಒಂದು ಭಾಗ ಮುನ್ಮುಡಿ: ಇದು ದೇವರಿಗಾಗಿ ಮೀಸಲಿಟ್ಟ ಭಾಗ. ಇದರಲ್ಲಿರುವ ತುಪ್ಪದ ತೆಂಗಿನಕಾಯಿ ಭಕ್ತನ ಆತ್ಮವನ್ನು ಸೂಚಿಸುತ್ತದೆ. ನಾವು ನಮ್ಮ ಅಹಂಕಾರವನ್ನು ಕಳಚಿ, ಶುದ್ಧವಾದ ತುಪ್ಪದಂತೆ ದೇವರಿಗೆ ಶರಣಾಗಬೇಕು ಎಂಬುದು ಇದರ ಅರ್ಥ. ಇರುಮುಡಿಯ ಇನ್ನೊಂದು ಭಾಗ ಪಿನ್ಮುಡಿ: ಇದು ಭಕ್ತನ ಹಸಿವು ಮತ್ತು ಪ್ರಾಪಂಚಿಕ ಅಗತ್ಯಗಳಿಗಾಗಿ. ಅಂದರೆ ನಮ್ಮ ಜೀವನದ ಆಸೆ ಮತ್ತು ಕರ್ಮಗಳನ್ನು ಇಲ್ಲಿ ನಾವು ದೇವರಿಗೆ ಅರ್ಪಿಸುತ್ತೇವೆ.

ಯಾರು 41 ದಿನಗಳ ಕಠಿಣ ವ್ರತ ಮಾಡಿ, ತಮ್ಮ ಸುಖ-ಸಂತೋಷಗಳನ್ನು ತ್ಯಜಿಸಿ ಈ ಇರುಮುಡಿಯನ್ನು ತಲೆಯ ಮೇಲೆ ಹೊರುತ್ತಾರೋ, ಅವರಿಗೆ ಮಾತ್ರ ಆ ಪವಿತ್ರವಾದ 18 ಮೆಟ್ಟಿಲುಗಳನ್ನು ಹತ್ತಲು ಅರ್ಹತೆ ಸಿಗುತ್ತದೆ. ಇರುಮುಡಿ ಎಂದರೆ ಅದು ಬರಿ ಹೊರೆಯಲ್ಲ, ಅದು ಭಕ್ತ ಮತ್ತು ಭಗವಂತನ ನಡುವಿನ ಆಧ್ಯಾತ್ಮಿಕ ಬಂಧ.

ಅಯ್ಯಪ್ಪನ ಸನ್ನಿಧಿಯಲ್ಲಿ ಸಮಾನತೆ ಮತ್ತು ಭಕ್ತಿ

ಅಯ್ಯಪ್ಪನ ಸನ್ನಿಧಿಯಲ್ಲಿ ರಾಜನೂ ಒಬ್ಬನೇ, ಬಡವನೂ ಒಬ್ಬನೇ. ಎಲ್ಲರೂ ಒಬ್ಬರನ್ನೊಬ್ಬರು “ಸ್ವಾಮಿ” ಎಂದೇ ಕರೆಯುತ್ತಾರೆ. ಜಾತಿ, ಮತ, ಪಂಥದ ಹಂಗಿಲ್ಲದ ಏಕೈಕ ಕ್ಷೇತ್ರ ಇದು. ಅಯ್ಯಪ್ಪನ ಗೆಳೆಯ ಮುಸ್ಲಿಂ ಯೋಧ “ವಾಪರ್” ಎಂಬುವವರಿಗೂ ಇಲ್ಲಿ ಸ್ಥಾನವಿದೆ

ಇದೇ ಕಾರಣಕ್ಕೆ ಅಯ್ಯಪ್ಪನಿಗೆ ಜಗತ್ತಿನಾದ್ಯಂತ ಕೋಟ್ಯಂತರ ಅಭಿಮಾನಿಗಳು ಮತ್ತು ಭಕ್ತರಿದ್ದಾರೆ. ಪ್ರತಿ ವರ್ಷ ಮಕರ ಸಂಕ್ರಾಂತಿಯ ದಿನ ಕಾಣಿಸಿಕೊಳ್ಳುವ ಆ “ಮಕರ ಜ್ಯೋತಿ”ಯನ್ನು ನೋಡಲು ಲಕ್ಷಾಂತರ ಜನ ಕಾದು ಕುಳಿತಿರುತ್ತಾರೆ.

ಅಯ್ಯಪ್ಪ ಸ್ವಾಮಿ ಯಾಕೆ ಬ್ರಹ್ಮಚಾರಿ ಆಗಿಯೇ ಉಳಿದರು?

ಅಯ್ಯಪ್ಪ ಸ್ವಾಮಿ ಯಾಕೆ ಬ್ರಹ್ಮಚಾರಿ ಆಗಿಯೇ ಉಳಿದರು ಎಂಬ ಪ್ರಶ್ನೆಗೆ ಒಂದು ಬಹಳ ನೋವಿನ ಮತ್ತು ಭಕ್ತಿಯ ಕಥೆಯಿದೆ. ಅಯ್ಯಪ್ಪನು ಮಹಿಷಿಯನ್ನು ಸಂಹರಿಸಿದಾಗ, ಆ ರಕ್ಕಸಿಯ ಶರೀರದಿಂದ ಒಬ್ಬ ಸುಂದರ ದೇವತೆ ಹೊರಬರುತ್ತಾಳೆ. ಆಕೆ ಮೂಲತಃ ಒಬ್ಬ ಶಾಪಗ್ರಸ್ತ ದೇವತೆಯಾಗಿದ್ದು, ಮಹಿಷಿಯ ಸಂಹಾರದ ನಂತರ ಶಾಪಮುಕ್ತಿ ಹೊಂದುತ್ತಾಳೆ. ಆ ದೇವತೆ ಅಯ್ಯಪ್ಪನ ತೇಜಸ್ಸನ್ನು ಕಂಡು ಮಾರುಹೋಗಿ, “ನನ್ನನ್ನು ವಿವಾಹವಾಗು” ಎಂದು ಪ್ರಾರ್ಥಿಸುತ್ತಾಳೆ.

ಆದರೆ ಅಯ್ಯಪ್ಪನು ಈ ಭೂಮಿಗೆ ಬಂದಿರುವುದು ಧರ್ಮ ಸ್ಥಾಪನೆಗಾಗಿ ಮತ್ತು ಭಕ್ತರ ಕಷ್ಟ ನೀಗಿಸುವುದಕ್ಕಾಗಿ. ತಾನು “ನೈಷ್ಠಿಕ ಬ್ರಹ್ಮಚಾರಿ”ಯಾಗಿ ಉಳಿಯುವುದಾಗಿ ಆಕೆಗೆ ತಿಳಿಸುತ್ತಾನೆ. ಆದರೆ ಆಕೆಯ ಭಕ್ತಿಗೆ ಕಟ್ಟುಬಿದ್ದ ಅಯ್ಯಪ್ಪ ಒಂದು ವಚನವನ್ನು ನೀಡುತ್ತಾನೆ.

“ಯಾವ ವರ್ಷ ನನ್ನನ್ನು ನೋಡಲು ಹೊಸ ಭಕ್ತರು ಶಬರಿಮಲೆಗೆ ಬರುವುದಿಲ್ಲವೋ, ಆ ವರ್ಷ ನಾನು ನಿನ್ನನ್ನು ವಿವಾಹವಾಗುತ್ತೇನೆ” ಎಂದು ಮಾತು ಕೊಡುತ್ತಾನೆ. ಅಲ್ಲಿಯವರೆಗೆ ಆಕೆಯನ್ನು ತನ್ನ ಮಂದಿರದ ಪಕ್ಕದಲ್ಲೇ “ಮಾಳಿಕಾ ಪುರತ್ತಮ್ಮ” ಎಂಬ ಹೆಸರಿನಲ್ಲಿ ನೆಲೆಸಲು ಹೇಳುತ್ತಾನೆ.

ಇಂದಿಗೂ ಪ್ರತಿಯೊಂದು ವರ್ಷ ಸಾವಿರಾರು ಹೊಸ ಭಕ್ತರು ಅಯ್ಯಪ್ಪನ ದರ್ಶನಕ್ಕೆ ಬರುತ್ತಲೇ ಇದ್ದಾರೆ. ಶಬರಿಮಲೆಯ ಹಾದಿಯಲ್ಲಿರುವ “ಶರಂಕುತಿ” ಎಂಬ ಜಾಗದಲ್ಲಿ ಸ್ವಾಮಿಗಳು ತಾವು ತಂದ ಬಾಣಗಳನ್ನು ಚುಚ್ಚುತ್ತಾರೆ. ಅಲ್ಲಿ ಬಾಣಗಳು ಚುಚ್ಚಿದ ಸಂಖ್ಯೆ ಹೆಚ್ಚಾದಷ್ಟೂ, ಅಯ್ಯಪ್ಪ ಮತ್ತು ಮಾಳಿಕಾಪುರತ್ತಮ್ಮನ ವಿವಾಹ ಮುಂದೂಡಲ್ಪಡುತ್ತದೆ. 

ತನ್ನ ಭಕ್ತರಿಗಾಗಿ ಅಯ್ಯಪ್ಪ ತನ್ನ ಸಂಸಾರ ಸುಖವನ್ನೇ ತ್ಯಜಿಸಿ ಬ್ರಹ್ಮಚಾರಿಯಾಗಿ ಉಳಿದಿದ್ದಾನೆ. ಇದೇ ಕಾರಣಕ್ಕೆ ಶಬರಿಮಲೆಯು ಇಂದಿಗೂ ಭಕ್ತಿಯ ಪರಮೋಚ್ಚ ಕೇಂದ್ರವಾಗಿದೆ.

​ಸ್ವಾಮಿ ಅಯ್ಯಪ್ಪನ ಈ ಕಥೆ ನಮಗೆ ಶಿಸ್ತು, ಸಂಯಮ ಮತ್ತು ಸಮಾನತೆಯನ್ನು ಕಲಿಸಿಕೊಡುತ್ತದೆ. ನಿಮ್ಮ ಜೀವನದಲ್ಲೂ ಅಯ್ಯಪ್ಪನ ಪವಾಡ ನಡೆದಿದ್ದರೆ ಅಥವಾ ನೀವು ಶಬರಿಮಲೆಗೆ ಹೋಗಿದ್ದರೆ ನಿಮ್ಮ ಅನುಭವವನ್ನು ಕಾಮೆಂಟ್ ಬಾಕ್ಸ್ ನಲ್ಲಿ ಹಂಚಿಕೊಳ್ಳಿ. ಈ ಮಾಹಿತಿ ನಿಮಗೆ ಉಪಯುಕ್ತವೆನಿಸಿದರೆ, ದಯವಿಟ್ಟು ನಿಮ್ಮ ಸ್ನೇಹಿತರು ಮತ್ತು ಇತರರೊಂದಿಗೆ ಹಂಚಿಕೊಳ್ಳಿ. ಸ್ವಾಮಿಯೇ ಶರಣಂ ಅಯ್ಯಪ್ಪ!

ಈ ಬ್ಲಾಗ್‌ನಲ್ಲಿರುವ ಎಲ್ಲಾ ವಿಷಯವು ಹಕ್ಕುಸ್ವಾಮ್ಯವನ್ನು ಹೊಂದಿದೆ ಮತ್ತು ಲೇಖಕರ ಅನುಮತಿಯಿಲ್ಲದೆ ನಕಲು ಮಾಡುವುದನ್ನು ಅನುಮತಿಸಲಾಗುವುದಿಲ್ಲ.

All content on this blog is copyrighted, and copying is not allowed without permission from the author.