ಮೊಗವೀರ ಸಮುದಾಯದ ಸಂಪೂರ್ಣ ಇತಿಹಾಸ | Mogaveera Caste History in Kannada

Mogaveera community history in kannada, Mogaveera caste in Karnataka, Mogaveera people origin, Mogaveera caste history in kannada, Mogaveera community culture and traditions, Mogaveera fishing community Karnataka, Mogaveera Rani Abbakka history, Mogaveera community population, Mogaveera surnames and gotras, Mogaveera community in Mumbai and Gulf countries

Mogaveera caste history in kannada

ತಲೆಮಾರುಗಳಿಂದ ಸಮುದ್ರವನ್ನೇ ನಂಬಿ ಬದುಕುತ್ತಿರುವ ಪ್ರಮುಖ ಸಮುದಾಯಗಳಲ್ಲಿ ಒಂದೆಂದರೆ ಅದು ಮೊಗವೀರ ಸಮುದಾಯ. ಮೊಗವೀರರ ಇತಿಹಾಸ ಎಂದರೆ ಒಂದು ವೃತ್ತಿಯ ಇತಿಹಾಸ ಮಾತ್ರವಲ್ಲ, ಅದು ಸಮುದ್ರದ ಜೊತೆ ಸೆಣಸಾಡುತ್ತಲೇ ಬದುಕು ಕಟ್ಟಿಕೊಂಡ ತಲೆಮಾರುಗಳ ಕಥೆ. ಈ ಲೇಖನದಲ್ಲಿ ಮೊಗವೀರರ ಇತಿಹಾಸ, ವಲಸೆ, ಹೆಸರಿನ ಮೂಲ ಮತ್ತು ಸಾಮಾಜಿಕ ಕೊಡುಗೆ ಸೇರಿದಂತೆ ಸಂಪೂರ್ಣ ಮಾಹಿತಿಯನ್ನು ತಿಳಿಯೋಣ ಬನ್ನಿ

ಮೊಗವೀರ ಸಮುದಾಯದ ಸಂಪೂರ್ಣ ಇತಿಹಾಸ | Mogaveera Caste History in Kannada

ಮೊಗವೀರರು ಯಾರು?

ಮೊಗವೀರರು ಎಂದರೆ ಕರಾವಳಿ ಕರ್ನಾಟಕದ, ಅದರಲ್ಲೂ ವಿಶೇಷವಾಗಿ ತುಳುನಾಡು ಎಂದು ಕರೆಯಲ್ಪಡುವ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಮೀನುಗಾರ ಸಮುದಾಯ.ಮಂಗಳೂರು, ಉಡುಪಿ, ಮಲ್ಪೆ, ಕುಂದಾಪುರ ಈ ಎಲ್ಲಾ ಕರಾವಳಿ ಪ್ರದೇಶಗಳಲ್ಲಿ ಈ ಸಮುದಾಯ ಶತಮಾನಗಳಿಂದ ನೆಲೆಸಿದೆ.

ಇವರ ಮುಖ್ಯ ವೃತ್ತಿ ಮೀನುಗಾರಿಕೆ, ಆದರೆ ಕಾಲಕ್ರಮೇಣ ದೋಣಿ ನಿರ್ಮಾಣ, ಮೀನು ವ್ಯಾಪಾರ ಮತ್ತು ಸಾಗಣೆ ಮುಂತಾದ ಹಲವು ಕೆಲಸಗಳಲ್ಲೂ ಇವರು ತೊಡಗಿಸಿಕೊಂಡಿದ್ದಾರೆ.

ಮೊಗವೀರ ಹೆಸರು ಬಂದಿದ್ದು ಹೇಗೆ?

ಒಂದು ಸ್ವಾರಸ್ಯಕರ ಸಂಗತಿ ಏನೆಂದರೆ, “ಮೊಗವೀರ” ಎಂಬ ಈ ಹೆಸರು ಬಹಳ ಹಳೆಯದಲ್ಲ. ಹಿಂದೆ ಈ ಸಮುದಾಯವನ್ನು “ಮೊಗೇರ” ಅಥವಾ “ಮೊಗೆಯರ” ಎಂದು ಕರೆಯಲಾಗುತ್ತಿತ್ತು.

ಇಪ್ಪತ್ತನೇ ಶತಮಾನದ ಆರಂಭದಲ್ಲಿ, ಹೊಯಿಗೆ ಬಜಾರಿನ ಮೋಹನಪ್ಪ ತಿಂಗಳಾಯ ಎಂಬ ಸ್ವಾತಂತ್ರ್ಯ ಹೋರಾಟಗಾರ ಈ ಸಮುದಾಯಕ್ಕೆ ಗೌರವ ಯುತವಾದ ಹೊಸ ಹೆಸರು ಬೇಕೆಂದು, “ಮೊಗವೀರ” ಎಂಬ ಪದವನ್ನು ಸೃಷ್ಟಿಸಿದರು ಎಂದು ಹೇಳಲಾಗುತ್ತದೆ. ಹೀಗೆ ನಿಧಾನವಾಗಿ ಹಳೆಯ ಹೆಸರುಗಳ ಜಾಗದಲ್ಲಿ “ಮೊಗವೀರ” ಎಂಬ ಹೆಸರು ಶಾಶ್ವತವಾಗಿ ನೆಲೆಯೂರಿತು.

ಪ್ರಾದೇಶಿಕ ಹೆಸರುಗಳು ಮತ್ತು ಭಾಷೆಗಳು

ಪ್ರದೇಶದಿಂದ ಪ್ರದೇಶಕ್ಕೆ ಈ ಸಮುದಾಯವನ್ನು ಬೇರೆ ಬೇರೆ ಹೆಸರುಗಳಿಂದ ಕರೆಯಲಾಗುತ್ತದೆ. ಉಡುಪಿ ಭಾಗದಲ್ಲಿ ಇವರನ್ನು “ಮರಕಲ” ಎಂದೂ ಕರೆಯುತ್ತಾರೆ. ದಕ್ಷಿಣ ಭಾಗದ ಮೊಗವೀರರು ತುಳು ಮಾತನಾಡಿದರೆ, ಉತ್ತರದ ಕಡೆಗೆ ಹೋದಂತೆ ಕನ್ನಡ ಮತ್ತು ಕಾರವಾರದ ಕಡೆ ಕೊಂಕಣಿ ಭಾಷೆಗಳ ಪ್ರಭಾವ ಕಂಡುಬರುತ್ತದೆ.

ಮೊಗವೀರರ ಮೂಲ ಮತ್ತು ಮೂಲಸ್ಥಾನಗಳು

ಸಂಶೋಧಕರ ಪ್ರಕಾರ, ತುಳು ಮತ್ತು ಕನ್ನಡ ಭಾಷೆಯಲ್ಲಿ ‘ಮೊಗ’ ಎಂದರೆ ಮುಖ ಅಥವಾ ಮುಂಚೂಣಿ ಎಂದರ್ಥ. ಕರಾವಳಿ ಪ್ರದೇಶದ ರಾಜರ ಕಾಲದಲ್ಲಿ, ವಿಶೇಷವಾಗಿ ನೌಕಾಪಡೆ ಅಥವಾ ಯುದ್ಧಗಳಲ್ಲಿ ಮುಂಚೂಣಿಯಲ್ಲಿ ನಿಂತು ಹೋರಾಡುತ್ತಿದ್ದ ವೀರ ಸೈನಿಕರಾಗಿದ್ದರಿಂದ ಇವರನ್ನು “ಮುಂಚೂಣಿಯ ವೀರರು” ಅಥವಾ “ಮೊಗವೀರರು” ಎಂದು ಕರೆಯಲಾಯಿತು ಎಂದು ಹೇಳಲಾಗುತ್ತದೆ.

ಇತಿಹಾಸಕಾರರ ಪ್ರಕಾರ ಬಾರಕೂರು ಪ್ರದೇಶ ಮೊಗವೀರರ ಅತ್ಯಂತ ಹಳೆಯ ನೆಲೆಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ. ಬಾರಕೂರು ಬಹಳ ಪುರಾತನ ಕಾಲದಿಂದಲೂ ರಾಜಾಡಳಿತದ ಕೇಂದ್ರವಾಗಿತ್ತು, ಮತ್ತು ಇಲ್ಲಿನ ಕಡಲ ತೀರದ ಪ್ರದೇಶಗಳಲ್ಲಿ ಮೊಗವೀರರ ಮೂಲಸ್ಥಾನಗಳು ಇಂದಿಗೂ ಇವೆ. ಮೊಗವೀರ ಕುಟುಂಬಗಳು ತಮ್ಮ ಮೂಲಸ್ಥಾನದ ಆಧಾರದ ಮೇಲೆ ಉಪನಾಮಗಳನ್ನು ಪಡೆದುಕೊಂಡಿವೆ.

ಪೌರಾಣಿಕ ಹಿನ್ನೆಲೆ ಮತ್ತು ನಂಬಿಕೆಗಳು

ಪುರಾಣಗಳ ಪ್ರಕಾರ, ಮೀನುಗಾರ ಸಮುದಾಯವು ಮಹಾಭಾರತದ ಕಾಲದಷ್ಟು ಹಳೆಯದು. ಮೀನುಗಾರನ ಮಗಳಾದ ಸತ್ಯವತಿಯೇ ಮುಂದೆ ಹಸ್ತಿನಾಪುರದ ಮಹಾರಾಣಿಯಾಗುತ್ತಾಳೆ. ಅವಳ ಮಗನೇ ಮಹಾಭಾರತವನ್ನು ರಚಿಸಿದ ಮಹರ್ಷಿ ವೇದವ್ಯಾಸರು. ಹೀಗೆ ಈ ಸಮುದಾಯಕ್ಕೆ ಅತ್ಯಂತ ಶ್ರೇಷ್ಠವಾದ ಪೌರಾಣಿಕ ಹಿನ್ನೆಲೆಯಿದೆ.

ಇದರ ಜೊತೆಗೆ ಕರಾವಳಿಯ ಮೊಗವೀರರು ಅಪಾರ ದೈವ ಭಕ್ತರು. ಸಮುದ್ರವನ್ನು ಅವರು ಗಂಗಾಮಾತೆಯಾಗಿ ಪೂಜಿಸುತ್ತಾರೆ. ದೈವಾರಾಧನೆ ಮತ್ತು ಭೂತಾರಾಧನೆಯಲ್ಲಿಯೂ ಸಹ ಮೊಗವೀರರ ಪಾಲು ಬಹುದೊಡ್ಡದು.

ಆಳುಪರು, ವಿಜಯನಗರ ಸಾಮ್ರಾಜ್ಯ ಮತ್ತು ರಾಣಿ ಅಬ್ಬಕ್ಕನ ಸೈನ್ಯದಲ್ಲಿ ಮೊಗವೀರರು

ಕರಾವಳಿಯನ್ನು ಆಳಿದ ಆಳುಪರು, ವಿಜಯನಗರದ ಅರಸರು ಹಾಗೂ ಕೆಳದಿ ನಾಯಕರ ಕಾಲದಲ್ಲಿ ಮೊಗವೀರ ಯುವಕರೇ ಆ ಸಾಮ್ರಾಜ್ಯಗಳ ನೌಕಾಪಡೆಯ ಬೆನ್ನೆಲುಬಾಗಿದ್ದರು. ಅರಬ್ಬಿ ಸಮುದ್ರದ ಮೂಲೆ ಮೂಲೆಗಳ ಪರಿಚಯವಿದ್ದ ಕಾರಣ, ಶತ್ರುಗಳ ಹಡಗುಗಳನ್ನು ಸಮುದ್ರದಲ್ಲೇ ತಡೆದು ನಿಲ್ಲಿಸುವ ಶಕ್ತಿ ಇವರಿಗಿತ್ತು.

ಟಿಪ್ಪು ಸುಲ್ತಾನನ ಆಡಳಿತದ ಕಾಲದಲ್ಲೂ ಆತನ ನೌಕಾಪಡೆಯ ಬಹುಪಾಲು ಸೈನಿಕರು ಮೊಗವೀರ ಸಮುದಾಯದವರೇ ಆಗಿದ್ದರು ಎನ್ನಲಾಗುತ್ತದೆ. ಇವರು ಕೇವಲ ಮೀನು ಹಿಡಿಯುತ್ತಿರಲಿಲ್ಲ, ಬದಲಾಗಿ ಮರದ ಹಡಗುಗಳನ್ನು ಕಟ್ಟುವ ತಂತ್ರಜ್ಞಾನವನ್ನು ಕರಗತ ಮಾಡಿಕೊಂಡಿದ್ದರು.

ಕರಾವಳಿ ಕರ್ನಾಟಕದ ಇತಿಹಾಸವನ್ನು ಗಮನಿಸಿದಾಗ, ಆಳುಪ ಅರಸರ ಕಾಲದಿಂದಲೇ ಕರಾವಳಿಯಲ್ಲಿ ಮೀನುಗಾರಿಕೆ ಮತ್ತು ಕಡಲ ವ್ಯಾಪಾರ ಪ್ರಮುಖ ಆರ್ಥಿಕ ಚಟುವಟಿಕೆಗಳಾಗಿದ್ದವು ಎಂಬುದು ಸ್ಪಷ್ಟವಾಗುತ್ತದೆ. ಈ ಕಾಲಘಟ್ಟದಲ್ಲಿ ಕರಾವಳಿಯ ಮೀನುಗಾರ ಸಮುದಾಯಗಳು ಬಂದರುಗಳ ಬಳಿ ನೆಲೆಸಿ, ಮೀನು ಮತ್ತು ಸಾಗಣೆ ಸೇವೆ ಒದಗಿಸುತ್ತಿದ್ದವು ಎಂದು ಇತಿಹಾಸಕಾರರು ಅಭಿಪ್ರಾಯ ಪಡುತ್ತಾರೆ.

ಸಮುದಾಯದ ಸಂಪ್ರದಾಯದ ಪ್ರಕಾರ, ವಿಜಯನಗರ ಸೈನ್ಯದಲ್ಲಿ “ಮರಕಲ” ಎಂದು ಕರೆಯಲ್ಪಡುತ್ತಿದ್ದ ಮುಂಚೂಣಿ ಪಡೆಗಳಿದ್ದವು, ಇವರು ಕೋಟೆ ಬಾಗಿಲುಗಳನ್ನು ಭೇದಿಸುವ ಧೈರ್ಯಶಾಲಿ ಯೋಧರಾಗಿದ್ದರು ಎಂಬ ನಂಬಿಕೆ ಇದೆ.

ಇದೇ ರೀತಿ, ಹದಿನಾರನೇ ಶತಮಾನದಲ್ಲಿ ಉಳ್ಳಾಲದ ಪ್ರಸಿದ್ಧ ರಾಣಿ ಅಬ್ಬಕ್ಕ ಪೋರ್ಚುಗೀಸರ ವಿರುದ್ಧ ಹೋರಾಡಿದಾಗ, ಸ್ಥಳೀಯ ಮೊಗವೀರ ಯುವಕರು ಆಕೆಯ ನೌಕಾಪಡೆ ಮತ್ತು ಸೈನ್ಯದಲ್ಲಿ ಸೇವೆ ಸಲ್ಲಿಸಿದ್ದರು.

ವಸಾಹತು ಕಾಲದ ವ್ಯಾಪಾರ ಬದಲಾವಣೆಗಳು

ಪೋರ್ಚುಗೀಸರ ಮತ್ತು ನಂತರ ಬ್ರಿಟಿಷರ ಆಡಳಿತ ಕಾಲದಲ್ಲಿ ಕರಾವಳಿ ವ್ಯಾಪಾರ ವ್ಯವಸ್ಥೆ ಬದಲಾಯಿತು. ಬಂದರುಗಳಲ್ಲಿ ಹೊಸ ತೆರಿಗೆ ಪದ್ಧತಿಗಳು ಜಾರಿಗೆ ಬಂದವು, ಹೊಸ ಮಾರುಕಟ್ಟೆಗಳು ತೆರೆದುಕೊಂಡವು. ಈ ಬದಲಾವಣೆಗಳ ನಡುವೆಯೂ ಮೀನುಗಾರಿಕೆ ಮಾತ್ರ ಕರಾವಳಿ ಜನಜೀವನದ ಬೆನ್ನೆಲುಬಾಗಿಯೇ ಉಳಿಯಿತು.

ಸಮುದ್ರ ಜ್ಞಾನ ಮತ್ತು ಸಾಂಪ್ರದಾಯಿಕ ಮೀನುಗಾರಿಕೆ

ಮೊಗವೀರರ ಬದುಕಿನ ಉಸಿರಾದ ಮೀನುಗಾರಿಕೆಯ ಬಗ್ಗೆ ಹೇಳುವುದಾದರೆ, ಇದು ಕೇವಲ ಬಲೆಬೀಸುವ ಕಸುಬಲ್ಲ, ಬದಲಾಗಿ ತಲೆಮಾರುಗಳಿಂದ ರಕ್ತಗತವಾಗಿ ಬಂದ ಪ್ರಾಯೋಗಿಕ ವಿಜ್ಞಾನ. ಆಕಾಶದ ಬಣ್ಣದಿಂದ ಮಳೆಯ ಮುನ್ಸೂಚನೆ, ಅಲೆಗಳ ಅಬ್ಬರದಿಂದ ಗಾಳಿಯ ದಿಕ್ಕು ಹಾಗೂ ಚಂದ್ರನ ಚಲನೆಯಿಂದ ಉಬ್ಬರ-ಇಳಿತಗಳನ್ನು ನಿಖರವಾಗಿ ಗ್ರಹಿಸುವ ಮೊಗವೀರರ ಕೌಶಲ್ಯ ನಿಜಕ್ಕೂ ಅದ್ಭುತ.

ವಿವಿಧ ಬಗೆಯ ಮೀನುಗಳನ್ನು ಹಿಡಿಯಲು ಬೇರೆ ಬೇರೆ ಬಗೆಯ ಬಲೆ ಮತ್ತು ತಂತ್ರ ಬೇಕಾಗುತ್ತದೆ. ಸಿಕ್ಕ ಮೀನನ್ನು ತಾಜಾ ಮಾರಾಟ ಮಾಡುವುದೊಂದೇ ಅಲ್ಲದೆ, ಹೆಚ್ಚಿನ ಮೀನನ್ನು ಒಣಗಿಸಿ ಶೇಖರಿಸಿ ಇಡುವ ಪದ್ಧತಿಯೂ ಬಹಳ ಹಳೆಯದು. ಇದರಿಂದ ಮಳೆಗಾಲದಲ್ಲಿ ಮೀನುಗಾರಿಕೆ ಇಲ್ಲದಿದ್ದಾಗಲೂ ಮನೆಗೆ ಆಹಾರ ಸಿಗುತ್ತಿತ್ತು.

ಒಂದು ದೋಣಿಯಲ್ಲಿ ಹಲವು ಮಂದಿ ಒಟ್ಟಿಗೆ ಹೋಗುತ್ತಿದ್ದರು, ಈ ತಂಡದ ಮುಖ್ಯಸ್ಥನನ್ನು “ತಾಂಡೇಲ” ಎಂದು ಕರೆಯುತ್ತಾರೆ. ಸಿಕ್ಕ ಮೀನನ್ನು ಎಲ್ಲರೂ ಸೇರಿ ನ್ಯಾಯಬದ್ಧವಾಗಿ ಹಂಚಿಕೊಳ್ಳುವ ಪದ್ಧತಿ ಇತ್ತು. ಇಡೀ ಗ್ರಾಮದ ಆಡಳಿತವನ್ನು “ಗುರಿಕಾರ” ಎಂಬ ವಂಶಪಾರಂಪರ್ಯ ನಾಯಕ ನೋಡಿಕೊಳ್ಳುತ್ತಿದ್ದ.

ದೋಣಿಗಳು ಮತ್ತು ಬದಲಾಗುತ್ತಿರುವ ತಂತ್ರಜ್ಞಾನ

ಹಳೆಯ ಕಾಲದ ದೋಣಿಗಳು ಸಂಪೂರ್ಣವಾಗಿ ಮರದಿಂದ ಮಾಡಲ್ಪಟ್ಟಿದ್ದವು. ದೋಣಿ ಕಟ್ಟುವುದೂ ಒಂದು ಕಲೆ ಯಾವ ಮರ ಬಳಸಬೇಕು, ಹಲಗೆಗಳನ್ನು ಹೇಗೆ ಜೋಡಿಸಬೇಕು, ದೋಣಿಯ ಆಕಾರ ಹೇಗಿದ್ದರೆ ಅಲೆಗಳನ್ನು ಸುಲಭವಾಗಿ ಸೀಳಿಕೊಂಡು ಹೋಗುತ್ತದೆ ಇವೆಲ್ಲಾ ವಿಶೇಷ ಕುಶಲತೆಯ ಕೆಲಸ.

ಹುಟ್ಟುಗಳಿಂದ ದೋಣಿ ನಡೆಸುತ್ತಿದ್ದ ಕಾಲದಲ್ಲಿ, ಗಂಟೆಗಟ್ಟಲೆ ಹುಟ್ಟು ಹಾಕುತ್ತಾ ಆಳ ಸಮುದ್ರಕ್ಕೆ ಹೋಗುವುದು ಸುಲಭದ ಕೆಲಸವಾಗಿರಲಿಲ್ಲ. ಬಟ್ಟೆಯ ಹಾಯಿ, ಹಗ್ಗಗಳು, ಲಂಗರುಗಳು ಇವೆಲ್ಲ ಅಂದಿನ ಪ್ರಮುಖ ಸಾಧನಗಳಾಗಿದ್ದವು.

ಸ್ವಾತಂತ್ರ್ಯಾನಂತರ ಬಂದ ಯಂತ್ರೀಕರಣ ಈ ಸಮುದಾಯದ ಬದುಕನ್ನೇ ಬದಲಿಸಿತು. ಇಂಜಿನ್ ಅಳವಡಿಸಿದ ಬೋಟುಗಳು ಬಂದವು, ನೈಲಾನ್ ಬಲೆಗಳು ಬಂದವು, ಮಂಜುಗಡ್ಡೆಯಲ್ಲಿ ಮೀನು ಸಂಗ್ರಹಿಸುವ ವ್ಯವಸ್ಥೆ ಬಂತು. 

ಇಂದು ಜಿಪಿಎಸ್ ಮತ್ತು ಸೋನಾರ್ ತಂತ್ರಜ್ಞಾನ ಬಳಸಿ ಮೀನಿನ ಗುಂಪುಗಳನ್ನೇ ಪತ್ತೆ ಹಚ್ಚಬಹುದು. ಈ ಬದಲಾವಣೆ ಒಂದೆಡೆ ಕೆಲಸ ಸುಲಭ ಮಾಡಿದ್ದರೆ, ಇನ್ನೊಂದೆಡೆ ಸಾಂಪ್ರದಾಯಿಕ ಜ್ಞಾನದ ಪ್ರಾಮುಖ್ಯತೆ ಕಡಿಮೆಯಾಗುತ್ತಿದೆ. 

ನೂರಾರು ಬೋಟುಗಳು ಪ್ರತಿನಿತ್ಯ ಮೀನುಗಾರಿಕಾ ಬಂದರುಗಳಲ್ಲಿ ಲಂಗರು ಹಾಕಿ, ಸಮುದ್ರದ ಬಲೆಯಿಂದ ಬಂದ ಮೀನನ್ನು ಇಳಿಸುತ್ತವೆ. ಬಂದರುಗಳ ಏಳಿಗೆಯ ಹಿಂದೆ ಮೊಗವೀರ ಸಮುದಾಯದ ಸಮುದ್ರ ಜ್ಞಾನ ಮತ್ತು ಉದ್ಯಮಶೀಲತೆಯ ಬಹುದೊಡ್ಡ ಪಾತ್ರವಿದೆ.

ಗ್ರಾಮ ಜೀವನ ಮತ್ತು ಮಹಿಳೆಯರ ಪಾತ್ರ

ಗಂಡಸರು ರಾತ್ರಿ ಅಥವಾ ಬೆಳಗಿನ ಜಾವ ಸಮುದ್ರಕ್ಕೆ ಹೋದರೆ, ಮಹಿಳೆಯರು ಗ್ರಾಮದ ಆರ್ಥಿಕ ಚಟುವಟಿಕೆಯ ನಿಜವಾದ ಬೆನ್ನೆಲುಬಾಗಿ ಕೆಲಸ ಮಾಡುತ್ತಿದ್ದರು. ಮೀನನ್ನು ವಿಂಗಡಿಸುವುದು, ತೂಕ ಮಾಡುವುದು, ಮಾರುಕಟ್ಟೆಗೆ ಒಯ್ದು ಮಾರಾಟ ಮಾಡುವುದು ಈ ಎಲ್ಲಾ ಜವಾಬ್ದಾರಿ ಬಹುತೇಕ ಮಹಿಳೆಯರ ಮೇಲಿತ್ತು. ಈ ಮಹಿಳೆಯರ ಶ್ರಮವಿಲ್ಲದೆ ಕರಾವಳಿಯ ಮೀನುಗಾರಿಕಾ ಆರ್ಥಿಕತೆ ನಡೆಯುತ್ತಲೇ ಇರಲಿಲ್ಲ ಎಂದರೆ ತಪ್ಪಲ್ಲ. ಮೊಗವೀರ ಸಮುದಾಯವು ಕರ್ನಾಟಕದ ಆರ್ಥಿಕತೆಗೆ ಗಣನೀಯ ಕೊಡುಗೆ ನೀಡುತ್ತಿದೆ.

ಮೊಗವೀರ ಸಮುದಾಯದ ಜನಸಂಖ್ಯೆ ಮತ್ತು ವಲಸೆ

ಸಮುದಾಯ ಸಂಘಟನೆಗಳ ಅಂದಾಜಿನ ಪ್ರಕಾರ ಮೊಗವೀ ಜನಸಂಖ್ಯೆ ಸುಮಾರು ಒಂದರಿಂದ ಎರಡು ಲಕ್ಷದಷ್ಟಿದೆ ಎನ್ನಲಾಗುತ್ತದೆ. ಇದೊಂದು ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳ ಪ್ರಮುಖ ಸಮುದಾಯ ಎಂಬುದು ಸ್ಪಷ್ಟ. 

ಕೇವಲ ಕರ್ನಾಟಕ ಮಾತ್ರವಲ್ಲದೆ, ಮುಂಬೈ, ಪುಣೆ ಮುಂತಾದ ಮಹಾನಗರಗಳಲ್ಲಿ ಹಾಗೂ ದುಬೈ, ಸೌದಿ ಅರೇಬಿಯಾದಂತಹ ಗಲ್ಫ್ ರಾಷ್ಟ್ರಗಳಲ್ಲಿ ಮೊಗವೀರ ಸಮುದಾಯದ ಲಕ್ಷಾಂತರ ಜನ ನೆಲೆಸಿದ್ದು, ಇಂಜಿನಿಯರ್‌ಗಳಾಗಿ, ವೈದ್ಯರಾಗಿ ಹಾಗೂ ದೊಡ್ಡ ಉದ್ಯಮಿಗಳಾಗಿ ಯಶಸ್ವಿಯಾಗಿದ್ದಾರೆ.

ಪ್ರಾಚೀನ ಕಾಲದಿಂದಲೂ ಕೇವಲ ಮೀನುಗಾರಿಕೆ ಮತ್ತು ದೋಣಿ ಕಟ್ಟುವ ವೃತ್ತಿಯಲ್ಲಿದ್ದ ಇವರಿಗೆ, ಬ್ರಿಟಿಷರ ಕಾಲದಲ್ಲಿ ಹೊಸ ಅವಕಾಶಗಳ ಬಾಗಿಲು ತೆರೆಯಿತು.ಕರಾವಳಿಯ ಬಡತನ ಮತ್ತು ಕಷ್ಟಕರವಾದ ಮೀನುಗಾರಿಕೆಯಿಂದ ಪಾರಾಗಲು, ಹಲವಾರು ಮೊಗವೀರ ಯುವಕರು ಮುಂಬೈ ಕಡೆಗೆ ವಲಸೆ ಹೋದರು.

ಆರಂಭದಲ್ಲಿ ಸಣ್ಣಪುಟ್ಟ ಕೆಲಸಗಳನ್ನು ಮಾಡಿಕೊಂಡಿದ್ದ ಇವರು, ತಮ್ಮ ಕಠಿಣ ಪರಿಶ್ರಮದಿಂದ ಮುಂಬೈನ ಹೋಟೆಲ್ ಉದ್ಯಮವನ್ನು ಆಳಲು ಶುರುಮಾಡಿದರು. ಇಂದು ಮುಂಬೈನ ಪ್ರತಿಷ್ಠಿತ ಹೋಟೆಲ್‌ಗಳು ಮತ್ತು ಮೀನುಗಾರಿಕಾ ರಫ್ತು ಉದ್ಯಮಗಳು ಮೊಗವೀರರ ಒಡೆತನದಲ್ಲಿವೆ.

ಮೊಗವೀರ ಸಮುದಾಯದ ಇಂದಿನ ಸವಾಲುಗಳು

ಆಧುನಿಕತೆ ಎಲ್ಲಾ ಸೌಲಭ್ಯ ತಂದಿದ್ದರೂ, ಸಾಂಪ್ರದಾಯಿಕ ಮೀನುಗಾರಿಕೆ ಇಂದು ಹಲವು ಸವಾಲುಗಳನ್ನು ಎದುರಿಸುತ್ತಿದೆ. ಅತಿಯಾದ ಮೀನುಗಾರಿಕೆಯಿಂದ ಕೆಲವು ಮೀನಿನ ತಳಿಗಳ ಸಂಖ್ಯೆ ಕಡಿಮೆಯಾಗುತ್ತಿದೆ. ಸಮುದ್ರದ ತಾಪಮಾನ ಬದಲಾವಣೆ ಮತ್ತು ಹವಾಮಾನ ವೈಪರೀತ್ಯ ಮೀನುಗಳ ಮೇಲೆ ಪರಿಣಾಮ ಬೀರುತ್ತಿದೆ. ಬೋಟು ಮತ್ತು ಇಂಧನದ ಬೆಲೆ ಏರಿಕೆಯಿಂದ ಸಣ್ಣ ಮೀನುಗಾರರಿಗೆ ಆರ್ಥಿಕ ಒತ್ತಡ ಹೆಚ್ಚಾಗಿದೆ.

ಇದೇ ಸಮಯದಲ್ಲಿ, ಯುವ ಪೀಳಿಗೆ ಶಿಕ್ಷಣ ಪಡೆದು ಬೇರೆ ಉದ್ಯೋಗಗಳ ಕಡೆ ಹೋಗುತ್ತಿರುವುದರಿಂದ, ತಲೆಮಾರುಗಳಿಂದ ಬಂದ ಸಮುದ್ರ ಜ್ಞಾನ ಮತ್ತು ಸಾಂಪ್ರದಾಯಿಕ ಕೌಶಲ್ಯಗಳು ಕಾಲ ಕ್ರಮೇಣ ಕಣ್ಮರೆಯಾಗುವ ಆತಂಕವೂ ಇದೆ.

ಮೊಗವೀರರ ಇತಿಹಾಸ ಎಂದರೆ ಒಂದು ವೃತ್ತಿಯ ಇತಿಹಾಸ ಮಾತ್ರವಲ್ಲ, ಅದು ಸಮುದ್ರದ ಜೊತೆ ಸೆಣಸಾಡುತ್ತಲೇ ಬದುಕು ಕಟ್ಟಿಕೊಂಡ ತಲೆಮಾರುಗಳ ಕಥೆ. ಈ ಮಾಹಿತಿ ನಿಮಗೆ ಉಪಯುಕ್ತವೆನಿಸಿದರೆ, ದಯವಿಟ್ಟು ನಿಮ್ಮ ಸ್ನೇಹಿತರು ಮತ್ತು ಇತರರೊಂದಿಗೆ ಹಂಚಿಕೊಳ್ಳಿ. ಇದೇ ರೀತಿ, ಇನ್ನಿತರ ವಿಷಯಗಳನ್ನೂ ಸಹ ನೀವು ನಮ್ಮ ಬ್ಲಾಗ್ ನಲ್ಲಿ ಓದಬಹುದು.

ಈ ಬ್ಲಾಗ್‌ನಲ್ಲಿರುವ ಎಲ್ಲಾ ವಿಷಯವು ಹಕ್ಕುಸ್ವಾಮ್ಯವನ್ನು ಹೊಂದಿದೆ ಮತ್ತು ಲೇಖಕರ ಅನುಮತಿಯಿಲ್ಲದೆ ನಕಲು ಮಾಡುವುದನ್ನು ಅನುಮತಿಸಲಾಗುವುದಿಲ್ಲ.

All content on this blog is copyrighted, and copying is not allowed without permission from the author.