ಬಂಟ ಸಮುದಾಯದ ಇತಿಹಾಸ | Bunt Community History in Kannada

Bunt community history in kannada, Bunt caste origin in kannada, Bunt caste history in kannada, Bunt community meaning, Bunt surnames list, Bunt Aliyasantana system, Bunt community culture and traditions, Tulu Nadu Bunt history in kannada, Bunt community famous personalities, Bunt community population and regions, Bunt community land reforms historyBunt caste history in kannada complete details

ಬಾಲಿವುಡ್‌ನಿಂದ ಹಿಡಿದು ಟಾಲಿವುಡ್‌ವರೆಗೆ, ಸಣ್ಣ ಹೋಟೆಲ್‌ನಿಂದ ಹಿಡಿದು ಅಂತರಾಷ್ಟ್ರೀಯ ಬ್ಯುಸಿನೆಸ್‌ವರೆಗೆ, ಇಂದು ಎಲ್ಲೆಡೆ ‘ಶೆಟ್ಟಿ’, ‘ರೈ’, ‘ಆಳ್ವ’ ಎಂಬ ಹೆಸರುಗಳು ರಾರಾಜಿಸುತ್ತಿವೆ.

ಆದರೆ, ಈ ಸಮುದಾಯದ ಹಿಂದಿರುವ ಸಾವಿರಾರು ವರ್ಷಗಳ ರೋಚಕ ಇತಿಹಾಸ ನಿಮಗೆ ಗೊತ್ತಾ? ಒಂದು ಕಾಲದಲ್ಲಿ ಕತ್ತಿ ಹಿಡಿದು ಆಳುಪರು ಮತ್ತು ವಿಜಯನಗರದಂತಹ ಸಾಮ್ರಾಜ್ಯಗಳನ್ನು ಕಾಯುತ್ತಿದ್ದ ಈ ಯೋಧರು, ನಂತರದ ದಿನಗಳಲ್ಲಿ ಕೃಷಿಯತ್ತ ಮುಖಮಾಡಿ ಭೂಮಾಲೀಕರಾಗಿ ಬದಲಾಗಿದ್ದು ಹೇಗೆ?

ಈ ಲೇಖನದಲ್ಲಿ ನಾವು ತುಳುನಾಡಿನ ಅತ್ಯಂತ ಪ್ರಾಚೀನ ಮತ್ತು ತುಳುನಾಡಿನ ಭವ್ಯ ಪರಂಪರೆಯನ್ನು ಶತಮಾನಗಳಿಂದ ಕಾಪಾಡಿಕೊಂಡು ಬಂದಿರುವ ಪ್ರಮುಖ ಸಮುದಾಯಗಳಲ್ಲಿ ಒಂದಾದ ಬಂಟ ಸಮುದಾಯದ ಇತಿಹಾಸವನ್ನು ತಿಳಿಯೋಣ.

ಬಂಟ ಸಮುದಾಯದ ಇತಿಹಾಸ | Bunt Community History in Kannada

ಬಂಟ ಪದದ ಅರ್ಥ ಮತ್ತು ಸಮುದಾಯದ ಮೂಲ

ಬಂಟ ಸಮುದಾಯದ ಮೂಲ ಎಲ್ಲಿದೆ? ಇವರು ತುಳುನಾಡಿನ ಮೂಲನಿವಾಸಿಗಳಾ? ಅಥವಾ ಹೊರಗಿನಿಂದ ವಲಸೆ ಬಂದವರಾ? ಈ ಪ್ರಶ್ನೆಗಳಿಗೆ ಇಂದಿಗೂ ನಿಖರವಾದ ಲಿಖಿತ ದಾಖಲೆಗಳಿಲ್ಲ.

ಭಾಷಾಶಾಸ್ತ್ರದ ಪ್ರಕಾರ ನೋಡಿದರೆ, ಸಂಸ್ಕೃತದ ‘ಭಟ’ ಎಂಬ ಪದದಿಂದ ‘ಬಂಟ’ ಎಂಬ ಪದ ಹುಟ್ಟಿದೆ ಎನ್ನಲಾಗುತ್ತದೆ. ಭಟ ಎಂದರೆ ಬಲಶಾಲಿ ಅಥವಾ ಯೋಧ ಎಂದರ್ಥ. ತುಳುವಿನಲ್ಲಿ ‘ಬಂಟೆ’ ಅಥವಾ ‘ಬಂಟೆರ್’ ಎಂದರೆ ರಕ್ಷಕ ಎಂದರ್ಥ.

ಬಂಟರನ್ನು ಕರಾವಳಿಯ ಬೇರೆ ಬೇರೆ ಕಡೆ ನಾಯಕ, ಶೆಟ್ರೆ ಮತ್ತು ನಾಡವ ಎಂದೂ ಕರೆಯುತ್ತಾರೆ. ತುಳುವಿನಲ್ಲಿ ನಾಡವ ಎಂದರೆ ಭೂಮಾಲೀಕ ಎಂದರ್ಥ. ಬೇರೆ ಬೇರೆ ಹೆಸರುಗಳು ಮತ್ತು ಊರುಗಳಲ್ಲಿದ್ದ ಈ ಎಲ್ಲರನ್ನೂ ಒಗ್ಗೂಡಿಸಿ, 1940ರ ದಶಕದಲ್ಲಿ ‘ಬಂಟ’ ಎಂಬ ಒಂದೇ ಸಾಮಾನ್ಯ ಗುರುತನ್ನು ನೀಡಲಾಯಿತು.

ಇತಿಹಾಸಕಾರರ ದೃಷ್ಟಿಯಲ್ಲಿ ಬಂಟರು

1909ರಲ್ಲಿ ಪ್ರಕಟವಾದ “ಕಾಸ್ಟ್ಸ್ ಅಂಡ್ ಟ್ರೈಬ್ಸ್ ಆಫ್ ಸದರ್ನ್ ಇಂಡಿಯಾ” ಎಂಬ ಪುಸ್ತಕದಲ್ಲಿ, ಖ್ಯಾತ ಇತಿಹಾಸಕಾರ ಎಡ್ಗರ್ ಥರ್ಸ್ಟನ್ ಅವರು ಬಂಟರ ಬಗ್ಗೆ ಒಂದು ಅದ್ಭುತವಾದ ಮಾತು ಹೇಳಿದ್ದಾರೆ.

ಅವರ ಪ್ರಕಾರ, “ಬಂಟ ಸಮುದಾಯದ ಗಂಡು-ಹೆಣ್ಣು ಇಬ್ಬರೂ ಏಷ್ಯಾದ ಅತ್ಯಂತ ಸುಂದರ ಜನಾಂಗಕ್ಕೆ ಸೇರಿದವರು. ವಿಶಾಲವಾದ ಹಣೆಯಿರುವ, ಗಂಭೀರ ಸ್ವಭಾವದ ಇವರು, ಇಂದಿಗೂ ಅತ್ಯಂತ ಸ್ವಾಭಿಮಾನಿಗಳು ಹಾಗೂ ಮುಂಗೋಪಿಗಳು. ಇವರ ಹುರಿಗಟ್ಟಿದ ದೇಹವನ್ನು ನೋಡಿದರೇ, ಇವರು ಪ್ರಾಚೀನ ಯೋಧರ ವಂಶದವರು ಎಂಬುದು ಸ್ಪಷ್ಟವಾಗುತ್ತದೆ” ಎಂದು ಅವರು ಬರೆದಿದ್ದಾರೆ.

ಇವರ ಮೂಲದ ಬಗ್ಗೆ ಹಲವಾರು ಐತಿಹಾಸಿಕ ಸಿದ್ಧಾಂತಗಳಿವೆ. ಕೆಲವರು ಇವರಿಗೆ ಆರ್ಯರ ನಂಟಿದೆ ಎಂದರೆ, ಇನ್ನೂ ಕೆಲವರು ಮೆಡಿಟರೇನಿಯನ್ ಅಥವಾ ಗ್ರೀಕ್‌ನ ಸ್ಪಾರ್ಟನ್ ಯೋಧರಿಗೆ ಹೋಲಿಸುತ್ತಾರೆ. ಆದರೆ ಬಂಟರ ಸಂಪ್ರದಾಯಗಳು ಮತ್ತು ಆಚರಣೆಗಳನ್ನು ನೋಡಿದರೆ, ಇವರು ದ್ರಾವಿಡ ಸಂಸ್ಕೃತಿಗೆ ಅತಿ ಹೆಚ್ಚು ಹತ್ತಿರವಾಗಿದ್ದಾರೆ.

ಪ್ರೊಫೆಸರ್ ಶಿವರಾಮ್ ಶೆಟ್ಟಿ ಅವರ ಪ್ರಕಾರ, ಬಂಟರು ಮೂಲತಃ ‘ಕೋಶರ್’ ಎಂಬ ಜನಾಂಗದವರು. ಇವರು ಕ್ರಿಸ್ತಪೂರ್ವ 2500ರ ಸಮಯದಲ್ಲಿ ಸಿಂಧೂ ಕಣಿವೆ ಅಥವಾ ಹರಪ್ಪಾ ನಾಗರಿಕತೆಯಲ್ಲಿ ವಾಸಿಸುತ್ತಿದ್ದ ಅತ್ಯಂತ ಸುಸಂಸ್ಕೃತ ಜನಾಂಗ. ಆರ್ಯರ ದಾಳಿಯ ನಂತರ, ಇವರು ಸಮುದ್ರ ಮಾರ್ಗದ ಮೂಲಕ ದಕ್ಷಿಣ ಭಾರತದ ಕರಾವಳಿಗೆ ವಲಸೆ ಬಂದರು ಎಂಬುದು ಇನ್ನೊಂದು ವಾದ.

ಹೀಗೆ ಕರಾವಳಿಗೆ ಬಂದ ಇವರು ಸಣ್ಣ ಸಣ್ಣ ರಾಜ್ಯಗಳನ್ನು ಕಟ್ಟಿ ನಂತರ ದೊಡ್ಡ ಸಾಮ್ರಾಜ್ಯಗಳು ಬಂದಾಗ, ಊರಿನ ನಾಯಕರಾಗಿ ತಮ್ಮ ಅಧಿಕಾರವನ್ನು ಯಶಸ್ವಿಯಾಗಿ ಉಳಿಸಿಕೊಂಡರು. ಹಾಗೆಯೇ, ಖ್ಯಾತ ಸಾಹಿತಿ ಡಾ. ಕಯ್ಯಾರ ಕಿಂಞಣ್ಣ ರೈ ಅವರು ಬಂಟರಿಗೆ ಕ್ಷತ್ರಿಯ ಮೂಲದ ನಂಟಿದೆ ಎನ್ನುತ್ತಾರೆ.

ಇತಿಹಾಸಕಾರ ಎಸ್.ಡಿ.ಎಲ್. ಆಲಗೋಡಿ ಅವರ ಪ್ರಕಾರ, ಬಂಟರು ಮೂಲತಃ ಯೋಧರು. ರಾಜರ ಪರವಾಗಿ ಯುದ್ಧ ಮಾಡಿ, ಅದಕ್ಕೆ ಪ್ರತಿಫಲವಾಗಿ ರಾಜರಿಂದ ಸಾವಿರಾರು ಎಕರೆ ಜಮೀನು ಪಡೆದು ಅವರು ಭೂಮಾಲೀಕರಾದರು.

ಇನ್ನೊಬ್ಬ ಇತಿಹಾಸಕಾರ ಕೆ.ವಿ. ರಮೇಶ್ ಅವರ ಪ್ರಕಾರ, ಕ್ರಿಸ್ತಪೂರ್ವ 345ರ ಕಾಲದಲ್ಲಿದ್ದ ತುಳುನಾಡಿನ ಆಳುಪ ರಾಜ ‘ಜಯ ಭೂತಳ ಪಾಂಡ್ಯ’ ಇದೇ ಬಂಟ ಸಮುದಾಯಕ್ಕೆ ಸೇರಿದವನು.

ಪ್ರಾಚೀನ ಇತಿಹಾಸ ಮತ್ತು ಕದಂಬ, ಆಳುಪ ರಾಜವಂಶಗಳು

ಸುಮಾರು ಎರಡು ಸಾವಿರ ವರ್ಷಗಳ ಹಿಂದೆಯೇ ತುಳುನಾಡಿನಲ್ಲಿ ಬಂಟರು ಅತ್ಯಂತ ಪ್ರಭಾವಶಾಲಿಯಾಗಿದ್ದರು ಎಂಬುದು ಸ್ಪಷ್ಟವಾಗುತ್ತದೆ. ಬನವಾಸಿಯ ಕದಂಬ ಸಾಮ್ರಾಜ್ಯದ ಕಾಲದಲ್ಲಿ, ಬಂಟರು ಪ್ರಮುಖ ಆಡಳಿತಗಾರರಾಗಿದ್ದರು.

ಆದರೆ ಬಂಟರ ಇತಿಹಾಸದಲ್ಲಿ ಅತ್ಯಂತ ಪ್ರಮುಖವಾದ ಕಾಲಘಟ್ಟವೆಂದರೆ, ಆಳುಪ ರಾಜವಂಶದ ಕಾಲ. ತುಳುನಾಡನ್ನು ಸಾವಿರ ವರ್ಷಗಳಿಗೂ ಹೆಚ್ಚು ಕಾಲ ಆಳಿದವರು ಆಳುಪರು. ಈ ಆಳುಪ ರಾಜಮನೆತನಕ್ಕೂ ಬಂಟರಿಗೂ, ಅತ್ಯಂತ ನಿಕಟವಾದ ಮತ್ತು ರಕ್ತದ ಸಂಬಂಧವಿತ್ತು.

ಆಳುಪರ ಸೈನ್ಯದಲ್ಲಿ ಬಂಟರು ಮುಖ್ಯ ದಂಡನಾಯಕರಾಗಿದ್ದರು. ಸೈನ್ಯದ ಶಕ್ತಿಯಾಗಿ ಮತ್ತು ನಾಡಿನ ರಕ್ಷಕರಾಗಿ, ಬಂಟರು ಅಪ್ರತಿಮ ಶೌರ್ಯ ಮೆರೆದರು. ಆ ಕಾಲದಲ್ಲಿ ಇವರ ಸೇವೆಗೆ ಮೆಚ್ಚಿ, ರಾಜರು ಅಪಾರ ಪ್ರಮಾಣದ ಜಮೀನುಗಳನ್ನು ಉಡುಗೊರೆಯಾಗಿ ನೀಡುತ್ತಿದ್ದರು.

ಹೀಗಾಗಿ ಇವರು ಕೇವಲ ಯೋಧರಾಗಿ ಉಳಿಯದೇ, ಅಪಾರ ಕೃಷಿ ಭೂಮಿಯ ಒಡೆಯರಾಗಿ, ದೊಡ್ಡ ದೊಡ್ಡ ಭೂಮಾಲೀಕರಾಗಿಯೂ ಬೆಳೆದರು. ಕೃಷಿ ಮತ್ತು ಯುದ್ಧ, ಇವರ ಪ್ರಮುಖ ಕಸುಬಾಯಿತು.

ಮಧ್ಯಕಾಲೀನ ಇತಿಹಾಸ ಮತ್ತು ವಿಜಯನಗರ ಸಾಮ್ರಾಜ್ಯ

ಹದಿಮೂರನೇ ಶತಮಾನದ ನಂತರ, ದಕ್ಷಿಣ ಭಾರತದಲ್ಲಿ ವಿಜಯನಗರ ಸಾಮ್ರಾಜ್ಯ ಸ್ಥಾಪನೆಯಾಯಿತು. ಶ್ರೀ ಕೃಷ್ಣದೇವರಾಯ ಮತ್ತು ತುಳುವ ನರಸ ನಾಯಕನಂತಹ ಚಕ್ರವರ್ತಿಗಳ ಕಾಲದಲ್ಲಿ, ಬಂಟರ ಪ್ರಭಾವ ಮತ್ತು ರಾಜಕೀಯ ಶಕ್ತಿ ಮತ್ತಷ್ಟು ಹೆಚ್ಚಾಯಿತು.

ವಿಜಯನಗರವನ್ನು ಆಳಿದ ‘ತುಳುವ ರಾಜವಂಶ’ವನ್ನು ಸ್ಥಾಪಿಸಿದ ತುಳುವ ನರಸ ನಾಯಕ ಮೂಲತಃ ಇದೇ ಬಂಟ ಸಮುದಾಯದ ನಾಯಕ ಎಂದೂ ಹೇಳಲಾಗುತ್ತದೆ.

ವಿಜಯನಗರದ ಅರಸರು, ಕರಾವಳಿಯ ಆಡಳಿತವನ್ನು ನೋಡಿಕೊಳ್ಳಲು, ಬಂಟ ನಾಯಕರನ್ನು ಪ್ರಾದೇಶಿಕ ಅಧಿಕಾರಿಗಳಾಗಿ ನೇಮಿಸುತ್ತಿದ್ದರು. ಇವರನ್ನು ‘ಬಾರಕೂರು’ ಮತ್ತು ‘ಮಂಗಳೂರು’ ಪ್ರಾಂತ್ಯಗಳ, ಸ್ಥಳೀಯ ಆಡಳಿತಗಾರರನ್ನಾಗಿ ಮಾಡಲಾಗಿತ್ತು.

ಈ ಕಾಲಘಟ್ಟದಲ್ಲಿ ತುಳುನಾಡಿನಲ್ಲಿ, ಚೌಟ, ಬಂಗ, ಅಜಿಲ, ಮತ್ತು ಸಾವಂತ ಎಂಬ ಅನೇಕ ಸ್ಥಳೀಯ ರಾಜಮನೆತನಗಳು ಹುಟ್ಟಿಕೊಂಡವು. ಈ ಮನೆತನದ ಅರಸರು ಜೈನ ಧರ್ಮವನ್ನು ಪಾಲಿಸುತ್ತಿದ್ದರೂ, ಅವರು ಮೂಲತಃ ಬಂಟ ಸಮುದಾಯದ ರಕ್ತಸಂಬಂಧಿಗಳಾಗಿದ್ದರು.

ಈ ಕಾಲದಲ್ಲಿ ಬಂಟರು ಕೇವಲ ಸೈನಿಕರಾಗಿ ಉಳಿಯಲಿಲ್ಲ. ಬದಲಾಗಿ ನಾಡಿನ ಆಡಳಿತಗಾರರಾಗಿ, ನ್ಯಾಯ ತೀರ್ಮಾನ ಮಾಡುವ ಪ್ರಮುಖರಾಗಿ ಬೆಳೆದರು.

ಪೋರ್ಚುಗೀಸರ ವಿರುದ್ಧ ಹೋರಾಟ

ಹದಿನಾರನೇ ಶತಮಾನದಲ್ಲಿ ಪೋರ್ಚುಗೀಸರು ಭಾರತದ ಕರಾವಳಿಗೆ ಬಂದರು. 1530ರಲ್ಲಿ ಮಂಗಳೂರಿನ ರತ್ನ ಶೆಟ್ಟಿ ಎಂಬ ವ್ಯಾಪಾರಿ, ಪೋರ್ಚುಗೀಸರ ವಿರುದ್ಧ ಸಿಡಿದೆದ್ದು ಅವರ ಹಡಗುಗಳನ್ನು ನಾಶಮಾಡಿದ.

ಹಾಗೆಯೇ ಚೌಟ ಮನೆತನದ ವೀರ ರಾಣಿ ಅಬ್ಬಕ್ಕ, ಪೋರ್ಚುಗೀಸರಿಗೆ ಸಿಂಹಸ್ವಪ್ನವಾಗಿ ಕಾಡಿದಳು. ಭಾರತದ ಮೊದಲ ಸ್ವಾತಂತ್ರ್ಯ ಹೋರಾಟಗಾರ್ತಿ ಎಂದು ಆಕೆಯನ್ನು ಇಂದಿಗೂ ಗೌರವಿಸಲಾಗುತ್ತದೆ.

ವಿಜಯನಗರದ ಪತನದ ನಂತರ, ಕೆಳದಿ ನಾಯಕರ ಆಳ್ವಿಕೆಯ ಕಾಲದಲ್ಲೂ, ಬಂಟರು ತಮ್ಮ ಪ್ರಭಾವವನ್ನು ಮತ್ತು ಜಮೀನ್ದಾರಿಕೆಯನ್ನು ಉಳಿಸಿಕೊಂಡರು.

ಅಳಿಯಸಂತಾನ ಪದ್ಧತಿ ಮತ್ತು ಭೂತಳ ಪಾಂಡ್ಯನ ಕಥೆ

ಬಂಟ ಸಮುದಾಯದ ಅತ್ಯಂತ ವಿಶೇಷವಾದ ಮತ್ತು ಐತಿಹಾಸಿಕವಾದ ಪದ್ಧತಿ ಎಂದರೆ ಅದು ‘ಅಳಿಯಸಂತಾನ’ ಪದ್ಧತಿ. ಇದೊಂದು ವಿಶಿಷ್ಟವಾದ ಮಾತೃಪ್ರಧಾನ ಕುಟುಂಬ ವ್ಯವಸ್ಥೆ.

ಈ ಪದ್ಧತಿಯಲ್ಲಿ ಆಸ್ತಿಯ ಹಕ್ಕು ಮತ್ತು ವಂಶದ ಕೊಂಡಿ, ತಂದೆಯಿಂದ ಮಗನಿಗೆ ಹೋಗುವುದಿಲ್ಲ. ಬದಲಾಗಿ ಸೋದರಮಾವನಿಂದ ಅಳಿಯನಿಗೆ, ಅಂದರೆ ತಂಗಿಯ ಅಥವಾ ಅಕ್ಕನ ಮಗನಿಗೆ ಹೋಗುತ್ತದೆ. ವಂಶದ ಮೂಲವನ್ನು ತಾಯಿಯ ಕಡೆಯಿಂದ ಗುರುತಿಸಲಾಗುತ್ತದೆ.

ಇದರ ಹಿಂದೆ ತುಳುನಾಡಿನಲ್ಲಿ ಒಂದು ಪ್ರಸಿದ್ಧ ಐತಿಹಾಸಿಕ ದಂತಕಥೆಯಿದೆ. ಅದೇ ‘ಭೂತಾಳ ಪಾಂಡ್ಯ’ನ ಕಥೆ.

ತುಳುನಾಡನ್ನು ‘ದೇವ ಪಾಂಡ್ಯ’ ಎಂಬ ರಾಜ ಆಳುತ್ತಿದ್ದ. ಒಮ್ಮೆ ಆತ ಹೊಸದಾಗಿ ನಿರ್ಮಿಸಿದ ಬೃಹತ್ ಹಡಗುಗಳು, ಸಮುದ್ರಕ್ಕೆ ಇಳಿಯದೆ ತೀರದಲ್ಲೇ ಸಿಲುಕಿಕೊಳ್ಳುತ್ತವೆ. ಆಗ ‘ಕುಂಡೋದರ’ ಎಂಬ ದೈವವೊಂದು ಪ್ರತ್ಯಕ್ಷವಾಗಿ, ಆ ಹಡಗುಗಳು ಸಮುದ್ರಕ್ಕೆ ಇಳಿಯಬೇಕಾದರೆ, ರಾಜಮನೆತನದ ಒಂದು ಗಂಡುಮಗುವನ್ನು ಬಲಿಕೊಡಬೇಕು ಎಂದು ಷರತ್ತು ವಿಧಿಸುತ್ತದೆ.

ಆಗ ರಾಜ ದೇವ ಪಾಂಡ್ಯ, ತನ್ನ ಹೆಂಡತಿಯ ಬಳಿ ನಮ್ಮ ಒಬ್ಬ ಮಗನನ್ನು ನಾಡಿಗಾಗಿ ಬಲಿಕೊಡೋಣ ಎಂದು ಕೇಳುತ್ತಾನೆ. ಆದರೆ ರಾಜನ ಪತ್ನಿ, ತನ್ನ ಮಗನನ್ನು ಬಲಿಕೊಡಲು ನಿರಾಕರಿಸುತ್ತಾಳೆ.

ಈ ಸಮಯದಲ್ಲಿ, ರಾಜನ ತಂಗಿ ‘ಸತ್ಯವತಿ’ ನಾಡಿನ ಒಳಿತಿಗಾಗಿ ಮತ್ತು ಅಣ್ಣನ ಗೌರವ ಉಳಿಸಲು, ತನ್ನ ಸ್ವಂತ ಮಗನನ್ನೇ ಬಲಿಕೊಡಲು ಒಪ್ಪುತ್ತಾಳೆ. ಆದರೆ ಆ ಮಗುವಿನ ಧೈರ್ಯ, ಮತ್ತು ತಾಯಿಯ ನಿಸ್ವಾರ್ಥ ತ್ಯಾಗವನ್ನು ಮೆಚ್ಚಿದ ‘ಕುಂಡೋದರ’, ಮಗುವಿಗೆ ಪ್ರಾಣದಾನ ಮಾಡುತ್ತಾನೆ.

ಜೊತೆಗೆ, ಕಷ್ಟದ ಕಾಲದಲ್ಲಿ ನೆರವಾದ ಹೆಂಡತಿಯ ಮಕ್ಕಳ ಬದಲು, ತ್ಯಾಗಮಯಿಯಾದ ನಿನ್ನ ತಂಗಿಯ ಮಗನೇ ಈ ಇಡೀ ರಾಜ್ಯಕ್ಕೆ ಮುಂದಿನ ಉತ್ತರಾಧಿಕಾರಿಯಾಗಬೇಕು ಎಂದು ರಾಜನಿಗೆ ಆಜ್ಞಾಪಿಸುತ್ತಾನೆ.

ಅಲ್ಲಿಂದ ಈ ಅಳಿಯಸಂತಾನ ಪದ್ಧತಿ ಶುರುವಾಯಿತು ಎಂದು ಹೇಳಲಾಗುತ್ತದೆ. ಕುಟುಂಬದ ಹಿರಿಯ ಸೋದರಮಾವ ಅಥವಾ ಯಜಮಾನ ಆಸ್ತಿಯನ್ನು ನಿರ್ವಹಣೆ ಮಾಡುತ್ತಿದ್ದ. ಆದರೆ ಆಸ್ತಿಯ ನಿಜವಾದ ಹಕ್ಕು ಹೆಣ್ಣುಮಕ್ಕಳಿಗೆ ಇರುತ್ತಿತ್ತು. ಈ ವ್ಯವಸ್ಥೆಯಿಂದಾಗಿ, ಬಂಟ ಸಮುದಾಯದಲ್ಲಿ ಮಹಿಳೆಯರಿಗೆ, ಬಹಳ ಉನ್ನತವಾದ ಮತ್ತು ಗೌರವಾನ್ವಿತ ಸ್ಥಾನಮಾನ ಸಿಕ್ಕಿತು.

ಗುತ್ತಿನ ಮನೆಗಳು ಮತ್ತು ಬಂಟರ ಉಪನಾಮಗಳು

ಬಂಟರು ಶತಮಾನಗಳ ಕಾಲ ಒಂದೇ ದೊಡ್ಡ ಮನೆಯಲ್ಲಿ ಒಟ್ಟಾಗಿ ಜೀವಿಸುತ್ತಿದ್ದ ಕೂಡುಕುಟುಂಬದವರು. ಅಳಿಯಸಂತಾನ ಪದ್ಧತಿಯಿಂದಾಗಿ ಆಸ್ತಿ ವಿಭಜನೆಯಾಗದೆ ಒಂದೇ ಕಡೆ ಉಳಿಯುತ್ತಿತ್ತು. ಆದರೆ ಕುಟುಂಬದ ಯಜಮಾನ ಯಾವಾಗಲೂ ಹಿರಿಯ ಗಂಡಸೇ ಆಗಿರುತ್ತಿದ್ದ.

ವರ್ಷಗಳು ಕಳೆದಂತೆ ಕುಟುಂಬಗಳು ದೊಡ್ಡದಾದವು. ಒಂದೇ ಮನೆಯಲ್ಲಿ ಎಲ್ಲರಿಗೂ ಇರಲು ಕಷ್ಟವಾದಾಗ, ಕೆಲವರು ಹೊರಬಂದು ತಮ್ಮದೇ ಆದ ಪ್ರತ್ಯೇಕ ಮನೆಗಳನ್ನು ಕಟ್ಟಿಕೊಂಡರು. ಈ ಚಿಕ್ಕ ಚಿಕ್ಕ ಕುಟುಂಬದ ಶಾಖೆಗಳನ್ನು ‘ಕವರು’ ಎಂದು ಕರೆಯುತ್ತಾರೆ. ಹಲವಾರು ಕವರುಗಳು ಸೇರಿದರೆ ಒಂದು ‘ಕುಟುಂಬ’ ಆಗುತ್ತದೆ.

ಬಂಟರ ಮನೆಗಳು ಊರಿನಲ್ಲೇ ಅತ್ಯಂತ ಪ್ರಭಾವಶಾಲಿಯಾಗಿರುತ್ತಿದ್ದವು. ಈ ಮನೆಗಳನ್ನು ಗುತ್ತು, ಮಾಗಂದಡಿ, ಬೀಡು, ಬೆಟ್ಟು, ಬರ್ಕೆ, ಕಟ್ಟೆ ಹೀಗೆ ನಾನಾ ಹೆಸರುಗಳಿಂದ ಕರೆಯುತ್ತಿದ್ದರು. ಗುತ್ತಿನ ಮನೆ ಎಂದರೆ ಅದು ಕೇವಲ ವಾಸಿಸುವ ಜಾಗವಾಗಿರಲಿಲ್ಲ, ಅದು ಬಂಟರ ಗೌರವ, ಅಂತಸ್ತು ಮತ್ತು ಐತಿಹಾಸಿಕ ಹೆಮ್ಮೆಯ ಸಂಕೇತವಾಗಿತ್ತು.

ಆಳ್ವ, ಅಜಿಲ, ಅರಸ, ಅಡಪ, ಬಳ್ಳಾಲ, ಬಂಗ, ಚೌಟ, ಹೆಗ್ಡೆ, ಕದಂಬ, ಪುಂಜ, ಮಾರ್ಲ, ಪಯ್ಯಡೆ, ರೈ, ಸಮಾನಿ, ಶೆಟ್ಟಿ, ತೋಳಾರ ಹೀಗೆ ನಲವತ್ತಕ್ಕೂ ಹೆಚ್ಚು ಉಪನಾಮಗಳನ್ನು ಬಂಟರು ಹೊಂದಿದ್ದಾರೆ.

‘ಶೆಟ್ಟಿ’ ಎಂಬ ಪದವು ‘ಶ್ರೇಷ್ಠಿ’ ಎಂಬುದರಿಂದ ಬಂದಿದೆ. ಕಾಲಕ್ರಮೇಣ ಶ್ರೇಷ್ಠಿ ಎಂಬುದು ಸೆಟ್ಟಿ, ಚೆಟ್ಟಿ, ಮತ್ತು ಕೊನೆಗೆ ಶೆಟ್ಟಿ ಎಂದು ಬದಲಾಯಿತು ಎನ್ನಲಾಗುತ್ತದೆ. ಇನ್ನು ‘ರೈ’ ಎಂದರೆ ರಾಜ ಅಥವಾ ಒಡೆಯ ಎಂದರ್ಥ. ‘ಆಳ್ವ’ ಎಂದರೆ ಪ್ರಾಚೀನ ಆಳುಪ ಮನೆತನದಿಂದ ಬಂದ ಹೆಸರು. ‘ಹೆಗ್ಡೆ’ ಎಂದರೆ ಹಿರಿಯ ಅಥವಾ ಗ್ರಾಮದ ಮುಖ್ಯಸ್ಥ. ಈ ಪ್ರತಿಯೊಂದು ಹೆಸರಿನ ಹಿಂದೆಯೂ, ಅವರ ಹಿಂದಿನ ಅಧಿಕಾರ ಮತ್ತು ಇತಿಹಾಸ ಅಡಗಿದೆ.

ದೈವಾರಾಧನೆ ಮತ್ತು ನಂಬಿಕೆಗಳು

ಪ್ರಾಚೀನ ಕಾಲದಲ್ಲಿ ಬಂಟರು ಮೂಲತಃ ಶಿವನ ಆರಾಧಕರಾಗಿದ್ದರು. ಎಂಟನೇ ಶತಮಾನದಲ್ಲಿ ಶಂಕರಾಚಾರ್ಯರು ಮತ್ತು ಹದಿನಾಲ್ಕನೇ ಶತಮಾನದಲ್ಲಿ ಮಧ್ವಾಚಾರ್ಯರು ಕರಾವಳಿಗೆ ಬಂದ ಮೇಲೆ ಬಂಟರು ಎಲ್ಲಾ ಹಿಂದೂ ದೇವರುಗಳನ್ನು ಪೂಜಿಸಲು ಶುರುಮಾಡಿದರು.

ಹದಿನಾಲ್ಕನೇ ಶತಮಾನದಿಂದ ತುಳುನಾಡಿನಲ್ಲಿ ಬ್ರಾಹ್ಮಣ ಸಂಸ್ಕೃತಿಯನ್ನು ಅತಿ ಹೆಚ್ಚು ಪ್ರೋತ್ಸಾಹಿಸಿದ್ದು ಇದೇ ಬಂಟರು. ದೇವಸ್ಥಾನಗಳಿಗೆ ಅಪಾರ ಪ್ರಮಾಣದ ಜಮೀನು ಮತ್ತು ಹಣವನ್ನು ದಾನ ಮಾಡಿ ಆ ಸಂಸ್ಕೃತಿಯನ್ನು ಉಳಿಸಿ ಬೆಳೆಸಿದರು. ಕರಾವಳಿಯ ಬಹುತೇಕ ದೇವಸ್ಥಾನಗಳ ಪಾರಂಪರಿಕ ಧರ್ಮದರ್ಶಿಗಳು ಇಂದಿಗೂ ಬಂಟ ಮನೆತನದವರೇ ಆಗಿದ್ದಾರೆ.

ಆದರೆ ಬಂಟರ ಅತಿ ದೊಡ್ಡ ವಿಶೇಷತೆ ಎಂದರೆ ಅವರು ವೈದಿಕ ದೇವರುಗಳನ್ನು ಎಷ್ಟು ಗೌರವಿಸುತ್ತಾರೋ, ಅದಕ್ಕಿಂತ ಹೆಚ್ಚಾಗಿ ತಮ್ಮ ‘ದೈವ’ಗಳನ್ನು ನಂಬುತ್ತಾರೆ. ಬಂಟರ ಮೊದಲ ಭಕ್ತಿ ಮತ್ತು ನಿಷ್ಠೆ ಯಾವಾಗಲೂ ತಮ್ಮ ಆರಾಧ್ಯ ದೈವಗಳಿಗೆ ಮೀಸಲು.

ದೈವಾರಾಧನೆ ಎನ್ನುವುದು ಸುಮಾರು 4,500 ವರ್ಷಗಳಷ್ಟು ಹಳೆಯ ಪ್ರಾಚೀನ ದ್ರಾವಿಡ ಪದ್ಧತಿ ಎನ್ನಲಾಗುತ್ತದೆ. ಪಂಜುರ್ಲಿ, ಕಲ್ಕುಡ, ಕಲ್ಲುರ್ಟಿ, ಜಾರಂದಾಯ, ಬೊಬ್ಬರ್ಯ, ಪಿಲಿಚಾಮುಂಡಿ ಹೀಗೆ ಹಲವಾರು ದೈವಗಳನ್ನು ಬಂಟರು ಆರಾಧಿಸುತ್ತಾರೆ. ದೈವದ ಕಾರ್ಯಗಳಿಗಾಗಿಯೇ ಗುತ್ತಿನ ಮನೆಗಳಲ್ಲಿ ಜಮೀನನ್ನು ಮೀಸಲಿಡುತ್ತಿದ್ದರು.

ಮಿಷನರಿಗಳಿಗೆ ದೈವಾರಾಧನೆ ಎಂದರೆ ಪಿಶಾಚಿಯ ಪೂಜೆ ಎಂಬ ತಪ್ಪು ಕಲ್ಪನೆ ಇದ್ದದ್ದರಿಂದ ಬ್ರಿಟಿಷರು ಮತ್ತು ಕ್ರಿಶ್ಚಿಯನ್ ಮಿಷನರಿಗಳು ಈ ದೈವಾರಾಧನೆಯನ್ನು ವಿರೋಧಿಸಿ ಅದನ್ನು ನಿಲ್ಲಿಸಲು ತುಂಬಾ ಪ್ರಯತ್ನಿಸಿದ್ದರು.

ಬೆದರಿಕೆಗಳನ್ನು ಒಡ್ಡಿದರು ಸಹ ಬ್ರಿಟಿಷರ ಯಾವುದೇ ಬೆದರಿಕೆಗೂ ಬಂಟರು ಜಗ್ಗಲಿಲ್ಲ. ಬದಲಾಗಿ ಮಿಷನರಿಗಳು ತಂದ ಮಂಗಳೂರು ಹೆಂಚುಗಳನ್ನು ಹಾಕಿ ದೈವಸ್ಥಾನಗಳನ್ನು ಇನ್ನಷ್ಟು ಭವ್ಯವಾಗಿ ಕಟ್ಟಿ, ಕೋಲವನ್ನು ಮತ್ತಷ್ಟು ವಿಜೃಂಭಣೆಯಿಂದ ಮಾಡಿದರು. ಇನ್ನು ತುಳುನಾಡಿನ ಜಾನಪದ ಕ್ರೀಡೆ ‘ಕಂಬಳ’, ಬಂಟರ ಕೃಷಿ ಸಂಸ್ಕೃತಿಯ ಅತಿ ದೊಡ್ಡ ಪ್ರತೀಕವಾಗಿದೆ. ಯಕ್ಷಗಾನ ಕಲೆಗೂ ಇವರು ಅಪಾರ ಪ್ರೋತ್ಸಾಹ ನೀಡಿದ್ದಾರೆ.

ಶಿಕ್ಷಣ ಕ್ರಾಂತಿ ಮತ್ತು ಸ್ವಾತಂತ್ರ್ಯ ಹೋರಾಟ

ಹತ್ತೊಂಬತ್ತನೇ ಶತಮಾನದಲ್ಲಿ ಬ್ರಿಟಿಷರು ಕರಾವಳಿ ಪ್ರದೇಶಗಳನ್ನು ಆಳುವಾಗ, ಬಂಟರನ್ನು ಗ್ರಾಮದ ಪಟೇಲರನ್ನಾಗಿ ನೇಮಿಸಿದರು. ಬಂಟರಿಗೆ ಮೊದಲಿಗೆ ಇಂಗ್ಲಿಷ್ ಶಿಕ್ಷಣದ ಬಗ್ಗೆ ಆಸಕ್ತಿ ಇರಲಿಲ್ಲ. ಆದರೆ ಕಾಲ ಬದಲಾದಂತೆ, ಸಮುದಾಯದ ಮುಖಂಡರಿಗೆ ಶಿಕ್ಷಣದ ಅನಿವಾರ್ಯತೆ ಅರ್ಥವಾಯಿತು.

ಸ್ವಾತಂತ್ರ್ಯ ಹೋರಾಟದಲ್ಲೂ ಬಂಟರು ಹಿಂದೆ ಬೀಳಲಿಲ್ಲ. ಡಾ. ವಿಠ್ಠಲ್ ಶೆಟ್ಟಿ ಅವರು 1933ರಲ್ಲೇ ಕಲ್ಲಿದ್ದಲು ಬಳಸಿ, ಮಂಗಳೂರಿಗೆ ಮೊದಲ ಬಾರಿ ವಿದ್ಯುತ್ ತಂದರು. ನಂತರ ಬ್ರಿಟಿಷರ ‘ರಾವ್ ಬಹದ್ದೂರ್’ ಬಿರುದನ್ನು ತಿರಸ್ಕರಿಸಿ, ಕ್ವಿಟ್ ಇಂಡಿಯಾ ಚಳುವಳಿಯಲ್ಲಿ ಭಾಗವಹಿಸಿ ಜೈಲು ಸೇರಿದರು.

ಕುಂಬಳೆ ಗಾಂಧಿ ಎಂದೇ ಖ್ಯಾತರಾಗಿದ್ದ ಬಂಬ್ರಾಣ ದೇವಪ್ಪ ಆಳ್ವ, ಎನ್. ಎಸ್ ಕಿಲ್ಲೆ, ಅತ್ತಾವರ, ನಡಿಬೈಲ್ ವೆಂಕಪ್ಪ ರೈ ಸೇರಿದಂತೆ, ಅನೇಕ ಬಂಟರು ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿ ದೇಶಕ್ಕಾಗಿ ತಮ್ಮ ಸರ್ವಸ್ವವನ್ನೂ ತ್ಯಾಗ ಮಾಡಿದರು.

ಭೂ ಸುಧಾರಣೆ ಮತ್ತು ಆಧುನಿಕ ಕಾಲದ ಸ್ಥಿತ್ಯಂತರಗಳು

ಬಂಟರ ಇತಿಹಾಸದಲ್ಲಿ ಅತಿ ದೊಡ್ಡ ಆರ್ಥಿಕ ಮತ್ತು ಸಾಮಾಜಿಕ ತಿರುವು ಬಂದದ್ದು, ಭಾರತಕ್ಕೆ ಸ್ವಾತಂತ್ರ್ಯ ಬಂದ ನಂತರ. ಕರ್ನಾಟಕದಲ್ಲಿ ದೇವರಾಜ ಅರಸು ಅವರ ಸರ್ಕಾರವಿದ್ದಾಗ, ಭೂ ಸುಧಾರಣಾ ಕಾಯ್ದೆ ಕಟ್ಟುನಿಟ್ಟಾಗಿ ಜಾರಿಗೆ ಬಂತು. ‘ಉಳುವವನೇ ಭೂಮಿಯ ಒಡೆಯ’ ಎಂಬ ಕ್ರಾಂತಿಕಾರಿ ಕಾನೂನು ಬಂತು.

ಈ ಕಾನೂನಿನಿಂದಾಗಿ ತುಳುನಾಡಿನಲ್ಲಿ ದೊಡ್ಡ ಬದಲಾವಣೆಯಾಯಿತು. ತಲೆತಲಾಂತರಗಳಿಂದ ನೂರಾರು, ಸಾವಿರಾರು ಎಕರೆ ಜಮೀನು ಹೊಂದಿದ್ದ ಬಂಟರು, ಏಕಾಏಕಿ ತಮ್ಮ ಭೂಮಿಯನ್ನು ಕಳೆದುಕೊಂಡರು. ಉಳುವ ಗೇಣಿದಾರರಿಗೆ ಆ ಭೂಮಿಯ ಹಕ್ಕು ಸಿಕ್ಕಿತು.

ಇದು ಬಂಟರ ಆರ್ಥಿಕ ಸ್ಥಿತಿಯ ಮೇಲೆ ಅತಿ ದೊಡ್ಡ ಪೆಟ್ಟು ನೀಡಿತು. ಕೇವಲ ಕೃಷಿಯನ್ನೇ ನಂಬಿದ್ದ ಅನೇಕ ಪ್ರತಿಷ್ಠಿತ ಕುಟುಂಬಗಳು, ಬೀದಿಗೆ ಬರುವಂತಹ ಕಠಿಣ ಪರಿಸ್ಥಿತಿ ನಿರ್ಮಾಣವಾಯಿತು. ಆದರೆ ಬಂಟರು ಧೃತಿಗೆಡಲಿಲ್ಲ. ಅವರ ರಕ್ತದಲ್ಲೇ ಇದ್ದ ಹೋರಾಟದ ಗುಣ ಮತ್ತು ಸ್ವಾಭಿಮಾನ, ಅವರನ್ನು ಹೊಸ ದಾರಿಯಲ್ಲಿ ನಡೆಯುವಂತೆ ಮಾಡಿತು.

ಹೊಸ ಉದ್ಯಮಗಳು, ಮುಂಬೈ ವಲಸೆ ಮತ್ತು ಬ್ಯಾಂಕಿಂಗ್ ಸಾಧನೆ

ಭೂಮಿ ಕಳೆದುಕೊಂಡ ನಂತರ, ಅನೇಕ ಬಂಟ ಯುವಕರು ಹೊಸ ಜೀವನ ಕಟ್ಟಿಕೊಳ್ಳಲು, ಮುಂಬೈನತ್ತ ಮುಖ ಮಾಡಿದರು. ಖಾಲಿ ಕೈಯಲ್ಲಿ ಮುಂಬೈಗೆ ಹೋದ ಇವರು, ಆರಂಭದಲ್ಲಿ ಚಿಕ್ಕ ಕ್ಯಾಂಟೀನ್‌ಗಳನ್ನು ಶುರು ಮಾಡಿದರು. ಹೋಟೆಲ್‌ಗಳಲ್ಲಿ ಕಾರ್ಮಿಕರಾಗಿ ದುಡಿಯುತ್ತಾ ತಮ್ಮ ಕಠಿಣ ಶ್ರಮ, ಛಲ ಮತ್ತು ಪ್ರಾಮಾಣಿಕತೆಯಿಂದ, ಬೆಳೆಯುತ್ತಾ ಹೋದರು.

ಇಂದು ಮುಂಬೈನ ಬೃಹತ್ ಹೋಟೆಲ್ ಉದ್ಯಮದಲ್ಲಿ, ಬಂಟರದ್ದೇ ಸಂಪೂರ್ಣ ಮೇಲುಗೈ ಇದೆ. ಮುಂಬೈ ಮಾತ್ರವಲ್ಲದೆ, ಭಾರತದ ಅನೇಕ ನಗರಗಳಲ್ಲಿ, ಹಾಗೂ ವಿದೇಶಗಳಲ್ಲೂ ಇವರು ಸ್ಥಾಪಿಸಿದ ಹೋಟೆಲ್ ಉದ್ಯಮಗಳು ಯಶಸ್ವಿಯಾಗಿವೆ.

ಬ್ಯಾಂಕಿಂಗ್ ಕ್ಷೇತ್ರದಲ್ಲೂ ಬಂಟರು ದೊಡ್ಡ ಕ್ರಾಂತಿ ಮಾಡಿದರು. ಸಿಂಡಿಕೇಟ್ ಬ್ಯಾಂಕ್, ವಿಜಯಾ ಬ್ಯಾಂಕ್, ಮತ್ತು ಕಾರ್ಪೊರೇಷನ್ ಬ್ಯಾಂಕ್‌ನಂತಹ ರಾಷ್ಟ್ರೀಯ ಬ್ಯಾಂಕುಗಳ ಬೆಳವಣಿಗೆಯ ಹಿಂದೆ, ಬಂಟ ಸಮುದಾಯದ ದೂರದೃಷ್ಟಿ ಅಪಾರವಾಗಿದೆ. ವಿಶೇಷವಾಗಿ 1970ರಲ್ಲಿ ಸುಂದರ್ ರಾಮ್ ಶೆಟ್ಟಿ ಅವರು, ವಿಜಯಾ ಬ್ಯಾಂಕ್‌ನ ಚೇರ್ಮನ್ ಆದಾಗ ಇತಿಹಾಸವೇ ಸೃಷ್ಟಿಯಾಯಿತು.

ಪ್ರಮುಖ ಸಾಧಕರು ಮತ್ತು ಖ್ಯಾತನಾಮರು

ಇಂದು ಬಂಟ ಸಮುದಾಯದವರು, ಪ್ರಪಂಚದಾದ್ಯಂತ ಎಲ್ಲಾ ಕ್ಷೇತ್ರಗಳಲ್ಲೂ ಸಾಧನೆ ಮಾಡಿದ್ದಾರೆ. ನ್ಯಾಯಾಂಗದಲ್ಲಿ, ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಾಗಿದ್ದ ಕೆ.ಎಸ್. ಹೆಗ್ಡೆ, ಹಾಗೂ ಲೋಕಾಯುಕ್ತರಾಗಿದ್ದ ಸಂತೋಷ್ ಹೆಗ್ಡೆ ಅವರ ಹೆಸರು ಅಜರಾಮರ.

ವೈದ್ಯಕೀಯ ಕ್ಷೇತ್ರದಲ್ಲಿ ನಾರಾಯಣ ಹೃದಯಾಲಯದ ಸಂಸ್ಥಾಪಕ, ಡಾ. ದೇವಿಪ್ರಸಾದ್ ಶೆಟ್ಟಿ ಅವರ ಹೆಸರು, ಜಾಗತಿಕ ಮಟ್ಟದಲ್ಲಿ ಖ್ಯಾತಿ ಪಡೆದಿದೆ. ಹಾಗೆಯೇ ಗಲ್ಫ್ ರಾಷ್ಟ್ರಗಳಲ್ಲಿ ಬೃಹತ್ ಹೆಲ್ತ್‌ಕೇರ್ ಸಾಮ್ರಾಜ್ಯ ಕಟ್ಟಿದ ಬಿ.ಆರ್ ಶೆಟ್ಟಿ, ಲಂಡನ್ ಸ್ಟಾಕ್ ಎಕ್ಸ್‌ಚೇಂಜ್‌ಗೂ ಕಾಲಿಟ್ಟರು.

ಭಾರತೀಯ ಸೇನೆಗೆ ‘ವೀರ ಚಕ್ರ’ ತಂದುಕೊಟ್ಟ, ಗ್ರೂಪ್ ಕ್ಯಾಪ್ಟನ್ ದಿನೇಶ್ ಚಂದ್ರ ಭಂಡಾರಿ, ಮತ್ತು ವಿಂಗ್ ಕಮಾಂಡರ್ ಪ್ರಭಾಕರ್ ಹೆಗ್ಡೆ ಇದೇ ಮಣ್ಣಿನ ವೀರರು.

ಸಿನಿಮಾ ರಂಗದಲ್ಲಿ ಇವರ ಕೊಡುಗೆ ಬಹಳ ದೊಡ್ಡದು. ಬಾಲಿವುಡ್ ಮತ್ತು ದಕ್ಷಿಣ ಭಾರತದ ಚಿತ್ರರಂಗದಲ್ಲಿ ಇವರು ಮಿಂಚುತ್ತಿದ್ದಾರೆ. ವಿಶ್ವಸುಂದರಿ ಐಶ್ವರ್ಯ ರೈ, ಶಿಲ್ಪಾ ಶೆಟ್ಟಿ, ಸುನೀಲ್ ಶೆಟ್ಟಿ, ಅನುಷ್ಕಾ ಶೆಟ್ಟಿ, ರಕ್ಷಿತ್ ಶೆಟ್ಟಿ, ರಿಷಬ್ ಶೆಟ್ಟಿ, ಪೂಜಾ ಹೆಗ್ಡೆ, ಕೃತಿ ಶೆಟ್ಟಿ, ಹೀಗೆ ದೊಡ್ಡ ಕಲಾವಿದರ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ.

ಶಿಕ್ಷಣ ಕ್ಷೇತ್ರದಲ್ಲೂ ಇವರು ಬಹುದೊಡ್ಡ ಸಾಧನೆ ಮಾಡಿದ್ದಾರೆ. ಶೈಕ್ಷಣಿಕ ಸಂಸ್ಥೆಗಳು, ಹಾಗೂ ನಾಡಿನ ಅನೇಕ ಮೆಡಿಕಲ್ ಮತ್ತು ಇಂಜಿನಿಯರಿಂಗ್ ಕಾಲೇಜುಗಳನ್ನು, ಬಂಟ ಸಮುದಾಯದ ಗಣ್ಯರು ಯಶಸ್ವಿಯಾಗಿ ಮುನ್ನಡೆಸುತ್ತಿದ್ದಾರೆ.

ಒಂದು ಕಾಲದಲ್ಲಿ ಕದನ ಭೂಮಿಯ ವೀರರಾಗಿದ್ದವರು, ಇಂದು ವ್ಯಾಪಾರ, ಉದ್ಯಮ ಮತ್ತು ಕಲೆಯ ವೀರರಾಗಿದ್ದಾರೆ.

ಜನಸಂಖ್ಯೆ ಮತ್ತು ಭೌಗೋಳಿಕ ಹರಡುವಿಕೆ

ಬಂಟರ ಜನಸಂಖ್ಯೆಯ ಬಗ್ಗೆ ಮಾತನಾಡುವುದಾದರೆ 2010ರ ಅಂದಾಜಿನ ಪ್ರಕಾರ, ಪ್ರಪಂಚದಾದ್ಯಂತ ಇರುವ ಬಂಟರ ಒಟ್ಟು ಜನಸಂಖ್ಯೆ, ಸುಮಾರು 12 ರಿಂದ 13 ಲಕ್ಷ. ಅಧಿಕೃತ ಅಂಕಿ ಅಂಶಗಳು ಲಭ್ಯವಿಲ್ಲದಿದ್ದರೂ ಸಹ ಒಂದು ಅಂದಾಜಿನ ಪ್ರಕಾರ ಕರ್ನಾಟಕದಲ್ಲಿ ಇವರ ಜನಸಂಖ್ಯೆ ನಾಲ್ಕರಿಂದ ಆರು ಲಕ್ಷ ಇದೆ ಎನ್ನಲಾಗುತ್ತದೆ.

ಇದಾಗಿತ್ತು ಬಂಟ ಸಮುದಾಯದ ರೋಚಕ ಇತಿಹಾಸ. ಕಾಲಕ್ಕೆ ತಕ್ಕಂತೆ ಬದಲಾಗುತ್ತಾ, ಕಠಿಣ ಪರಿಸ್ಥಿತಿಗಳನ್ನು ಮೆಟ್ಟಿ ನಿಂತು, ತಮ್ಮ ಮೂಲ ಸಂಸ್ಕೃತಿ ಮತ್ತು ಆಚರಣೆಗಳನ್ನು ಉಳಿಸಿಕೊಂಡು ಬಂದಿರುವ ಬಂಟ ಸಮುದಾಯದ ಕಥೆ ನಿಜಕ್ಕೂ ಹೆಮ್ಮೆ ತರುವಂತಹದ್ದು. ಈ ಮಾಹಿತಿ ನಿಮಗೆ ಉಪಯುಕ್ತವೆನಿಸಿದರೆ, ದಯವಿಟ್ಟು ನಿಮ್ಮ ಸ್ನೇಹಿತರು ಮತ್ತು ಇತರರೊಂದಿಗೆ ಹಂಚಿಕೊಳ್ಳಿ. ಇದೇ ರೀತಿ, ಇನ್ನಿತರ ವಿಷಯಗಳನ್ನೂ ಸಹ ನೀವು ನಮ್ಮ ಬ್ಲಾಗ್ ನಲ್ಲಿ ಓದಬಹುದು.

ಈ ಬ್ಲಾಗ್‌ನಲ್ಲಿರುವ ಎಲ್ಲಾ ವಿಷಯವು ಹಕ್ಕುಸ್ವಾಮ್ಯವನ್ನು ಹೊಂದಿದೆ ಮತ್ತು ಲೇಖಕರ ಅನುಮತಿಯಿಲ್ಲದೆ ನಕಲು ಮಾಡುವುದನ್ನು ಅನುಮತಿಸಲಾಗುವುದಿಲ್ಲ.

All content on this blog is copyrighted, and copying is not allowed without permission from the author.