ಕುರುಬರ ಇತಿಹಾಸ | Kuruba Caste History in Kannada

Kuruba history in kannada, Kuruba caste history in kannada, Halumatha purana in kannada, Kuruba community origin in kannada, Karnataka kuruba history in kannada, Kuruba samrajya history in kannada, Kanakadasa biography in kannada, Sangolli rayanna history in kannada, Halumatha kuruba in kannada

Kuruba history in kannada

ಭಾರತದ ಇತಿಹಾಸವೆಂದರೆ ಅದು ಕೇವಲ ರಾಜ ಮಹಾರಾಜರ ಯುದ್ಧಗಳ ಕಥೆಯಲ್ಲ, ಬದಲಾಗಿ ಅದು ಈ ಮಣ್ಣಿನ ಮೂಲ ನಿವಾಸಿಗಳ, ಶ್ರಮಜೀವಿಗಳ ಹಾಗೂ ವಿಶಿಷ್ಟ ಸಂಸ್ಕೃತಿಯನ್ನು ಹೊಂದಿರುವ ಅದ್ಭುತ ಸಮುದಾಯಗಳ ಕಥೆಯೂ ಹೌದು.

ಕರ್ನಾಟಕದ ಅತ್ಯಂತ ಪ್ರಾಚೀನ, ಪ್ರಭಾವಶಾಲಿ ಹಾಗೂ ಸಾಂಸ್ಕೃತಿಕವಾಗಿ ಅತ್ಯಂತ ಶ್ರೀಮಂತವಾಗಿರುವ ಕುರುಬ ಸಮುದಾಯದ ಸಂಪೂರ್ಣ ಇತಿಹಾಸವನ್ನು ಈ ಲೇಖನದಲ್ಲಿ ತಿಳಿಸುವ ಪ್ರಯತ್ನ ಮಾಡಲಾಗಿದೆ. ಕುರುಬ ಸಮುದಾಯ ಹುಟ್ಟಿದ್ದು ಹೇಗೆ, ಅವರ ಕುರಿತ ಪುರಾಣದ ಕಥೆಗಳೇನು, ಅವರ ಸಾಂಪ್ರದಾಯಿಕ ವೃತ್ತಿ ಯಾವುದಾಗಿತ್ತು ಹಾಗೂ ಇತಿಹಾಸದಲ್ಲಿ ಅವರು ಕಟ್ಟಿದ ಭವ್ಯ ಸಾಮ್ರಾಜ್ಯಗಳು ಯಾವುವು ಎಂಬ ಪ್ರತಿಯೊಂದು ರೋಚಕ ವಿಷಯಗಳನ್ನು ಇಲ್ಲಿ ನೀಡಲಾಗಿದೆ.

ಕುರುಬರ ಇತಿಹಾಸ | Kuruba Caste History in Kannada

ಕುರುಬ ಪದದ ಅರ್ಥ ಮತ್ತು ಐತಿಹಾಸಿಕ ಹಿನ್ನೆಲೆ

‘ಕುರುಬ’ ಎಂಬ ಪದದ ಅರ್ಥವೇ ಬಹಳ ವಿಶಿಷ್ಟ ಹಾಗೂ ಆಳವಾದದ್ದು. ಮೇಲ್ನೋಟಕ್ಕೆ ಕನ್ನಡದಲ್ಲಿ ‘ಕುರಿ’ಗಳನ್ನು ಕಾಯುವವನೇ ‘ಕುರುಬ’ ಎನ್ನುವ ಸರಳವಾದ ಅರ್ಥವಿದ್ದರೂ ಭಾಷಾಶಾಸ್ತ್ರ ಹಾಗೂ ಇತಿಹಾಸದ ಪ್ರಕಾರ ನೋಡುವುದಾದರೆ ಪ್ರಾಚೀನ ಕಾಲದಿಂದಲೂ ‘ಕುರುಬ’ ಎಂದರೆ ಅಪ್ರತಿಮ “ಯೋಧರು” ಮತ್ತು ಸಮಾಜದ ಅತ್ಯಂತ “ನಂಬಿಕಸ್ತ ಜನರು” ಎಂಬ ಉಲ್ಲೇಖವಿದೆ.

ಸಂಸ್ಕೃತದಲ್ಲಿ “ಕುರು” ಎಂದರೆ ‘ಮಾಡು’ ಅಥವಾ ‘ಹುಡುಕು’ ಎಂಬ ಅರ್ಥವಿದ್ದರೆ, ಕನ್ನಡದಲ್ಲಿ ‘ಕುರುಹು’ ಎಂದರೆ ‘ನಂಬಿಕೆ’ ಅಥವಾ ‘ಗುರುತು’ ಎಂಬ ಅರ್ಥವಿದೆ. ಹೀಗಾಗಿ ಇವರನ್ನು ಶ್ರಮಜೀವಿಗಳು, ಕಾಯಕಯೋಗಿಗಳು ಹಾಗೂ ಅತ್ಯಂತ ವಿಶ್ವಾಸಾರ್ಹ ವ್ಯಕ್ತಿಗಳು ಎಂದು ವ್ಯಾಖ್ಯಾನಿಸಲಾಗುತ್ತದೆ.

ಮತ್ತೊಂದು ಸುಂದರವಾದ ವಿಶ್ಲೇಷಣೆಯ ಪ್ರಕಾರ, ‘ಕುರು’ ಎಂದರೆ ಅನ್ವೇಷಿಸು ಮತ್ತು ‘ಭ’ ಎಂದರೆ ಜ್ಞಾನ ಅಥವಾ ಬೆಳಕು. ಅಂದರೆ ‘ಕುರುಬ’ ಎಂದರೆ ಅಜ್ಞಾನದಿಂದ ಸುಜ್ಞಾನದತ್ತ ಸಾಗುವ “ಜ್ಞಾನದ ಅನ್ವೇಷಕ” ಎಂದೂ ಸಹ ಕರೆಯಲಾಗುತ್ತದೆ. ಕುರುಬ ಸಮುದಾಯವು ಭಾರತದ ಅತ್ಯಂತ ಹಳೆಯ ಸಮುದಾಯಗಳಲ್ಲಿ ಒಂದಾಗಿದ್ದು, ತಜ್ಞರ ಅಭಿಪ್ರಾಯದಂತೆ ಇದಕ್ಕೆ ಸುಮಾರು ಐದು ಸಾವಿರ ವರ್ಷಗಳ ಸುದೀರ್ಘ ಇತಿಹಾಸವಿದೆ.

ಪ್ರಾಚೀನ ಕಾಲದಿಂದಲೂ ಮಾನವನು ಪ್ರಕೃತಿಯ ಒಡನಾಡಿಯಾಗಿ ಬದುಕುತ್ತಾ ಬಂದಿದ್ದು, ಪ್ರಾಣಿಗಳನ್ನು ಪಳಗಿಸಿ ಸಾಕುವ ಹಂತದಲ್ಲಿ ಕಾಡುಗಳ ಮಧ್ಯೆ ಕುರಿಗಳನ್ನು ಕಾಯುವ ಮತ್ತು ಅಲೆಮಾರಿ ಜೀವನವನ್ನು ರೂಢಿಸಿಕೊಂಡವರನ್ನು ಕುರುಬರು ಎಂದು ಕರೆಯಲಾಯಿತು. ಇವರನ್ನು ಯಾದವ ವಂಶದ ಮೂಲ ವಾರಸುದಾರರು ಎಂದೂ ಸಹ ಇತಿಹಾಸದಲ್ಲಿ ಉಲ್ಲೇಖಿಸಲಾಗಿದೆ.

ರಾಮಾಯಣ ಮತ್ತು ಮಹಾಭಾರತದ ಕಾಲದಲ್ಲಿ ಬರುವ ಕುರು ವಂಶ ಮತ್ತು ಯದು ವಂಶಗಳಿಗೆ ಈ ಸಮುದಾಯ ನೇರವಾದ ನಂಟನ್ನು ಹೊಂದಿದೆ ಎಂಬುದು ಕೆಲವು ಇತಿಹಾಸಕಾರರ ಅಭಿಪ್ರಾಯವಾಗಿದೆ.

ಕುರುಬರ ಮೂಲಪುರುಷರ ದಂತಕಥೆ

ಕುರುಬರ ಈ ಐತಿಹಾಸಿಕ ಹಿನ್ನೆಲೆಯ ಜೊತೆಗೆ, ಅವರ ಹುಟ್ಟಿನ ಬಗ್ಗೆ ಜನಪದದಲ್ಲಿ ಒಂದು ರೋಚಕವಾದ ದಂತಕಥೆಯಿದೆ. ಕುರುಬರ ಮೂಲ ಇತಿಹಾಸವು ದೇವ-ದೇವತೆಯರ ಆಶೀರ್ವಾದದಿಂದ ಆರಂಭವಾಗುವ ಪವಿತ್ರ ಕಥೆ. ಒಮ್ಮೆ ಭೂಲೋಕಕ್ಕೆ ಬಂದ ಪರಮಶಿವನು ಎತ್ತು-ಕೋಣಗಳನ್ನು ಜೋಡಿಸಿ ಹೊಲದಲ್ಲಿ ಕೆಲಸ ಮಾಡುತ್ತಿದ್ದನಂತೆ.

ವಿಶ್ರಾಂತಿ ಪಡೆಯಲು ಮಲಗಿದಾಗ, ಆತನ ಜಟೆಯಿಂದ ಜಾರಿದ ಬೆವರಿನ ಹನಿಗಳು ಭೂಮಿಗೆ ಬಿದ್ದು ನಾನಾ ವಿಧವಾದ ಕುರಿಗಳಾಗಿ ರೂಪಾಂತರಗೊಂಡವು. ಆ ಕುರಿಗಳಿಗೆ ಪ್ರಾಣಶಕ್ತಿ ತುಂಬಿದ್ದು ಪಾರ್ವತಿ ದೇವಿ. ಆ ಕುರಿಗಳನ್ನು ಕಾಯಲು ಪಾರ್ವತಿ ದೇವಿ ತನ್ನ ತಾಯಿತನದ ಸಂಕೇತವಾದ ಮೊಲೆಹಾಲನ್ನು ಮಣ್ಣಿನ ಜೊತೆ ಕಲಸಿ, ಆ ಮಣ್ಣಿನಿಂದ ಗಂಡು ಮತ್ತು ಹೆಣ್ಣು ಗೊಂಬೆಯನ್ನು ರೂಪಿಸಿ ಜೀವ ತುಂಬಿದಳಂತೆ.

ಅವರೇ ಮುದ್ದಪ್ಪ ಮತ್ತು ಮುದ್ದವ್ವೆ. ಇವರೇ ಕುರಿಗಳನ್ನು ಕಾಯುವ ಮೊದಲ ದಂಪತಿಗಳು. ಈ ದಂಪತಿಗಳ ವಂಶದಲ್ಲಿ ಆದಿಗೊಂಡ ಎಂಬ ಪುತ್ರ ಜನಿಸಿದನು. ಆದಿಗೊಂಡನಿಗೆ ಅಮರಗೊಂಡ, ಶಿವಗೊಂಡ, ಬೀರುಗೊಂಡ, ಮಾರುಗೊಂಡ, ಮುದ್ದುಗೊಂಡ ಮತ್ತು ಪದ್ಮಗೊಂಡ ಎಂಬ ಆರು ಗಂಡು ಮಕ್ಕಳು ಜನಿಸಿದರು. ಇವರಲ್ಲಿ ಪದ್ಮಗೊಂಡನನ್ನೇ ಕುರುಬರ ಮೂಲಪುರುಷ ಎಂದು ಗೌರವದಿಂದ ಸ್ಮರಿಸುತ್ತಾರೆ.

ಪಂಗಡಗಳ ರೂಪುಗೊಳಿಕೆ

ಕುರುಬ ಸಮುದಾಯದಲ್ಲಿರುವ ಪಂಗಡಗಳ ಹುಟ್ಟಿನ ಬಗ್ಗೆಯೂ ಇನ್ನೊಂದು ರೋಚಕ ಕಥೆಯಿದೆ. ಶಿವನ ಒಡ್ಡೋಲಗದಲ್ಲಿ ಒಮ್ಮೆ ಭೃಂಗಿ ಮುನಿಗಳು ನೃತ್ಯ ಮಾಡುತ್ತಿದ್ದಾಗ, ಆ ನೃತ್ಯವನ್ನು ನೋಡಿ ಕೆಲವು ದೇವತೆಗಳು ನಕ್ಕಾಗ ಕೋಪಗೊಂಡ ಶಿವನು, ನನ್ನ ಭಕ್ತನನ್ನು ಪರಿಹಾಸ್ಯ ಮಾಡಿದ ನೀವೆಲ್ಲರೂ ಭೂಲೋಕದಲ್ಲಿ ಕುರಿಗಳಾಗಿ ಹುಟ್ಟಿರಿ ಎಂದು ಶಾಪ ನೀಡಿದನು.

ಆ ಕುರಿಗಳನ್ನು ಕಾಯುವ ಪವಿತ್ರ ಕಾರ್ಯಕ್ಕಾಗಿ ಮಸಿರೆಡ್ಡಿ ಮತ್ತು ನೀಲಮ್ಮ ಎಂಬ ದಂಪತಿಗಳನ್ನು ನೇಮಿಸಿದನು. ಅವರಿಗೆ ಪದ್ಮಗೊಂಡ ಎಂಬ ಮಗ ಜನಿಸಿದನು. ಅವನು ಕುರಿ ಕಾಯುವಾಗ ಒಂದು ಪರ ಜಾತಿಯ ಕನ್ಯೆಯನ್ನು ವಿವಾಹವಾಗುತ್ತಾನೆ. ಆದರೆ ಅದಕ್ಕೂ ಮೊದಲು ಅವನು ತನ್ನ ಸ್ವಜಾತಿಯ ಕನ್ಯೆಯನ್ನು ಮದುವೆಯಾಗಿದ್ದ.

ಈ ಎರಡು ವಿವಾಹಗಳಿಂದ ಜನಿಸಿದ ಮಕ್ಕಳ ಆಧಾರದ ಮೇಲೆ ಮುಂದಿನ ಪೀಳಿಗೆಯಲ್ಲಿ ಎರಡು ವಿಭಿನ್ನ ಸಂಪ್ರದಾಯಗಳು ಹುಟ್ಟಿಕೊಂಡವು. ಸ್ವಜಾತಿಯ ಹೆಂಡತಿಯಿಂದ ಜನಿಸಿದ ಮಕ್ಕಳಿಗೆ ಹತ್ತಿ ಕಂಕಣ ಕಟ್ಟಿ ಮದುವೆ ಮಾಡುವ ಪದ್ಧತಿ ಬಂದರೆ, ಇನ್ನೊಂದು ಹೆಂಡತಿಯಿಂದ ಜನಿಸಿದ ಮಕ್ಕಳಿಗೆ ಉಣ್ಣೆ ಕಂಕಣ ಕಟ್ಟಿ ಮದುವೆ ಮಾಡುವ ರೂಢಿ ಬಂತು. ಮುಂದೆ ಈ ಸಮುದಾಯ ಮಾಡುವ ವೃತ್ತಿಗಳ ಆಧಾರದ ಮೇಲೆ ಹಾಲು ಕುರುಬರು, ಹಂಡೆ ಕುರುಬರು ಮತ್ತು ಕಂಬಳಿ ಕುರುಬರು ಎಂಬ ಪ್ರಮುಖ ಪಂಗಡಗಳು ಹುಟ್ಟಿಕೊಂಡವು ಎನ್ನಲಾಗುತ್ತದೆ.

ಹಾಲುಮತ ಪುರಾಣ ಮತ್ತು ಆರಾಧ್ಯ ದೈವಗಳು

ಕುರುಬ ಸಮುದಾಯವನ್ನು ‘ಹಾಲುಮತ’ ಎಂದು ಕರೆಯಲಾಗುತ್ತದೆ. ಹಾಲುಮತ ಎಂದರೆ ಹಾಲಿನಷ್ಟೇ ಶುದ್ಧವಾದ ಮನಸ್ಸುಳ್ಳವರ ಸಮುದಾಯ ಎಂಬ ಸುಂದರವಾದ ಅರ್ಥವಿದೆ. ಕುರುಬರ ಧಾರ್ಮಿಕ ಹಿನ್ನೆಲೆಯನ್ನು ನೋಡುವುದಾದರೆ, ಇವರು ಮೂಲತಃ ಶಿವನ ಪರಮ ಭಕ್ತರು ಮತ್ತು ಆರಾಧಕರು.

ಕುರುಬರ ಧಾರ್ಮಿಕ ಮತ್ತು ಪೌರಾಣಿಕ ಇತಿಹಾಸವನ್ನು ಹಾಲುಮತ ಪುರಾಣವು ಅತ್ಯಂತ ಅದ್ಭುತವಾಗಿ ವಿವರಿಸುತ್ತದೆ. ಈ ಸಮುದಾಯದ ಪ್ರಮುಖ ಕುಲದೈವ ಮತ್ತು ಆರಾಧ್ಯ ದೈವವೆಂದರೆ ಬೀರೇಶ್ವರ ಅಥವಾ ಬೀರಪ್ಪ. ಬೀರಪ್ಪನನ್ನು ಪರಶಿವನ ಅವತಾರವೆಂದೇ ಭಕ್ತಿಯಿಂದ ಪೂಜಿಸಲಾಗುತ್ತದೆ. ಕೇವಲ ಬೀರೇಶ್ವರ ಮಾತ್ರವಲ್ಲದೆ ಮೈಲಾರ ಲಿಂಗೇಶ್ವರ, ರೇವಣ ಸಿದ್ದೇಶ್ವರ ಹಾಗೂ ದೊಡ್ಡ ಬೀರೇಶ್ವರ ಕೂಡ ಈ ಸಮುದಾಯದ ಪ್ರಮುಖ ದೇವರುಗಳು.

ಸಾಂಪ್ರದಾಯಿಕ ವೃತ್ತಿ ಮತ್ತು ಜೀವನ ಶೈಲಿ

ಕುರುಬರ ಪ್ರಾಚೀನ ಮತ್ತು ಸಾಂಪ್ರದಾಯಿಕ ವೃತ್ತಿಗಳ ಬಗ್ಗೆ ಮಾತನಾಡುವುದಾದರೆ, ಇವರು ಪ್ರಕೃತಿಯಲ್ಲಿಯೇ ತಮ್ಮ ಬದುಕನ್ನು ಕಟ್ಟಿಕೊಂಡವರು. ಪ್ರಾಚೀನ ಕಾಲದಲ್ಲಿ ಇವರ ಮುಖ್ಯ ಕಸುಬು ಕುರಿ ಮತ್ತು ಮೇಕೆಗಳನ್ನು ಮೇಯಿಸುವುದು, ಹೈನುಗಾರಿಕೆ ಅಂದರೆ ಹಾಲು ಮೊಸರು ಉತ್ಪಾದನೆ ಮಾಡುವುದು ಹಾಗೂ ಕಂಬಳಿ ನೇಯುವುದಾಗಿತ್ತು.

ಉಣ್ಣೆಯನ್ನು ಕತ್ತರಿಸಿ, ಅದನ್ನು ಮಗ್ಗಗಳಲ್ಲಿ ಒರಟಾದ ಕಂಬಳಿ ನೇಯುವ ಕಲೆ ಕುರುಬರಿಗೆ ರಕ್ತಗತವಾಗಿ ಬಂದಿದೆ. ಅವರು ತಯಾರಿಸಿದ ಕಂಬಳಿಗಳು ಎಷ್ಟೋ ಚಳಿ ಮತ್ತು ಮಳೆಗಾಲದಲ್ಲಿ ಸಾಮಾನ್ಯ ಜನರನ್ನು ರಕ್ಷಿಸಿವೆ. ಮಾನವನು ಅಲೆಮಾರಿ ಜೀವನದಿಂದ ಕೃಷಿ ಜೀವನಕ್ಕೆ ಕಾಲಿಟ್ಟಾಗ, ಕುರುಬರು ಸಹ ವ್ಯವಸಾಯವನ್ನು ತಮ್ಮ ಪ್ರಮುಖ ವೃತ್ತಿಯನ್ನಾಗಿ ಅಳವಡಿಸಿಕೊಂಡರು.

ಅರಣ್ಯ ಮತ್ತು ಬೆಟ್ಟಗುಡ್ಡಗಳ ಪ್ರದೇಶಗಳಲ್ಲಿ ತಮ್ಮ ಜಾನುವಾರುಗಳನ್ನು ಮೇಯಿಸುತ್ತಾ ಪ್ರಕೃತಿಯೊಂದಿಗೆ ಅತ್ಯಂತ ನಿಕಟವಾದ ಸಂಬಂಧವನ್ನು ಇವರು ಹೊಂದಿದ್ದರು. ಬದಲಾದ ಕಾಲಘಟ್ಟದಲ್ಲಿ ಇಂದು ಅವರು ಕೇವಲ ಸಾಂಪ್ರದಾಯಿಕ ವೃತ್ತಿಗೆ ಸೀಮಿತವಾಗದೆ, ಶಿಕ್ಷಣ, ಉದ್ಯೋಗ, ಆಡಳಿತ ಹಾಗೂ ವ್ಯಾಪಾರ ಕ್ಷೇತ್ರಗಳಲ್ಲೂ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ.

ಇತಿಹಾಸದ ಪುಟಗಳಲ್ಲಿ ಕುರುಬ ಸಾಮ್ರಾಜ್ಯಗಳು

ಭಾರತದ ಅತಿದೊಡ್ಡ ಸಾಮ್ರಾಜ್ಯಗಳನ್ನು ಕಟ್ಟಿದ ಕೀರ್ತಿ ಕುರುಬ ಸಮುದಾಯಕ್ಕೆ ಸಲ್ಲುತ್ತದೆ. ಕೆಲವು ವಿದ್ವಾಂಸರ ಮತ್ತು ಇತಿಹಾಸಕಾರರ ಪ್ರಕಾರ, ಭಾರತವನ್ನು ಮೊಟ್ಟಮೊದಲ ಬಾರಿಗೆ ಒಗ್ಗೂಡಿಸಿದ ಮೌರ್ಯ ಸಾಮ್ರಾಜ್ಯವನ್ನು ಕಟ್ಟಿದವರು ಇದೇ ಸಮುದಾಯದವರು. ಮೌರ್ಯರ ಮೊದಲ ದೊರೆ ಚಂದ್ರಗುಪ್ತನು ಕುರಿಗಾಹಿಯಾಗಿದ್ದು, ಆಗಿನ ನಂದ ದೊರೆಗಳ ವಿರುದ್ಧ ಸಿಡಿದೆದ್ದು ತನ್ನದೇ ಆದ ಸಾಮ್ರಾಜ್ಯವನ್ನು ಕಟ್ಟಿದನು ಎನ್ನಲಾಗುತ್ತದೆ.

ಇನ್ನು ಕರ್ನಾಟಕದ ಹೆಮ್ಮೆಯ ವಿಜಯನಗರ ಸಾಮ್ರಾಜ್ಯವನ್ನು ಸ್ಥಾಪಿಸಿದ ಹಕ್ಕ-ಬುಕ್ಕ ಎಂದು ಕರೆಯಲ್ಪಡುವ ಹರಿಹರ ಮತ್ತು ಬುಕ್ಕರಾಯರು ಇದೇ ಕುರುಬ ಸಮುದಾಯಕ್ಕೆ ಸೇರಿದವರು ಎಂದು ಇತಿಹಾಸಕಾರರು ಹೇಳುತ್ತಾರೆ. ತುಂಗಭದ್ರಾ ನದಿಯ ತೀರದಲ್ಲಿ ಇವರು ಕಟ್ಟಿದ ವಿಜಯನಗರ ಸಾಮ್ರಾಜ್ಯ ದಕ್ಷಿಣ ಭಾರತದ ಪಾಲಿಗೆ ಸುವರ್ಣ ಯುಗವೆಂದೇ ಖ್ಯಾತಿಯಾಗಿದೆ.

ಇದಲ್ಲದೆ ಪಲ್ಲವರು, ರಾಷ್ಟ್ರಕೂಟರು, ಹೊಯ್ಸಳರು ಹಾಗೂ ಇಂದೋರ್ ಅನ್ನು ಆಳಿದ ಪ್ರಸಿದ್ಧ ಹೋಳ್ಕರ್ ರಾಜಮನೆತನ ಕೂಡ ಇದೇ ಮೂಲದವರು ಎಂದು ಇತಿಹಾಸದಲ್ಲಿ ಉಲ್ಲೇಖಿಸಲಾಗಿದೆ.

ಐತಿಹಾಸಿಕ ಮತ್ತು ಪ್ರಮುಖ ವ್ಯಕ್ತಿಗಳು

ಕುರುಬ ಸಮುದಾಯವು ಭಾರತೀಯ ಸಮಾಜಕ್ಕೆ ಅನೇಕ ಶ್ರೇಷ್ಠ ವ್ಯಕ್ತಿಗಳನ್ನು ನೀಡಿದೆ. ಸಾಹಿತ್ಯ ಮತ್ತು ಭಕ್ತಿಯ ಮೂಲಕ ಸಮಾಜದ ತಾರತಮ್ಯಗಳನ್ನು ತೊಡೆದುಹಾಕಲು ಶ್ರಮಿಸಿದ ದಾಸ ಶ್ರೇಷ್ಠ ಕನಕದಾಸರು ಇದೇ ಸಮುದಾಯದವರು. ಕನಕದಾಸರ ಮೂಲ ಹೆಸರು ತಿಮ್ಮಪ್ಪನಾಯಕ ಮತ್ತು ಇವರು ಹಂಡೆ ಕುರುಬ ಮನೆತನಕ್ಕೆ ಸೇರಿದವರು. ಉಡುಪಿಯ ಶ್ರೀ ಕೃಷ್ಣನಿಗೆ ತಮ್ಮ ಅಪಾರ ಭಕ್ತಿಯ ಮೂಲಕ ಒಲಿಸಿಕೊಂಡು ಕನಕನ ಕಿಂಡಿಯ ಮೂಲಕ ದರ್ಶನ ಪಡೆದ ಇವರ ಕಥೆ ಕರುನಾಡಿನಲ್ಲಿ ಅಜರಾಮರ.

ಹಾಗೆಯೇ, ಬ್ರಿಟಿಷರ ವಿರುದ್ಧ ಸಿಂಹದಂತೆ ಹೋರಾಡಿ ಪ್ರಾಣವನ್ನು ಅರ್ಪಿಸಿದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನು ಸಹ ಕುರುಬ ಸಮುದಾಯದ ಹೆಮ್ಮೆಯ ಪುತ್ರ. ಕೆಲವು ಐತಿಹಾಸಿಕ ದಾಖಲೆಗಳ ಪ್ರಕಾರ, ಇದೆ ಸಮುದಾಯದ ರಾಜರಾದ ಯಶವಂತರಾವ್ ಹೋಳ್ಕರ್ ಅವರು ಬ್ರಿಟಿಷರ ವಿರುದ್ಧ ಹೋರಾಡಲು ಸೈನ್ಯ ಕಟ್ಟಿದ ಮೊದಲ ಭಾರತೀಯ ರಾಜರಲ್ಲಿ ಒಬ್ಬರಾಗಿದ್ದರು.

ಕ್ರಿ.ಶ. 1803ರ ವೇಳೆಗೆ ಅವರು ಕುರುಬರು ಅಥವಾ ಧನಗರ್ ಸಮುದಾಯದ ಅನೇಕ ಯೋಧರನ್ನು ಒಳಗೊಂಡ ಬಲಿಷ್ಠ ಸೇನೆಯನ್ನು ನಿರ್ಮಿಸಿ, ಬ್ರಿಟಿಷರನ್ನು ಭಾರತದಿಂದ ಓಡಿಸಲು ಹೋರಾಟ ಆರಂಭಿಸಿದರು. ಯುದ್ಧಕ್ಕಾಗಿ ಅಗತ್ಯವಾದ ಆಧುನಿಕ ಶಸ್ತ್ರಾಸ್ತ್ರಗಳನ್ನು ತಯಾರಿಸಲು ಕಾರ್ಖಾನೆಯನ್ನೂ ಸಹ ಸ್ಥಾಪಿಸಿದ್ದರೆಂದು ಹೇಳಲಾಗುತ್ತದೆ. ಆದರೆ ಅನೇಕ ಭಾರತದ ರಾಜರು ಈಗಾಗಲೇ ಬ್ರಿಟಿಷರ ಜೊತೆ ಒಪ್ಪಂದ ಮಾಡಿಕೊಂಡಿದ್ದರಿಂದ ಅವರಿಗೆ ವ್ಯಾಪಕ ಬೆಂಬಲ ಸಿಗಲಿಲ್ಲ.

ಆದರೂ ಸಹ ಯಶವಂತರಾವ್ ಹೋಳ್ಕರ್ ಅವರು ಸುಲಭವಾಗಿ ತಲೆಬಾಗದೆ ಬ್ರಿಟಿಷರ ವಿರುದ್ಧ ಕೊನೆಯ ಹಂತದವರೆಗೆ ಹೋರಾಡಿದ್ದರು. ಆಧುನಿಕ ಕಾಲದಲ್ಲೂ ಕೂಡ ರಾಜಕೀಯ, ಸಾಹಿತ್ಯ, ಕಲೆ ಹಾಗೂ ಕ್ರೀಡಾ ಕ್ಷೇತ್ರಗಳಲ್ಲಿ ಕುರುಬ ಸಮುದಾಯದ ಅನೇಕರು ಸೇವೆ ಸಲ್ಲಿಸುತ್ತಿದ್ದಾರೆ.

ಜನಸಂಖ್ಯೆ ಮತ್ತು ಭೌಗೋಳಿಕ ಹರಡುವಿಕೆ

ಕುರುಬರ ಜನಸಂಖ್ಯೆಯ ಬಗ್ಗೆ ಹೇಳುವುದಾದರೆ, ಇವರು ಕೇವಲ ಕರ್ನಾಟಕಕ್ಕೆ ಮಾತ್ರ ಸೀಮಿತವಾಗಿಲ್ಲ. ಇಡೀ ಭಾರತದಾದ್ಯಂತ ಬೇರೆ ಬೇರೆ ಹೆಸರುಗಳಿಂದ ಇವರನ್ನು ಕರೆಯಲಾಗುತ್ತದೆ. ಕರ್ನಾಟಕದಲ್ಲಿ ಇವರನ್ನು ಕುರುಬರು ಎಂದು ಕರೆದರೆ, ಆಂಧ್ರಪ್ರದೇಶ ಮತ್ತು ತೆಲಂಗಾಣದಲ್ಲಿ ಕುರುಮ ಎಂದು, ತಮಿಳುನಾಡಿನಲ್ಲಿ ಕುರುಂಬ ಎಂದು ಕರೆಯಲಾಗುತ್ತದೆ.

ಇನ್ನೂ ಕೇರಳದಲ್ಲಿ ಕುರುಮನ್ ಎಂದು, ಮಹಾರಾಷ್ಟ್ರದಲ್ಲಿ ಧನಗರ್ ಮತ್ತು ಉತ್ತರ ಭಾರತದಲ್ಲಿ ಪಾಲ್, ಗಡರಿಯಾ ಹಾಗೂ ಬಘೇಲ್ ಎಂದು ಕರೆಯುತ್ತಾರೆ. ಜಾತಿಗಣತಿಯ ದತ್ತಾಂಶಗಳ ಪ್ರಕಾರ ಕರ್ನಾಟಕದಲ್ಲಿ ಕುರುಬರ ಜನಸಂಖ್ಯೆ ಅಂದಾಜು ನಲವತ್ತೈದರಿಂದ ಐವತ್ತು ಲಕ್ಷದಷ್ಟಿದೆ. ಜನಸಂಖ್ಯೆಯಲ್ಲಿ ಇದು ಕರ್ನಾಟಕದ ಮೂರನೇ ಅತಿದೊಡ್ಡ ಸಮುದಾಯವಾಗಿದೆ. ಕರ್ನಾಟಕದ ಎಲ್ಲಾ ಜಿಲ್ಲೆಗಳಲ್ಲೂ ಇವರು ವಾಸಿಸುತ್ತಿದ್ದು, ಅನೇಕ ಉಪಜಾತಿಗಳನ್ನು ಸಹ ಹೊಂದಿದೆ.

ಎದುರಿಸಿದ ಮತ್ತು ಎದುರಿಸುತ್ತಿರುವ ಸವಾಲುಗಳು

ಕುರುಬ ಸಮುದಾಯವು ಇಷ್ಟೆಲ್ಲಾ ಭವ್ಯ ಇತಿಹಾಸವನ್ನು ಹೊಂದಿದ್ದರೂ, ಅವರು ಎದುರಿಸಿದ ಸವಾಲುಗಳು ಒಂದೆರಡಲ್ಲ. ಪ್ರಾಚೀನ ಕಾಲದಿಂದಲೂ ಕಾಡು ಮತ್ತು ಹಳ್ಳಿಗಳಲ್ಲೇ ಹೆಚ್ಚು ವಾಸಿಸುತ್ತಿದ್ದ ಕಾರಣ ಶೈಕ್ಷಣಿಕವಾಗಿ ಇವರು ಬಹಳ ಹಿಂದೆ ಉಳಿದಿದ್ದರು. ಇಂತಹ ಹಲವು ಸವಾಲುಗಳನ್ನು ಮೀರಿ ಇಂದು ಈ ಸಮುದಾಯ ಇಂದು ಶಿಕ್ಷಣ ಮತ್ತು ಉನ್ನತ ಉದ್ಯೋಗಗಳ ಕಡೆಗೆ ಮುಖ ಮಾಡುತ್ತಿರುವುದು ನಿಜಕ್ಕೂ ಉತ್ತಮ ಬೆಳವಣಿಗೆಯಾಗಿದೆ.

ಉಪಸಂಹಾರ

ಕುರುಬರು ಸಾಮ್ರಾಜ್ಯಗಳನ್ನು ಕಟ್ಟಿದ ಮಹಾನ್ ವೀರರು, ಸಮಾಜಕ್ಕೆ ತತ್ವಜ್ಞಾನ ಸಾರಿದ ದಾಸರು ಮತ್ತು ನಾಡಿಗಾಗಿ ಪ್ರಾಣ ಕೊಟ್ಟ ಕ್ರಾಂತಿಕಾರಿಗಳು. ಮುಗ್ಧತೆ ಮತ್ತು ಪ್ರಾಮಾಣಿಕತೆಯೇ ಇವರ ಅತಿ ದೊಡ್ಡ ಶಕ್ತಿಯಾಗಿದೆ. ಕುರುಬರ ಸಂಸ್ಕೃತಿ, ಡೊಳ್ಳು ಕುಣಿತದಂತಹ ಕಲೆಗಳು ಹಾಗೂ ಬೀರಪ್ಪನ ಜಾತ್ರೆಯಂತಹ ಆಚರಣೆಗಳು ಇಂದಿಗೂ ಕರ್ನಾಟಕದ ಸಾಂಸ್ಕೃತಿಕ ಶ್ರೀಮಂತಿಕೆಯನ್ನು ಉತ್ತುಂಗದಲ್ಲಿರಿಸಿವೆ.

ಈ ಮಾಹಿತಿ ನಿಮಗೆ ಉಪಯುಕ್ತವೆನಿಸಿದರೆ, ದಯವಿಟ್ಟು ನಿಮ್ಮ ಸ್ನೇಹಿತರು ಮತ್ತು ಇತರರೊಂದಿಗೆ ಹಂಚಿಕೊಳ್ಳಿ. ಇದೇ ರೀತಿ, ಇನ್ನಿತರ ವಿಷಯಗಳನ್ನೂ ಸಹ ನೀವು ನಮ್ಮ ಬ್ಲಾಗ್ ನಲ್ಲಿ ಓದಬಹುದು.

ಈ ಬ್ಲಾಗ್‌ನಲ್ಲಿರುವ ಎಲ್ಲಾ ವಿಷಯವು ಹಕ್ಕುಸ್ವಾಮ್ಯವನ್ನು ಹೊಂದಿದೆ ಮತ್ತು ಲೇಖಕರ ಅನುಮತಿಯಿಲ್ಲದೆ ನಕಲು ಮಾಡುವುದನ್ನು ಅನುಮತಿಸಲಾಗುವುದಿಲ್ಲ.
All content on this blog is copyrighted, and copying is not allowed without permission from the author.