ಮಡಿವಾಳ ಮಾಚಿದೇವರ ವಚನಗಳ ಸಂಗ್ರಹ (madivala machideva vachanagalu): 12ನೇ ಶತಮಾನದ ಶರಣರ ಕಾಯಕಜೀವಿ, ಸಾಮಾಜಿಕ ನ್ಯಾಯ ಮತ್ತು ಸಮಾನತೆಯ ಚಿಂತನೆಯನ್ನು ಪ್ರತಿಬಿಂಬಿಸುವ 345 ವಚನಗಳ ಸಂಪುಟ.
ಮಡಿವಾಳ ಮಾಚಿದೇವರು 12ನೇ ಶತಮಾನದ ವೀರಶೈವ ಶರಣರಲ್ಲಿ ಪ್ರಮುಖ ವ್ಯಕ್ತಿಯಾಗಿದ್ದರು. ಅವರು ಬಿಜಾಪುರ ಜಿಲ್ಲೆಯ ದೇವರ ಹಿಪ್ಪರಗಿಯಲ್ಲಿ ಜನಿಸಿದ್ದು, ತಮ್ಮ ಜೀವನವನ್ನು ಲಿಂಗಾಯತ ಧರ್ಮದ ನೈತಿಕ ಮೌಲ್ಯಗಳನ್ನು ಪ್ರಚಾರ ಮತ್ತು ಸಂರಕ್ಷಣೆಗಾಗಿ ಮೀಸಲಾಗಿಸಿದ್ದರು. ಮಾಚಿದೇವರು ಬಸವಣ್ಣನ ಸಮಕಾಲೀನರಾಗಿದ್ದು, ಕಲ್ಯಾಣ ಕ್ರಾಂತಿಯ ಸಂದರ್ಭದಲ್ಲಿ ವಚನ ಸಾಹಿತ್ಯವನ್ನು ನಾಶಮಾಡಲು ಉದ್ದೇಶಿಸಿದ್ದ ಕೋಮುವಾದಿ ಶಕ್ತಿಗಳ ವಿರುದ್ಧ ಧೈರ್ಯದಿಂದ ಹೋರಾಡಿದರು.
ಮಡಿವಾಳ ಮಾಚಿದೇವರು ತಮ್ಮ ವಚನಗಳಲ್ಲಿ ಸಮಾನತೆ, ಸತ್ಯ, ಧರ್ಮ, ಮತ್ತು ಮಾನವೀಯ ಮೌಲ್ಯಗಳನ್ನು ಬೋಧಿಸಿದರು. ಅವರ 345 ವಚನಗಳು ಇಂದು ಲಭ್ಯವಾಗಿದ್ದು, ಅವುಗಳು ಸಾಮಾಜಿಕ ನ್ಯಾಯ ಮತ್ತು ಸಮತೆಯ ಮಹತ್ವವನ್ನು ಸಾರುತ್ತವೆ. “ಕಾಯಕವೇ ಕೈಲಾಸ” ಎಂಬ ತತ್ತ್ವವನ್ನು ತಮ್ಮ ಜೀವನದಿಂದಲೇ ಅನುಸರಿಸಿದ ಮಾಚಿದೇವರು, ಶರಣರ ಬಟ್ಟೆಗಳನ್ನು ಶುದ್ಧವಾಗಿ ಒಗೆಯುವ ಕಾಯಕದ ಮೂಲಕ ಭಕ್ತಿ ಮತ್ತು ಸೇವೆಯನ್ನು ವ್ಯಕ್ತಪಡಿಸಿದರು.
ಮಡಿವಾಳ ಮಾಚಿದೇವ ಅವರ ವಚನಗಳು (vachanas of madivala machideva in kannada) ಕೇವಲ ಧಾರ್ಮಿಕ ಸಂದೇಶವನ್ನೇ ನೀಡದೇ, ಜಾತಿ-ಮತ ಭೇದವನ್ನು ತೊಡೆದುಹಾಕುವ ಸಾಮಾಜಿಕ ಕ್ರಾಂತಿಯ ದಾರಿಯನ್ನು ತೋರಿಸುತ್ತವೆ. ಮಾಚಿದೇವರು ಬೋಧಿಸಿದ ಮೌಲ್ಯಗಳು ಇಂದು ಸಹ ಪ್ರಸ್ತುತವಾಗಿದ್ದು, ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ವಚನ ಸಾಹಿತ್ಯದಲ್ಲಿ ಆಸಕ್ತಿಯಿರುವ ಯಾರಿಗಾದರೂ ಮಾರ್ಗದರ್ಶಕವಾಗಿವೆ.
Table of Contents
345 ಮಡಿವಾಳ ಮಾಚಿದೇವ ವಚನಗಳು | Madivala Machideva Vachanagalu
ಅಂಗದ ಮೇಲೆ ಲಿಂಗವ ಧರಿಸಿ
ಲಿಂಗವಂತರೆನಿಸಿಕೊಂಬ ಮಹಾಲಿಂಗವಂತರು ನೀವು ಕೇಳಿರೊ.
ಮನೆಗೊಂದು ದೈವ, ನಿಮಗೊಂದು ದೈವ.
ನಿಮ್ಮಂಗನೆ ಅನ್ಯದೈವಕ್ಕೆಂದು ನಿಯಾಮಿಸಿ ಮಾಡಿದ ಪಾಕವ,
ನಿಮ್ಮ ಇಷ್ಟಲಿಂಗಕ್ಕೆ ಕೊಟ್ಟು ಭುಂಜಿಸುತ್ತಿರ್ದು,
ಮತ್ತೆ ಮರಳಿ ಲಿಂಗವಂತರೆನಿಸಿಕೊಂಬ ಲಿಂಗದ್ರೋಹಿಗಳಿಗೆ
ಕುಂಭೀಪಾತಕ, ನಾಯಕನರಕ ತಪ್ಪದೆಂದ ಕಲಿದೇವಯ್ಯ. ೧
ಅಂಗಲಿಂಗಸಂಬಂಧವಾಗಬೇಕೆಂಬ
ಭಂಗಿತರ ಮಾತ ಕೇಳಲಾಗದು.
ಅಂಗಲಿಂಗಸಂಬಂಧ ಕಾರಣವೇನು
ಮನ ಲಿಂಗಸಂಬಂಧವಾಗದನ್ನಕ್ಕ ?
ಮನವು ಮಹದಲ್ಲಿ ನಿಂದ ಬಳಿಕ
ಲಿಂಗಸಂಬಂಧವೇನು ಹೇಳಾ, ಕಲಿದೇವರದೇವಾ. ೨
ಅಂಗಲಿಂಗಸಂಬಂಧವೆಲ್ಲಿಯದಯ್ಯಾ ?
ಪ್ರಾಣ ಮುಟ್ಟದನ್ನಕ್ಕರ ಲಿಂಗಾರ್ಚನೆ ಯಾಕೆ ?
ಪ್ರಾಣ ಮುಟ್ಟಿ ಮಾಡಿತ್ತೆ ಲಿಂಗಾರ್ಚನೆ.
ಪ್ರಾಣ ಒಂದಾಗಿ ಕೊಂಬುದೆ ಪ್ರಸಾದ.
ಅಳಿವ ಘಟಕ್ಕೆ ಇದೆತ್ತಣ ಲಿಂಗಸಂಬಂಧವೋ ?
ಇದ ಮಾಡಿದವರಾರು ? ಇದು ಕುಟಿಲ.
ಪ್ರಾಣಲಿಂಗವೆ ಗುರುಸಂಬಂಧ.
ಪ್ರಾಣಪ್ರಸಾದವೆ ಗುರುಮಹತ್ವ.
ತನುಮನಧನವನು ಪ್ರಾಣ ಮುಂತಾಗಿ ನಿವೇದಿಸಬಲ್ಲಡೆ
ಆತನ ಘಟವು, [ಅ]ಕಾಯವು.
ಪ್ರಾಣ ಮುಟ್ಟಿತ್ತೆ ಲಿಂಗಾರ್ಚನೆ.
ಪ್ರಾಣ ಮುಟ್ಟದ ಭಕ್ತಿ ಸಲ್ಲದು, ಸಲ್ಲದು.
ಇಂತೀ ಪ್ರಾಣ ತದ್ಗತವಾದಾತನೆ
ನಿಃಸಂಸಾರಿ ಕಾಣಾ ಕಲಿದೇವಯ್ಯಾ. ೩
ಅಂಗವಿಕಾರವಳಿದು, ಜಂಗಮಲಿಂಗಲಾಂಛನ
ವಿಭೂತಿ ರುದ್ರಾಕ್ಷಿಯ ದರ್ಶನವಿಲ್ಲದೆ
ಜಂಗಮವೆನಿಸಿಕೊಂಬ ಭಂಗಿತರು,
ಭಕ್ತ, ವಿರಕ್ತರಾಗಲಾಗದೆಂಬ ಕಲಿದೇವಯ್ಯ. ೪
ಅಂಗವಿಲ್ಲದ ಗುರುವಿಂಗೆ ಲಿಂಗವಿಲ್ಲದ ಶಿಷ್ಯನಾಗಬೇಕು.
ಶೃಂಗಾರಕ್ಕೆ ಮೆರೆಯದ ಭಕ್ತಿಯಾಗಬೇಕು.
ಇಂತಪ್ಪ ಗುರುಪ್ರಸಾದವನರಿಯದೆ ಕಂಡಕಂಡವರಿಗೆ ಕೈಯನೊಡ್ಡಿ
ಪ್ರಸಾದವೆಂದು ಕೊಂಬ
ಮಿಟ್ಟೆಯ ಭಂಡರನೇನೆಂಬೆನಯ್ಯಾ ಕಲಿದೇವರದೇವ. ೫
ಅಂಗವೆ ಲಿಂಗವಾಗಿ, ಲಿಂಗವೆ ಪ್ರಾಣವಾಗಿ,
ಜಂಗಮವೆ ಸಂಗವಾಗಿ, ಸಂಗವೆ ಸುಸಂಗವಾಗಿ,
ಪ್ರಾಣವೆ ಪ್ರಸಾದವಾಗಿ, ಪ್ರಸಾದವೆ ಪ್ರಾಣವಾಗಿ.
ಇಂತೀ ತ್ರಿವಿಧದಲ್ಲಿ ಸಂಪನ್ನನಾದ
ಸಮತಾಪ್ರಸಾದಿ, ಸನ್ನಹಿತಪ್ರಸಾದಿ, ಸಮಾಧಾನಪ್ರಸಾದಿ.
ಕಲಿದೇವಯ್ಯಾ, ಚೆನ್ನಬಸವಣ್ಣನ ಪ್ರಸಾದವ ಕೊಂಡು
ನಾನು ಬದುಕಿದೆನು ಕಾಣಾ ಪ್ರಭುವೆ. ೬
ಅಂಗಾಲಕಣ್ಣವರಾಗಬಹುದಲ್ಲದೆ
ಮೈಯೆಲ್ಲ ಕಣ್ಣವರಾಗಬಾರದು.
ಮೈಯೆಲ್ಲ ಕಣ್ಣವರಾಗಬಹುದಲ್ಲದೆ
ನೂಸಲ ಕಣ್ಣು ಚತುರ್ಭುಜರಾಗಬಾರದು.
ನೊಸಲಕಣ್ಣು ಚತುರ್ಭುಜದವರಾಗಹುದಲ್ಲದೆ
ಪಂಚವಕ್ತ್ರ ದಶಭುಜದವರಾಗಬಾರದು.
ಪಂಚವಕ್ತ್ರ ದಶಭುಜದವರಾಗಬಹುದಲ್ಲದೆ
ಸರ್ವಾಂಗಲಿಂಗಿಗಳಾಗಬಾರದು.
ಸರ್ವಾಂಗಲಿಂಗಿಗಳಾಗಬಹುದಲ್ಲದೆ, ಕಲಿದೇವಯ್ಯಾ,
ನಿಮ್ಮ ಶರಣ ಬಸವಣ್ಣನಾಗಬಾರದೆಂದರಿದು,
ಆ ಬಸವಣ್ಣನ ಶ್ರೀಪಾದಕ್ಕೆ ನಮೋ ನಮೋ ಎನುತಿರ್ದೆನು. ೭
ಅಂಗೈಯ ಲಿಂಗ ಕಂಗಳ ನೋಟದಲ್ಲಿ ಅರತ ಲಿಂಗೈಕ್ಯನ,
ಮನದ ಅರಿವು ನಿರ್ಭಾವದಲ್ಲಿ ಅರತ ಲಿಂಗೈಕ್ಯನ,
ಸರ್ವಾಂಗನಿಷ್ಠೆ ನಿರ್ಣಯವಾದ ಲಿಂಗೈಕ್ಯನ,
ನಿಜವನುಂಡು ತೃಪ್ತನಾದ ಲಿಂಗೈಕ್ಯನ,
ಮಹವನವಗ್ರಹಿಸಿ ಘನವೇದ್ಯನಾದ ಲಿಂಗೈಕ್ಯನ,
ಕಲಿದೇವರದೇವ ಪ್ರಭುವೆಂಬ ಲಿಂಗೈಕ್ಯನ
ಶ್ರೀಪಾದದಲ್ಲಿ ಮಗ್ನನಾಗಿರ್ದೆನು. ೮
ಅಂಧಕಾರದ ದೆಸೆಯಿಂದ ಚಂದ್ರನ ಪ್ರಭೆಯಾಯಿತು.
ನಿಂದಕರ ನುಡಿಯ ಏಡಿಸಲ್ಕೆ ಶಿವಭಕ್ತಿಯ ಪ್ರಭೆಯಾಯಿತು.
ಅಹುದೆಂದಡೆ ಅಲ್ಲವೆಂದತಿಗಳೆವರು.
ಕುತರ್ಕ ಶಾಸ್ತ್ರದಿಂದ ಯಮಗತಿಗರ ಕೂಡೆ
ನಾನಾ ಜನ್ಮಕ್ಕೇರದೆ, ಶಿವಾಚಾರದ ಪಥವ ತೋರಿಸಯ್ಯಾ
ಕಲಿದೇವರದೇವ. ೯
ಅಕ್ಕತಂಗಿಯರೈವರು ಒಬ್ಬನ ಅರಸಿಯರು.
ಕಿರಿಯಾಕೆಯ ಕೂಡುವಡೆ ಹಿರಿಯಾಕೆ ಕುಂಟಣಿ.
ಹಿರಿಯಾಕೆಯ ಕೂಡುವಡೆ ಕಿರಿಯಾಕೆ ಕುಂಟಣಿ.
ಇಬ್ಬರನೂ ಕೂಡುವಡೆ ಬೇರೆಮಾಡಿ
ಬೆರಸುಬಾರದೆಂದರಿದು, ಒಂದಾಗಿ ಕೂಡಲು
ಒಬ್ಬಾಕೆ ಕಣ್ಣ ಕೆಚ್ಚನೆ ಮಾಡುವಳು.
ಒಬ್ಬಾಕೆ ಬುದ್ಭಿಯ ಹೇಳುವಳು ಒಬ್ಬಾಕೆ ಹಾಸಿ ಕೊಡುವಳು.
ಈ ಐವರನೂ ಅಪ್ಪಿಕೊಂಡು ಒಂದೆಬಾರಿ ಬೆರಸಲು
ನೀರು ನೀರ ಬೆರಸಿದಂತಾಯಿತು ಕಲಿದೇವಯ್ಯಾ.
ನಿಮ್ಮ ಶರಣ ಸಿದ್ಧರಾಮಯ್ಯದೇವರು
ಎನಗೆ ಈ ಪಥವ ಕಲಿಸಿ, ನಿಜನಿವಾಸದಲ್ಲಿರಿಸಿದ ಕಾರಣ
ಆನು ನಮೋ ನಮೋ ಎನುತಿರ್ದೆನು. ೧೦
ಅಕ್ಕರ ಗಣಿತ ಗಾಂಧರ್ವ ಜ್ಯೋತಿಷ ಆತ್ಮವಿದ್ಯೆ ತರ್ಕ ವ್ಯಾಕರಣ
ಅಮರಸಿಂಹ ಛಂದಸ್ಸು ನಿಘಂಟು ಶಾಲಿಹೋತ್ರ ಗ್ರಹವಾದ ಗಾರುಡ
ದ್ಯೂತ ವೈದಿಕಶಾಸ್ತ್ರ ಸಾಮುದ್ರಿಕಶಾಸ್ತ್ರ ಲಕ್ಷಣಶಾಸ್ತ್ರ ಅಶ್ವಶಿಕ್ಷೆ
ಗಜಶಿಕ್ಷೆ ಗೋಕರ್ಣ ದಾಡಾಬಂಧ ಮೂಲಿಕಾಸಿದ್ಧಿ ಭೂಚರತ್ವ
ಖೇಚರತ್ವ ಅತೀತ ಅನಾಗತ ವರ್ತಮಾನ ಸ್ಥೂಲ ಸೂಕ್ಷ್ಮ
ಇಂದ್ರಜಾಲ ಮಹೇಂದ್ರಜಾಲ ವಡ್ಯಾನಚೇಷ್ಟೆ ಪರಕಾಯಪ್ರವೇಶ
ದೂರದೃಷ್ಟಿ ದೂರಶ್ರವಣ ಋಗ್ಯಜುಃಸಾಮಾಥರ್ವಣ ಶ್ರುತಿಸ್ಮೃತಿ
ಆಯುದರ್ಾಯ ನಷ್ಟಿಕಾಮುಷ್ಟಿಚಿಂತನೆ ಚೋರವಿದ್ಯೆ ಅಮೃತೋದಯ
ಭಾಷಾಪರೀಕ್ಷೆ ವೀಣಾವಿದ್ಯೆ ಭೃಂಗಿವಿದ್ಯೆ ಮಲ್ಲವಿದ್ಯೆ ಶಸ್ತ್ರವಿದ್ಯೆ
ಧನುರ್ವಿದ್ಯೆ ಅಗ್ನಿಸ್ತಂಭ ಜಲಸ್ತಂಭ ವಾಯುಸ್ತಂಭ ವಾದವಶ್ಯ
ಅಂಜನಾಸಿದ್ಧಿ ಫುಟಿಕಾಸಿದ್ಧಿ ಮಂತ್ರತಂತ್ರಸಿದ್ಧಿ
ಇವೆಲ್ಲವ ಕಲಿತಡೇನು ಅರುವತ್ನಾಲ್ಕು ವಿದ್ಯಾಪ್ರವೀಣನೆನಿಸಿಕೊಂಬನಲ್ಲದೆ
ಲಿಂಗವಂತನೆನಿಸಿಕೊಂಬುದಿಲ್ಲ. ಲಿಂಗವುಳ್ಳ ಶಿವಭಕ್ತಂಗೆ
ಇವರೆಲ್ಲರೂ ಕೂಡಿ ಸರಿಬಾರದೆಂದ ನಮ್ಮ ಕಲಿದೇವರದೇವ. ೧೧
ಅಚ್ಚಪ್ರಸಾದವೆಂದು ಮನದಿಚ್ಫೆಗೆ ಗಡಣಿಸಿಕೊಂಬ
ದುರಾಚಾರಿಯ ಮಾತ ಕೇಳಲಾಗದು.
ಭವಿ ಕೊಂಡುದು ಓಗರ, ಭಕ್ತ ಕೊಂಡುದು ಅನರ್ಪಿತ.
ಇಂತೀ ಉಭಯವನರಿದು ಪ್ರಸಾದವ ಕೊಂಡೆನ್ನ
ಭವಂ ನಾಸ್ತಿಯಾಯಿತ್ತು ಕಾಣಾ, ಕಲಿದೇವಯ್ಯಾ. ೧೨
ಅಜಾತನೆಂದೆನಬೇಡ, ಜಾತನೆಂದೆನಬೇಡ.
ಹದಿನೆಂಟುಜಾತವಾದರಾವುದು ?
ಒಂದೇ ಗುರುವಿನ ವೇಷವಿದ್ದವರಿಗೆ
ದಾಸೋಹವ ಮಾಡುವುದೆ ಶಿವಾಚಾರ.
ಅದಲ್ಲದೆ ಗುರುಕೊಟ್ಟ ಮುರುಹು ಮುದ್ರೆ ಲಾಂಛನವ ಹೊತ್ತು
ಮರಳಿ ವೇಷವಳಿದು ಬಂದವರಿಗೆ
ದಾಸೋಹವ ಮಾಡುವದು, ಶಿವಾಚಾರಕ್ಕೆ ಹೇಸಿಕೆ ಕಾಣಾ
ಕಲಿದೇವರದೇವ. ೧೩
ಅಟ್ಟ ಉಪ್ಪಿನ ಕಷ್ಟವಾವುದು ? ಅಡದ ಉಪ್ಪಿನ ಲೇಸಾವುದು ?
ಬಿಟ್ಟ ಸಪ್ಪೆಯ ಭಕ್ತಿ ಯಾವುದು ? ಮೂತ್ರನಾಳದ ಘಾತಿ ಬಿಡದು.
ಇವರು ಮಾಡುವ ನೇಮ, ತಾ ಕೊಂಡಂತೆ ಕಲಿದೇವರದೇವಾ. ೧೪
ಅಣುರೇಣು ಮಹಾತ್ಮನೆಂದೆಂಬರು.
ಅಣುರೇಣು ತೃಣಕಾಷ್ಠದೊಳಗಿರ್ಪನೆಂಬರು.
ಅಮ್ಮೆನಯ್ಯಾ, ನಾನೆನಲಮ್ಮೆನಯ್ಯಾ.
ಶರಣಸನ್ನಹಿತನು, ಭಕ್ತಕಾಯ ಮಮಕಾಯನು,
ದಾಸೋಹ ಪರಿಪೂರ್ಣನು,
ಸದುಹೃದಯದಲ್ಲಿ ಸಿಂಹಾಸನವಾಗಿ ಅಗಲದಿರ್ಪನು
ಕಲಿದೇವಯ್ಯ. ೧೫
ಅತಿಶಯವನತಿಗಳೆದು ನಿರತಿಶಯ ಸುಖದೊಳಗೆ
ಪರಮಸುಖಿಯಾಗಿಪ್ಪವರಾರು ಹೇಳಾ ?
ನಿಜದ ನಿರ್ಣಯವನರಿದು ಭಜನೆ ಭಾವನೆಯಳಿದು
ತ್ರಿಜಗಪತಿಯಾಗಿಪ್ಪವರಾರು ಹೇಳಾ ?
ಕೋಡಗದ ಮನದೊಳಗೆ ಮನವಿರಹಿತನಾಗಿ
ಗಮನಗೆಡದಿಪ್ಪರಿನ್ನಾರು ಹೇಳಾ ?
ಹಗೆಯಲ್ಲಿ ಹೊಕ್ಕು ಹಗೆಯಳಿದು ಸುಖಿಯಾಗಿ
ತನಗೆ ತಾ ಕೆಳೆಯಾಗಿಪ್ಪರಾರು ಹೇಳಾ ?
ಒಳಹೊರಗೆ ಸರ್ವಾಂಗ ಲಿಂಗವೆ ತಾನಾಗಿ ಇರಬಲ್ಲ
ಪರಮಾರ್ಥರಾರು ಹೇಳಾ ?
ಕಲಿದೇವಾ, ನಿಮ್ಮ ಶರಣ ಚೆನ್ನಬಸವಣ್ಣನ
ನಿಲವನರಿದು, ಶರಣೆಂದು ನಾನು ಸುಖಿಯಾದೆನು. ೧೬
ಅನಾದಿ ಅಖಂಡಪರಿಪೂರ್ಣ ನಿಜಾಚರಣೆಯನಗಲದೆ
ಮಹಾವೈರಾಗ್ಯದಿಂದ ಪರಶಿವಲಿಂಗಕೂ ತನಗೂ ಚಿನ್ನ ಬಣ್ಣದ ಹಾಂಗೆ,
ಪುಷ್ಪ ಪರಿಮಳದ ಹಾಂಗೆ, ಶಿಖಿ ಕರ್ಪುರದ ಹಾಂಗೆ,
ಉಪ್ಪು ಉದಕದ ಹಾಂಗೆ, ಅಗ್ನಿ ವಾಯುವಿನ ಹಾಂಗೆ,
ಕ್ಷೀರ ಕ್ಷೀರ ಬೆರದ ಹಾಂಗೆ, ವಾರಿ ಶರಧಿಯ ಕೂಡಿದ ಹಾಂಗೆ,
ತಿಳಿದುಪ್ಪ ಹೆರೆದುಪ್ಪವಾದ ಹಾಂಗೆ, ಹೆಪ್ಪು ನವನೀತದ ಹಾಂಗೆ
ಸೂಜಿಕಲ್ಲಾದಂತೆ ಮತ್ರ್ಯದಲ್ಲಿರ್ದು, ಕನ್ನಡಿಯ ಪ್ರತಿಬಿಂಬ
ಸೂರ್ಯನ ಕಿರಣದಂತೆ ಕಾಲ ಕಾಮರ ಪಾಶಕ್ಕೆ ಹೊರಗಾಗಿ,
ಬಾವನ್ನದಿರವನೊಳಕೊಂಡು
ಸರ್ವಾಚಾರಸಂಪತ್ತಿನಲ್ಲಿ ಎಡೆದೆರಪಿಲ್ಲದೆ ಮಹಾಮೋಹಿಯಾಗಿ,
ಲೋಕಪಾವನಕ್ಕೋಸ್ಕರ ಸಂಚರಿಸುವಾತನೆ,
ನಿರಂಜನ ಭಕ್ತಜಂಗಮ ಕಾಣಾ, ಕಲಿದೇವರದೇವ. ೧೭
ಅಮೃತಮಥನದಲ್ಲಿ ಅಜ ಹರಿ ಸುರಪ ವಾಲಿ ಸುಗ್ರೀವರಳಿದರು.
ಕಾಶಿಯಲ್ಲಿ ಬ್ರಹ್ಮ ವಿಷ್ಣುಗಳಳಿದರು.
ಕೇದಾರದಲ್ಲಿ ಪಾಂಡವರಳಿದರು, ಕಲ್ಯಾಣದಲ್ಲಿ ವ್ಯಾಳನಳಿದನು.
ಶ್ರೀಶೈಲದಲ್ಲಿ ಹಿರಣ್ಯ ಧನುಜ ನಾಗಾರ್ಜುನರಳಿದರು.
ಪಾತಾಳ ಲಂಕೆಯಲ್ಲಿ ಮಹಿರಾವಣನಳಿದನು.
ಲವಣ ಲಂಕೆಯಲ್ಲಿ ಲಕ್ಷ್ಮಿಗಳುಪಿದವನಳಿದನು.
ದಶರಥನ ತೋಹಿನಲ್ಲಿ ಮಂಡುಬಲಚೌಡನಳಿದನು.
ಭೀಮನ ಕೈಯಲ್ಲಿ ಕೀಚಕನಳಿದನು.
ಮುನಿ ಕರ್ಣಿಕೆಯ ಶಿರವ ಹರಿದು, ಸುರಪನಜಹರಿಗಳು ಶಾಪಹತರಾದರು.
ಋಷಿಯ ಸತಿಗಳುಪಿ ಸುರಪ ಮೈಯನಳಿದ.
ಭೀಷ್ಮರು ಕುಂಭಕರ್ಣ ದ್ರೋಣ ಜಾಂಬರು ನಿದ್ರೆಯಲ್ಲಿ ಅಳಿದರು.
ವ್ಯಾಧರ ಬಾಣದಲ್ಲಿ ಬಿದ್ದರು ವಿಷ್ಣು ಪಾಂಡ್ಯರಾಯರು.
ವಿಷದ ಪಣ್ಣಿಂದಳಿದ ಪರೀಕ್ಷಿತರಾಯನು.
ಪರಶುರಾಮನ ಕೈಯಲಿ ಜಮದಗ್ನಿ ಮುನಿಯ ವಧೆಯಿಂದ ಕಾರ್ತಿಕರಳಿದರು.
ವೃಷಭನ ವಧೆಯಿಂದ ವೀತರಾಜನಳಿದ.
ಕುರುಕ್ಷೇತ್ರದಲ್ಲಿ ಕೌರವರಳಿದರು.
ಮಾಸನೂರಲ್ಲಿ ಸಿದ್ಧರಳಿದರು.
ಕೊಲ್ಲಾಪುರದಲ್ಲಿ ಹರಿ ಅಜ ಇಂದ್ರ ದಿಕ್ಪಾಲಕರು
ತೃಣಕೆ ಲಫುವಾದರು.
ಹೋಮ ಕಾಮ ತ್ರಿಣೇತ್ರ ಪಂಚಮುಖರೆಲ್ಲ
ಮಹಾಪ್ರಳಯದಲ್ಲಿ ಅಳಿದರು.
ಇನ್ನು ಬಿಜ್ಜಳರಾಯನ ಅಳಿವಿನುಳಿವಿನ
ಹವಣವೇನು ಕಲಿದೇವರದೇವಾ. ೧೮
ಅಯ್ಯಾ ಅಯ್ಯಾ ಎಂದು ನೆನೆವುತ್ತಿಹರಯ್ಯಾ
ಗಂಗೆವಾಳುಕಸಮಾರುದ್ರರು,
ಅವರಿಗೆ ಪ್ರಸಾದಲಿಂಗವ ಸಾಹಿತ್ಯವ ಮಾಡಿದ ಕಾರಣ.
ಅಯ್ಯಾ ಅಯ್ಯಾ ಎಂದು ಹೊಗಳುತ್ತಿಹರಯ್ಯಾ ಏಕಾದಶರುದ್ರರು,
ಅವರಿಗೆ ಸಕಲ ನಿಃಕಲಾತ್ಮಕ ನೀನೆಯಾಗಿ
ಪ್ರಾಣಲಿಂಗವ ಸಾಹಿತ್ಯವ ಮಾಡಿದ ಕಾರಣ.
ಶಿವಶಿವಾ ಎನುತಿರ್ಪರಯ್ಯಾ
ವಿಷ್ಣು ಮೊದಲಾದ ತ್ರೈತಿಂಶತಿಕೋಟಿ ದೇವತೆಗಳು,
ಅವರಿಗೆ ಧರ್ಮಾರ್ಥಕಾಮಮೋಕ್ಷಂಗಳನಿತ್ತೆಯಾಗಿ.
ಹರಹರಾ ಎನುತಿರ್ಪರಯ್ಯಾ
ಬ್ರಹ್ಮ ಮೊದಲಾದ ಅಷ್ಟಾಶೀತೀಸಹಸ್ರ ಋಷಿಯರು,
ಅವರಿಗೆ ಸ್ವರ್ಗ ನರಕಾದಿಗಳ ಮಾಡಿದೆಯಾಗಿ.
ಮಹಾದೇವಾ ಮಹಾದೇವಾ ಎನುತಿರ್ಪರಯ್ಯಾ ದಾನವಾದಿಗಳು
ಅವರಿಗೆ ಸುಕೃತ ದುಃಕೃತಂಗಳನೀವೆಯಾಗಿ.
ಬಸವಾ ಬಸವಾ ಎನುತಿರ್ಪರಯ್ಯಾ ಮಹಾಭಕ್ತರು,
ಅವರಿಗೆ ಗುರು ಲಿಂಗ ಜಂಗಮ ಪಾದೋದಕ ಪ್ರಸಾದವ ತೋರಿದ ಕಾರಣ.
ಉಳಿದ ಎಂಬತ್ತುನಾಲ್ಕುಲಕ್ಷ ಜೀವರಾಶಿಗಳೆಲ್ಲ
ನಿಮ್ಮುವನನಿಮಿಷವಾಗಿ ನೋಡುತಿರ್ಪರಯ್ಯಾ,
ಸಕಲ ನಿಃಕಲಾತ್ಮಕ ಚೈತನ್ಯನಾದೆಯಾಗಿ.
ಸಕಲವೂ ನಿನ್ನಾಧಾರ, ನಿಃಕಲವೂ ನಿನ್ನಾಧಾರ.
ಸಕಲ ನಿಃಕಲದೊಡೆಯ ದೇವರದೇವ ಕಲಿದೇವಾ
ನಿಮ್ಮ ಕರಸ್ಥಲದ ಹಂಗಿನೊಳಗಿರ್ದ ಕಾರಣ ಸಂಗನಬಸವಣ್ಣ. ೧೯
ಅಯ್ಯಾ, ಅರಿವು ಏಕಾಗಿ ಧರಿಸಿದರು ಹೇಳಾ ನಿಮ್ಮ ಶರಣರು ?
ಅರಿವು ಆಕಾರಕ್ಕೆ ಬಂದಲ್ಲಿ ಪ್ರಕೃತಿ ಆಯಿತ್ತು.
ಅರಿವು ಹಿಂದಾಗಿ ಪ್ರಕೃತಿ ಮುಂದಾಯಿತ್ತು.
ಪ್ರಕೃತಿ ಸ್ವಭಾವವನಳಿಯಬೇಕೆಂದು
ಕಲಿದೇವರದೇವ ಇಷ್ಟಲಿಂಗವಾಗಿ
ಅಂಗದಲ್ಲಿ ಬೆಳಗಿದನು ನೋಡಾ, ಅಲ್ಲಮಯ್ಯ ೨೦
ಅಯ್ಯಾ, ಇಹಪರಂಗಳಂ ಗೆಲಿದ ಭಕ್ತ ಜಂಗಮಕ್ಕೆ,
ಸದಾಚಾರವೆ ವಸ್ತು ನೋಡಾ.
ಸದಾಚಾರವನರಿಯದ ಪಾಪಿ, ಸೂಕರನಿಂದ ಕಷ್ಟ ನೋಡಾ.
ಭಕ್ತ ಜಂಗಮಕ್ಕೆ ಸದಾಚಾರವೇ ಬೇಕು.
ಸದಾಚಾರವಿಲ್ಲದವಂಗೆ ಭವವುಂಟು.
ಭವವುಂಟಾದವಂಗೆ ಆಚಾರವಿಲ್ಲ.
ಆಚಾರವಿಲ್ಲದವ ಭಕ್ತನಲ್ಲ, ಜಂಗಮವಲ್ಲ ಕಾಣಾ
ಕಲಿದೇವರದೇವ. ೨೧
ಅಯ್ಯಾ, ಗುರುಲಿಂಗಜಂಗಮದ ಶುದ್ಧಸಿದ್ಧಪ್ರಸಿದ್ಧಪ್ರಸಾದಿಯಾದಡೆ
ತನ್ನ ಪವಿತ್ರಸ್ವರೂಪವಾದ ಗುರುಲಿಂಗಜಂಗಮಕ್ಕೆ
ನಿಂದ್ಯಕುಂದ್ಯಗಳ ಕಲ್ಪಿಸಿ, ಅರ್ಥಪ್ರಾಣಾಭಿಮಾನವ ಕೊಂಡ
ಗುರುಲಿಂಗಜಂಗಮದ್ರೋಹಿಗಳ ಸಮಪಙ್ತಿಯಲ್ಲಿ
ಅರ್ಚನಾರ್ಪಣಗಳ ಮಾಡ ನೋಡಾ.
ಆ ದ್ರೋಹಿಗಳಿಗೆ ಪಾದೋದಕ ಪ್ರಸಾದವ ಕೊಟ್ಟು ಕೊಳ್ಳ ನೋಡಾ.
ಆ ದ್ರೋಹಿಗಳ ಸರ್ವಾವಸ್ಥೆಯಲ್ಲಿ ಧ್ಯಾನಕ್ಕೆ ತಾರ ನೋಡಾ.
ಆ ದ್ರೋಹಿಗಳಿಗೆ ಶರಣೆಂದು ನುಡಿದು ವಂದಿಸ ನೋಡಾ.
ಈ ವಿಚಾರವನರಿದಡೆ ಮಹಾಚಿದ್ಘನಪ್ರಸಾದಿಯೆಂಬೆನಯ್ಯಾ.
ಈ ವಿಚಾರವನರಿಯದ ವೇಷಧಾರಕ ಉದರಪೋಷಕ ನುಡಿಜಾಣರ ನೋಡಿ,
ಮನ ಭಾವಂಗಳಲ್ಲಿ ಊರಿಂದ ಹೊರಗಣ ಹಿರಿಯಕುಲದವರ ಮನೆಯ
ಹೊರಬಳಕೆಯ ಬೋಕಿಯೆಂದು ಬಿಡುವೆ ನೋಡಾ, ಕಲಿದೇವರ ದೇವ.
ಇಂತು ಗುರುವಾಕ್ಯವ ಮೀರಿ ತನ್ನ ಅಂಗವಿಕಾರದಾಸೆಗೆ
ಚರಿಸುವಾತಂಗೆ ಗುರುವಿಲ್ಲ ಲಿಂಗವಿಲ್ಲ ಜಂಗಮವಿಲ್ಲ.
ಪಾದೋದಕ ಪ್ರಸಾದ ಮುನ್ನವೆ ಇಲ್ಲ ನೋಡಾ, ಸಂಗನಬಸವಣ್ಣ. ೨೨
ಅಯ್ಯಾ, ತನ್ನ ತಾನರಿಯದೆ,
ತನ್ನ ಇಷ್ಟಲಿಂಗದ ಹೊಲಬು ತಿಳಿಯದೆ,
ಕಾಮವ ತೊರೆಯದೆ, ಹೇಮವ ಜರೆಯದೆ,
ನಾವು ಹರ ಗುರು ಚರ ಷಟ್ಸ್ಥಲದ ವಿರಕ್ತರೆಂದು
ಚೆನ್ನಾಗಿ ನುಡಿದುಕೊಂಡು, ಕಾವಿ ಕಾಷಾಯಾಂಬರವ ಹೊದ್ದು,
ಶಂಖ ಗಿಳಿಲು ದಂಡಾಗ್ರವ ಹೊತ್ತು,
ಕೂಳಿಗಾಗಿ ನಾನಾ ದೇಶವ ತಿರುಗಿ,
ಕಾಂಚನಕ್ಕೆ ಕೈಯೊಡ್ಡುವ ಪಂಚಮಹಾಪಾತಕರನು
ಕಾಗೆಯ ಗರ್ಭದಲ್ಲಿ ಹುಟ್ಟಿಸಿ ಕಾಕಾ ಎಂದು
ಕೂಗಿಸುತಿರ್ಪ[ನು] ಕಾಣಾ, ಕಲಿದೇವರದೇವ. ೨೩
ಅಯ್ಯಾ, ತನ್ನ ತಾನರಿಯದೆ
ನಾವು ಏಕಾರತಿ ದ್ವಿಯಾರತಿ [ತ್ರಿಯಾರತಿ] ಚತುರಾರತಿ ಪಂಚಾರತಿ
ಷಡಾರತಿ ಸಪ್ತಾರತಿ ಅಷ್ಟಾರತಿ ನವಾರತಿ ದಶಾರತಿ
ಕಡ್ಡಿಬತ್ತಿ ಕರ್ಪುರಾರತಿ ಮೊದಲಾದ
ಅಷ್ಟವಿಧಾರ್ಚನೆ ಷೋಡಶೋಪಚಾರದಿಂದರ್ಚಿಸುವ
ಇಷ್ಟಲಿಂಗಪೂಜಕರೆಂದು ನುಡಿದುಕೊಂಬ ಬದ್ಧಭವಿ ಶುದ್ಧಶೈವ
ಮರುಳುಮಾನವರೆನಗೊಮ್ಮೆ ತೋರದಿರಯ್ಯ.
ಅದೇನು ಕಾರಣವೆಂದಡೆ, ತನ್ನ ಅಂಗ ಮನ ಪ್ರಾಣೇಂದ್ರಿಯಂಗಳಲ್ಲಿ ಮುಸುಕಿದ
ಅಜ್ಞಾನಾಂಧಕಾರದ ಅರುವತ್ತಾರುಕೋಟಿ ಕರಣಂಗಳೆಂಬ ಕಂಚಿನಾರತಿಗಳ
ಹಂಚು ಹರಿಗಡಿದು, ಅಷ್ಟತನುಗಳ ಸುಟ್ಟುರುಹಿದ ಬೂದಿಯಿಂದ ಬೆಳಗಿ,
ಚಿಜ್ಜಲದಿಂದ ತೊಳೆದು ಕಳೆದುಳಿಯಲರಿಯದೆ,
ತನ್ನ ಹೃದಯಮಂದಿರದಲ್ಲಿ ನೆಲಸಿರುವ ಚಿದ್ಘನ ಚಿತ್ಪ್ರಕಾಶ ಚಿನ್ಮಯ
ಶ್ರೀಗುರುಲಿಂಗಜಂಗಮಕ್ಕೆ ಮನೋಪ್ರಕೃತಿಯಳಿದ ಉನ್ಮನವೆಂಬ ಏಕಾರತಿ,
ಲಿಂಗಾಂಗವೆಂಬುಭಯವಳಿದ ದ್ವಿಯಾರತಿ,
ಮಲತ್ರಯಂಗಳಳಿದ ತ್ರಿಯಾರತಿ, ಚತುಃಕರಣಂಗಳಳಿದ ಚತುರಾರತಿ,
ಪಂಚಭೂತ ಪಂಚವಾಯು ಪಂಚೇಂದ್ರಿಯ ಪಂಚಕ್ಲೇಶ ಪಂಚಮೂರ್ತಿಗಳ
ಫಲಪದಂಗಳ ಕಳೆದುಳಿದ ಪಂಚಾರತಿ, ಷಡ್ವರ್ಗ ಷಡೂರ್ಮೆ ಷಡ್ಭ್ರಮೆ
ಷಡ್ಭಾವವಿಕಾರಂಗಳಳಿದ ಷಡಾರತಿ, ಸಪ್ತಧಾತು ಸಪ್ತವ್ಯಸನಂಗಳಳಿದ ಸಪ್ತಾರತಿ,
ಅಂತರಂಗದಷ್ಟಮದ ಬಹಿರಂಗದಷ್ಟಮದಂಗಳಳಿದ ಅಷ್ಟಾರತಿ,
ನವಗ್ರಹಂಗಳಳಿದ ನವಾರತಿ,
ದಶೇಂದ್ರಿಯ ದಶವಾಯುಗಳಳಿದ ದಶಾರತಿ.
ಅಹಂಕಾರಗಳಳಿದ ಕಡ್ಡಿಬತ್ತಿ, ತನುತ್ರಯ ಗುಣತ್ರಯ ಅವಸ್ಥಾತ್ರಯ
ಮನತ್ರಯ ಆತ್ಮತ್ರಯ ಭಾವತ್ರಯಂಗಳ ಕಳೆದುಳಿದ ಕರ್ಪುರಾರತಿಯ ಬೆಳಗಿ
ನಿರ್ವಯಲಪದವನೈದಲರಿಯದೆ,
ಬಹಿರಂಗದ ಭಿನ್ನಕ್ರೀ ಭಿನ್ನಜ್ಞಾನ ಭಿನ್ನಭಕ್ತಿ ಮುಂದುಗೊಂಡು,
ಗಡ್ಡ ಜಡೆ ಮುಡಿಗಳ ಬಿಟ್ಟುಕೊಂಡು,
ಲಾಂಛನವ ಹೊದ್ದುಕೊಂಡು, ಕಾಂಚನಕ್ಕೆ ಕೈಯೊಡ್ಡುತ
ಕಂಚಗಾರನಂತೆ ನಾನಾ ಜಿನಸಿನ ಕಂಚ ನೆರಹಿ ಹರವಿಕೊಂಡು,
ಪರಮಶಿವಲಿಂಗ ಪೂಜಕರೆಂದು ಬಗಳುವ ಪಂಚಮಹಾಪಾತಕರಿಗೆ
ಕಿರಾತರು ಮೆಚ್ಚುವರಲ್ಲದೆ ಪುರಾತರು ಮೆಚ್ಚುವರೆ ?
ಬದ್ಧಭವಿಯಾದ ಶೈವರು ಮೆಚ್ಚುವರಲ್ಲದೆ
ಶುದ್ಧ ಸುಶೀಲ ನಿರಾಭಾರಿ ವೀರಶೈವರು ಮೆಚ್ಚುವರೆ ?
ಅಜ್ಞಾನಿಗಳು ಮೆಚ್ಚುವರಲ್ಲದೆ ನಿವ್ಯರ್ಾಪಾರಿಗಳು ಮೆಚ್ಚರು.
ಭಿನ್ನಕ್ರೀಯಸ್ಥರು ಮೆಚ್ಚುವರಲ್ಲದೆ ಅಭಿನ್ನಕ್ರೀಯಸ್ಥರು ಮೆಚ್ಚರು.
ಇಂತಪ್ಪ ಲಿಂಗಾಂಗಸಮರಸದ ನಿರ್ಗುಣಪೂಜೆಯನೆಸಗಲರಿಯದ
ಭಿನ್ನಜ್ಞಾನ ಭಿನ್ನಪೂಜೆಯನೆಸಗುವ ಮರುಳುಗಳಿಗೆ
ಆರು ಮೆಚ್ಚುವರು ? ಹುಚ್ಚು ಮರುಳುಗಳಿರಾ
ಸುಮ್ಮನಿರಿಯೆಂದಾತ ನಿಮ್ಮ ಶರಣ ಕಲಿದೇವರದೇವ. ೨೪
ಅಯ್ಯಾ, ತನ್ನಾದಿ ಮಧ್ಯಾವಸಾನವ ತಿಳಿದು,
ಭವಿ ಭಕ್ತ, ಆಚಾರ ಅನಾಚಾರ, ಯೋಗ್ಯ ಅಯೋಗ್ಯ,
ಅರ್ಪಿತ ಅನರ್ಪಿತ, ಸುಸಂಗ ದುಸ್ಸಂಗ,
ಸುಚಿತ್ತ ಕುಚಿತ್ತ, ಸುಬುದ್ಧಿ ಕುಬುದ್ಧಿ,
ಅಹಂಕಾರ ನಿರಹಂಕಾರ, ಸುಮನ ಕುಮನ,
ಸುಜ್ಞಾನ ಅಜ್ಞಾನ, ಸದ್ಭಾವ ದುರ್ಭಾವ, ಪಾಪ ಪುಣ್ಯ,
ಧರ್ಮ ಕರ್ಮ, ಸ್ವರ್ಗ ನರಕ, ಇಹಪರವೆಂಬ
ಭೇದಾಭೇದವ ತಿಳಿದು, ಶೈವಮಾರ್ಗದಷ್ಟಾಂಗಯೋಗವನುಳಿದು,
ವೀರಶೈವ ಶಿವಯೋಗಸಂಪನ್ನನಾಗಿ
ಭಕ್ತಿ ಜ್ಞಾನ ವೈರಾಗ್ಯದಲ್ಲಾಚರಿಸಿ, ಬಕಧ್ಯಾನವನುಳಿದು,
ರಾಜಹಂಸನ ಹಾಗೆ ಅಸತ್ಯವನುಳಿದು,
ಸುಸತ್ಯದಲ್ಲಾಚರಿಸುವ ಭಕ್ತ ಜಂಗಮವೇ ದ್ವಿತೀಯ ಶಂಭುವೆಂದು
ಅವರಂಗಣವ ಕಾಯ್ದು, ಅವರುಟ್ಟುದ ತೊಳೆದು,
ಅವರೊಕ್ಕುದ ಕೈಕೊಂಡು, ಅವರುಗಳ ಹಾರೈಸಿ,
ಅವರ ಕಡೆಬಾಗಿಲ ಕಾಯ್ದು, ಅವರ ತೊತ್ತಿನ ತೊತ್ತಾಗಿ
ಬದುಕಿದೆ ಕಾಣಾ, ಕಲಿದೇವರದೇವ. ೨೫
ಅಯ್ಯಾ, ನಾನು ಹುಟ್ಟಿದಂದಿಂದ ಲಿಂಗವನಲ್ಲದೆ ಆರಾಧಿಸೆ.
ಜಂಗಮಕ್ಕಲ್ಲದೆ ನೀಡೆ, ಶರಣಸಂಗವಲ್ಲದೆ ಮಾಡೆ.
ಕಲ್ಯಾಣದ ಮಹಾಗಣಂಗಳೊಂದು ಹೊಳೆಯ ಮಾಡಿಕೊಟ್ಟರು.
ಆ ಹೊಳೆಯಲ್ಲಿ ಹೆಣ್ಣು ಗಂಡು ಸುಳಿಯಲೀಯೆನು.
ಚಿಕ್ಕವರು ಹಿರಿಯರ ಸುಳಿಯಲೀಯೆನು.
ಎಲ್ಲಾ ಮಹಾಗಣಂಗಳು ಎನ್ನ ಹೊಳೆಯಲೆ ಹಾಯುವರು.
ಲಿಂಗದ ವಸ್ತ್ರವನೊಗೆದು ಕಾಯಕದಲ್ಲಿ ಶುದ್ಧನಾದೆನು.
ಎನ್ನ ಕಾಯಕವನವಧರಿಸು ಕಲಿದೇವಯ್ಯಾ. ೨೬
ಅಯ್ಯಾ, ನಾವು ಗುರು ಲಿಂಗ ಜಂಗಮದ
ಪಾದೋದಕ ಪ್ರಸಾದಸಂಬಂಧಿಗಳೆಂದು ನುಡಿದುಕೊಂಬ ಪಾತಕರ
ಮುಖವ ನೋಡಲಾಗದು.
ಅದೇಕೆಂದಡೆ, ಪಾದೋದಕವ ಕೊಂಡ ಬಳಿಕ,
ಜನನದ ಬೇರ ಕಿತ್ತೊರಸಬೇಕು.
ಪ್ರಸಾದವ ಕೊಂಡ ಬಳಿಕ, ಪ್ರಳಯವ ಗೆಲಿಯಬೇಕು.
ಇಂತಪ್ಪ ಚಿದ್ರಸ ಪಾದೋದಕ ಚಿತ್ಪ್ರಕಾಶ ಪ್ರಸಾದ.
ತನ್ನ ಚಿನ್ಮನಸ್ವರೂಪವಾದ ಹೃದಯಮಂದಿರ ಮಧ್ಯದಲ್ಲಿ ನೆಲಸಿರುವ
ಸಕೀಲಸಂಬಂಧವ ಚಿದ್ಘನ ಗುರುವಿನ ಮುಖದಿಂದ
ಸಂಬಂಧಿಸಿಕೊಳಲರಿಯದೆ, ಅರ್ಥದಾಸೆಗಾಗಿ ಬಡ್ಡಿಯ ತೆಗೆದುಕೊಂಡು,
ಬಡವರ ಬಂಧನಕಿಕ್ಕಿ, ತುಡುಗುವ್ಯಾಪಾರವ ಮಾಡಿ,
ಸದಾಚಾರದಿಂದ ಆಚರಿಸಲರಿಯದೆ,
ತನುಮನಧನದಲ್ಲಿ ವಂಚನೆಯಿಲ್ಲದ ಭಕ್ತಿಯನರಿಯದೆ,
ತೀರ್ಥಪ್ರಸಾದದಲ್ಲಿ ನಂಬುಗೆ ವಿಶ್ವಾಸವಿಲ್ಲದೆ
ಕಂಡವರ ಕೈಯೊಡ್ಡಿ ಇಕ್ಕಿಸಿಕೊಂಡು ವಿಶ್ವಾಸವಿಲ್ಲದವಂಗೆ
ಅಷ್ಟಾವರಣವೆಂತು ಸಿದ್ಧಿಯಹುದೋ?
ಅದೇನು ಕಾರಣವೆಂದಡೆ : ಸಕಲ ವೇದಾಗಮ ಪುರಾಣ ಸಪ್ತಕೋಟಿ ಮಹಾಮಂತ್ರ
ಉಪಮಂತ್ರ ಕೋಟ್ಯಾನುಕೋಟಿಗೆ
ಮಾತೃಸ್ಥಾನವಾದ ಪಂಚಾಕ್ಷರಿಯ ಮಂತ್ರ ಸಟೆಯಾಯಿತ್ತು.
ಅನಂತಕೋಟಿ ಬ್ರಹ್ಮಾಂಡಗಳನೊಳಗೊಂಡಂಥ
ಗುರುಕೊಟ್ಟ ಇಷ್ಟಲಿಂಗ ಸಟೆಯಾಯಿತ್ತು.
ದೇಗುಲದೊಳಗಣ ಕಲ್ಲು ಕಂಚು ಕಟ್ಟಿಗೆ ಬೆಳ್ಳಿ ತಾಮ್ರ
ಬಂಗಾರದ ದೇವರ ಪೂಜಿಸುವ ಪೂಜಾರಿಗಳ ಮಾತು ದಿಟವಾಗಿತ್ತು.
ಆದಿ ಅನಾದಿಯಿಂದತ್ತತ್ತಲಾಗಿ ಮೀರಿ ತೋರುವ ಮಾಯಾಕೋಳಾಹಳ
ನಿರಂಜನಜಂಗಮದ ಪಾದೋದಕ ಪ್ರಸಾದ ಸಟೆಯಾಯಿತ್ತು.
ಕ್ಷೇತ್ರಾದಿಗಳ ತೀರ್ಥಪ್ರಸಾದ ದಿಟವಾಯಿತ್ತು.
ಅಂತಪ್ಪ ಅಗಮ್ಯ ಅಗೋಚರವಾದ ಅಷ್ಟಾವರಣ
ಇಂಥವರಿಗೆಂತು ಸಾಧ್ಯವಹುದು?
ಆಗದೆಂದಾತ ನಮ್ಮ ಶರಣ ಕಲಿದೇವರದೇವ. ೨೭
ಅಯ್ಯಾ, ನಾವು ಪರಮವಿರಕ್ತರು, ಪಟ್ಟದೊಡೆಯರು,
ಅತೀತ ಚರಮೂರ್ತಿಗಳೆಂದು ಶಂಖ ಗಿಳಿಲು ದಂಡಾಗ್ರವ ಪಿಡಿದು,
ಕಾವಿ ಕಾಷಾಯಾಂಬರವ ಹೊದ್ದು, ಮಹಾಘನಲಿಂಗ ಚರಮೂರ್ತಿಗಳೆಂದು
ಚೆನ್ನಾಗಿ ನುಡಿದುಕೊಂಬ ತೊನ್ನ ಹೊಲೆ ಮಾದಿಗರ ಪ್ರಸಂಗಕ್ಕೆ ಮನವೆಳಸದೆ,
ಮುಖವೆತ್ತಿ ನೋಡದೆ, ಶಬ್ದಮುಗ್ಧನಾಗಿ ಸುಮ್ಮನೆ ಕುಳಿತಿರ್ದನು ಕಾಣಾ
ನಿಮ್ಮ ಶರಣ. ಅದೇನು ಕಾರಣವೆಂದಡೆ: ತನ್ನ ತಾನಾರೆಂದರಿಯದೆ, ತನ್ನ ಇಷ್ಟ ಮಹಾಘನಲಿಂಗದ ಗೊತ್ತ ಮುಟ್ಟದೆ,
ತನುಮನಧನವೆಂಬ ತ್ರಿವಿಧಪ್ರಸಾದವನರ್ಪಿಸಿ,
ತ್ರಿವಿಧ ಪ್ರಸಾದವ ಗರ್ಭಿಕರಿಸಿಕೊಂಡ ಪ್ರಸನ್ನ ಪ್ರಸಾದವ ಸ್ವೀಕರಿಸಿ,
ಪರತತ್ವ ಪ್ರಸಾದಮೂರ್ತಿ ತಾನಾಗಲರಿಯದೆ,
ಉಚ್ಚಂಗಿ ದುಗರ್ಿಗೆ ಬಿಟ್ಟ ಪೋತರಾಜನಂತೆ
ಮಾರು ಮಾರು ಜಡೆ ಮುಡಿ ಗಡ್ಡಗಳ ಬಿಟ್ಟುಕೊಂಡು,
ಡೊಂಬ ಜಾತಿಕಾರರಂತೆ ವೇಷವ ತೊಟ್ಟು,
ಸಂಸ್ಕೃತಾದಿ ಪ್ರಕೃತಾಂತ್ಯಮಾದ ನಾನಾ ಶಾಸ್ತ್ರವ ಹೇಳಿ,
ಸುಡುಗಾಡಸಿದ್ಧಯ್ಯಗಳಂತೆ ಕುಟಿಲ ಕುಹಕ ಯಂತ್ರ ತಂತ್ರಗಳ ಕಟ್ಟುತ,
ಪುರಜನರ ಮೆಚ್ಚಿಸಬೇಕೆಂದು
ಅಯ್ಯಾ, ನಾವು ಕೆರೆ ಬಾವಿ ಮಠಮಾನ್ಯ ಮದುವೆ ಮಾಂಗಲ್ಯ
ದೀಕ್ಷಾಪಟ್ಟ ಪ್ರಯೋಜನ ಔತಣ ಅನ್ಯಕ್ಷೇತ್ರ ಅರವಟ್ಟಿಗೆ
ದಾಸೋಹ ಪುರಾಣ ಪುಸ್ತಕ ಮಾಡಿಸಬೇಕೆಂದು
ಗುರುಲಿಂಗಜಂಗಮಕ್ಕಲ್ಲದೆ ನಿರಾಭಾರಿ ವೀರಶೈವಕ್ಕೆ ಹೊರಗಾಗಿ,
ನಾನಾ ದೇಶವ ತಿರುಗಿ, ಹುಸಿಯ ಬೊಗಳಿ,
ವ್ಯಾಪಾರದ ಮರೆಯಿಂದ ನಡುವೂರ ಬೀದಿ ನಡುವೆ ಕುಳಿತು,
ಪರರೊಡವೆಯ ಅಪಹರಿಸುವ ಸೆಟ್ಟಿ ಮುಂತಾದ
ಸಮಸ್ತ ಕಳ್ಳರ ಮಕ್ಕಳ ಕಾಡಿ ಬೇಡಿ,
ಅವರು ಕೊಟ್ಟರೆ ಹೊಗಳಿ, ಕೊಡದಿರ್ದಡೆ ಬೊಗಳಿ,
ಆ ಭ್ರಷ್ಟ ಹೊಲೆ ಮಾದಿಗರು ಕೊಟ್ಟ ದ್ರವ್ಯಂಗಳ ಕೊಂಡುಬಂದು
ಚೋರರೊಯ್ವರೆಂದು ಮಠದೊಳಗೆ ಮಡಗಿಕೊಂಡಂಥ
ದುರ್ಗುಣ ದುರಾಚಾರಿಗಳ ಶ್ರೀಗುರು ಲಿಂಗ ಜಂಗಮವೆಂದು
ಕರೆತಂದು, ತೀರ್ಥ ಪ್ರಸಾದವ ತೆಗೆದುಕೊಂಬವರಿಗೆ
ಇಪ್ಪತ್ತೆಂಟುಕೋಟಿಯುಗ ಪರಿಯಂತರದಲ್ಲಿ
ನರಕ ಕೊಂಡದಲ್ಲಿಕ್ಕುವ ಕಾಣಾ, ನಿಮ್ಮ ಶರಣ ಕಲಿದೇವರದೇವ. ೨೮
ಅಯ್ಯಾ, ನಿತ್ಯನಿಃಕಳಂಕ ಸತ್ಯಸದಾಚಾರ ಭಕ್ತಜಂಗಮದ
ಆಚರಣೆಸಂಬಂಧವ ಒಳಗು ಹೊರಗು ಎನ್ನದೆ,
ಸಾಕಾರ ನಿರಾಕಾರವಾದ ಒಂದೆ ವಸ್ತುವೆಂದು ತಿಳಿದು,
ಚಿದಂಗಕ್ಕೆ ಇಷ್ಟಲಿಂಗ ಚಿದ್ವಿಭೂತಿ ಚಿದ್ರುದ್ರಾಕ್ಷಿ ಸದ್ಭಕ್ತಿಯ ಸಂಬಂಧಿಸಿ,
ಚಿತ್ಪ್ರಾಣಕ್ಕೆ ಪಾದೋದಕ ಪ್ರಸಾದ ಶಿವಮಂತ್ರ ಸಮ್ಯಜ್ಞಾನವ ಸಂಬಂಧಿಸಿ,
ಭಕ್ತ ಧವಳಾಂಬರಧಾರಕನಾಗಿ, ಜಂಗಮ ಶಿವಲಾಂಛನಧಾರಕನಾಗಿ,
ಪರದೈವ ಪರಪಾಕ ಪರಶಾಸ್ತ್ರ ಪರಬೋಧೆ ಪರದ್ರವ್ಯ ಪರಸ್ತ್ರೀ ಪರಜಪ
ಪರನಿಂದೆ ಅತಿಯಾಸೆ ಕಾಂಕ್ಷೆ ಮಲತ್ರಯದಲ್ಲಿ ಮೋಹಿಸದೆ,
ಮಥನದಲ್ಲಿ ಕೂಡದೆ ಭವಿಮಾರ್ಗ ಸಂಗವ ಬಳಸಿದ
ಶಿಷ್ಯ ಪುತ್ರ ಸ್ತ್ರೀ ಬಂಧು ಬಳಗ ಒಡಹುಟ್ಟಿದವರು
ಪಿತ ಮಾತೆ ಗುರುವೆಂದು ಒಡಗೂಡಿ ಬಳಸಿದಡೆ
ಭಕ್ತಜಂಗಮಸ್ಥಲಕ್ಕೆ ಸಲ್ಲ ಕಾಣಾ, ಕಲಿದೇವರದೇವ. ೨೯
ಅಯ್ಯಾ, ನಿಮ್ಮ ಧ್ಯಾನದಲ್ಲಿರಿಸಲೊಲ್ಲದೆ
ಬಸವಣ್ಣನ ಧ್ಯಾನದಲ್ಲಿರಿಸಯ್ಯಾ ಎನ್ನನು.
ಲಿಂಗವೇದ್ಯ ಬಸವಣ್ಣ, ಜಂಗಮವೇದ್ಯ ಬಸವಣ್ಣ.
ಪ್ರಸಾದವೇದ್ಯ ಬಸವಣ್ಣ, ನಿಜಪದವೇದ್ಯ ಬಸವಣ್ಣ.
ಮಹಾವೇದ್ಯ ಬಸವಣ್ಣ.
ಇಂತು ಬಸವಣ್ಣನ ಸಂಗದಲ್ಲಿರಿಸು, ಕಲಿದೇವರದೇವ. ೩೦
ಅಯ್ಯಾ, ನಿಮ್ಮ ಪ್ರಸಾದದ ಮಹಿಮೆಯನೇನೆಂಬೆನೆಯ್ಯಾ.
ವೇದಂಗಳರಿಯವು, ಶಾಸ್ತ್ರಂಗಳರಿಯವು.
ಒಲವ ಸಾಧಿಸಿ , ತನುವ ದಂಡನೆಯ ಮಾಡಿ,
ಸಕಲಭೋಗಂಗಳ ಬಿಟ್ಟು, ದುಃಖವನನುಭವಿಸಿ,
ತಪ್ಪಿಲ್ಲದೆ ನಡೆದಡೆ ಹಡೆವರಯ್ಯಾ
ಒಚ್ಚೊಚ್ಚಿ ಸ್ವರ್ಗದ ಭೋಗವನು.
ಒಂದುವನು ಬಿಡಲಿಲ್ಲ, ಸಂದೇಹ ಮಾತ್ರವಿಲ್ಲ.
ಆಗ ಬಿತ್ತಿ ಆಗ ಬೆಳೆಯುವಂತೆ,
ರೋಗಿ ಬಯಸಿದ ವೈದ್ಯವ ಕುಡುವಂತೆ,
ಪಾಪದಂತವಾದುದು, ಪುಣ್ಯವನೆ ಮಾಡುವದು.
ಆತ ಉಂಡು ಉಪವಾಸಿ, ಬಳಸಿ ಬ್ರಹ್ಮಚಾರಿಯೆನಿಸುವ.
ಹಿಡಿತಡೆಯಿಲ್ಲ, ಪ್ರಸಾದದಿಂದತಃಪರವಿಲ್ಲ.
ಪ್ರಸಾದಿಯಿಂದೆ ಮುಕ್ತರಿಲ್ಲ.
ಇಂತಪ್ಪ ಪ್ರಸಾದವನು ನಿಮ್ಮ ಶರಣ ಬಸವಣ್ಣ ತೋರಿದನಾಗಿ,
ಎನ್ನ ಭವಂ ನಾಸ್ತಿಯಾಯಿತ್ತು ಕಾಣಾ, ಕಲಿದೇವರದೇವ. ೩೧
ಅಯ್ಯಾ, ಭಕ್ತ ಜಂಗಮದ ವಿವರವೆಂತೆಂದಡೆಃ
ಭಕ್ತನ ಅಂಗ ಮನ ಪ್ರಾಣಂಗಳೆಲ್ಲ ಭಸ್ಮಫುಟಿಕೆಗಳಂತೆ.
ಜಂಗಮದ ಅಂಗ ಮನ ಪ್ರಾಣಂಗಳೆಲ್ಲ ರುದ್ರಾಕ್ಷಿಮಣಿಯಂತೆ.
ಭಕ್ತನ ಅಂಗತ್ರಯಂಗಳು ಪಂಚಲೋಹಗಳಂತೆ.
ಜಂಗಮದ ಅಂಗತ್ರಯಂಗಳು ಮೃತ್ತಿಕೆ ಭಾಂಡದಂತೆ.
ಭಕ್ತನ ಅಂಗತ್ರಯಂಗಳು ಬಂಗಾರದಂತೆ.
ಭಕ್ತನ ಅಂಗತ್ರಯಂಗಳು ಮೌಕ್ತಿಕದಂತೆ.
ಭಕ್ತನ ಅಂಗತ್ರಯಂಗಳಲ್ಲಿ ನಡೆನುಡಿ ತಪ್ಪಿದಡೆ ಪ್ರಾಯಶ್ಚಿತ್ತವುಂಟು.
ಜಂಗಮದ ಅಂಗತ್ರಯಂಗಳಲ್ಲಿ ನಡೆನುಡಿ ತಪ್ಪಿದಡೆ.
ಪ್ರಾಣವೇ ಪ್ರಾಯಶ್ಚಿತ್ತವಲ್ಲದೆ ಪೂರ್ವಾಚಾರಕ್ಕೆ ಯೋಗ್ಯವಲ್ಲ ಕಾಣಾ.
ಮಹಾಘನ ಭಕ್ತಜಂಗಮದ ಸತ್ಯ ನಡೆನುಡಿಯ ವಿಚಾರವೆಂತೆಂದಡೆ: ಗುರುಲಿಂಗಜಂಗಮವಲ್ಲದೆ ಅನ್ಯಾರ್ಚನೆ,
ಪಾದೋದಕ ಪ್ರಸಾದವಲ್ಲದೆ ಭಂಗಿ ಮದ್ದು ತಂಬಾಕು
ನಾನಾ ಗಿಡಮೂಲಿಕೆ ವೈದ್ಯ ಫಲಾಹಾರ ಕ್ಷೀರಾಹಾರ,
ಸ್ವಸ್ತ್ರೀಯಲ್ಲದೆ ಪರಸ್ತ್ರೀ ಗಮನ,
ಸತ್ಯಕಾಯಕ ಭಿಕ್ಷಾಹಾರವಲ್ಲದೆ ಚೋರತನ ಕುಟಿಲ ಮಂತ್ರಗಾರಿಕೆ
ವೈದ್ಯ ಋಣಭಾರವಿಂತಿವನು ಹಿಡಿದಾಚರಿಸುವಾತನು
ಸತ್ಯಸಹಜಜಂಗಮವಲ್ಲ ಕಾಣಾ, ಕಲಿದೇವರದೇವ. ೩೨
ಅಯ್ಯಾ, ಭಕ್ತಜಂಗಮವೆಂದು ಒಪ್ಪಕ್ಕೆ ನುಡಿಯಬಹುದಲ್ಲದೆ
ಭಕ್ತಜಂಗಮವಾಗಿ ನಿಂದ ನಿಲುಕಡೆಯ ಹೇಳಿರಣ್ಣ.
ಅದೆಂತೆಂದಡೆ: ಸದ್ಗುರುಮುಖದಿಂದ ವೇಧಾಮಂತ್ರಕ್ರಿಯಾದೀಕ್ಷೆಯ ತಿಳಿದು,
ಪಂಚಾಚಾರವೆ ಪ್ರಾಣವಾಗಿ, ಅಷ್ಟಾವರಣವೆ ಅಂಗವಾಗಿ,
ಸದ್ಭಕ್ತಿಯೆ ಮುಕ್ತಿಮಂದಿರವಾಗಿ, ಸತ್ಕ್ರಿಯಾ ಸಮ್ಯಕ್ಜ್ಞಾನವೆ ಸಂಜೀವನವಾಗಿ,
ಕೊಡುವಲ್ಲಿ ಕೊಂಬಲ್ಲಿ ನಡೆನುಡಿ ಬೀಸರವೋಗದೆ,
ಬಹಿರಂಗದಲ್ಲಿ ಆಚರಣೆ, ಅಂತರಂಗದಲ್ಲಿ ಸಂಬಂಧವ
ಸದ್ಗುರು ಲಿಂಗಜಂಗಮ ಕರುಣಕಟಾಕ್ಷೆಯಿಂ ತಿಳಿದು, ಸನ್ಮಾರ್ಗವಿಡಿದು
ಸತ್ಯನಡೆನುಡಿಯಿಂದಾಚರಿಸುವ ಶರಣಗಣಂಗಳೆ
ಅನಾದಿ ಭಕ್ತಜಂಗಮ ಕಾಣಾ,
ಕಲಿದೇವರದೇವ ಸಾಕ್ಷಿಯಾಗಿ ಸಂಗನಬಸವೇಶ್ವರಾ ೩೩
ಅಯ್ಯಾ, ಮಾತೆ ಪಿತರಾಗಲಿ, ಸಹೋದರ ಬಂಧುಗಳಾಗಲಿ,
ಅತ್ಯಂತ ಸ್ನೇಹದಲ್ಲಿ ಕೂಡಿದವರಾಗಲಿ,
ಗುರುಕಾರುಣ್ಯವ ಪಡೆದು ಶಿವಸೋದರರಾಗಲಿ,
ಶಿವಾಚಾರ ಶಿವಕಾರ್ಯಕ್ಕೆ ಸಹಕಾರಿಗಳಲ್ಲದೆ ವಕ್ರವಾದವನು
ಮಾತಿನಲ್ಲಿ ನಿರಾಕರಿಸಿ ನುಡಿಯದೆ,
ಮನದಲ್ಲಿ ಪತಿಕರಿಸಿ ಕೂಡಿಸಿಕೊಂಡು ನಡೆದೆನಾದಡೆ,
ಅಫೋರನರಕದಲ್ಲಿಕ್ಕು ಕಲಿದೇವಯ್ಯಾ. ೩೪
ಅಯ್ಯಾ, ಸತ್ಯಸದಾಚಾರ ಸದ್ಭಕ್ತನಾದಡೆ ಷೋಡಶಭಕ್ತಿಯ ತಿಳಿಯಬೇಕು.
ವೀರಮಾಹೇಶ್ವರನಾದಡೆ ಷೋಡಶಜ್ಞಾನವ ತಿಳಿಯಬೇಕು.
ಪರಮವಿರಕ್ತನಾದಡೆ ಷೋಡಶಾವರಣವ ತಿಳಿಯಬೇಕು.
ಶರಣನಾದಡೆ ಅಷ್ಟಾವಧಾನವ ತಿಳಿಯಬೇಕು.
ಐಕ್ಯನಾದಡೆ ತನ್ನಾದಿಮದ್ಯಾವಸಾನವ ತಿಳಿಯಬೇಕು.
ಲಿಂಗಾನುಭಾವಿಯಾದಡೆ ಸರ್ವಾಚಾರಸಂಪತ್ತಿನಾಚರಣೆಯ ತಿಳಿಯಬೇಕು.
ಈ ವಿಚಾರವನರಿಯದೆ ಬರಿದೆ ಷಟ್ಸ್ಥಲವ ಬೊಗಳುವ
ಕುನ್ನಿಗಳನೇನೆಂಬೆನಯ್ಯಾ, ಕಲಿದೇವರದೇವ. ೩೫
ಅಯ್ಯಾ, ಸದಾಚಾರವೆಂದಡೆ ಗುರುಲಿಂಗಜಂಗಮದಾರ್ಚನೆ,
ಪಾದೋದಕ ಪ್ರಸಾದ ಸೇವನೆ, ಪಂಚಾಕ್ಷರ ಷಡಕ್ಷರ ಸ್ತೋತ್ರ,
ಚಿದ್ಘನ ಮಹಾಲಿಂಗಧ್ಯಾನ, ಪರದ್ರವ್ಯ ನಿರಸನ.
ಇಂತಿದು ನಿತ್ಯವೆಂದು ಸದ್ಗುರು ಮುಖದಿಂ ತಿಳಿದು,
ಭಿನ್ನವಿಲ್ಲದೆ ಆಚರಿಸುವದೆ ಆಚಾರವಲ್ಲದೆ
ಶುದ್ಧಶೈವರ ಹಾಂಗೆ ನಂದಿ ವೀರಭದ್ರ ಹಾವುಗೆ
ಗದ್ದುಗೆ ಕಂಥೆ ಕಮಂಡಲು ಲಿಂಗಂಗಳೆಂದು
ಇದಿರಿಟ್ಟು ಪೂಜಿಸುವವನ ಮನೆಯ ಪಾಕ,
ಮದ್ಯ ಮಾಂಸ ಕಾಣಾ ಕಲಿದೇವರದೇವ. ೩೬
ಅರಸಿನ ಭಕ್ತಿ, ಅಹಂಕಾರದಲ್ಲಿ ಹೋಯಿತ್ತು.
ವೇಶಿಯ ಭಕ್ತಿ, ಎಂಜಲ ತಿಂದಲ್ಲಿ ಹೋಯಿತ್ತು.
ಬ್ರಾಹ್ಮಣನ ಭಕ್ತಿ, ಮುಟ್ಟುತಟ್ಟಿನಲ್ಲಿ ಹೋಯಿತ್ತು.
ಶೀಲವಂತನ ಭಕ್ತಿ, ಪ್ರಪಂಚಿನಲ್ಲಿ ಹೋಯಿತ್ತು.
ಸೆಟ್ಟಿಯ ಭಕ್ತಿ, ಕುಟಿಲವ್ಯಾಪಾರದಲ್ಲಿ ಹೋಯಿತ್ತು.
ಇಂತಿವರ ಭಕ್ತಿಗೆ ಊರಿಂದ ಹೊರಗಣ ಡೊಂಬನೆ ಸಾಕ್ಷಿ
ಕಲಿದೇವರದೇವಾ. ೩೭
ಅರಿದಲ್ಲದೆ ಗುರುವ ಕಾಣಬಾರದು.
ಅರಿದಲ್ಲದೆ ಲಿಂಗವ ಕಾಣಬಾರದು.
ಅರಿದಲ್ಲದೆ ಜಂಗಮವ ಕಾಣಬಾರದು.
ಇಂತೀ ತ್ರಿವಿಧವು, ಬಸವಣ್ಣನ ಕೃಪೆಯಿಂದ
ಎನಗೆ ಸ್ವಾಯತವಾಯಿತ್ತಾಗಿ,
ಭಿನ್ನವಿಲ್ಲ ಕಾಣಾ ಕಲಿದೇವರದೇವ. ೩೮
ಅರಿವನರಿದೆನೆಂದು ಕ್ರೀಯ ಬಿಡಬಾರದು.
ಮಧುರಕ್ಕೆ ಮಧುರ ಒದಗಲಾಗಿ ಸವಿಗೆ ಕೊರತೆಯುಂಟೆ ?
ದ್ರವ್ಯಕ್ಕೆ ದ್ರವ್ಯ ಕೂಡಲಾಗಿ ಬಡತನಕಡಹುಂಟೆ ?
ನೀ ಮಾಡುವ ಮಾಟ, ಶಿವಪೂಜೆಯ ನೋಟ ಭಾವವಿರಬೇಕು.
ಅದು ಕಲಿದೇವರದೇವಯ್ಯನ ಕೂಟ, ಚಂದಯ್ಯ. ೩೯
ಅರಿವನಾರಡಿಗೊಂಡಿತ್ತು ಮರಹು.
ಮರಹನಾರಡಿಗೊಂಡಿತ್ತು ಮಾಯೆ.
ಮಾಯೆಯನಾರಡಿಗೊಂಡಿತ್ತು ಕರ್ಮ.
ಕರ್ಮವನಾರಡಿಗೊಂಡಿತ್ತು ತನು.
ತನುವನಾರಡಿಗೊಂಡಿತ್ತು ಸಂಸಾರ.
ಮರಹು ಬಂದಹುದೆಂದರಿದು
ಅರಿವ ಬೆಲೆ ಮಾಡಿ, ಅರಿವ ಕೊಟ್ಟು
ಗುರುವಿನ ಕೈಯಲ್ಲಿ ಲಿಂಗವ ಕೊಂಡೆ ನೋಡಯ್ಯ.
ಎನ್ನರಿವನಾಯತದಲ್ಲಿ ನಿಲಿಸಿ,
ನಿಜ ಸ್ವಾಯತವ ಮಾಡಿದನು
ಕಲಿದೇವರದೇವಾ, ನಿಮ್ಮ ಶರಣ ಬಸವಣ್ಣ. ೪೦
ಅರಿವಿನಾಪ್ಯಾಯನವೆ ಅಪೂರ್ವ ಕಂಡಯ್ಯಾ.
ಪೂರ್ವಜ್ಞಾನವೆಂಬುದೆ ವೇದ, ಶಾಸ್ತ್ರ ಆಗಮಂಗಳೆಂಬುವು
ಪೂರ್ಣ ಪ್ರಮಾಣ ಇವಲ್ಲ ಕಂಡಯ್ಯಾ.
ಇಂತೀ ಪ್ರಮಾಣವನರಿಯದೆ ನಿಂದ
ನಿಮ್ಮ ಶರಣರ ತೋರಾ, ಕಲಿದೇವಯ್ಯಾ. ೪೧
ಅರುಹಿನೊಳಗಣ ಕುರುಹು ಮರಹಿಂಗೆ ಬೀಜ.
ಕುರುಹಿನ ಮರಹನರಿವು ನುಂಗಿ,
ಘನಕ್ಕೆ ಘನವೇದ್ಯವಾದ ಬಳಿಕ, ನಿತ್ಯಪರಿಪೂರ್ಣ ತಾನೆ.
ಕಲಿದೇವರದೇವ ವಾಙ್ಮನಕ್ಕಗೋಚರನು. ೪೨
ಅಲೀಯವಾಗಿ ಬಂದ ಪರಿಯ,
ಅಕಾರ ಉಕಾರ ಮಕಾರಂಗಳು ಸೋಂಕದಿರ್ದ ಪರಿಯ,
ನಿರ್ಲೆಪಸ್ಥಲವಾಧಾರವಾದ ಪರಿಯ,
ನಿಮ್ಮ ಶರಣ ಬಸವಣ್ಣ ಬಲ್ಲನು.
ಬೆಸಗೊಳ್ಳಾ, ಕಲಿದೇವರದೇವ. ೪೩
ಅಷ್ಟತನುವಿನ ನಿಷ್ಠಾಪರವ ಬಿಟ್ಟು,
ಬಟ್ಟಬಯಲಲಿ ನಿಂದ ನಿಜವ ನೋಡಾ.
ಹತ್ತೆಂಬ ಪ್ರಾಣವ ಸುತ್ತಿ ಸುಳಿಯಲೀಸದೆ
ಬತ್ತಿ ಸುಟ್ಟು ಸಯವಾದ ಘನಚೈತನ್ಯವ ನೋಡಾ.
ನಿಷ್ಠೆ ನಿಬ್ಬರ ತೊಟ್ಟುಬಿಟ್ಟು ಸಚ್ಚಿದಾನಂದವಾದ ಪರಿಯ ನೋಡಾ.
ಕಲಿದೇವರದೇವನ ನಿಲುವಿಂಗೆ ನಮೋ ನಮೋ ಎನುತಿರ್ದೆನು. ೪೪
ಅಷ್ಟತನುವಿನಲ್ಲಿ ಹುಟ್ಟಿದ ನಿಷ್ಠಪರದಲ್ಲಿ, ಮುಟ್ಟುವ ಭರದಲ್ಲಿ,
ವಿದ್ಯೆಯೊಳಗಣ, ಧಾರಾಮಂಟಪದೊಳಗಣ ಸಹಜವನರಿದಂಗಲ್ಲದೆ
ಲಿಂಗವೆನಬಾರದು, ಜಂಗಮವೆನಬಾರದು, ಪ್ರಸಾದವೆನಬಾರದು.
ಧಾರಾಮಂಟಪದೊಳಗಣ ಸಹಜವನರಿಯದೆ
ಕರಣಂಗಳಿಗೆ ಗುರಿಯಾದರು, ಕರಣಲಿಂಗಾರ್ಚಕರಾದರು.
ಕರಣ ತಪ್ಪದೆಂತೊ ?
ಇದೆಲ್ಲವನತಿಗಳೆದು ನಿಜಲಿಂಗಾರ್ಚನೆಯ ತೋರಿ,
ನಿಜೈಕ್ಯದೊಳಗಿರಿಸಿ ಬದುಕಿದಾತ ಬಸವಣ್ಣ ಕಾಣಾ
ಕಲಿದೇವಯ್ಯ. ೪೫
ಅಷ್ಟಮದ ಸಪ್ತವ್ಯಸನ ಷಡುವರ್ಗಂಗಳ ಒತ್ತಿ ನಿಲಿಸಿ,
ಎಲ್ಲಕ್ಕೆ ಶಿವನೊಬ್ಬನೆ, ಶಿವಜ್ಞಾನವೆಂದರಿಯದ ವಿಪ್ರರು,
ಆನೆ ಅಶ್ವ ಹೋತ ಕೋಣ ಬಿಂಜಣದಿಂದ ಕಡಿದು,
ಬೆಂಕಿಯ ಮೇಲೆ ಹಾಕಿ, ತಾನು ಪರಬ್ರಹ್ಮನಾದೆನೆಂದು
ನರಕಕ್ಕೆ ಹೋದರೊಂದುಕೋಟ್ಯಾನುಕೋಟಿ ಬ್ರಹ್ಮರು.
ವೇದದ ಅರ್ಥವನರಿಯದೆ ಜೀವನ ಬಾಧೆಯಂ ಮಾಡುವ
ವಧಾಸ್ವಕರ್ಮಕ್ಕೆ ಒಳಗಾದರು, ದ್ವಿಜರಂದು.
ಆದಿಯ ಪ್ರಮಥರು ಕಂಡುದೆಂತೆಂದಡೆ: ಆನೆಯೆಂಬುದು ಮದ, ಮತ್ಸರವೆಂಬುದು ಅಶ್ವ,
ಕೋಣನೆಂಬುದು ಕ್ರೋಧ, ಅಂಗವಿಕಾರವೆಂಬುದು ಹೋತ.
ಇಂತು ನಾಲ್ಕು ವರ್ಗಂಗಳು.
ಶಿವಜ್ಞಾನವೆಂಬ ಅಗ್ನಿಯಲ್ಲಿ ದಹನ ಮಾಡುವರು ನಮ್ಮವರು.
ಇಂತೀ ವಿವರವಿಲ್ಲದೆ ತಾವು ಪರಬ್ರಹ್ಮರೆನಿಸಿಕೊಂಬ,
ಜೀವಹಿಂಸೆಯ ಮಾಡುವ ವಿಪ್ರರ ಮುಖವ ನೋಡಲಾಗದೆಂದ
ಕಲಿದೇವರದೇವ. ೪೬
ಅಷ್ಟಾವರಣ ಪಂಚಾಚಾರವುಳ್ಳ ಸದ್ಭಕ್ತರ ಉದರದಲ್ಲಿ ಜನಿಸಿ,
ಶಿವಭಕ್ತನಾಗಿದ್ದು, ಭವಿಯ ಸಂಗವ ಮಾಡಿದ ದೇಹ ಪಾಪ.
ಆ ಭವಿಯ ಸಂಗಕಿಂದಲೂ ಸುರಾಪಾನಿಯ ಸಂಗ ಪಾಪ.
ಆ ಸುರಾಪಾನಿಯ ಸಂಗಕಿಂದಲೂ ಮಾಂಸಾಹಾರಿಯ ಸಂಗ ಪಾಪ.
ಆ ಮಾಂಸಾಹಾರಿಯ ಸಂಗಕಿಂದಲೂ ಭಂಗಿಭಕ್ಷಕನ ಸಂಗ ಪಾಪ.
ಆ ಭಂಗಿಭಕ್ಷಕನ ಸಂಗಕಿಂದಲೂ ಶಿವಭಕ್ತನಾಗಿ
ಅನ್ಯದೈವವ ಭಜಿಸುವವನ ಸಂಗ ಅಂದೇ ದೂರ,
ಹಿರಿಯ ನರಕವೆಂದಾತ, ನಮ್ಮ ದಿಟ್ಟ ವೀರಾಧಿವೀರ ಕಲಿದೇವರದೇವ. ೪೭
ಅಸಮ ಶಿವಲಿಂಗ ಕೈವಶವಾಗಿರಲು,
ವಸುಧೆಯ ಮೇಲಣ ಪ್ರತಿಷ್ಠೆಗೆ ಶರಣೆಂದಡೆ,
ಬಸವಣ್ಣಪ್ರಿಯ ಲಿಂಗದ ಚೇತನವದಂದೆ ತೊಲಗುವದೆಂದ,
ಕಲಿದೇವಯ್ಯ. ೪೮
ಅಹುದಹುದು ಇಂತಿರಬೇಡವೆ ನಿರಹಂಕಾರ.
ಮಹಾಜ್ಞಾನಕ್ಕೆ ನಿರಹಂಕಾರವೆ ಶೃಂಗಾರ.
ನಿರಹಂಕಾರಕ್ಕೆ ಭಕ್ತಿಯೆ ಶೃಂಗಾರ.
ಭಕ್ತಿಗೆ ಬಸವಣ್ಣನೆ ಶೃಂಗಾರ.
ಬಸವಣ್ಣಂಗೆ ಚೆನ್ನಬಸವಣ್ಣನೆ ಶೃಂಗಾರ.
ಕಲಿದೇವರದೇವಾ,
ಎನಗೆಯೂ ನಿನಗೆಯೂ ಚೆನ್ನಬಸವಣ್ಣನೆ ಶೃಂಗಾರ. ೪೯
ಆ ಜಾತಿ ಈ ಜಾತಿಯವರೆನಬೇಡ.
ಹದಿನೆಂಟುಜಾತಿಯೊಳಗಾವ ಜಾತಿಯಾದಡೂ ಆಗಲಿ,
ಗುರು ಕಾರುಣ್ಯವ ಪಡೆದು, ಅಂಗದ ಮೇಲೆ ಲಿಂಗವ ಧರಿಸಿ,
ಪುನರ್ಜಾತರಾದ ಬಳಿಕ, ಭಕ್ತರಾಗಲಿ ಜಂಗಮವಾಗಲಿ,
ಗುರುವಿನ ವೇಷವಿದ್ದವರ ಗುರುವೆಂದು ನಂಬಿ,
ದಾಸೋಹವ ಮಾಡುವುದೆ ಸದಾಚಾರ.
ಗುರುವನತಿಗಳೆದು, ಗುರುವಾಜ್ಞೆಯ ಮೀರಿ,
ಗುರು ಕೊಟ್ಟ ಪಂಚಮುದ್ರೆಗಳ ಮೇಲೆ
ಅನ್ಯಸಮಯ ಮುದ್ರೆಯ ಲಾಂಛನಾಂಕಿತರಾಗಿ,
ಗುರುದ್ರೋಹಿಗಳಾಗಿ ಬಂದವರ
ಜಂಗಮವೆಂದು ಕಂಡು, ನಮಸ್ಕರಿಸಿ ಆರಾಧಿಸಿ,
ಪ್ರಸಾದವ ಕೊಂಡವಂಗೆ ನಾಯಕನರಕ ತಪ್ಪದೆಂದ
ಕಲಿದೇವಯ್ಯ. ೫೦
ಆ ಮಹಾಲಿಂಗವಂತನೊಬ್ಬನುಂಡನೆನಬೇಡ.
ಆತನ ದಂತಂಗಳೆಲ್ಲ ಪಂತಿಕಾರರು.
ಆತನ ನಡುವಿಪ್ಪ ಕಾಂತಿರೂಪ ನೀನು ಕಾಣಾ, ಕಲಿದೇವಯ್ಯ ೫೧
ಆಕಾರ ನಿರಾಕಾರವಾಯಿತ್ತಲ್ಲಾ ಬಸವಣ್ಣ.
ಪ್ರಾಣ ನಿಃಪ್ರಾಣವಾಯಿತ್ತಲ್ಲಾ ಬಸವಣ್ಣ.
ಅಂಗಜಂಗಮದ ಮಾಟ ಸಮಾಪ್ತಿಯಾಯಿತ್ತಲ್ಲಾ ಬಸವಣ್ಣ.
ನಿಃಶಬ್ದವೇದ್ಯವಾದೆಯಲ್ಲಾ ಬಸವಣ್ಣ.
ಕಲಿದೇವರದೇವನ ಹೃದಯಕಮಲವ ಹೊಕ್ಕು,
ದೇವರಿಗೆ ದೇವನಾಗಿ ಹೋದೆಯಲ್ಲಾ ಸಂಗನಬಸವಣ್ಣ. ೫೨
ಆಕಾರ ನಿರಾಕಾರವೆಂಬುದೊಂದಾದ ಭಕ್ತನನು
ಆಕಾರವೆನಲುಬಾರದು, ನಿರಾಕಾರವೆನಲುಬಾರದು.
ಸೂಕ್ಷ್ಮ ನಿಜಪದ ಏಕವಾದ ಭಕ್ತನು,
ಘನಸಂಗಸಾರಾಯ ಜಂಗಮಸಂಗಸಾರಾಯ ಪ್ರಸಾದಸಂಗಸಾರಾಯ
ಜ್ಞಾನಸಂಗಸಾರಾಯ ಅನುಭವಸಂಘಸಾರಾಯ.
ಅಂತಪ್ಪ ಭಕ್ತ ತಾನಾದ ಕಲಿದೇವಯ್ಯ. ೫೩
ಆಕಾರ ನಿರಾಕಾರವೆನುತ್ತಿಹರೆಲ್ಲರು.
ಆಕಾರವೆನ್ನ, ನಿರಾಕಾರವೆನ್ನ.
ಲಿಂಗಜಂಗಮಪ್ರಸಾದದಲ್ಲಿ ತದ್ಗತನಾದ
ನಿಮ್ಮ ಬಸವಣ್ಣನಿಂತಹ ಸ್ವತಂತ್ರನಯ್ಯಾ,
ಕಲಿದೇವರದೇವ.
ಆಗಮದ ಹೊಲಬನರಿಯದ ಕುನ್ನಿಗಳು
ಶ್ರೀಗುರುಲಿಂಗಜಂಗಮದ ನೆಲೆಯನರಿಯದೆ ಹೋಗಿ,
ಬಾಗಿಲ ದಾಟುವ ಮರನ ದೇವರೆಂದು ಪೂಜಿಸಿ,
ಬರುತ್ತ ಹೋಗುತ್ತ ಮರನ ಒದ್ದು ಹರಿಸಿಕೊಂಬರು.
ಎಂಬತ್ತುನಾಲ್ಕುಲಕ್ಷ ಜೀವರಾಶಿಗೆ ಕಾಗೆ ಕನಿಷ್ಠ.
ಆ ಕಾಗೆಯ ಬಾಯಲು ಮಾತಾಪಿತರುಂಡರೆಂದು ಓಗರವನಿಕ್ಕಿ,
ಬಳಿಕ ಉಂಬವರ ಪಙ್ತಿಯಲ್ಲಿ
ಶ್ರೀಗುರು ಕಾರುಣ್ಯವ ಪಡೆದ ಭಕ್ತನು,
ಅಲ್ಲಿ ಹೋಗಿ ಲಿಂಗಾರ್ಪಣವ ಮಾಡಿದಡೆ
ಅವನು ಕಾಗೆಗಿಂದ ಕರಕಷ್ಟವೆಂದ, ಕಲಿದೇವರದೇವಯ್ಯ. ೫೫
ಆಚಾರಲಿಂಗ ಗುರುಲಿಂಗ ಶಿವಲಿಂಗ ಜಂಗಮಲಿಂಗ
ಪ್ರಸಾದಲಿಂಗ ಮಹಾಲಿಂಗ ಇಷ್ಟಪ್ರಾಣಭಾವವೆಂಬ ಲಿಂಗಗಳು ತಾವೆ,
ಆ ಬಸವಣ್ಣನಿಂದಾದ ಕಾರಣ, ಕಲಿದೇವರಲ್ಲಿ ಅಹೋರಾತ್ರಿಯೊಳೆದ್ದು,
ಬಸವಣ್ಣನ ಶ್ರೀಪಾದಕ್ಕೆ ನಮೋ ನಮೋ ಎನುತಿರ್ದೆನು. ೫೬
ಆತ್ಮ ತನುವನು ಮುಟ್ಟಿದ ಮೂಲವ ನಿಷ್ಠಾಪರದಲ್ಲಿ ಮುಟ್ಟಿರೊ.
ಆ ಪರದಲ್ಲಿ ವಿದ್ಯೆಯೊಳಗಣ ಸಹಜವರಿದಂಗಲ್ಲದೆ
ಲಿಂಗವೆನಬಾರದು, ಜಂಗಮವೆನಬಾರದು.
[ಧಾರಾ]ಮಂಟಪದ ಸಹಜವನರಿಯದೆ ನರಕಕ್ಕೆ ಗುರಿಯಾದರು ಕಾಣಾ
ಲಿಂಗಾರ್ಚಕರಾದವರು.
ಜನನ ಮರಣ ತಪ್ಪದೆಂದಿವರನತಿಗಳೆದು,
ಲಿಂಗಾರ್ಚನೆಯ ಮಾಡಿ ತೋರಿ, ತನ್ನವರ
ನಿತ್ಯದೊಳಗಿರಿಸಿದಾತ ಬಸವಣ್ಣ ಕಾಣಾ, ಕಲಿದೇವಯ್ಯ. ೫೭
ಆದಿ ಅನಾದಿಯಿಂದತ್ತಣ ನಿತ್ಯಸಿಂಹಾಸನವೆಂಬ
ಮಹಾಮೇರುಮಂದಿರದ ಮೇಲೆ ಇರ್ದಂತೆಯೆ
ಆಧಾರಮೂರ್ತಿಗಳನು ನಿಮರ್ಿಸಿದಿರಿ.
ನಮಗಾಶ್ರಯವಾವುದು ದೇವಾ ಎಂದು ಗಣಂಗಳು ಬಿನ್ನಹವಂ ಮಾಡಲು,
ವಿಶ್ವತೋ ಪ್ರತಿಪಾಲಕ ವಿಶ್ವಾಧಾರಕ ಶಿವನು,
ಸರ್ವಜೀವಜಾಲಂಗಳಿಗೆ ಶೈತ್ಯಕಾಲವಾಗಬೇಕೆಂದು
ಅನಂತಮೂರ್ತಿಗಳಿಗೆ ಕಾರುಣ್ಯವ ಮಾಡಿದ ಕಂದನು.
ತಮ್ಮ ತಮ್ಮ ಆಧಾರದಲ್ಲಿ ಒಮ್ಮಿಂದವು ಪಾದಘಾತದೊಳು
ಅನಂತಸುಖವುತ್ಪತ್ಯದೊಳು ಶಿವ, ಶಿವಚೈತನ್ಯವನಾಗವೆ
ನಿಮರ್ಿಸುವೆನೆಂದು ಪೃಥ್ವಿಗೆ ಕಾರುಣ್ಯವ ಮಾಡಿದ ಕಂದನು.
ತೇಜಜ್ಞಾನದೊಳು ಶುದ್ಧತಿಗೆ ನಿಮ್ಮ ಮುಖದಲ್ಲಿಯೆಯೆಂದು
ತೇಜಕ್ಕೆ ಕಾರುಣ್ಯವ ಮಾಡಿದ ಕಂದನು.
ವಾಯು ಮನ ಪ್ರಾಣ ಗಂಧ ಪರಿಮಳದಲ್ಲಿ ಶೈತ್ಯದೊಳು
ಸುಖವಿರು ಕಂಡಾ ಎಂದು ವಾಯುವಿಗೆ ಕಾರುಣ್ಯವ ಮಾಡಿದ ಕಂದನು.
ಗಗನದ ಸರ್ವಕ್ಕಾಶ್ರಯವಾಗಿರು ಕಂಡಾ ಎಂದು
ಆಕಾಶಕ್ಕೆ ಕಾರುಣ್ಯವ ಮಾಡಿದ ಕಂದನು.
ಚಂದ್ರಸೂರ್ಯರು ಆತ್ಮರು ನಿಮ್ಮ ನಿಮ್ಮ ಸ್ಥಲಗಳಲ್ಲಿಯೆ
ಒಬ್ಬೊಬ್ಬರು ಅಗಲದಿರಿಯೆಂದು, ಅಷ್ಟತನುಗಳಿಗೆ
ಕಾರುಣ್ಯವ ಮಾಡಿದ ಕಂದನು.
ಮಹಾಪ್ರತಿಪಾಲಕನು ಶರಣರ ಹೃದಯದ ಸಿಂಹಾಸನವನು ಎನ್ನ ಪ್ರಾಣವ ಪಾವನವ
ಮಾಡಿದ ಕಂದನು. ವೇದ್ಯನೆ ಕಲಿದೇವ, ನಿಮ್ಮ ಶರಣ ಬಸವಣ್ಣಂಗೆ
ಜಯತು ಜಯತು. ೫೮
ಆದಿ ಅನಾದಿಯಿಂದತ್ತತ್ತ ಮೀರಿ ತೋರುವ ಪರಾತ್ಪರವಸ್ತುವೆ
ತನ್ನ ಚಿದ್ವಿಲಾಸದಿಂದ ತಾನೆ ಜಗತ್ಪಾವನಮೂರ್ತಿಯಾಗಿ,
ತನ್ನಂತರಂಗ ಬಹಿರಂಗದಲ್ಲಿ ಭಕ್ತಿ ಜ್ಞಾನ ವೈರಾಗ್ಯ ಪಟ್ಸ್ಥಲಮಾರ್ಗವಿಡಿದು
ಭಕ್ತಿಪ್ರಿಯರಾಗಿ, ತಮ್ಮಂತರಂಗದೊಳಗೆ
ಷಡ್ವಿಧಸಕೀಲ ಛತ್ತೀಸಸಕೀಲ ನಾಲ್ವತ್ತೆಂಟುಸಕೀಲ ಐವತ್ತಾರುಸಕೀಲ
ಅರುವತ್ತಾರುಸಕೀಲ ತೊಂಬತ್ತಾರುಸಕೀಲ ನೂರೆಂಟುಸಕೀಲ
ಇನ್ನೂರ ಹದಿನಾರುಸಕೀಲ ಮೊದಲಾದ ಸಮಸ್ತಸಕೀಲಂಗಳನೊಳಕೊಂಡು,
ಬೆಳಗುವ ಗುರು ಲಿಂಗ ಜಂಗಮವ ಕಂಗಳು ತುಂಬಿ,
ಮನ ತುಂಬಿ ಭಾವ ತುಂಬಿ ಕರಣಂಗಳು ತುಂಬಿ,
ತನು ತುಂಬಿ ಪ್ರಾಣ ತುಂಬಿ ಸರ್ವಾಂಗ ತುಂಬಿ,
ಅರ್ಚಿಸಲರಿಯದೆ, ಹಲವನರಸಿ, ತೊಳಲುವ ಮೂಳರ ಕಂಡು
ಬೆರಗಾದೆ ನೋಡಾ, ಕಲಿದೇವರದೇವ. ೫೯
ಆದಿ ಅನಾದಿಯಿಲ್ಲದಂದು, ಸಾಧ್ಯ ಅಸಾಧ್ಯವಿಲ್ಲದಂದು,
ಸ್ಥೂಲ ಸೂಕ್ಷ್ಮವೆಂಬ ಮೂರ್ತಿಗಳಿಲ್ಲದಂದು,
ಸಾಕಾರ ನಿರಾಕಾರವೆಂಬ ವಾಕು ಹುಟ್ಟದಂದು,
ಶಂಕರ ಶಶಿಧರ ಈಶ್ವರನೆಂಬ ಗಣಾಧೀಶ್ವರರಿಲ್ಲದಂದು,
ಉಮೆಯ ಕಲ್ಯಾಣವಿಲ್ಲದಂದು,
ಶಿವರತಿ ಮಹಾರತಿ ಬಸವಣ್ಣನಿಂದಾಯಿತ್ತು.
ಸರ್ವವಿಸ್ತೀರ್ಣವ ನೀಕರಿಸಿ ಶಿವಲಿಂಗಾರ್ಚನೆಯ ತೋರಿದ.
ನಿತ್ಯಲಿಂರ್ಗಾಚನೆಯಲ್ಲಿ ಪ್ರಸಾದಧ್ಯಾನ,
ಜಂಗಮಾರ್ಚನೆಯಲ್ಲಿ ಪ್ರಸಾದಭೋಗ
ಎಂಬುದನು ಸಂಗನಬಸವಣ್ಣನಲ್ಲದೆ ಮತ್ತಾರೂ ಅರಿಯರು.
ಭಕ್ತಿಯ ಕುಳಸ್ಥಳವನೂ ಭಕ್ತಿಯ ಸಾರಾಯವನೂ
ಮುನ್ನವೆ ಅತಿರಥ ಸಮರಥರೆಲ್ಲರೂ ಅರಿಯರು.
ನಿಮ್ಮ ಬಸವಣ್ಣನಿಂತಹ ಸ್ವತಂತ್ರನಯ್ಯಾ, ಕಲಿದೇವರದೇವ. ೬o
ಆದಿಯನಾದಿಯಿಂದತ್ತತ್ತ, ನಾದಬಿಂದುಕಳಾತೀತವಾದ
ಘನಪರಂಜ್ಯೋತಿರ್ಮಯಲಿಂಗವು ತನ್ನ ಕರದೊಳಗಿರಲು,
ಮೇದಿನಿಯ ಪ್ರತಿಷ್ಠೆಗೆರಗುವ ಮಾದಿಗರನೇನೆಂಬೆನಯ್ಯಾ
ಕಲಿದೇವಯ್ಯ. ೬೧
ಆದಿಯಲ್ಲಿ ನಿಮ್ಮ, ಜಂಗಮವೆಂಬುದನಾರು
ಬಲ್ಲರಯ್ಯಾ, ಬಸವಣ್ಣನಲ್ಲದೆ ?
ಎಲ್ಲಿ ಸ್ಥಾವರವಲ್ಲಿ ನೋಡಲಾಗದು.
ಮನದಲ್ಲಿ ನೆನೆಯಲಾಗದು.
ಲಿಂಗಕಾದಡೆಯೂ ಜಂಗಮವೆ ಬೇಕು.
ಜಂಗಮವಿಲ್ಲದೆ ಲಿಂಗವುಂಟೆ ?
ಗುರುವಿಂಗಾದಡೆಯೂ ಜಂಗಮವೆ ಬೇಕು.
ಜಂಗಮವಿಲ್ಲದೆ ಗುರುವುಂಟೆ?
ಎಲ್ಲಿ ಜಂಗಮವಿರ್ದಡಲ್ಲಿಯೇ
ಗುರು ಲಿಂಗ ಜಂಗಮ ಪಾದೋದಕ ಪ್ರಸಾದ
ಅನುಭಾವ ಸನ್ನಿಹಿತವಾಗಿಹುದು.
ಇಂತೀ ಜಂಗಮವೇ ಲಿಂಗವೆಂಬುದ ಬಸವಣ್ಣ ಬಲ್ಲ.
ಆ ಬಸವಣ್ಣನ ಶ್ರೀಪಾದಕ್ಕೆ ಅಹೋರಾತ್ರಿ
ಶರಣೆಂದು ಶುದ್ಭನಾದೆ ಕಾಣಾ, ಕಲಿದೇವರದೇವಯ್ಯ. ೬೨
ಆದಿಯುಗದಲ್ಲೊಬ್ಬಳು ಮಾಯಾಂಗನೆ,
ಹಲವು ಬಣ್ಣದ ವಸ್ತ್ರವನುಟ್ಟುಕೊಂಡು,
ಹೆಡಿಗೆ ತುಂಬ ದೇವರ ಹೊತ್ತುಕೊಂಡು,
ಓ ದೇವರ ಕೊಳ್ಳಿರಯ್ಯಾ, ಓ ದೇವರ ಕೊಳ್ಳಿರಯ್ಯಾ ಎಂದಳು.
ಎಂದಡೆ ಆ ದೇವರನಾರೂ ಕೊಂಬವರಿಲ್ಲ.
ನಾನು ಒಂದರಿವೆಯ ಕೊಟ್ಟು, ಆ ದೇವರ ಕೊಂಡು,
ಎನ್ನ ಹೆತ್ತ ತಂದೆ ಬಸವಣ್ಣನ ಪ್ರಸಾದದಿಂದ
ಬದುಕಿದೆನು ಕಾಣಾ, ಕಲಿದೇವರದೇವಾ. ೬೩
ಆದಿಲಿಂಗ ಅಸಂಭವ.
ವೇದನಾಲ್ಕು ಪೊಗಳಲ್ಕೆ ಹೊಗಳಿದವು, ಅತ್ಯಂತ ಭಕ್ತರಲ್ಲಿ.
ವೇದ ಪಶುವೇದ ಪಾಠಕರು
ಭೇದ ಬೋಧೆಯ ಮಾಡಿಕೊಂಡು
ಯಮಬಾಧೆಗೆ ಹೋದವರ ದೈವವೆಂದರಸಬೇಡ.
ಈ ವೇದ ಬ್ರಹ್ಮ ನುಡಿಯ ಕೇಳಲಾಗದೆಂದ,
ಕಲಿದೇವರದೇವಯ್ಯ. ೬೪
ಆಧಾರಕಾಲದಲ್ಲಿ ಅನಾದಿಯನಾಡುತಿಪ್ಪರು ದೇವಗಣಂಗಳು.
ಸಿಂಹಾಸನಕಾಲದಲ್ಲಿ ಅತೀತನಾಡುತಿಪ್ಪರು ಮಹಾಪುರುಷರು.
ಮಂದರಗಿರಿಯ ಕಾಲದಲ್ಲಿ ಶಂಕೆಯನಾಡುತಿಪ್ಪರು ಕಾಲಪುರುಷರು.
ಆವ ಕಾಲದಲ್ಲಿಯೂ ನಂದಿಕೇಶ್ವರನ ಶಬ್ದವನಾಡುತಿಪ್ಪರು ನಂದಿಗಣಂಗಳು.
ಕಲಿಕಾಲದಲ್ಲಿಯೂ ಉತ್ಪತ್ಯದ ಮಾತನಾಡುತಿರ್ಪರು ಪುರುಷಗಣಂಗಳು.
ಪ್ರಜ್ವಲಿತಕಾಲದಲ್ಲಿ ಭವಂ ನಾಸ್ತಿಯೆನುತಿರ್ಪರು ಗುರುಕಾರುಣ್ಯವುಳ್ಳವರು.
ದೇವಾಧಿದೇವನು ಕಾಲಾಧಿದೇವನು ಎಲ್ಲಾ ಕಾಲ ಸೂತ್ರವನಾಡಿಸುತ್ತಿಹನು.
ಸದೃಶ ಕಾಲಾಧಿದೇವನು, ಎಲ್ಲಾ ವಿಸ್ತಾರಕನು, ಗುರು ವಿಸ್ತಾರಕನು,
ಜಂಗಮಾಕಾರನು, ಪ್ರಸಾದಕಾಯನು ಜ್ಞಾನಸಿಂಹಾಸನದ ಮೇಲೆ
ಕಲಿದೇವಾ, ನಿಮ್ಮ ಶರಣ ಬಸವಣ್ಣನ ನಿಲವು. ೬೫
ಆರುಜನ್ಮದವರೆಂಬರು ಬಸವಣ್ಣನ.
ಈ ಗಾರುಮಾತ ಕೇಳಲಾಗದು.
ಆರುಸ್ಥಲ ಆರುಪಥವ ತೋರಲು,
ಪರಶಿವ ತಾ ಮೂರುಮೂರ್ತಿಯಾದ.
ಆರಾರುತತ್ವಂಗಳ ಮೇಲಣಾತ
ಆ ಬಸವಣ್ಣನೆ ಕಾಣಾ, ಕಲಿದೇವರದೇವ. ೬೬
ಆಶಾಪಾಶವ ಬಿಟ್ಟಡೇನಯ್ಯಾ
ರೋಷ ಪಾಶವ ಬಿಡದನ್ನಕ್ಕರ ?
ರೋಷ ಪಾಶವ ಬಿಟ್ಟಡೇನಯ್ಯಾ
ಮಾಯಾಪಾಶ ಬಿಡದನ್ನಕ್ಕರ ?
ಇಂತೀ ತ್ರಿವಿಧಪಾಶವ ಹರಿದು
ನಿಜನಿಂದ ಲಿಂಗೈಕ್ಯರ ತೋರಾ ಕಲಿದೇವರದೇವಾ. ೬೭
ಆಳುದ್ದವ ತೋಡಿ, ನೀರ ಕೊಂಡು ಬಂದು,
ಭವಿಗಳಾರೂ ಕಾಣದಂತೆ ಸ್ವಯಂ ಪಾಕವ ಮಾಡಿ,
ಇವು ತಮ್ಮ ನೇಮವ್ರತವೆಂಬರು.
ತೆಪ್ಪದಲ್ಲಿ ಸಿಕ್ಕಿದ ಜಂಬುಕನಂತೆ, ಇದೆತ್ತಣ ನೇಮ, ಕಲಿದೇವರದೇವಾ. ೬೮
ಇಂದ್ರಲೋಕದವರೆಲ್ಲರೂ ಸೂತಕಲಾಸಂಹಾರಿ ಬಸವ ಎಂದೆಂಬರು.
ಚಂದ್ರಲೋಕದವರೆಲ್ಲರೂ ಷೋಡಶಕಲಾ ಪರಿಪೂರ್ಣ ಬಸವಾ ಎಂದೆಂಬರು.
ಯುಗಕೋಟಿಬ್ರಹ್ಮರೆಲ್ಲರೂ ಪರಶಿವ ಬಸವಾ ಎಂದೆಂಬರು.
ಹರಿವಿರಿಂಚಿಗಳೆಲ್ಲರೂ ಗುರುಲಿಂಗ ಬಸವಾ ಎಂದೆಂಬರು.
ಅಷ್ಟದಿಕ್ಪಾಲಕರೆಲ್ಲರೂ ಪರಶಿವ ಬಸವಾ ಎಂದೆಂಬರು.
ಸುರಪಡೆಯಲ್ಲಾ ಅಮೃತಸಾಗರ ಬಸವಾ ಎಂದೆಂಬರು.
ನವನಾಥಸಿದ್ಧರೆಲ್ಲರೂ ಪರಮಘುಟಿಕೆ ಬಸವಾ ಎಂದೆಂಬರು.
ಲಂಬೋದರ ಕುಂಭೋದರ ದಾರುಕ ರೇಣುಕ ಗೌರೀಸುತ
ತಾಂಡವರೆಲ್ಲರೂ ಸಕಲಜೀವಚೈತನ್ಯ ಮಾತ್ರ ಬಸವಾ ಎಂದೆಂಬರು.
ಓತವರೆಲ್ಲರೂ ಮಾತಾಪಿತ ಬಸವಾ ಎಂದೆಂಬರು.
ಒಲಿದವರೆಲ್ಲರೂ ಪ್ರಾಣ ಪರಿಣಾಮಿ ಬಸವಾ ಎಂದೆಂಬರು.
ಆನೇನೆಂಬೆನು, ಉಪಮಿಸಬಾರದ ಮಹಾಘನ ಮಹಿಮನ. ೬೯
ಇಂದ್ರಲೋಕದವರೆಲ್ಲರೂ
ಸಹೀಂದ್ರನಾಥ ಬಸವಣ್ಣಾ ಎಂದು ಹೊಗಳುತಿರ್ಪರಯ್ಯಾ.
ಬ್ರಹ್ಮಲೋಕದವರೆಲ್ಲರೂ
ಪರಬ್ರಹ್ಮ ಬಸವಣ್ಣಾ ಎಂದು ಹೊಗಳುತಿರ್ಪರಯ್ಯಾ.
ವಿಷ್ಣುಲೋಕದವರೆಲ್ಲರೂ
ಮಹಾದಂಡನಾಥ ಬಸವಣ್ಣಾ ಎಂದು ಹೊಗಳುತಿರ್ಪರಯ್ಯಾ.
ರುದ್ರಲೋಕದವರೆಲ್ಲರೂ
ಮಹಾರುದ್ರ ಬಸವಣ್ಣಾ ಎಂದು ಹೊಗಳುತಿರ್ಪರಯ್ಯಾ.
ಶಿವಲೋಕದವರೆಲ್ಲರೂ
ಪರಶಿವ ಬಸವಣ್ಣಾ ಎಂದು ಹೊಗಳುತಿರ್ಪರಯ್ಯಾ.
ಪ್ರಮಥಮಲೋಕದವರೆಲ್ಲರೂ
ಪ್ರಮಥನಾಥ ಬಸವಣ್ಣಾ ಎಂದು ಹೊಗಳುತಿರ್ಪರಯ್ಯಾ.
ಪರಲೋಕದವರೆಲ್ಲರೂ
ಪರಾಪರ ಬಸವಣ್ಣಾ ಎಂದು ಹೊಗಳುತಿರ್ಪರಯ್ಯಾ.
ಸತ್ಯಲೋಕದವರೆಲ್ಲರೂ
ನಿತ್ಯ ಬಸವಣ್ಣಾ ಎಂದು ಹೊಗಳುತಿರ್ಪರಯ್ಯಾ.
ಮತ್ರ್ಯಲೋಕದವರೆಲ್ಲರೂ
ಕರ್ತ ಬಸವಣ್ಣಾ ಎಂದು ಹೊಗಳುತಿರ್ಪರಯ್ಯಾ.
ನಾಗಲೋಕದವರೆಲ್ಲರೂ
ನಾಗನಾಥ ಬಸವಣ್ಣಾ ಎಂದು ಹೊಗಳುತಿರ್ಪರಯ್ಯಾ.
ಪಾತಾಳಲೋಕದವರೆಲ್ಲರೂ
ಅಪ್ರಮಾಣ ಬಸವಣ್ಣಾ ಎಂದು ಹೊಗಳುತಿರ್ಪರಯ್ಯಾ.
ರಸಾತಳಲೋಕದವರೆಲ್ಲರೂ
ಮಹಾಮಹಿಮ ಬಸವಣ್ಣಾ ಎಂದು ಹೊಗಳುತಿರ್ಪರಯ್ಯಾ.
ಶೂನ್ಯಲೋಕದವರೆಲ್ಲರೂ
ಶೂನ್ಯಲಿಂಗ ಬಸವಣ್ಣಾ ಎಂದು ಹೊಗಳುತಿರ್ಪರಯ್ಯಾ.
ಸರ್ವಲೋಕದವರೆಲ್ಲರೂ
ಸರ್ವಾಧಾರ ಬಸವಣ್ಣ ಎಂದು ಹೊಗಳುತಿರ್ಪರಯ್ಯಾ.
ಇಂತು, ನಿತ್ಯರು ನಿಜೈಕ್ಯರು ಬಸವಣ್ಣನ ನೆನೆಯದವರಾರು ?
ಸತ್ಯರು ಸದ್ಯೋನ್ಮುಕ್ತರು ಬಸವಣ್ಣನ ಹೊಗಳದವರಾರು ?
ಸರ್ವಮಹಿಮನೆ, ಸರ್ವಘನಮನವೇದ್ಯನೆ, ಸರ್ವಪರಿಪೂರ್ಣನೆ
ಕಲಿದೇವಾ,ನಿಮ್ಮ ಶರಣ ಬಸವಣ್ಣನಿಂತಹ ಘನಮಹಿಮ ನೋಡಯ್ಯಾ. ೭o
ಇದು ಗುರು, ಇದು ಲಿಂಗ, ಇದು ಜಂಗಮ, ಇದು ಪ್ರಸಾದ.
ಇಂತೀ ಚತುರ್ವಿಧಸ್ಥಲವನೊಂದುಮಾಡಿ ತೋರಿ,
ಸಮತೆ ಸೈರಣೆಯೆಂಬ ಭಕ್ತಿಪ್ರಭೆಯೊಳಗಿರಿಸಿ,
ಗತಿಯತ್ತ ಹೊದ್ದಲೀಯದೆ, ಲಿಂಗದ ವ್ಯಾವರ್ಣನೆಯ ತೋರಿ,
ಜಂಗಮವ ನಿರಾಕಾರಲಿಂಗವೆಂದು ತೋರಿ,
ಆ ಜಂಗಮದ ಪ್ರಸಾದವ ತೋರಿದನು.
ನಿರವಯದ ಹಾದಿಯ, ಬಸವಣ್ಣನಿಂದ ಕಂಡೆ ಕಾಣಾ
ಕಲಿದೇವಯ್ಯ. ೭೧
ಇರಿಯಲಾಗದು ಪ್ರಾಣಿಯ, ಜರೆಯಲಾಗದು ಹೆರರ.
ನೆರನೆತ್ತಿ ನುಡಿಯಲಾಗದಾರುವನು.
ಹೆರರ ವಧುವ ಕಂಡು ಮನ ಮರುಗದಿರ್ದಡೆ,
ಶಿವಲೋಕ [ಕರ]ತಳಾಮಳಕವೆಂದ ಕಲಿದೇವರದೇವ. ೭೨
ಇರುಳು ಹಗಲೆಂದರಿಯದ ಅಂಧಕನ ಕೈಯಲ್ಲಿ
ಕೈದೀವಿಗೆ ಇರ್ದಡೇನು, ಪಥಿವ ನೋಡಿ ನಡೆಯಬಲ್ಲನೆ ?
ಗುರುಚರಪರವನರಿಯದ ದುರಾಚಾರಿಯ ಕೈಯಲ್ಲಿ
ಲಿಂಗವಿರ್ದಡೇನು, ಅವ ಸತ್ಯಸದಾಚಾರವನುಳ್ಳ
ಭಕ್ತಿವಂತರಿಗೆ ಸರಿಯಹನೆ ?
ಅವನು ಶಿವಭಕ್ತನಾಗಿ ಕೆಟ್ಟುಹೋದ ತೆರನೆಂತೆಂದಡೆ: ಭಕ್ತರ ಗೃಹದಲ್ಲಿ ತುಡುಗ ತಿಂದ ನಾಯಿ,
ಮರಳಿ ಮತ್ತೆ ಹೊಲಸಿಂಗೆರಗಿದ ತೆರನಾಯಿತೆಂದ
ಕಲಿದೇವಯ್ಯ. ೭೩
ಇಷ್ಟಲಿಂಗ ಪೃಥ್ವಿಯಲ್ಲಿ ಸ್ಥಾಪ್ಯವಾದಡೇನು ?
ಅಪ್ಪುವಿನಲ್ಲಿ ಅಳಿದಡೇನು ?
ಇಷ್ಟಲಿಂಗವು ಶಕ್ತಿಸಂಪುಟದಿಂದ ಉತ್ಕೃಷ್ಟವಾದಡೇನು ?
ಅಹುದಲ್ಲವೆಂಬ ಅಜ್ಞಾನಮತಿಗಳೆದು
ಮುನ್ನಿನಂತೆ ಪೂಜಿಸುವ ಭಕ್ತರ ತೋರಾ, ಕಲಿದೇವರದೇವಾ. ೭೪
ಇಷ್ಟಲಿಂಗವ ಬಿಟ್ಟು ಸೃಷ್ಟಿಯ ಪ್ರತಿಷ್ಠೆಗೆ ಶರಣೆಂದಡೆ,
ಆ ಇಷ್ಟಲಿಂಗದ ಚೇತನ ತೊಲಗಿ,
ಭ್ರಷ್ಟನಾಗಿ ಕೆಟ್ಟು, ನರಕಕ್ಕಿಳಿದನೆಂದ, ಕಲಿದೇವಯ್ಯ. ೭೫
ಈರೇಳುಭುವನಕ್ಕೆ ಕರ್ತನೊಬ್ಬನೆಂಬ ಆದಿಯನರಿಯದೆ,
ಲಿಂಗವಂತಂಗೆ ಸೂತಕವೆಂಬ ನುಡಿಯ ಕೇಳಲಾಗದು.
ಸತ್ತ ಕೋಣ ಕುರಿ ಕೋಳಿ ತಿಂಬ
ಭೂತಪ್ರೇತ ದೈವದೆಂಜಲು ಭುಂಜಿಸುವವಗೆ,
ಏಳೇಳುಜನ್ಮ ನರಕ ತಪ್ಪದೆಂದ ಕಲಿದೇವರದೇವಯ್ಯ. ೭೬
ಈರೇಳುಸ್ಥಲ, ಈರೈದುಸ್ಥಲ, ಅಷ್ಟಸ್ಥಲ,
ನವಸ್ಥಲ, ತ್ರಿವಿಧಸ್ಥಲ, ಚತುಗ್ರರ್ಾಮಸ್ಥಲ.
ಪಂಚವರ್ಣ, ದಶವರ್ಣ, ಸಪ್ತವರ್ಣ, ಪಡುವರ್ಣ,
ಏಕವರ್ಣ, ದ್ವಿವರ್ಣಸ್ಥಲಂಗಳಲ್ಲಿ ಮುಖವಿಲ್ಲ ಮುಖವಿಲ್ಲ.
ಪವಿತ್ರಾಂಕಿತಕ್ಕೆ ನೋಡಿ ಮಾಡುವ
ಆರಂಭವನೇನೂ ಐದುದಿಲ್ಲ. ಬಸವನೆ ವಿಸ್ತಾರವೆನಗೆ.
ಬಸವನೆ ನುಡಿ ಎನಗೆ, ಬಸವನೆ ನಡೆ ಎನಗೆ.
ಬಸವನೆ ಗತಿ ಎನಗೆ, ಬಸವನೆ ಮತಿ ಎನಗೆ.
ಬಸವನೆ ಇಹವೆನಗೆ, ಬಸವನೆ ಪರವೆನಗೆ.
ಬಸವನಲ್ಲದೆ ಕಾಣೆ ಕಾಣಾ, ಕಲಿದೇವರದೇವ. ೭೭
ಉಂಡಡೆ ಭೂತವೆಂಬರು, ಉಣ್ಣದಿರ್ದಡೆ ಚಕೋರಿಯೆಂಬರು.
ಊರೊಳಗಿರ್ದಡೆ ಸಂಸಾರಿಕನೆಂಬರು, ಅಡವಿಯೊಳಗಿರ್ದಡೆ ಮರ್ಕಟನೆಂಬರು.
ಮಾತನಾಡಿದಡೆ ಪಾಪಕಮರ್ಿಯೆಂಬರು,
ಮಾತನಾಡದಿರ್ದಡೆ ಮುಸುಕಮರ್ಿಯೆಂಬರು.
ಮಲಗದಿರ್ದಡೆ ಚೋರನೆಂಬರು, ಮಲಗಿರ್ದಡೆ ಜಡದೇಹಿಯೆಂಬರು.
ಇಂತೀ ವಸುಧೆಯೊಳಗೆ ಎಂಟುವಿಧ ಕಳೆಯಲು ವಶವಲ್ಲ ಕಾಣಾ
ಕಲಿದೇವರದೇವ. ೭೮
ಉಂಬ ಕೂಳಿಗೆ ಉಪದೇಶವ ಮಾಡುವ ಚುಂಬಕರು ಹೆಚ್ಚಿ,
ಭಕ್ತಿಯಪಥವ ಕೆಡಿಸಿದರು.
ಡೊಂಬ ಡೋಹರ ಹೊಲೆಯರು ಮಾದಿಗರು.
ಉಪದೇಶವಿಲ್ಲದವರು
ಪಿಂಬೇರ ಅನಾಚಾರಿಯ ಆರಾಧಿಸಿ, ಶಂಭುವಿನ ಸರಿಯೆಂದು
ಅವರೊಳಗೆ ಹಲವರು ಕೊಂಬನೂದುವ, ಸೊಣಕನ ಕೊರಳಲ್ಲಿ
ಬಾರ ಕವಡೆಯ ಕಟ್ಟಿಕೊಂಡು ನಾಯಾಗಿ ಬೊಗಳುವರು.
ಕಂಬದ ಬೊಂಬೆಯ ಮಾಡಿ ಮೈಲಾರ ಭೈರವ ಆಯಿರ (?)
ಧೂಳಕೇತನೆಂಬ ಕಾಳುದೈವವ
ಊರೂರದಪ್ಪದೆ ತಿರಿದುತಿಂಬ ಡಂಭಕರ ಕೈಯಲ್ಲಿ
ಉಪದೇಶವ ಕೊಂಡವರು,
ಗುರುಲಿಂಗಜಂಗಮದ ಹೊಲಬನರಿಯದೆ ಭಂಗಿತರಾದರು.
ಅಂಗದ ಮೇಲಣ ಸೂತಕ ಹಿಂಗದು.
ಅನ್ಯದೈವದ ಜಾತ್ರೆಗೆ ಹೋಗಿ, ನಾಡನರಕದಲ್ಲಿ
ಬೆರಣಿಯ ಮಾಡುವ ನಾನಾ ಜಾತಿಗಳು
ಹರಕೆಯ ಹಿಂಗಿಸದೆ, ಗುರುಕಾರುಣ್ಯವ ಕೊಟ್ಟವಂಗೆ
ಕುಂಭಿನಿಪಾತಕ ತಪ್ಪದೆಂದ ಕಲಿದೇವರದೇವಯ್ಯ. ೭೯
ಉಟ್ಟ ಸೀರೆಯ ಹರಿದು ಹೋದಾತ ನೀನಲಾ ಬಸವಣ್ಣ.
ಮೆಟ್ಟಿದ ಕೆರಹ ಕಳೆದುಹೋದಾತ ನೀನಲಾ ಬಸವಣ್ಣ.
ಕಟ್ಟಿದ ಮುಡಿಯ ಬಿಟ್ಟುಹೋದಾತ ನೀನಲಾ ಬಸವಣ್ಣ.
ಸೀಮೆಸಂಬಂಧವ ತಪ್ಪಿಸಿಹೋದಾತ ನೀನಲಾ ಬಸವಣ್ಣ.
ಲಿಂಗಕ್ಕೆ ಮಾಡಿದುದ ಸೋಂಕದೆ ಹೋದೆಯಲ್ಲಾ ಬಸವಣ್ಣ.
ಜಂಗಮಕ್ಕೆ ಮಾಡಿದ ಮಾಟವ ಕೈಯಲ್ಲಿ ಹಿಡಿದುಕೊಂಡು
ಹೋದೆಯಲ್ಲಾ ಬಸವಣ್ಣ.
ಬೆಳಗನುಟ್ಟು ಬಯಲಾಗಿ ಹೋದೆಯಲ್ಲಾ ಬಸವಣ್ಣ.
ಆ ಬಸವಣ್ಣಂಗೆ ಶರಣೆಂಬ ಪಥವನೆ ತೋರು ಕಂಡಾ
ಕಲಿದೇವರದೇವ. ೮o
ಉಡಿಯ ಲಿಂಗವ ಬಿಟ್ಟು,
ಗುಡಿಯ ಲಿಂಗಕ್ಕೆ ಶರಣೆಂಬ
ಮತಿಭ್ರಷ್ಟರನೇನೆಂಬೆನಯ್ಯಾ
ಕಲಿದೇವರದೇವ. ೮೧
ಉಣ್ಣದೆ ತೃಪ್ತನಾದ ಗುರು.
ಆ ಗುರುವು ಪೆಸಗರ್ೊಳ್ಳದೆ ಮುನ್ನವಾದ ಶಿಷ್ಯ.
ಇದು ಅನ್ಯರಿಗೆ ಕಾಣಬಾರದು.
ತನ್ನೊಳಗಿರ್ದ ಲಿಂಗೈಕ್ಯದ ಭಕ್ತಿಯನು,
ಪಸಾರಕಿಕ್ಕುವ ಅಜ್ಞಾನಿಗಳೆತ್ತ ಬಲ್ಲರು
ಕಲಿದೇವರದೇವಾ. ೮೨
ಉದಾಸೀನಂ ಮಾಡಿದರೆಂದು ಬೆಂಬೀಳುವರೆ ಅಯ್ಯಾ ಬಸವಣ್ಣಾ.
ಎನ್ನ ಕಾಯದೊಳಗೆ ನಿನ್ನ ಕಾಯವಿಪ್ಪುದು ಬಸವಣ್ಣಾ.
ಎನ್ನ ಜೀವದೊಳಗೆ ನಿನ್ನ ಜೀವವಿಪ್ಪುದು ಬಸವಣ್ಣಾ.
ಎನ್ನ ಭಾವದೊಳಗೆ ನಿನ್ನ ಭಾವವಿಪ್ಪುದು ಬಸವಣ್ಣಾ.
ಎನ್ನ ಕರಣ, ನಿನ್ನ ಕರಣ ಬಸವಣ್ಣಾ.
ಆನು ನೀನಾದ ಕಾರಣ ರೂಪಿಂಗೆ ಕೇಡುಂಟು.
ನಿರೂಪು ಕರ್ಪುರ ಅಗ್ನಿ ಬಸವಣ್ಣಾ.
ಚಿಂತಿಸುವರೆ ದೇವರದೇವ ಕಲಿದೇವಾ. ೮೩
ಊರ ಕಲ್ಲಿಗೆ ಉರದ ಲಿಂಗವಡಿಯಾಗಿ ಬೀಳುವ
ಕ್ರೂರಕಮರ್ಿಗಳೆನೇನೆಂಬೆನಯ್ಯಾ ಕಲಿದೇವಯ್ಯ. ೮೪
ಎಂಜಲ ತಿಂಬ ಜಡದೊಳಗೆ ಹದಿನೆಂಟುಜಾತಿಯ
ಎಂಜಲು ಭುಂಜಿಸಿ, ಉತ್ತಮರೆನಿಸಿಕೊಂಬ ಭವಜೀವಿಗಳು ಕೇಳಿರೊ.
ಕುಂಜರನಾಗಿ ನಡೆದು ಸುಜಾತರೆನಿಸಿಕೊಂಬಿರಿ.
ಅಜವಧೆ ಗೋವಧೆ ಮಾಡುವ ಅನಾಚಾರಿಗಳು ನೀವು ಕೇಳಿರೊ.
ಬ್ರಾಹ್ಮಣ ವಾಕ್ಯವ ಕಲಿತು ಬ್ರಾಹ್ಮಣರೆನಿಸಿಕೊಂಬಿರಿ.
ವರ್ಮವಿಡಿದು ನೋಡಹೋದಡೆ ನಿಮ್ಮಿಂದ ಕಮರ್ಿಗಳಲ್ಲ.
ನಿಮ್ಮ ಧರ್ಮದ ಬಟ್ಟೆಯ ನೀವರಿಯದೆ ಹೋದಿರಿ.
ಚಿತ್ತವಲ್ಲದೆ ಶಿವಭಕ್ತರ ಬುದ್ಧಿಯವಿಡಿದು
ನಡೆಯಲೊಲ್ಲದೆ ಕೆಟ್ಟುಹೋದಿರಿ.
ಸುಧೆಹೀನ ಶುದ್ಧವೆಂದು ಕೊಂಬಿರಿ.
ಸುರೆಯ ಸೇವಿಸುವ ಬೋವರೆಂಜಲು ಎಣ್ಣೆ ಶುದ್ಧವೆಂದು ಕೊಂಬಿರಿ.
ಬುದ್ದಲೆಯ ಎಂಜಲು ಹಾಲು ಮೊಸರು ಮಜ್ಜಿಗೆ ಶುದ್ಧವೆಂಬಿರಿ.
ಶೂದ್ರರೆಂಜಲು ಹಾಲು ಮೊಸರು ತುಪ್ಪ
ಆವ ಜಾತಿಯ ಮನೆಯಲ್ಲಿರ್ದಡೆ ಶುದ್ಧವೆಂದು ಕೊಂಬಿರಿ.
ಹೊಲೆಯ ಭಕ್ಷಿಸಿ ಮಿಕ್ಕ ತೊಗಲಲ್ಲಿ
ಬುದ್ದಲೆಯೊಳಗೆ ತುಪ್ಪವ ತುಂಬಿಹುದೊ
ಆ ಹೊಲೆಯರ ಎಂಜಲು ತೊಗಲ ಸಗ್ಗಳೆಯಲ್ಲಿ ಉದಕವ ಕೊಂಬಿರಿ.
ಹದಿನೆಂಟುಜಾತಿಗೆ ಅಧಿಕವೆನಿಸಿಕೊಂಬಿರಿ.
ದ್ವಿಜರೆಲ್ಲರಿಗೆ ಲೆಕ್ಕವಿಲ್ಲದ ನರಕವೆಂದ, ಕಲಿದೇವರದೇವಯ್ಯ. ೮೫
ಎತ್ತಿನ ಮರೆಯ ಒತ್ತುಗಾರರಂತೆ,
ಉಪ್ಪು ದೋಷವೆಂದು ಸಪ್ಪೆಯನುಂಡಡೆ,
ಮತ್ತೆ ರೊಚ್ಚೆಯ ಬಚ್ಚಲ ಮುಟ್ಟುತ್ತಿಪ್ಪ
ಸತ್ತನಾಯಿಗೇಕೆ ವ್ರತ ?
ಇಂತಪ್ಪವರು ನಿಷ್ಠೆಹೀನರು ಕಲಿದೇವರದೇವಾ. ೮೬
ಎತ್ತು ಬಿತ್ತಿತ್ತು, ಒಕ್ಕಲಿಗನಿಂದ ಉತ್ತಮರಿಲ್ಲೆಂದು ನುಡಿವರು.
ಹೊತ್ತಾರೆದ್ದು ಶಿವಲಿಂಗಾರ್ಚನೆಯ ಮಾಡಲರಿಯರು.
ಎತ್ತಾಗಿ ಬಿತ್ತಿದ ನಮ್ಮ ಬಸವಣ್ಣ.
ಹೊತ್ತು ಹೊರೆದನು ಜಗವನು.
ಮತ್ತೆ ಮರಳಿ ಅನ್ಯದೈವವ ನೆನೆಯಲೇಕೊ ?
ಎತ್ತು ಬಿತ್ತಿತ್ತು, ಹಾಲುಹಯನ ಬಸವನಿಂದಾಯಿತ್ತು.
ಇಂತೀ ಬೆಳೆದ ಬಸವನ ಪ್ರಸಾದವನೊಲಿದು,
ಮೃತ್ಯು ಮಾರಿಯ ಎಂಜಲ ಮಾಡಿಕೊಂಡು,
ಭುಂಜಿಸುವ ತೊತ್ತುಜಾತಿಗಳ ನುಡಿಯ ಕೇಳಲಾಗದೆಂದ
ಕಲಿದೇವರದೇವ. ೮೭
ಎತ್ತೆತ್ತ ನೋಡಿದಡೆ ಅತ್ತತ್ತ ಬಸವನೆಂಬ ಬಳ್ಳಿ.
ಎತ್ತಿ ನೋಡಿದಡೆ ಲಿಂಗವೆಂಬ ಗೊಂಚಲು.
ಒತ್ತಿ ಹಿಂಡಿದಡೆ ಭಕ್ತಿಯೆಂಬ ರಸವಯ್ಯಾ.
ಆಯತ ಬಸವಣ್ಣನಿಂದ, ಸ್ವಾಯತ ಬಸವಣ್ಣನಿಂದ.
ಸನ್ನಹಿತವು ಬಸವಣ್ಣನಿಂದ,
ಗುರು ಬಸವಣ್ಣನಿಂದ, ಲಿಂಗ ಬಸವಣ್ಣನಿಂದ.
ಜಂಗಮ ಬಸವಣ್ಣನಿಂದ.
ಪಾದೋದಕ ಬಸವಣ್ಣನಿಂದ, ಪ್ರಸಾದ ಬಸವಣ್ಣನಿಂದ.
ಅತ್ತ ಬಲ್ಲಡೆ ನೀವು ಕೇಳಿರೆ, ಇತ್ತ ಬಲ್ಲಡೆ ನೀವು ಕೇಳಿರೆ.
ಬಸವಾ ಬಸವಾ ಬಸವಾ ಎಂದು ಮಜ್ಜನಕ್ಕೆರೆಯದವನ ಭಕ್ತಿ,
ಶೂನ್ಯ ಕಾಣಾ, ಕಲಿದೇವರದೇವಾ. ೮೮
ಎನಗೆ ಶಿವ ತಾನೀತ ಬಸವಣ್ಣನು
ಮತ್ರ್ಯಲೋಕವನು ಪಾವನವ ಮಾಡುವಲ್ಲಿ.
ಎನಗೆ ಗುರು ತಾನೀತ ಬಸವಣ್ಣನು
ಎನ್ನ ಭವರೋಗವ ಛೇದಿಸಿ ಭಕ್ತನೆನಿಸುವಲ್ಲಿ.
ಎನಗೆ ಲಿಂಗ ತಾನೀತ ಬಸವಣ್ಣನು
ಘನವಿಸ್ತಾರವಪ್ಪ ನಿಜಮಹಿಮೆಯುಳ್ಳಲ್ಲಿ.
ಎನಗೆ ಜಂಗಮ ತಾನೀತ ಬಸವಣ್ಣನು
ಅನಾದಿಸಂಸಿದ್ಧ ಘನಪ್ರಸಾದರೂಪನಾದಲ್ಲಿ.
ಎನ್ನ ನಿಂದ ನಿಲುಕಡೆಯೀತ ಬಸವಣ್ಣನು
ಎನ್ನ ಸರ್ವಸ್ವಾಯತವ ಮಾಡಿ ಸಲಹುವಲ್ಲಿ.
ಇದು ಕಾರಣ, ಕಲಿದೇವರದೇವರು ಸಾಕ್ಷಿಯಾಗಿ
ಎನ್ನ ಪೂರ್ವಾಚಾರಿ ಸಂಗನಬಸವಣ್ಣನ
ಕರುಣದಿಂದಲಾನು ಬದುಕಿದೆನು. ೮೯
ಎನ್ನ ಅಷ್ಟವಿಧಾರ್ಚನೆ ಶುದ್ಧವಾಯಿತ್ತಯ್ಯಾ
ನೀವು ಮೂರ್ತಿಲಿಂಗವಾದ ಕಾರಣ.
ಎನ್ನ ತನು ಮನ ಶುದ್ಧವಾಯಿತ್ತಯ್ಯಾ
ನೀವು ಜಂಗಮಲಿಂಗವಾದ ಕಾರಣ.
ಎನ್ನ ಆಪ್ಯಾಯನ ಶುದ್ಧವಾಯಿತ್ತಯ್ಯಾ
ನಿಮ್ಮ ಪ್ರಸಾದವ ಕೊಂಡೆನಾಗಿ.
ಎನ್ನ ಕಾಮ, ಕ್ರೋಧ, ಲೋಭ, ಮೋಹ, ಮದ, ಮತ್ಸರಂಗಳೆಲ್ಲಾ
ಶುದ್ಧವಾದವಯ್ಯಾ ನೀವು ಜ್ಞಾನಲಿಂಗವಾದ ಕಾರಣ.
ಇಂತೀ ಎನ್ನ ಸರ್ವದಲ್ಲಿ ಸನ್ನಹಿತವಾದೆಯಲ್ಲಾ ಕಲಿದೇವರದೇವ. ೯o
ಎನ್ನ ಆದಿಯನೆತ್ತುವೆನೆ ?
ಅದ ನೀನೆ ಬಲ್ಲೆ, ಘನಗಂಭೀರದಲ್ಲಿ ಹುಟ್ಟಿದನೆಂಬುದ.
ಎನ್ನ ಅನಾದಿಯನೆತ್ತಿ ಹೇಳಿ ತೋರುವೆನೆ ?
ಅದು ನೀನೆ ಬಲ್ಲೆ, ಎನಗೆ ಕಾಯವಿಲ್ಲೆಂಬುದ.
ಬಸವಣ್ಣನ ಕಾರಣ ಮತ್ರ್ಯಕ್ಕೆ ಬಂದಡೆ
ಒಡಲುಪಾಧಿಯೆಂಬುದಿಲ್ಲ ನೋಡಾ.
ಒಡಲೆ ಬಸವಣ್ಣ, ಪ್ರಾಣವೆ ಚೆನ್ನಬಸವಣ್ಣ,
ಎನ್ನ ಮಹಾಜ್ಞಾನವೇ ನೀವು ನೋಡಾ.
ಇಂತು ಎರಡಿಲ್ಲದಿಪ್ಪಲ್ಲಿ, ನುಡಿಯಡಗಿದ ಪರಿಯ,
ನಿಮ್ಮ ಶರಣ ಬಸವಣ್ಣ ಬಲ್ಲ ಕಾಣಾ, ಕಲಿದೇವರದೇವ. ೯೧
ಎನ್ನ ಆಯತ ಅವಧಾನಗೆಟ್ಟಿತ್ತಯ್ಯಾ.
ಎನ್ನ ಸ್ವಾಯತ ಸಂದಳಿಯಿತ್ತಯ್ಯಾ.
ಎನ್ನ ಸಮಾಧಾನ ತರಹವಾಯಿತ್ತಯ್ಯಾ.
ಎನ್ನ ಅರಿವು ನಿಜದಲ್ಲಿ ನಿಃಪತಿಯಾಯಿತ್ತಯ್ಯಾ.
ಕಲಿದೇವರದೇವಾ, ನಿಮ್ಮಲ್ಲಿ ಶಬ್ದಮುಗ್ಧವಾದೆನು. ೯೨
ಎನ್ನ ಕಾಯ ಬಸವಣ್ಣನ ಪೂಜಿಸಲಿಕಾಯಿತ್ತು.
ಎನ್ನ ಜೀವ ಬಸವಣ್ಣನ ನೆನೆಯಲಿಕಾಯಿತ್ತು.
ಎನ್ನ ಶ್ರೋತ್ರ ಬಸವಣ್ಣನ ಚಾರಿತ್ರವ ಕೇಳಲಿಕಾಯಿತ್ತು.
ಎನ್ನ ಪ್ರಾಣ ಬಸವಣ್ಣನ ಸ್ತುತಿಸಲಿಕಾಯಿತ್ತು.
ಎನ್ನ ನೇತ್ರ ಬಸವಣ್ಣನ ಸರ್ವಾಂಗವ ನೋಡಲಿಕಾಯಿತ್ತು.
ಇಂತೆನ್ನ ಪಂಚೇಂದ್ರಿಯಂಗಳು ಕಲಿಗಳಾಗಿ
ಬಸವಣ್ಣನ ಹಿಡಿಯಲಿಕಾಯಿತ್ತು.
ಬಸವಣ್ಣನ ಅರಿವಿನೊಳಗೆ ನಾನಿದ್ದೆನು.
ಬಸವಣ್ಣನ ಮರಹಿನೊಳಗೆ ನಾನಿದ್ದೆನು ಕಾಣಾ
ಕಲಿದೇವರದೇವಾ. ೯೩
ಎನ್ನ ಚಿನ್ನಾದಮಯದ ಗುರುವೆಂದೆನಿಸಿದ ಬಸವಣ್ಣ.
ಎನ್ನ ಚಿದ್ಬಿಂದುವಿನ ಇರವ ಲಿಂಗವೆಂದೆನಿಸಿದ ಬಸವಣ್ಣ.
ಎನ್ನ ಚಿತ್ಕಳೆಯಂಬರವ ಜಂಗಮವೆಂದೆನಿಸಿದ ಬಸವಣ್ಣ.
ಗುರುವಿನಲ್ಲಿ ಶುದ್ಧ, ಲಿಂಗದಲ್ಲಿ ಸಿದ್ಧ, ಜಂಗಮದಲ್ಲಿ ಪ್ರಸಿದ್ಧ.
ಇಂತೀ ಶುದ್ಧಸಿದ್ಧಪ್ರಸಿದ್ಧಪ್ರಸಾದದಲ್ಲಿ,
ಎನ್ನ ಉಣಕಲಿಸಿದ, ಕಲಿದೇವಾ, ನಿಮ್ಮ ಶರಣ ಸಂಗನಬಸವಣ್ಣ. ೯೪
ಎನ್ನ ತನು ಶುದ್ಧವಾಯಿತ್ತು
ಬಸವಣ್ಣನ ಶುದ್ಧಪ್ರಸಾದವ ಕೊಂಡೆನಾಗಿ.
ಎನ್ನ ಮನ ಶುದ್ಧವಾಯಿತ್ತು.
ಬಸವಣ್ಣನ ಸಿದ್ಧಪ್ರಸಾದವ ಕೊಂಡೆನಾಗಿ.
ಎನ್ನ ಭಾವ ಶುದ್ಧವಾಯಿತ್ತು
ಬಸವಣ್ಣನ ಪ್ರಸಿದ್ಧಪ್ರಸಾದವ ಕೊಂಡೆನಾಗಿ.
ಇಂತೆನ್ನ ತನುಮನಭಾವಂಗಳು
ಶುದ್ಧಸಿದ್ಧಪ್ರಸಿದ್ಧಪ್ರಸಾದದಲ್ಲಿ ಶುದ್ಧವಾದವು
ಕಲಿದೇವಾ, ನಿಮ್ಮ ಶರಣ ಬಸವನಿಂತಹ
ಘನಮಹಿಮ ನೋಡಯ್ಯಾ. ೯೫
ಎನ್ನ ಮನ ಬಸವಣ್ಣ, ಎನ್ನ ವಾಕು ಚೆನ್ನಬಸವಣ್ಣ.
ಎನ್ನ ಕಾಯ ಪ್ರಭುದೇವರು.
ಇಂತೀ ಮೂವರ ಪಾದವನು ತ್ರಿಕರಣಶುದ್ಧದಿಂದ ನಂಬಿ ನಂಬಿ
ನಮೋ ನಮೋ ಎನುತಿರ್ದೆನು ಕಾಣಾ, ಕಲಿದೇವರದೇವ. ೯೬
ಎನ್ನ ಸ್ಥೂಲತನುವಿಂಗೆ ಇಷ್ಟಲಿಂಗವಾದಾತ ಬಸವಣ್ಣ.
ಎನ್ನ ಸೂಕ್ಷ್ಮತನುವಿಂಗೆ ಪ್ರಾಣಲಿಂಗವಾದಾತ ಬಸವಣ್ಣ.
ಎನ್ನ ಕಾರಣತನುವಿಂಗೆ ಭಾವಲಿಂಗವಾದಾತ ಬಸವಣ್ಣ.
ಎನ್ನ ದೃಕ್ಕಿಂಗೆ ಇಷ್ಟಲಿಂಗವಾದಾತ ಬಸವಣ್ಣ.
ಎನ್ನ ಮನಕ್ಕೆ ಪ್ರಾಣಲಿಂಗವಾದಾತ ಬಸವಣ್ಣ.
ಎನ್ನ ಭಾವಕ್ಕೆ ತೃಪ್ತಿಲಿಂಗವಾದಾತ ಬಸವಣ್ಣ.
ಎನ್ನ ನಾಸಿಕಕ್ಕೆ ಆಚಾರಲಿಂಗವಾದಾತ ಬಸವಣ್ಣ.
ಎನ್ನ ಜಿಹ್ವೆಗೆ ಗುರುಲಿಂಗವಾದಾತ ಬಸವಣ್ಣ.
ಎನ್ನ ನೇತ್ರಕ್ಕೆ ಶಿವಲಿಂಗವಾದಾತ ಬಸವಣ್ಣ.
ಎನ್ನ ತ್ವಕ್ಕಿಂಗೆ ಜಂಗುರುಲಿಂಗವಾದಾತ ಬಸವಣ್ಣ.
ಎನ್ನ ಶ್ರೋತ್ರಕ್ಕೆ ಪ್ರಸಾದಲಿಂಗವಾದಾತ ಬಸವಣ್ಣ.
ಎನ್ನ ಹೃದಯಕ್ಕೆ ಮಹಾಲಿಂಗವಾದಾತ ಬಸವಣ್ಣ.
ಎನ್ನ ಸುಚಿತ್ತವೆಂಬ ಹಸ್ತಕ್ಕೆ ಆಚಾರಲಿಂಗವಾದಾತ ಬಸವಣ್ಣ.
ಎನ್ನ ಸುಬುದ್ಧಿಯೆಂಬ ಹಸ್ತಕ್ಕೆ ಗುರುಲಿಂಗವಾದಾತ ಬಸವಣ್ಣ.
ಎನ್ನ ನಿರಹಂಕಾರವೆಂಬ ಹಸ್ತಕ್ಕೆ ಶಿವಲಿಂಗವಾದಾತ ಬಸವಣ್ಣ.
ಎನ್ನ ಸುಮನವೆಂಬ ಹಸ್ತಕ್ಕೆ ಜಂಗಮಲಿಂಗವಾದಾತ ಬಸವಣ್ಣ.
ಎನ್ನ ಸುಜ್ಞಾನವೆಂಬ ಹಸ್ತಕ್ಕೆ ಪ್ರಸಾದಲಿಂಗವಾದಾತ ಬಸವಣ್ಣ.
ಎನ್ನ ಸದ್ಭಾವವೆಂಬ ಹಸ್ತಕ್ಕೆ ಮಹಾಲಿಂಗವಾದಾತ ಬಸವಣ್ಣ.
ಎನ್ನ ಆಧಾರಚಕ್ರದಲ್ಲಿ ಆಚಾರಲಿಂಗವಾಗಿ ಮೂರ್ತಿಗೊಂಡಾತ ಬಸವಣ್ಣ.
ಎನ್ನ ಸ್ವಾದಿಷ್ಠಾನಚಕ್ರದಲ್ಲಿ ಗುರುಲಿಂಗವಾಗಿ ಮೂರ್ತಿಗೊಂಡಾತ ಬಸವಣ್ಣ.
ಎನ್ನ ಮಣಿಪೂರಕಚಕ್ರದಲ್ಲಿ ಶಿವಲಿಂಗವಾಗಿ ಮೂರ್ತಿಗೊಂಡಾತ ಬಸವಣ್ಣ.
ಎನ್ನ ಅನಾಹತಚಕ್ರದಲ್ಲಿ ಜಂಗಮಲಿಂಗವಾಗಿ ಮೂರ್ತಿಗೊಂಡಾತ ಬಸವಣ್ಣ.
ಎನ್ನ ವಿಶುದ್ಧಿ ಚಕ್ರದಲ್ಲಿ ಪ್ರಸಾದಲಿಂಗವಾಗಿ ಮೂರ್ತಿಗೊಂಡಾತ ಬಸವಣ್ಣ.
ಎನ್ನ ಆಜ್ಞಾಚಕ್ರದಲ್ಲಿ ಮಹಾಲಿಂಗವಾಗಿ ಮೂರ್ತಿಗೊಂಡಾತ ಬಸವಣ್ಣ.
ಎನ್ನ ಬ್ರಹ್ಮರಂಧ್ರದಲ್ಲಿ ನಿಃಕಲಲಿಂಗವಾಗಿ ಮೂರ್ತಿಗೊಂಡಾತ ಬಸವಣ್ಣ.
ಎನ್ನ ಶಿಖಾಚಕ್ರದಲ್ಲಿ ಶೂನ್ಯಲಿಂಗವಾಗಿ ಮೂರ್ತಿಗೊಂಡಾತ ಬಸವಣ್ಣ.
ಎನ್ನ ಪಶ್ಚಿಮಚಕ್ರದಲ್ಲಿ ನಿರಂಜನಲಿಂಗವಾಗಿ ಮೂರ್ತಿಗೊಂಡಾತ ಬಸವಣ್ಣ.
ಎನ್ನ ವದನಕ್ಕೆ ಓಂಕಾರವಾದಾತ ಬಸವಣ್ಣ.
ಎನ್ನ ಬಲದ ಭುಜಕ್ಕೆ ನಕಾರವಾದಾತ ಬಸವಣ್ಣ.
ಎನ್ನ ಎಡದ ಭುಜಕ್ಕೆ ಮಕಾರವಾದಾತ ಬಸವಣ್ಣ.
ಎನ್ನ ಒಡಲಿಂಗೆ ಶಿಕಾರವಾದಾತ ಬಸವಣ್ಣ.
ಎನ್ನ ಬಲದ ಪಾದಕ್ಕೆ ವಕಾರವಾದಾತ ಬಸವಣ್ಣ.
ಎನ್ನ ಎಡದ ಪಾದಕ್ಕೆ ಯಕಾರವಾದಾತ ಬಸವಣ್ಣ.
ಎನ್ನಾ ಆಪಾದಮಸ್ತಕ ಪರಿಯಂತರ ಮಂತ್ರರೂಪಕಸಂಬಂಧವಾದಾತ ಬಸವಣ್ಣ.
ಎನ್ನ ನಾದಕ್ಕೆ ಆಕಾರವಾದಾತ ಬಸವಣ್ಣ.
ಎನ್ನ ಬಿಂದುವಿಂಗೆ ಉಕಾರವಾದಾತ ಬಸವಣ್ಣ.
ಎನ್ನ ಕಳೆಗೆ ಮಕಾರವಾದಾತ ಬಸವಣ್ಣ.
ಎನ್ನ ರುಧಿರಕ್ಕೆ ನಕಾರವಾದಾತ ಬಸವಣ್ಣ.
ಎನ್ನ ಮಾಂಸಕ್ಕೆ ಮಕಾರವಾದಾತ ಬಸವಣ್ಣ.
ಎನ್ನ ಮೇಧಸ್ಸಿಂಗೆ ಶಿಕಾರವಾದಾತ ಬಸವಣ್ಣ.
ಎನ್ನ ಅಸ್ಥಿಗೆ ವಕಾರವಾದಾತ ಬಸವಣ್ಣ.
ಎನ್ನ ಮಜ್ಜೆಗೆ ಯಕಾರವಾದಾತ ಬಸವಣ್ಣ.
ಎನ್ನ ಸರ್ವಾಂಗಕ್ಕೆ ಓಂಕಾರವಾದಾತ ಬಸವಣ್ಣ.
ಇಂತು ಬಸವಣ್ಣನೆ ಪರಿಪೂರ್ಣನಾಗಿ,
ಬಸವಣ್ಣನೆ ಪ್ರಾಣವಾಗಿ, ಬಸವಣ್ಣನೆ ಅಂಗವಾಗಿ,
ಬಸವಣ್ಣನೆ ಲಿಂಗವಾದ ಕಾರಣ, ನಾನು ಬಸವಣ್ಣಾ ಬಸವಣ್ಣಾ ಬಸವಣ್ಣಾ
ಎಂದು ಬಯಲಾದೆನು ಕಾಣಾ, ಕಲಿದೇವರದೇವ. ೯೭
ಎನ್ನಂಗದ ಆಚಾರದಲ್ಲಿ ಸಂಗನಬಸವಣ್ಣನ ಕಂಡೆನು.
ಎನ್ನ ಮನದ ಅರಿವಿನಲ್ಲಿ ಚೆನ್ನಬಸವಣ್ಣನ ಕಂಡೆನು.
ಎನ್ನ ಭಾವದ ಕೊನೆಯ ಮೊನೆಯ ಮೇಲೆ
ಅಲ್ಲಮಪ್ರಭುದೇವರ ಕಂಡೆನು.
ಎಲೆ ಕಲಿದೇವರದೇವಯ್ಯ ನಿಮ್ಮ ಶರಣರ ಘನವನು
ಎನ್ನ ಸರ್ವಾಂಗದಲ್ಲಿ ಕಂಡು, ನಮೋನಮೋ ಎನುತಿರ್ದೆನು. ೯೮
ಎರಡುಕೋಟಿ ವೀರಗಣಂಗಳಾಗಬಹುದಲ್ಲದೆ
ಹರಳಯ್ಯ ಮಧುವಯ್ಯಗಳಾಗಬಾರದಯ್ಯಾ.
ಗಂಗೆವಾಳುಕಸಮಾರುದ್ರರಾಗಬಹುದಲ್ಲದೆ
ಜಗದೇವ ಮೊಲ್ಲೆಬೊಮ್ಮಣ್ಣಗಳಾಗಬಾರದಯ್ಯಾ.
ಕಲಿದೇವರದೇವಾ, ನಾನು ನೀನಾಗಬಹುದಲ್ಲದೆ
ಭಕ್ತಿಗೆ ಬಸವಣ್ಣನಲ್ಲದಾಗಬಾರದೆಂದರಿದು,
ಆ ಬಸವಣ್ಣನ ಶ್ರೀಪಾದಕ್ಕೆ ನಮೋ ನಮೋ ಎನುತಿರ್ದೆನು. ೯೯
ಎಲೆ ಕಲಿದೇವಯ್ಯಾ,
ಆದಿಯ ಕುಳವೂ ಅನಾದಿಯ ಕುಳವೂ
ನಿಮ್ಮ ಜಂಗಮಮೂರ್ತಿಯಲ್ಲಿ ನಿಂದಿತ್ತು.
ಮೂಲಶುದ್ಧದ ಮುಕ್ತಾಯ
ನಿಮ್ಮ ಜಂಗಮಮೂರ್ತಿಯಲ್ಲಿ ನಿಂದಿತ್ತು.
ಉಭಯಕುಳದ ಕಿರಣಶಕ್ತಿ
ನಿಮ್ಮ ಜಂಗಮಮೂರ್ತಿಯಲ್ಲಿ ನಿಂದಿತ್ತು.
ಭಾವವೂ ನಿರ್ಭಾವವೂ
ನಿಮ್ಮ ಜಂಗಮಮೂರ್ತಿಯಲ್ಲಿ ನಿಂದಿತ್ತು.
ಅರ್ಥ ಪ್ರಾಣ ಅಭಿಮಾನ
ನಿಮ್ಮ ಜಂಗಮಮೂರ್ತಿಯಲ್ಲಿ ನಿಂದಿತ್ತು.
ಅಂಗಲಿಂಗಸಂಗ
ನಿಮ್ಮ ಜಂಗಮಮೂರ್ತಿಯಲ್ಲಿ ನಿಂದಿತ್ತು.
ಅಷ್ಟದಳಕಮಲದ ಸಪ್ತಕರ್ಣಿಕೆಯು
ನಿಮ್ಮ ಜಂಗಮಮೂರ್ತಿಯಲ್ಲಿ ನಿಂದಿತ್ತು.
ಎನ್ನ ನಡೆಗೆಟ್ಟಿತ್ತು ನಿಮ್ಮ ಜಂಗಮಮೂರ್ತಿಯಿಂದ.
ಎನ್ನ ನುಡಿಗೆಟ್ಟಿತ್ತು ನಿಮ್ಮ ಜಂಗಮಮೂರ್ತಿಯಿಂದ
ಎನ್ನ ನೋಟ ಕೆಟ್ಟಿತ್ತು ನಿಮ್ಮ ಜಂಗಮಮೂರ್ತಿಯಿಂದ.
ಎನ್ನ ಮಾಟ ಸಮಾಪ್ತಿಯಾಯಿತ್ತು
ನಿಮ್ಮ ಜಂಗಮಮೂರ್ತಿಯಿಂದ.
ನಿಮ್ಮ ಪ್ರಸಾದದಿಂದ ತನು ಶುದ್ಧವಾಯಿತ್ತು.
ಬಸವಣ್ಣ ತೋರಿದ ಕಾರಣ, ನಿಮ್ಮ ಜಂಗಮಮೂರ್ತಿಯ ಕಂಡು
ಬದುಕಿದೆನು ಕಾಣಾ ಕಲಿದೇವರದೇವಾ. ೧oo
ಎಲೆ ಮನವೆ ಕೇಳಾ,
ಶಿವನು ನಿನಗೆ ಅನಂತಾನಂತಯುಗದಲ್ಲಿ ಶಿವಾನುಭಾವಸ್ಥಿತಿಯ ಕಳುಹಿತ್ತ,
ಲೋಕಕ್ಕೆರಡು ಸ್ಥಿತಿಯಲ್ಲಿ ಜನ್ಮಾದಿ ಕಟ್ಟಣೆಯ ಹರಿಯೆಂದು.
ಆ ಪ್ರಭಾಮೂರ್ತಿಯಾಗಿ ಗುರುವೆಂಬ ನಾಮವಂ ಧರಿಸಿ,
ಮಹಾಲಿಂಗೈಕ್ಯವನು, ಮಹಾಲಿಂಗ ಯೋಗಪ್ರಭಾವವನು,
ಅಷ್ಟಾಷಷ್ಟಿತೀರ್ಥಂಗಳನು,
ಶಿವನು ಅನಂತಪ್ರಾಣಿಗಳಿಗೆ ಸಾಧನವೆಂದು ಮಾಡಿದನು.
ಮಂದರಗಿರಿ ರಜತಗಿರಿ ಮೇರುಗಿರಿ ಹಿಮಗಿರಿ
ಮೊದಲಾದ ಅಷ್ಟಕುಲಪರ್ವತಂಗಳನು ಸ್ಥಲಂಗೊಳಿಸಿದನು.
ಅನಾದಿಸಂಸಿದ್ಧದಾದಿಲಿಂಗೇಶ್ವರದೇವರ ಸ್ಥಲಂಗೊಳಿಸಿದನು.
ಎಲ್ಲಾ ಯಂತ್ರಕ್ಕೆ ಅಮೃತಕಳೆಯನೀಯಲೆಂದು
ಕಪಿಲಸಿದ್ಧಮಲ್ಲಿಕಾರ್ಜುನದೇವರ ಸ್ಥಲಂಗೊಳಿಸಿದನು.
ಸಿದ್ಧಸಿಂಹಾಸನದ ಮೇಲೆ ನಾಮಕರಣ ರಾಮನಾಥನಾಗಿ
ಗುರು ಮತ್ರ್ಯಕ್ಕೆ ಬಂದ ಕಾಣಾ ಮನವೆ.
ಆಚಾರ ಗೋಚರವಾಗಬೇಕೆಂದು ಆ ನಿರ್ವಯಲೆಂಬ ಸ್ವಾಮಿ
ತಾನೆಯಾಗಿ, ಓಂಕಾರ ಊಧ್ರ್ವರೇತ ಶಿವನಾಗಿ,
ಬೆಳಗನುಟ್ಟು ಬಸವಣ್ಣ ಬಂದ ಕಾಣಾ ಮನವೆ.
ಎಲ್ಲಾ ಪ್ರಾಣಿಗಳಿಗೆ ಜಿಹ್ವೆಗಳನು ಪವಿತ್ರವ ಮಾಡಲೆಂದು
ಶುದ್ಧಸಿದ್ಧಪ್ರಸಿದ್ಧಪ್ರಸಾದವ ತೋರಿಹೆವೆನುತ
ಮಹಾಪ್ರಸಾದಿ ಚೆನ್ನಬಸವಣ್ಣ ಬಂದ ಕಾಣಾ ಮನವೆ.
ಜ್ಞಾನವಾಹನವಾಗಿ ತನುಮನಧನದ ಮೇಲೆ ನಡೆದು,
ಅನಂತಮೂರ್ತಿಗಳ ಪವಿತ್ರವ ಮಾಡಲೆಂದು
ಎಲ್ಲಾ ಸಂಬಂಧವನು ಕರಸ್ಥಲದಲ್ಲಿ ಹಿಡಿದುಕೊಂಡು,
ಜಂಗಮವಾಗಿ ಪ್ರಭುದೇವರು ಬಂದರು ಕಾಣಾ ಮನವೆ.
ಗುರುವೆ ಮಹಾಭಕ್ತನಾಗಿ ಅರ್ಪಿತವ ಮಾಡಿ,
ಪ್ರಸಾದಿಯ ಅನುಭಾವದ ಆಭರಣವೆ ಜಂಗಮವಾಗಿ,
ಇಂತೀ ಚತುರ್ವಿಧಸ್ಥಲಂಗಳು ಎನ್ನ ಪ್ರಾಣನ ಕೊರಳಲ್ಲಿಹವಾಗಿ,
ನಿಮ್ಮ ಅನಿಮಿಷವಾಗಿ ನಾ ನೋಡುತಿರ್ದೆ ಕಾಣಾ, ಕಲಿದೇವಯ್ಯಾ. ೧o೧
ಎಲ್ಲಾ ಎಲ್ಲವ ಹಡೆಯಬಹುದು, ಭಕ್ತಿಯ ಹಡೆಯಬಾರದು.
ಅಷ್ಟಾದಶವಿದ್ಯೆ ಸಕಲಕಳೆಯನೆಲ್ಲವ ಹಡೆಯಬಹುದು,
ಭಕ್ತಿಯ ಹಡೆಯಬಾರದು.
ಪಂಚತತ್ವಪದವಿಯ ಹಡೆಯಬಹುದು, ಭಕ್ತಿಯ ಹಡೆಯಬಾರದು.
ಈ ಆರಿಗೆಯೂ ಅರಿದು ಹಡೆಯಬಾರದಂಥ ಭಕ್ತಿಯ ಹಡೆದನು.
ಆ ಬಸವಣ್ಣನ ನಾ ಹಡೆದೆನು.
ನಾನೆಲ್ಲರಿಗೆಯೂ ಬಲ್ಲಿದನು ಕಾಣಾ, ಕಲಿದೇವರದೇವ ನಿಮ್ಮಾಣೆ. ೧o೨
ಎಲ್ಲಾ ಭಕ್ತಿಯ ಭೇದವನು, ಎಲ್ಲಾ ಕೂಟದ ಭೇದವನು,
ಎಲ್ಲಾ ಶೀಲದ ಭೇದವನು, ನಾನು ನಿನಗೆ ಬಿನ್ನೈಸುವೆ ಕೇಳಯ್ಯಾ.
ನೀನು ಕರ್ತನಾಗಿ, ನಾನು ಭೃತ್ಯನಾಗಿ ಅವಧರಿಸಯ್ಯಾ.
ಎಲ್ಲಾ ಭೇದಂಗಳನು ಬಸವಣ್ಣ ಮಾಡಿದನು.
ನಿಜಸ್ವಾಯತವನು ಬಸವಣ್ಣ ಮಾಡಿದನು.
ಜಂಗಮಸ್ವಾಯತವನು ಬಸವಣ್ಣ ಮಾಡಿದನು.
ಎನ್ನ ಸರ್ವಾಂಗಸ್ವಾಯತವನು ಬಸವಣ್ಣ ಮಾಡಿದನು.
ಕಾರಣ, ಆ ಬಸವಣ್ಣನ ನೆನೆನೆನೆದು ಬದುಕಿದೆನು ಕಾಣಾ
ಕಲಿದೇವಯ್ಯಾ. ೧o೩
ಎಲ್ಲಾ ವ್ಯಾವರ್ಣಂಗಳು ಸ್ಥಾಪ್ಯದೊಳಗು.
ಎಲ್ಲಾ ವಚನಂಗಳು ತಾಪದೊಳಗು.
ಎಲ್ಲಾ ಸ್ತೋತ್ರಂಗಳು ಕ್ರೋಧದೊಳಗು.
ಎಲ್ಲಾ ಅರಿವು ಮಥನದೊಳಗು.
ಎಲ್ಲಾ ಮೂರ್ತಿಗಳು ಪ್ರಳಯದೊಳಗು.
ಎಲ್ಲಾ ಗೀತಂಗಳು ಸಂವಾದದೊಳಗು.
ಲಿಂಗಾನುಭಾವಿ ಇವನೊಂದನೂ ಮನದಲ್ಲಿ ನೆನೆಯ,
ಏನೆಂದು ಅರಿಯ.
ಸ್ವತಂತ್ರ ನಿತ್ಯನಾಗಿ, ಭಕ್ತಿದಾಸೋಹವ
ನಿಮ್ಮ ಬಸವಣ್ಣನಳವಡಿಸಿಕೊಂಡನು.
ನಿಮ್ಮ ಬಸವಣ್ಣನಿಂತಹ ಸ್ವತಂತ್ರನಯ್ಯಾ
ಕಲಿದೇವರದೇವಾ. ೧o೪
ಎಲ್ಲೆಲ್ಲಿಯ ಪ್ರಾಣಿಯ ಕೊಲ್ಲದಿಹುದೆ ಧರ್ಮ,
ಒಲ್ಲದಿಪ್ಪುದೇ ತಪ.
ಪರವಧುವಿನ ಆಸೆ, ತನ್ನ ಮನದಲ್ಲಿ ಇಲ್ಲದಿರ್ದಡೆ,
ದೇವ ತಾನಲ್ಲಿಯೇ ಎಂದ, ಕಲಿದೇವಯ್ಯ. ೧o೫
ಏಕನಾತಿಯ ಪೂಜಿಸುವವರು ಬತ್ತಲೆಯಯ್ಯ.
ವಿಷ್ಣುವಿನ ಪೂಜಿಸಿದವರು ಭುಜವ ಸುಡಿಸಿಕೊಂಬುದ
ನಾ ಕಂಡೆ, ನಾ ಕಂಡೆನಯ್ಯ.
ನಿಮ್ಮ ಪೂಜಿಸಿದವರು ಇಹಪರಕ್ಕೆ ಸಾಧನ ಮಾಡಿಕೊಂಡುದ
ನಾ ಕಂಡೆ, ನಾ ಕಂಡೆನಯ್ಯಾ ಕಲಿದೇವಯ್ಯ. ೧o೬
ಒಂದು ಕೈಯ ಬಯಲ ಎನಗೆ ಕೊಟ್ಟ.
ಒಂದು ಕೈಯ ಬಯಲ ಚೆನ್ನಬಸವಣ್ಣಂಗೆ ಕೊಟ್ಟ.
ನೀವು ಬಂದಹರೆಂದು ಎಂಟುಸಾವಿರವರುಷ
ಒಗೆದೊಗೆದು ಬಿಳಿದು ಮಾಡುತ್ತಿದ್ದೆನು.
ಒಂದು ಬಿಳಿದ, ಬಸವಣ್ಣ ಲಿಂಗಕ್ಕೆ ಕೊಡು ಎಂದಡೆ,
ಲಿಂಗಕ್ಕೆ ಕೊಡಲೊಲ್ಲದೆ ತಲೆಯ ಸುತ್ತಿಕೊಂಡ.
ಮಡಿಯ ಕೂಲಿಯ ಬೇಡಹೋದಡೆ,
ಬಿಳಿದ ಹರಿದು, ಮೇಲೆ ಬಿಸಾಟನು.
ನೀನುಟ್ಟ ಬೀಳುಡಿಗೆಯನು,
ಚೆನ್ನಬಸವಣ್ಣನ ಕೈಯ ನಿರಾಳವನು.
ಎನಗೆ ಕೊಡಿಸಾ ಕಲಿದೇವಯ್ಯ. ೧o೭
ಒಂದೆ ಭಾವದಿಂದ ಗುರುಲಿಂಗಾರ್ಚನೆ ಪೂಜೆಯಂ ಮಾಡಿ,
ಹಿಂದಣ ಭವಜನ್ಮ ದಂದುಗವನೆ ಗೆಲಿದು,
ಶಿವನ ಸಲುಸಂದ ಪ್ರಮಥರ ಸರಿಯೆನಿಸಿಕೊಂಬುದು ಸಾಮಾನ್ಯವಲ್ಲ.
ಕಂದನ ಶಿವಗರ್ಪಿತವ ಮಾಡಿ,
ಸಿರಿಯಾಳಸೆಟ್ಟಿ ಕೈಲಾಸ ಕಾಬುದು ಸಂದೇಹವಾಗಿಹುದೆಂದ.
ಹೃದಯದ ಅಂಧಕಾರ ಹರಿಯಲೆಂದು,
ಗುರುದೇವನು ಬೆಳಗ ತೋರಿದ.
ಹಿಂದಣ ಸೂತಕ ತೊಳೆಯಲೆಂದು ನಿಂದರೂ
ಮಾಯಾಬಂಧನದಲ್ಲಿ ಸಿಲ್ಕಿ, ಗುರುವಿಂಗೆ ವಂದನೆಯ ಮಾಡದೆ,
ಶಿವಗತಿಗೆ ಸಂದೆನೆಂಬ ಸ್ವಾಮಿದ್ರೋಹಿಗಳಿಗೆ
ಎಂದೂ ಗತಿಯಿಲ್ಲವೆಂದ, ಕಲಿದೇವರದೇವಯ್ಯ. ೧o೮
ಒಟ್ಟಿರ್ದ ಮಣ್ಣಿಗೂ ನಟ್ಟಿರ್ದ ಕಲ್ಲಿಗೂ
ಕಟ್ಟಿರ್ದ ಲಿಂಗವಡಿಯಾಗಿ ಬೀಳುವ,
ಲೊಟ್ಟೆಗುಡಿಹಿಗಳನೇನೆಂಬೆನಯ್ಯಾ
ಕಲಿದೇವರದೇವಾ. ೧o೯
ಒಡಲ ಹೊರೆವ ಇಚ್ಫೆಯಿಂದ,
ಹಗಲೆನ್ನದೆ ಇರುಳೆನ್ನದೆ ಬೆಂದ ಬಸುರಿಂಗೆ ಕುದಿವುತ್ತಿದ್ದೇನೆ.
ನಿಮ್ಮ ನೆನೆಯಲೂ ವೇಳೆಯಿಲ್ಲ, ಪೂಜಿಸಲೂ ವೇಳೆಯಿಲ್ಲ.
ಒಂದುವೇಳೆಯಾದರೂ ಶಿವಮಂತ್ರವ ಸ್ಮರಿಸ ತೆರಹಿಲ್ಲ.
ಈ ಪ್ರಯಾಸವ ಬಿಡಿಸಿ, ನಿಮ್ಮ ನೆನೆವಂತೆ ಮಾಡಯ್ಯಾ,
ಕಲಿದೇವರದೇವಾ, ನಿಮ್ಮ ಧರ್ಮ, ನಿಮ್ಮ ಧರ್ಮ. ೧೧o
ಕಂಗಳ ನೋಟ ಕರಸ್ಥಲದ ಪ್ರಾಣ.
ಅಂಗದ ವಿಕಾರ ನಿರ್ವಿಕಾರವಾಗಿತ್ತು.
ಸಂಗಸುಖ ನಿಸ್ಸಂಗವಾಯಿತ್ತು.
ಹೆಂಗೂಸೆಂಬ ಭಾವ ಬಯಲ ಬೆರಸಿತ್ತು.
ಕಲಿದೇವರದೇವಾ, ನಿಮ್ಮನೊಲಿಸಿ ಒಚ್ಚತವೋದ
ಮಹಾದೇವಿಯಕ್ಕನ ಪಾದವ ನೆನೆದು ನಾನು ಬದುಕಿದೆನು. ೧೧೧
ಕಡಲುಗಳ ಕಂಗಳೊಳಗೆ ಮೊಗೆದು ಬರಿಕೆಯ್ವುತಿಹರು
ಕೆಲರು ಗಣೇಶ್ವರರು.
ಮೇರುಗಿರಿಗಳ ಮಿಡಿದು ಮೀಟುತ್ತಿಹರು
ಕೆಲರು ಗಣೇಶ್ವರರು.
ಸಕಲಬ್ರಹ್ಮಾಂಡಗಳ ಹಿಡಿದು ಹಿಸುಕಿ ಕೆಡಹುತ್ತಿಹರು
ಕೆಲರು ಗಣೇಶ್ವರರು.
ಅಗ್ನಿ ವಾಯುಗಳ ಹಿಡಿದು ಹೊಸೆದುಹಾಕುತ್ತಿಹರು
ಕೆಲರು ಗಣೇಶ್ವರರು.
ರವಿ ಶಶಿಗಳನು ಧ್ರುವಮಂಡಲಂಗಳನು ಪೂರಕದಲ್ಲಿ ತೆಗೆತಂದು,
ರೇಚಕದಲ್ಲಿ ಬಿಡುತ್ತಿಹರು
ಕೆಲರು ಗಣೇಶ್ವರರು.
ಬಯಲನಾಕಾರವ ಮಾಡಿ, ಆಕಾರವ ಬಯಲ ಮಾಡುತ್ತಿಹರು
ಕೆಲರು ಗಣೇಶ್ವರರು.
ಇಂತಿವರೆಲ್ಲರೂ ಕಲಿದೇವರದೇವಾ
ನಿಮ್ಮ ಬಸವಣ್ಣನ ನಿರಾಧಾರಪಥದಲ್ಲಿ ನಿಂದಿರ್ಪರು. ೧೧೨
ಕಡಲೊಳಗಣ ಮೊಸಳೆಯ ನಡುವ ಹಿಡಿದು
ಕಡೆಗೆ ಸಾರಿ ಹೋಹೆನೆಂಬವರುಂಟೆ ?
ಜಗದೊಳಗೆ ಮಡದಿ ಮಕ್ಕಳು ಮಾತಾಪಿತರು ಬಾಂಧವರು,
ಮಾಯಾಮೋಹಕ್ಕೆ ದಂದುಗವಿಡಿದು ನಡೆವ ತುಡುಗುಣಿಯ
ಮನದಿಚ್ಫೆಗೆ ಹರಿದು, ಕಡೆಯಗಾಣದೆ,
ಕರ್ಮದ ಕಡಲೊಳಗೆ ಮುಳುಗಿಹೋದರೆಂದ, ಕಲಿದೇವರದೇವ. ೧೧೩
ಕಣ್ಣು ನೋಡಿ ರೂಪ ಹೇಳದಂತಿರಬೇಕು.
ಕಿವಿ ಕೇಳಿ ಶಬ್ದವ ನುಡಿಯಲರಿಯದಂತಿರಬೇಕು.
ಮನವುಂಡು ಡರ್ರನೆ ತೇಗಿ ರುಚಿಯ ಪೇಳಲರಿಯದಂತಿರಬೇಕು.
ಮನವ ತೋರುವ ಗುರುವಿನ ಕಾರುಣ್ಯದನುವ ಕಾಬ ಶಿಷ್ಯಂಗೆ,
ಮನೋಮೂರ್ತ ಮುನ್ನವೆಯಾಯಿತ್ತೆಂದ ಕಲಿದೇವಯ್ಯ. ೧೧೪
ಕರಸ್ಥಲ ಕಂಠಸ್ಥಲ ಕರ್ಣಸ್ಥಲ ಮಧ್ಯಸ್ಥಲ ಮಹಾಸ್ಥಲ.
ಇಂತೀ ಐದು ಸ್ಥಲಂಗಳನು ಮಹಾಸ್ಥಲಕ್ಕೆ ತಂದು,
ಬಸವಣ್ಣ ಸಂಪೂರ್ಣವಾದ ಕಾಣಾ, ಕಲಿದೇವರದೇವಾ. ೧೧೫
ಕರಸ್ಥಲದ ದೇವನಿದ್ದಂತೆ
ಧರೆಯ ಮೇಲಣ ಪ್ರತಿಷ್ಠೆಗೆರಗುವ
ಈ ನರಕಿನಾಯಿಗಳನೇನೆಂಬೆನಯ್ಯಾ
ಕಲಿದೇವಯ್ಯ. ೧೧೬
ಕಲ್ಯಾಣಪಟ್ಟಣದಲ್ಲಿ ಕಲಕೇತಯ್ಯಗಳು
ಕಿನ್ನರಯ್ಯಗಳ ಸ್ಥಾವರದೈವದ ಸೇವೆ, ಯಾಚಕತ್ವವ ಬಿಡಿಸಿ,
ಗುರು ಕೊಟ್ಟ ಇಷ್ಟಲಿಂಗದಲ್ಲಿ ನಿಷ್ಠೆಯ ಗಟ್ಟಿಗೊಳಿಸಿ,
ಘನವೀರಶೈವದ ಬಟ್ಟೆಯನರುಹಿದರೆಂಬುದ ಕೇಳಿ ನಂಬದೆ,
ಸೃಷ್ಟಿಯ ಪ್ರತಿಷ್ಠೆಗೆ ಶರಣೆಂದಡೆ, ಮೆಟ್ಟುವ ನರಕದಲ್ಲಿ ಕಲಿದೇವಯ್ಯ. ೧೧೭
ಕಲ್ಯಾಣವೆಂಬ ಪಟ್ಟಣದೊಳಗೆ ಛತ್ತೀಸಪುರದ ಮಹಾಗಣಂಗಳು.
ಒಂದು ಪುರದವರು ಅಗ್ಘಣಿಯ ತಹರು.
ಎರಡು ಪುರುದವರು ಸಮ್ಮಾರ್ಜನೆ ರಂಗವಾಲಿಯ ಮಾಡುವರು.
ಮೂರು ಪುರದವರು ಲಿಂಗಾರ್ಚನೆಗೆ ನೀಡುವರು.
ನಾಲ್ಕು ಪುರದವರು ಲಿಂಗಕ್ಕೆ ಬೋನವ ಮಾಡುವರು.
ಐದು ಪುರದವರು ಅರ್ಪಿತಕ್ಕೆ ನೀಡುವರು.
ಆರು ಪುರದವರು ಪ್ರಸಾದದಲ್ಲಿ ತದ್ಗತರಾಗಿಹರು.
ಏಳು ಪುರದವರು ಧ್ಯಾನಾರೂಢರಾಗಿಹರು.
ಮುಂದಣ ಪುರದವರು ನಿಶ್ಚಿಂತನಿವಾಸಿಗಳಾಗಿಹರು.
ಈ ಪುರದ ಗಣಂಗಳು ಓಲೈಸುವ ಬಸವನ ಮಹಾಮನೆಯ
ಮಡಿವಾಳ ನಾನು ಕಾಣಾ, ಕಲಿದೇವರದೇವಾ. ೧೧೮
ಕಳ್ಳಬುದ್ಧಿಯೆಡೆಗೊಂಡು ಕರ್ಮಗೇಡಿಯಾಗಿ ಹೋಗಬೇಡವೆಂದು
ಷೋಡಶೋಪಚಾರದಿಂದ ಶ್ರೀಗುರು ಭಕ್ತಿಯ ತೋರಿ,
ಸತ್ಯ ಸದಾಚಾರ ಧರ್ಮ ನೆಲೆಗೊಳ್ಳಬೇಕೆಂದು,
ಸಾಹಿತ್ಯ ಸಂಬಂಧವ ಕೊಟ್ಟು,
ಶ್ರೀಗುರು ಉಪದೇಶವ ಹೇಳಿದ ಮಾರ್ಗದಿ ನಡೆಯಲೊಲ್ಲದೆ,
ನಾಯಿಜಾತಿಗಳು ಕೀಳುಜಾತಿಗಳು ದೈವದ ಜಾತ್ರೆಗೆ ಹೋಗಿ,
ಬೆನ್ನಸಿಡಿಯನೇರಿಸಿಕೊಂಡು, ಅಂಗ ಲಿಂಗಕ್ಕೆರವಾಗಿ,
ತಾಳಿ ತಗಡಿ ಮಾಡಿ, ಮನೆದೈವವೆಂದು ಕೊರಳಿಗೆ ಕಟ್ಟಿಕೊಂಡು
ಮರಳಿ ಉಣಲಿಕ್ಕಿಲ್ಲದಿರ್ದಡೆ, ಮಾರಿಕೊಂಡು ತಿಂಬ ಕೀಳುಜಾತಿಗೆ
ಏಳೇಳುಜನ್ಮದಲ್ಲಿ ಕಾಗೆ ಬಾಯಲಿ ತಿಂಬ ನರಕ ತಪ್ಪದೆಂದ,
ಕಲಿದೇವರದೇವ. ೧೧೯
ಕಾ[ಡಿ]ನೊ[ಳ]ಗೆ ಹೋಗಿ, ಅಭೇದ್ಯವಪ್ಪ ಲಿಂಗದ
ಭೇದವನರಿಯದೆ ಹೋದಿರಲ್ಲಾ.
ಮಿಣುಕಿನ ಪ್ರಭೆಯಂತೆ, ಧಣಧಣಿಸುವ ಘನದನುವನರಿಯದೆ ಹೋದಿರಲ್ಲಾ.
ಪಂಚತತ್ವವನೊಳಕೊಂಡ ಪರಬ್ರಹ್ಮವು ಪಂಚತತ್ವದಲ್ಲಿ ವಂಚಿಸಿದರೆ,
ಸಂಚಲಗೊಂಬ ಸಂದೇಹವ ನೋಡಾ.
ಇದು ಕಾರಣ, ಸರ್ವಸಂಚಲವನತಿಗಳೆದು,
ಸದಾಕಾಲದಲ್ಲಿ ಲಿಂಗವ ಪೂಜಿಸುವ ಪೂಜಾವಿಧಾನರ ತೋರಾ
ಕಲಿದೇವರದೇವ. ೧೨o
ಕಾಮಕ್ರೋಧದ ಕರಸ್ಥಲದಲ್ಲಿ ಗುರು ಸ್ವಾಯತವ ಮಾಡಿದೆನು.
ಲೋಭಮೋಹದ ಕರಸ್ಥಲದಲ್ಲಿ ಲಿಂಗ ಸ್ವಾಯತವ ಮಾಡಿದೆನು.
ಮದದ ಕರಸ್ಥಲದಲ್ಲಿ ಜಂಗಮ ಸ್ವಾಯತವ ಮಾಡಿದೆನು.
ಮತ್ಸರದ ಕರಸ್ಥಲದಲ್ಲಿ ಪ್ರಸಾದ [ಸ್ವಾಯತವ] ಮಾಡಿದೆನು.
ಇಂತೀ ಗುರುಲಿಂಗ ಜಂಗಮ ಪ್ರಸಾದದಲ್ಲಿ ಶುದ್ಧನಾದೆನು ಕಾಣಾ
ಕಲಿದೇವರದೇವಾ. ೧೨೧
ಕಾಮಿಯಾಗಿ ನಿಃಕಾಮಿಯಾದಳು.
ಸೀಮೆಯಲ್ಲಿರ್ದು ನಿಸ್ಸೀಮೆಯಾದಳು.
ಭವಿಯ ಸಂಗವ ತೊರೆದು ಭವಬಾಧೆಯ ಹರಿದಳು.
ಬಸವಣ್ಣನೆ ಗತಿಯೆಂದು ಬರಲು,
ನಾನು ಮಡಿಯ ಹಾಸಿ ನಡೆಸಿದೆ.
ನಡೆವುದಕ್ಕೆ ಹಾಸಿದ ಮಡಿಯ ಸರ್ವಾಂಗಕ್ಕೆ ಹೊಯ್ದಳು.
ಆ ಮಡಿಯ ಬೆಳಗಿನೊಳಗೆ ನಿರ್ವಯಲಾದಳು.
ಕಲಿದೇವರದೇವಾ, ಮಹಾದೇನಿಯಕ್ಕಗಳ ನಿಲವ
ಬಸವಣ್ಣನಿಂದ ಕಂಡು ಬದುಕಿದೆನಯ್ಯಾ ಪ್ರಭುವೆ. ೧೨೨
ಕಾಯದ ಕಳವಳದಿಂದ, ಕರಣದ ಕಳವಳದಿಂದ, ಇಂದ್ರಿಯ ಕಳವಳದಿಂದ,
ವಿಷಯದ ಕಳವಳದಿಂದ, ಮೋಹದ ಕಳವಳದಿಂದ
ಮಾಯಾಪಾಶ ಪಾಕುಳದಲ್ಲಿ ಜನ್ಮ ಜರೆ ಮರಣ ಭವಕ್ಕೊಳಗಾದ ಭವಿಗೆ
ಅನಂತದೈವವಲ್ಲದೆ,
ಜನ್ಮ ಜರೆ ಮರಣ ಭವವಿರಹಿತ ಸದ್ಭಕ್ತಂಗೆ ಅನಂತದೈವವುಂಟೆ ?
ಸೂಳೆಗೆ ಅನಂತಪುರುಷರ ಸಂಗವಲ್ಲದೆ, ಗರತಿಗೆ ಅನಂತಪುರುಷರ ಸಂಗವುಂಟೆ?
ಚೋರಂಗೆ ಪರದ್ರವ್ಯವಲ್ಲದೆ, ಸತ್ಯಸಾತ್ವಿಕಂಗೆ ಪರದ್ರವ್ಯವುಂಟೆ ?
ಹಾದರಗಿತ್ತಿಗೆ ಹಲವು ಮಾತಲ್ಲದೆ, ಪರಮಪತಿವ್ರತೆಗೆ ಹಲವು ಮಾತುಂಟೆ ?
ಪರಮಪಾತಕಂಗೆ ಹಲವು ತೀರ್ಥ, ಹಲವು ಕ್ಷೇತ್ರವಲ್ಲದೆ ?
ಪರಮಸದ್ಭಕ್ತಂಗೆ ಹಲವು ತೀರ್ಥ, ಹಲವು ಕ್ಷೇತ್ರಗಳುಂಟೆ ?
ಗುರುದ್ರೋಹಿ ಲಿಂಗದ್ರೋಹಿ ಚರದ್ರೋಹಿ,
ವಿಭೂತಿ ರುದ್ರಾಕ್ಷಿ ಮಂತ್ರ ಪಾದೋದಕ ಪ್ರಸಾದ ಭಕ್ತದ್ರೋಹಿ,
ಮಾತೃದ್ರೋಹಿ ಪಿತೃದ್ರೋಹಿಗೆ ಕಾಲಕಾಮಕರ್ಮದ ಭಯವಲ್ಲದೆ
ಸತ್ಯ ಸದಾಚಾರ ಸದ್ಭಕ್ತಿ ಸತ್ಕ್ರಿಯಾ ಸಮ್ಯಜ್ಞಾನ ಸತ್ಕಾಯಕ ಸದ್ಭಕ್ತಿಪ್ರಿಯ
ಸದ್ಧಮರ್ಿಗೆ, ಕಾಲಕಾಮಕರ್ಮದ ಭಯವುಂಟೆ, ಕಲಿದೇವರದೇವಾ ? ೧೨೩
ಕಾಯದಲ್ಲಿ ನಿಂದ ಶರಣಂಗೆ ಸೇವೆಯವರ ತಪ್ಪ ಹಿಡಿದೆನೆಂದಡೆ
ಕಾಯಕವೆಂತು ನಡೆವುದಯ್ಯಾ ?
ಅವಗುಣಕ್ಕೆ ಮುನಿಯಬೇಕಲ್ಲದೆ ಲಾಂಛನಕ್ಕೆ ಮುನಿಯಬೇಕೆ ?
ಮುಗ್ಗಿದ ತುರಗನ ಕಾಲ ಕತ್ತರಿಸಿದವರುಂಟೆ ?
ಕಚ್ಚುವ ತಿಗುಣೆಗಾಗಿ ಮನೆಯ ಸುಟ್ಟವರುಂಟೆ ?
ಕಲಿದೇವರದೇವನಲ್ಲಿ ತಪ್ಪ ಹಿಡಿಯಲಿಲ್ಲ, ಕೇಳಾ ಚಂದಯ್ಯ. ೧೨೪
ಕಾಲಕರ್ಮಕಂಜಿ ಶಿವನ ಶೀಲ ಭಕ್ತಿಯ ಹಿಡಿದು
ಗುರುಲಿಂಗಜಂಗಮದ ಪಾದತೀರ್ಥ ಪ್ರಸಾದವ ಕೊಂಡು,
ಕರ್ಮ ದುರಿತವ ಗೆಲಿದು, ಶೀಲ ಶಿವಭಕ್ತಿಯಿಲ್ಲದ ದ್ರೋಹಿಗಳು,
ಹಾಲು ಹಯನ ಮೀಸಲವೆಂದು ಕೂಡಿಸಿಕೊಂಬರು.
ಅವರು ಶೂಲಕ್ಕೆ ಬಿದ್ದು, ಹೊಲೆಜನ್ಮಕ್ಕೆ ಮಾದಿಗರಾಗಿ,
ಉಪವಾಸವಿರ್ದು ಹಸಿದುಂಬ ಕ್ರೂರಕಮರ್ಿಗಳ
ಮುಖವ ನೋಡಲಾಗದೆಂದ ಕಲಿದೇವರದೇವ. ೧೨೫
ಕಾಲಲ್ಲಿ ಕೂರಲಗ ಮೊನೆಯಲ್ಲಿರಿಸಿಕೊಂಡು,
ಸತ್ತುಹೋದವರ ಸಮಥರ್ಿಕೆಯ ಹೊಗಳಿ,
ಹೊಟ್ಟೆಯ ಹೊರೆವ ಕವಿಗಳು ಕೋಟ್ಯಾನುಕೋಟಿ.
ಅರ್ಥವುಳ್ಳವರ ಅಗ್ಗಳಿಕೆಯ ಹೊಗಳುವ ಕವಿಗಳು ಕೋಟ್ಯಾನುಕೋಟಿ.
ಲಿಂಗವ ಹೊಗಳಿ ಹೊಗಳಿ, ಅಂಗದ ಸೂತಕ ಹಿಂಗಿಸಿ,
ಜಂಗಮದ ದಾಸೋಹದಿಂದ ಸರ್ವಾಂಗಲಿಂಗಿಯಾದ
ಭಕ್ತನಂಗಳವೆನಗೆ ವಾರಣಾಸಿ, ಗಾಯತ್ರಿ,
ಮಲಪ್ರಹರಿಯಿಂದಧಿಕವಯ್ಯಾ, ಕಲಿದೇವರದೇವಯ್ಯ. ೧೨೬
ಕಾವರುಂಟೆ ಸಾವಿಗೊಳಗಾಗಿ,
ಸತ್ತುಹೋದ ಸಮಸ್ತಕ್ಕೂ ದೇವನೊಬ್ಬನೆ.
ಕಾವಾತ ಕೊಲುವಾತ ಮಹದೇವರು.
ಮುನಿದರೆ ಮರಳಿ ಕಾವರುಂಟೆ ?
ಸಾವಿಗೊಳಗಾಗಿ ಸತ್ತುಹೋಹ ಭೂತಂಗಳನು
ದೇವರ ಸರಿಯೆಂದಾರಾಧಿಸಿ
ಅಚಲಿತ ಪದವಿಯ ಬೇಡುವ ಗುರುದ್ರೋಹಿಯ
ನುಡಿಯ ಕೇಳಲಾಗದೆಂದ ಕಲಿದೇವಯ್ಯ. ೧೨೭
ಕಾಳಿಕಾದೇವಿ ಚಾಮುಂಡಿ ಗೌರಿ ಬನದ ಶಂಕರಿ.
ಇಂತೀ ನಾಲ್ಕು ಶಕ್ತಿಯರು ಮೊದಲಾದ ಹಲವು ಶಕ್ತಿದೈವಂಗಳನಾರಾಧಿಸಿ,
ಅವರೆಂಜಲ ಭುಂಜಿಸುವವರಿಗೆ ಗುರುವಿಲ್ಲ, ಗುರುಪ್ರಸಾದವಿಲ್ಲ.
ಲಿಂಗವಿಲ್ಲ, ಲಿಂಗಪ್ರಸಾದವಿಲ್ಲ. ಜಂಗಮವಿಲ್ಲ, ಜಂಗಮಪ್ರಸಾದವಿಲ್ಲ.
ಇಂತಪ್ಪ ಪಾತಕರಿಗೆ ಸೂರ್ಯಚಂದ್ರರುಳ್ಳನಕ್ಕ
ಇಪ್ಪತ್ತೆಂಟುಕೋಟಿ ನಾಯಕನರಕ ತಪ್ಪದು.
ಆ ನರಕ ತೀರಿದ ಬಳಿಕ,
ಶ್ವಾನ ಸೂಕರ ಯೋನಿಯಲ್ಲಿ ಬಪ್ಪುದು ತಪ್ಪುದು.
ಆ ಜನ್ಮ ತೀರಿದ ಬಳಿಕ,
ರುದ್ರಪ್ರಳಯ ಪರಿಯಂತರ ನರಕ ತಪ್ಪದೆಂದ, ಕಲಿದೇವಯ್ಯ. ೧೨೮
ಕಿಂಚಿತ್ತು ನೇಮವ ಮಾಡುವಲ್ಲಿ ಶೂನ್ಯವಿಲ್ಲದಿರಬೇಕು.
ಸತ್ಯಕ್ಕೆ ತಕ್ಕ ಸಾಮಥ್ರ್ಯ,
ಒಚ್ಚಿ ಹೊತ್ತಾದಡೂ ಶಿವಪೂಜೆಯ ನಿಶ್ಚಯದಲ್ಲಿ ಮಾಡಬೇಕು.
ಅದು ತನಗೆ ಸುಚಿತ್ತದ ಹಾದಿ, ಕಲಿದೇವರದೇವನೊಳಗು, ಚಂದಯ್ಯ ೧೨೯
ಕೀಳು ಮೇಲಾವುದೆಂದರಿಯದೆ,
ಹದಿನೆಂಟುಜಾತವೆಲ್ಲ ತರ್ಕಕಿಕ್ಕಿ,
ಕೂಳ ಸೊಕ್ಕಿನಲ್ಲಿ ಕಣ್ಣಿಗೆ ಕಾಳಗತ್ತಲೆ ಕವಿದು,
ಸತ್ಯ ಸದಾಚಾರದ ಹಕ್ಕೆಯನರಿಯದೆ,
ಸೂಳೆ ಸುರೆ ಅನ್ಯದೈವದ ಎಂಜಲ ಭುಂಜಿಸುವ
ಕೀಳು ಜಾತಿಗಳು, ಶಿವ ನಿಮ್ಮ ನೆನೆವ
ಭಕ್ತರುಗಳ ಅನುವನರಿಯದೆ,
ಏಳೇಳುಜನ್ಮ ನರಕಕ್ಕೊಳಗಾದರು ನೋಡಾ
ಕಲಿದೇವರದೇವ. ೧೩o
ಕೃತಯುಕ ತ್ರೇತಾಯುಗ ದ್ವಾಪರಯುಗ ಕಲಿಯುಗಂಗಳಲ್ಲಿ
ಬಸವನೆ ಭಕ್ತ, ಪ್ರಭುವೆ ಜಂಗಮವೆಂಬುದಕ್ಕೆ
ಭಾವಭೇದವಿಲ್ಲವೆಂಬುದು ತಪ್ಪದು ನೋಡಯ್ಯಾ.
ಕಲಿಯುಗದಲ್ಲಿ ಶಿವಭಕ್ತಿಯನು ಪ್ರಬಲವ ಮಾಡಬೇಕೆಂದು
ಮತ್ರ್ಯಲೋಕಕ್ಕೆ ಇಳಿದು,
ಶೈವಾಗಮಾಚಾರ್ಯ ಮಂಡಗೆಯ ಮಾದಿರಾಜನ ಸತಿ ಮಾದಾಂಬಿಕೆಯ
ಗರ್ಭದಿಂದವತರಿಸಿದ.
ಬಸವಣ್ಣನೆಂಬ ನಾಮಕರಣವಂ ಧರಿಸಿ,
ಕೂಡಲಸಂಗಮದೇವರ ದಿವ್ಯ ಶ್ರೀಪಾದಪದ್ಮಾರಾಧಕನಾಗಿ,
ಮತ್ರ್ಯಕ್ಕೆ ಪ್ರತಿಕೈಲಾಸವೆಂಬ ಕಲ್ಯಾಣಮಂ ಮಾಡಿ,
ತನ್ನ ಪರೀಕ್ಷೆಗೆ ಬಿಜ್ಜಳನೆಂಬ ಒರೆಗಲ್ಲ ಮಾಡಿ,
ಆ ಸದ್ಭಕ್ತಿ ಬಿನ್ನ[ಹ]ವನು ಒರೆದೊರೆದು ನೋಡುವ
ಕೊಂಡೆಯ ಮಂಚಣ್ಣಗಳ ಪುಟ್ಟಿಸಿದ ಬಸವಣ್ಣ.
ಕಪ್ಪಡಿಯ ಸಂಗಯ್ಯದೇವರ ಸ್ವಹಸ್ತದಿಂದಲುಪದೇಶಮಂ ಪಡೆದು
ಸರ್ವಾಚಾರಸಂಪನ್ನನಾಗಿ ಇರುತ್ತಿರೆ,
ಶಿವನಟ್ಟಿದ ನಿರೂಪಮಂ ಓದಿ, ಅರವತ್ತುಕೋಟಿ ವಸ್ತುವಂ ತೆಗೆಸಿ,
ಬಿಜ್ಜಳಂಗೆ ದೃಷ್ಟಮಂ ತೋರಿ,
ಶಿರಪ್ರಧಾನನಾಗಿ, ಶಿವಾಚಾರ ಶಿರೋಮಣಿಯಾಗಿ,
ಏಳುನೂರಯೆಪ್ಪತ್ತು ಅಮರಗಣಂಗಳಿಗೆ ಪ್ರಥಮದಂಡನಾಯಕನಾಗಿ,
ಗುರುಲಿಂಗಜಂಗಮಕ್ಕೆ ತನುಮನಧನವಂ ನಿವೇದಿಸಿ,
ಅನವರತ ಶಿವಗಣ ತಿಂಥಿಣಿಯೊಳು ಓಡಾಡುತ್ತಿಪ್ಪ ಆ ಬಸವಣ್ಣ,
ಲಕ್ಷದ ಮೇಲೆ ತೊಂಬತ್ತಾರು ಸಾವಿರ ಜಂಗಮದ
ಪಾದೋದಕ ಪ್ರಸಾದದಲ್ಲಿ ನಿಯತನಾಗಿ,
ಅವರವರ ನೇಮದಿಚ್ಫೆಗಳು ಸಲಿಸಿ,
ಒಲಿದು ಮಾಡುವ ದಾಸೋಹದ ಪರಿಯೆಂತೆಂದಡೆ : ಹಾಲನೇಮದವರು ಹನ್ನೆರಡುಸಾವಿರ.
ಘಟ್ಟಿವಾಲ ನೇಮದವರು ಹನ್ನೆರಡುಸಾವಿರ.
ಪಂಚಾಮೃತಗಳ ಒಲಿದು ಲಿಂಗಕ್ಕೆ ಸಲಿಸುವ ನೇಮದವರು
ಹನ್ನೆರಡುಸಾವಿರ.
ಕಟ್ಟುಮೊಸರ ನೇಮದವರು ಹನ್ನೆರಡುಸಾವಿರ.
ಘಟ್ಟಿದುಪ್ಪದ ನೇಮದವರು ಆರುಸಾವಿರ.
ತಿಳಿದುಪ್ಪದ ನೇಮದವರು ಆರುಸಾವಿರ.
ಚಿಲುಮೆಯಗ್ಘವಣಿಯ ನೇಮದವರು ಹನ್ನೆರಡುಸಾವಿರ.
ಪರಡಿ ಸಜ್ಜಿಗೆಯ ನೇಮದವರು ಹನ್ನೆರಡುಸಾವಿರ
ಕಟ್ಟುಮಂಡಗೆಯ ನೇಮದವರು ಹನ್ನೆರಡುಸಾವಿರ.
ಎಣ್ಣೆಹೂರಿಗೆಯ ನೇಮದವರು ಹನ್ನೆರಡುಸಾವಿರ.
ವಡೆ ಘಾರಿಗೆಯ ನೇಮದವರು ಹನ್ನೆರಡುಸಾವಿರ.
ಹಾಲುಂಡೆ ಲಡ್ಡುಗೆಯ ನೇಮದವರು ಹನ್ನೆರಡುಸಾವಿರ.
ತವರಾಜ ಸಕ್ಕರೆಯ ನೇಮದವರು ಹನ್ನೆರಡುಸಾವಿರ.
ಷಡುರಸಾಯನದ ನೇಮದವರು ಹನ್ನೆರಡುಸಾವಿರ.
ದ್ರಾಕ್ಷೆ ಮಾವು, ಖಜರ್ೂರ, ಹಲಸು, ದಾಳಿಂಬ ಇಕ್ಷುದಂಡ ಕದಳಿ
ಮೊದಲಾದ ಫಲದ್ರವ್ಯಂಗಳ ನೇಮದವರು ಹನ್ನೆರಡುಸಾವಿರ.
ಸಪ್ಪೆಯ ನೇಮದವರು ಹನ್ನೆರಡುಸಾವಿರ.
ಸರ್ವದ್ರವ್ಯಂಗಳ ನೇಮದವರು ಹನ್ನೆರಡುಸಾವಿರ.
ಸಮಯಾಚಾರ ಸಹಿತ ಲಿಂಗಾರ್ಚನೆ ಮಾಡುವ ನಿತ್ಯನೇಮಿಗಳು
ಹದಿನಾರುಸಾವಿರ.
ಇಂತು ಎಡೆಬಿಡುವಿಲ್ಲದೆ ಲಿಂಗಾರ್ಚನೆಯ ಮಾಡುವ ಜಂಗಮ
ಲಕ್ಷದ ಮೇಲೆ ತೊಂಬತ್ತಾರು ಸಾವಿರ.
ಆ ಬಸವಣ್ಣನ ಸಮಯಾಚಾರದಲ್ಲಿ ಕುಳ್ಳಿರ್ದು,
ಲಿಂಗಾರ್ಚನೆಯ ಮಾಡುವ ಸಮಯಾಚಾರಿಗಳು ಮೂವತ್ತಾರು ಸಾವಿರ.
ಅಂತು ಎರಡುಲಕ್ಷ ಮೂವತ್ತೆರಡು ಸಾವಿರ ಶಿವಗಣತಿಂಥಿಣಿಗೆ
ಒಲಿದು ದಾಸೋಹಮಂ ಮಾಡುತ್ತ,
ಪ್ರಸಾದ ಪಾದೋದಕದೊಳೋಲಾಡುತ್ತ,
ಸುಖಸಂಕಧಾವಿನೋದದಿಂದ ಭಕ್ತಿಸಾಮ್ರಾಜ್ಯಂಗೆಯ್ವುತ್ತಿರಲು,
ಶಿವಭಕ್ತಿಕುಲಕತಿಲಕ ಶಿವಭಕ್ತಿ ಶಿರೋಮಣಿಯೆಂಬ
ಚೆನ್ನಬಸವಣ್ಣನವತರಿಸಿ
ಶೈವಮಾರ್ಗಮಂ ಬಿಡಿಸಿ, ಪ್ರಾಣಲಿಂಗ ಸಂಬಂಧಮಂ ತೋರಿಸಿ,
ಸರ್ವಾಂಗ ಶಿವಲಿಂಗ ಪ್ರಾಣಪ್ರಸಾದ ಭೋಗೋಪಭೋಗದ
ಭೇದಮಂ ತೋರಿಸಿ,
ದಾಸೋಹದ ನಿರ್ಣಯಮಂ ಬಣ್ಣವಿಟ್ಟು ಬೆಳಗಿ ತೋರಿ,
ಪಾದೋದಕ ಪ್ರಸಾದಮಂ ಕೊಳ ಕಲಿಸಿ,
ಗುರುಲಿಂಗಜಂಗಮದ ಘನಮಂ ತೋರಿಸಿ,
ಶರಣಸತಿ ಲಿಂಗಪತಿಯೆಂಬುದಂ ಸಂಬಂಧಿಸಿ ತೋರಿ,
ಭಕ್ತ ಮಾಹೇಶ್ವರ ಪ್ರಸಾದಿ ಪ್ರಾಣಲಿಂಗಿ ಶರಣೈಕ್ಯನೆಂಬ
ಷಡುಸ್ಥಲಮಂ ಸರ್ವಾಂಗದೊಳು ಪ್ರತಿಷ್ಠಿಸಿ ತೋರಿ ಸಲಹಿದ
ಚೆನ್ನಬಸವಣ್ಣನ ತನ್ನಲ್ಲಿ ಇಂಬಿಟ್ಟುಕೊಂಡು,
ಅಚ್ಚಪ್ರಸಾದಿಯಾಗಿ ಸತ್ಯಪ್ರಸಾದಿಯಾಗಿ ಸಮಯಪ್ರಸಾದಿಯಾಗಿ,
ಸಂತೋಷಪ್ರಸಾದಿಯಾಗಿ ಸರ್ವಾಂಗಪ್ರಸಾದಿಯಾಗಿ,
ಸಮರಪ್ರಸಾದಿಯಾಗಿ, ನಿರ್ಣಯದಲ್ಲಿ ನಿಷ್ಪನ್ನನಾಗಿ,
ನಿಜದಲ್ಲಿ ನಿವಾಸಿಯಾಗಿ, ನಿರಾಳಕ್ಕೆ ನಿರಾಳನಾಗಿ,
ಘನದಲ್ಲಿ ಅಗಮ್ಯನಾಗಿ, ಅಖಂಡ ಪರಿಪೂರ್ಣನಾಗಿ,
ಉಪಮೆಗೆ ಅನುಪಮನಾಗಿ, ವಾಙ್ಮನಕ್ಕಗೋಚರನಾಗಿ,
ಭಾವ ನಿರ್ಭಾವವೆಂಬ ಬಗೆಯ ಬಣ್ಣಕ್ಕೆ ಅತ್ತತ್ತಲೆಂದೆನಿಸಿ
ನಿಃಶೂನ್ಯನೆಂದೆನಿಸಿಪ್ಪ ಸಂಗನಬಸವಣ್ಣನ
ತೊತ್ತಿನ ತೊತ್ತಿನ ಮರುದೊತ್ತಿನ ಮಗ ನಾನು ಕಾಣಾ ಪ್ರಭುವೆ,
ಕಲಿದೇವರದೇವ. ೧೩೧
ಕೆಸರಲ್ಲಿ ಬಿದ್ದ ಪಶುವಿನ ದೇಹವ ತೊಳೆವರಲ್ಲದೆ,
ಲೋಕದೊಳಗೆ ಗಂಜಳದೊಳಗಣ ಹಂದಿಯ ದೇಹವನಾರೂ ತೊಳೆಯರು.
ಗುರುಕಾರುಣ್ಯವುಳ್ಳ ಭಕ್ತರ ನಡೆವ ಗುಣದಲ್ಲಿ
ಎಡಹಿದ ಶಬ್ದಕ್ಕೆ ಪ್ರಾಯಶ್ಚಿತವಂ ಕೊಟ್ಟು,
ವಿಭೂತಿಯನಿಟ್ಟು, ಒಡಗೂಡಿಕೊಂಡು ನಡೆಸುವದೆ ಸದಾಚಾರ.
ಗುರುಚರಲಿಂಗವನರಿಯದ ದುರಾಚಾರಿಗಳಿಗೆ ಪ್ರಾಯಶ್ಚಿತವಂ ಕೊಟ್ಟು,
ವಿಭೂತಿಯನಿಟ್ಟು, ಒಡಗೂಡಿಕೊಂಡ ತೆರನೆಂತೆಂದಡೆ,
ಶೂಕರನ ದೇಹವ ತೊಳೆದಡೆ,
ಕೂಡೆ ಪಾಕುಳದೊಳಗೆ ಹೊರಳಿದ ತೆರನಾಯಿತ್ತೆಂದ ಕಲಿದೇವಯ್ಯ. ೧೩೨
ಕೊಂಬನೂದುವ ಹೊಲೆಯಂಗೆ
ಕುಂಕುಮ ಹಣೆಯಲ್ಲಲ್ಲದೆ ಶ್ರೀವಿಭೂತಿ ಒಪ್ಪುವುದೆ?
ಲಿಂಗಲಾಂಛನವ ತೊಟ್ಟು, ಗುರೂಪದೇಶವ ಹೇಳಿ,
ನೊಸಲಲ್ಲಿ ವಿಭೂತಿಪಟ್ಟವ ಕಟ್ಟಿದ ಬಳಿಕ,
ಮರಳಿ ಗುರುನಿಂದಕನಾಗಿ,
ಹಣೆಯಲ್ಲಿ ಕುಂಕುಮಾದಿ ತಿಲಕವ ಕೊಂಡಡವನಾ
ಕೊಂಬಿನ ಹೊಲೆಯಂಗಿಂದ ಕನಿಷ್ಠವೆಂದ, ಕಲಿದೇವಯ್ಯ. ೧೩೩
ಖೇಚರರಾಗಲಿ, ಭೂಚರರಾಗಿಲಿ,
ಪುರಹರರಾಗಲಿ, ಮಧ್ಯಸ್ಥರಾಗಲಿ,
ಪವನನುಂಡುಂಡು ದಣಿಯದವರಾಗಲಿ,
ಅಗ್ನಿ ಪರಿಹರರಾಗಲಿ,
ಖೇಚರರೊಳು ಬಸವಾಜ್ಞೆ, ಭೂಚರರೊಳು ಬಸವಾಜ್ಞೆ.
ಪುರಹರರೊಳು ಬಸವನ ಮಹಾರತಿ.
ಮಧ್ಯಸ್ಥರೊಳು ಬಸವನೇಕಾಂತವಾಸಿ.
ಪವನದೊಳು ಬಸವ ಹೇಳಿತ್ತ ಕೇಳುವೆ.
ಅಗ್ನಿಯೊಳು ಬಸವಂಗೆ ದಾಸೋಹವ ಮಾಡುವೆ.
ಎನ್ನನೀ ಪರಿಯಲ್ಲಿ ಸಲಹಿದಾತ ಬಸವಣ್ಣ ಕಾಣಾ
ಕಲಿದೇವರದೇವಯ್ಯಾ. ೧೩೪
ಗಂಜಲದೊಳಗಣ ಪಂಡಿತಾರೂಢನು
ಗಂಗೆಯ ಮಿಂದಡೆ ಹಿಂಗಿತೆ ಅದರ ಪೂರ್ವಾಶ್ರಯ?
ಜಂಗುಳದೈವ ಜಾ[ತಿ]ಸೂತಕವಳಿಯಬೇಕೆಂದು,
ಗುರು ತೋರಿದ ಅಷ್ಟವಿಧಾರ್ಚನೆ ಕ್ರಮಂಗಳ ಆದಿಯಲ್ಲಿ
ಮನವು ಸುಸಂಗಿಯಾಗದಿರ್ದಡೆ,
ಸೂಕರ ಗಂಗೆಯ ಮಿಂದಂತಾಯಿತ್ತೆಂದ
ಕಲಿದೇವರದೇವಯ್ಯ. ೧೩೫
ಗಂಡನೆಂಜಲಿಗೆ ಹೇಸುವಳು ಮಿಂಡನ ತಂಬುಲ ತಿಂಬ ತೆರನಂತೆ,
ಗುರುವಿನಲ್ಲಿ ಉಪದೇಶ ಪಡೆದು ಪ್ರಸಾದಕ್ಕೆ ಸೂತಕವ ಮಾಡುವ
ಪಂಚಮಹಾಪಾತಕರು ನೀವು ಕೇಳಿ ಭೋ.
ಅಂಡದೊಳಗೆ ಹುಟ್ಟಿದ ಉತ್ಪತ್ತಿಯೆಲ್ಲವೂ ಗುರುವಿಂದಾಯಿತ್ತು.
ಮತ್ತೆ ಮಿಂಡ ಮೈಲಾರ ಬೀರ ಭೈರವ ಯಕ್ಕನಾತಿ
ಕುಕ್ಕನೂರ ಬಸದಿ ಕೇತಧೂಳನೆಂಬ ಕಾಳುದೈವಕ್ಕೆರಗಿ,
ಶಿವಭಕ್ತನೆನಿಸಿಕೊಂಬ ಚಂಡಿನಾಯಿಗಳ ಕಂಡು,
ಎನ್ನ ಮನ ಹೇಸಿತ್ತು ಕಾಣಾ, ಕಲಿದೇವರದೇವಾ. ೧೩೬
ಗಣಂಗಳು, ನಿತ್ಯಲಿಂಗಾರ್ಚನೆ ಮಾಡುವ ಗಣಂಗಳು.
ನಿಜಲಿಂಗಾರ್ಚನೆ ಮಾಡುವ ಗಣಂಗಳು.
ಘನಲಿಂಗಾರ್ಚನೆ ಮಾಡುವ ಗಣಂಗಳು.
ಸ್ವಯಲಿಂಗಾರ್ಚನೆ ಮಾಡುವ ಗಣಂಗಳು.
ಇಂತಿವೆಲ್ಲ ಭಕ್ತಿಯನು
ನಿತ್ಯಸಿಂಹಾಸನದ ಮೇಲೆ ಕುಳಿತು ಮಾಡುವಾಗ,
ಅವರ ಪ್ರಸಾದದ ರುಚಿಯೊಳಗೋಲಾಡುತಿರ್ದೆನು ಕಾಣಾ
ಕಲಿದೇವಯ್ಯಾ. ೧೩೭
ಗಮನಾದಿಗಳಿಗೆ ಸ್ಥಾವರವುಂಟು.
ಸ್ಥಾವರವುಳ್ಳಲ್ಲಿ ಭೋಗವುಂಟು.
ಭೋಗವುಳ್ಳಲ್ಲಿ ಜನನವುಂಟು.
ಜನನವುಳ್ಳಲ್ಲಿ ಮರಣವುಂಟು.
ಲಿಂಗ ಸುಸಂಗಿಗಳು ಇದ ಕೇಳಲಾಗದು.
ಸದ್ಗುರುಕಾರುಣ್ಯವುಳ್ಳಲ್ಲಿಯೆ ನಡೆವುದು.
ಸದ್ಗುರುಕಾರುಣ್ಯವುಳ್ಳಲ್ಲಿಯೆ ಅನುಭಾವವ ಮಾಡುವುದು.
ಅಂತಪ್ಪ ಮಹಾಭಕ್ತ ಬಸವಣ್ಣ ಕಾಣಾ ಕಲಿದೇವಯ್ಯ. ೧೩೮
ಗರಿಯ ಕಟ್ಟಿದ ಕೋಲು ಗುರಿಯ ತಾಗಬಲ್ಲುದೆ ?
ಗುರುಲಿಂಗ ಜಂಗಮದ ಪಾದತೀರ್ಥ ಪ್ರಸಾದವನರಿಯದೆ,
ಪರಮನ ಕಂಡೆನೆಂಬ ದುರಾಚಾರಿಗಳ ಮುಖವ
ನೋಡಲಾಗದೆಂದಾತ, ನಮ್ಮ ಕಲಿದೇವರದೇವಯ್ಯ. ೧೩೯
ಗೀತ ಪಾತ್ರ ಬೈರೂಪ ಸೂಳೆ ಡೊಂಬಿತಿ
ತಾಳದಂಡಿಗಿ ಸೂಕ (?)ವೈಶಿಕದ ಆಳಾಪಕ್ಕೆ
ಮರುಳಾಗಿ ತಲೆದೂಗುತಿರ್ಪರು,
ಸರ್ಪನು ಸ್ವರವನು ತಾ ಕೇಳಿದಂತೆ.
ಗೋಕ್ಷತ್ರಿಯಧಿಪ ಕಾಕ ಪುರಾಣ (?)
ಪರಧನ ಪರಸತಿ ಗೌತಮ ದುರ್ಯೊಧನ
ಕೀಚಕ ರಾವಳ ಮೊದಲಾಗಿ
ಸತ್ತುಹೋದವರ ಸಂಗತಿಯ ಕೇಳಿದಡೆ,
ಕೆಟ್ಟ ಮೈ ಸುವರ್ಣವಾಯಿತೆಂಬ
ಭ್ರಷ್ಟನಾಯಿನುಡಿಯ ಕೇಳಿ ಕೃತಾರ್ಥರಾದೆವೆಂಬ
ಮತಿಗೇಡಿ ನಾಯಿಗಳಿಗೆ
ಶಿವಗತಿ, ಧರ್ಮಮಾರ್ಗ ಹೇಳಿದವರಿಗೆ
ಸತ್ತ ಹೆಣದ ಮುಂದೆ ಪಂಚಮಹಾವಾದ್ಯವ
ಬಾರಿಸಿದ ತೆರನಂತಾಯಿತ್ತು,
ಕಲಿದೇವರದೇವಯ್ಯಾ ೧೪o
ಗುಂಗುರಿಗೆ ಸುಂಡಿಲು ಹುಟ್ಟಿದೆಡೆ ಆನೆಯಾಗಬಲ್ಲುದೆ ?
ನೊಣವಿಂಗೆ ಪಕ್ಕ ಹುಟ್ಟಿದೆಡೆ ಶರಭನಾಗಬಲ್ಲುದೆ ?
ಕಾಗೆ ಕೋಗಿಲೆಯು ಒಂದೆಯಾದೆಡೆ
ಕೋಗಿಲೆಯಂತೆ ಸ್ವರಗೆಯ್ಯಬಲ್ಲುದೆ ?
ಶ್ವಾನನ ನಡು ಸಣ್ಣನಾದಡೆ ಸಿಂಹನಾಗಬಲ್ಲುದೆ ?
ಅಂಗದ ಮೇಲೆ ವಿಭೂತಿ ರುದ್ರಾಕ್ಷಿ ಶಿವಲಿಂಗವಿದ್ದಡೇನು
ನಿಮ್ಮ ನಂಬಿದ ಸತ್ಯದಾಚಾರವುಳ್ಳ ಏಕಲಿಂಗನಿಷ್ಠಾವಂತರಿಗೆ
ಸರಿಯೆನ್ನಬಹುದೆ ಅಯ್ಯಾ ?
ಇಂಥ ಗುರುಲಿಂಗಜಂಗಮವ ನೆರೆ ನಂಬದೆ,
ಪಾದತೀರ್ಥ ಪ್ರಸಾದದಿರವನರಿಯದೆ,
ಬರಿದೆ ಭಕ್ತರೆಂದು ಬೊಗಳುವ ದುರಾಚಾರಿಯ ತೋರದಿರಯ್ಯಾ
ಕಲಿದೇವರದೇವಾ. ೧೪೧
ಗುರು ಕೊಟ್ಟ ಲಿಂಗ ತನ್ನ ಕರಸ್ಥಲದಲ್ಲಿರುತಿರಲು,
ಧರೆಯ ಮೇಲೆ ಪ್ರತಿಷ್ಠಿಸಿದ ಭವಿಶೈವದೈವ,
ತೀರ್ಥಕ್ಷೇತ್ರಂಗಳಿಗೆ ಹರಿದುಹೋಗುವ ಪರವಾದಿಗಳಿಗೆ
ಅಘೋರನರಕ ತಪ್ಪದೆಂದ, ಕಲಿದೇವಯ್ಯ. ೧೪೨
ಗುರು ಮೂರು, ಲಿಂಗ ಆರು,
ಜಂಗಮವಿಪ್ಪತ್ತೈದರ ಲಾವಣಿಗೆಗೆ ಸಂದು
ಹಿಂದೇನಾಯಿತ್ತು ?
ಮುಂದೆ ಹುಟ್ಟಿ, ಮೆಟ್ಟಿ ನಿಲ್ಲು.
ಕಲಿದೇವಯ್ಯ ಕರುಣಿಸುವನು. ೧೪೩
ಗುರು ಸ್ವಾಯುತವಾಯಿತ್ತು, ಎಂಟುಭಾವ ಸ್ವಾಯುತವಾಯಿತ್ತು.
ಹದಿನಾರುತೆರನ ಭಕ್ತಿ ಸ್ವಾಯುತವಾಯಿತ್ತು.
ಅಷ್ಟವಿಧಾರ್ಚನೆ ಸ್ವಾಯುತವಾಯಿತ್ತು.
ತ್ರಿವಿಧದ ಅರಿವು ಸ್ವಾಯುತವಾಯಿತ್ತು.
ಮಹಾಲಿಂಗದ ನಿಲವು, ಮಹಾಜಂಗಮದ ನಿಜವು ಸ್ವಾಯುತವಾಯಿತ್ತು.
ಶುದ್ಭ ಪ್ರಸಾದ ತನು ಸ್ವಾಯುತವಾಯಿತ್ತು.
ಸಿದ್ಧಪ್ರಸಾದ ಚೈತನ್ಯ ಸ್ವಾಯುತವಾಯಿತ್ತು.
ಪ್ರಸಿದ್ಧಪ್ರಸಾದ ಮನ ಸ್ವಾಯುತವಾಯಿತ್ತು.
ವಾಮಭಾಗದಲ್ಲಿ ಮಹವು ಉದಯವಾಯಿತ್ತು.
ನಿಜಸ್ಥಾನದಲ್ಲಿ ನಿಂದಿತ್ತು, ಕ್ಷೀರಸ್ಥಾನದಲ್ಲಿ ಸಾರಾಯವಾಯಿತ್ತು.
ಅನುಭಾವದಲ್ಲಿ ಘನಾಗಮವೆನಿಸಿತ್ತು.
ಸ್ವಾನುಭಾವದಲ್ಲಿ ನಿಮ್ಮ ಬಸವಣ್ಣಂಗೆ ಶರಣೆಂದಿತ್ತು.
ನೆಮ್ಮುಗೆವಿಡಿದು ಬಸವಣ್ಣನ ಪ್ರಸಾದವ ಕೊಂಡಿತ್ತು.
ನಿಮ್ಮ ಬಸವಣ್ಣನ ಪ್ರಸಾದದಿಂದ ಇಂತಹ ಘನ ಸ್ವಾಯುತವಾಯಿತ್ತು.
ನೀವು ಬಸವಣ್ಣನಿಂದಾದಿರಾಗಿ,
ಬಸವಣ್ಣಂಗೆ ನಮೋ ನಮೋ ಎನುತಿರ್ದೆನು ಕಾಣಾ,
ಕಲಿದೇವರದೇವಾ. ೧೪೪
ಗುರುಕರಜಾತರಾಗಿ ಅಂಗದ ಮೇಲೆ ಲಿಂಗಸಾಹಿತ್ಯವಾದ ಸದ್ಭಕ್ತಂಗೆ,
ಆ ಲಿಂಗವೆ ಪತಿ, ತಾನೆ ಸತಿಯಾಗಿರಲು ತನಗೆ ಬೇರೆ ಸತಿಯುಂಟೆ ?
ಗುರುಕರದಲ್ಲಿ ಉದಯವಾಗಿ, ಅಂಗದ ಮೇಲೆ ಲಿಂಗವ ಧರಿಸಿದ ಲಿಂಗಾಂಗನೆಗೆ,
ಆ ಲಿಂಗವೆ ಪತಿ, ತಾನೆ ಸತಿಯಾಗಿರಲು ಆಕೆಗೆ ಬೇರೆ ಪತಿಯುಂಟೆ ?
ಇದು ಕಾರಣ, ಲಿಂಗವೆ ಪತಿ, ತಾವಿಬ್ಬರೂ ಭಕ್ತಿಸತಿಗಳಾಗಿ,
ಲಿಂಗಸೇವೆಯ ಮಾಡಿ, ಜಂಗಮದಾಸೋಹಿಗಳಾಗಿ,
ಲಿಂಗಜಂಗಮಪ್ರಸಾದಸುಖಿಗಳಾಗಿರಿಯೆಂದು
ಶ್ರೀಗುರು ವಿಭೂತಿಯ ಪಟ್ಟವಂ ಕಟ್ಟಿ, ಉಭಯಮಂ ಕೈಗೂಡಿಸಿ,
ಏಕಪ್ರಸಾದವನೂಡಿ, ಭಕ್ತಿ ವಿವಾಹವ ಮಾಡಿದ ನೋಡಾ.
ಇಂತಪ್ಪ ಭಕ್ತಿ ವಿವಾಹದ ಕ್ರಮವನ್ನರಿಯದೆ,
ಮತ್ತೆ ಬೇರೆ ಜಗದ್ವ್ಯವಹಾರವನುಳ್ಳ ಪಂಚಾಂಗಸೂತಕ
ಪಾತಕದ ಮೊತ್ತದ ಮದುವೆಗೆ ಹರೆಯ ಹೊಯಿಸಿ,
ಹಸೆಯಂ ಸೂಸಿ, ತೊಂಡಿಲು ಬಾಸಿಂಗವೆಂದು ಕಟ್ಟಿ,
ಧಾರೆಯನೆರೆದು ಭೂಮವೆಂದುಣಿಸಿ,
ಹೊಲೆಸೂತಕದ ಮದುವೆಯ ಮಾಡುವ ಪಾತಕರ
ಒಡಗೂಡಿಕೊಂಡು ನಡೆವವರು, ಗುರಚರಭಕ್ತರಲ್ಲ.
ಅವರಿಗೆ ಪ್ರಸಾದವಿಲ್ಲ, ಪ್ರಸಾದವಿಲ್ಲವಾಗಿ ಮುಕ್ತಿಯಿಲ್ಲ.
ಮುಕ್ತಿಯಿಲ್ಲದವಂಗೆ ನರಕ ತಪ್ಪದು ಕಾಣಾ, ಕಲಿದೇವಯ್ಯಾ. ೧೪೫
ಗುರುಪೂಜೆಯನರಿದೆನೆಂದು ಲಿಂಗಪೂಜೆಯ ಬಿಡಲಾಗದು.
ಲಿಂಗಪೂಜೆಯನರಿದೆನೆಂದು ಜಂಗಮಪೂಜೆಯ ಮರೆಯಲಾಗದು.
ಜಂಗಮಪೂಜೆಯನರಿದೆನೆಂದು ಶರಣಸಂಗವ ಮರೆಯಲಾಗದು.
ಇದು ಕಾರಣ, ಶರಣಸಂಗದ ಸಮ್ಯಗ್ಜ್ಞಾನದಲಲ್ಲದೆ
ಕಲಿದೇವಯ್ಯನ ಕೂಡುವ ಕೂಟ ಕಾಣಬಾರದು,
ಹೋಹ ಬಾರಾ ಚಂದಯ್ಯಾ. ೧೪೬
ಗುರುಪ್ರಸಾದ, ಲಿಂಗಪ್ರಸಾದ, ಜಂಗಮಪ್ರಸಾದ
ಈ ತ್ರಿವಿಧ ಪ್ರಸಾದವ ಕೊಂಡು,
ನಂಬದ ಸ್ವಯವಚನ ವಿರೋಧಿಗಳ ಮಾತು ಕೇಳಲಾಗದು.
ಕೇಳುವರು ಮಹಾಪಾತಕರು.
ಲಿಂಗವ ಮಾರಿಕೊಂಡುಂಬುವರು
ನರಕವ ತಿಂಬುವದ ಮಾಣ್ಬರೆ, ಕಲಿದೇವಯ್ಯಾ. ೧೪೭
ಗುರುಪ್ರಸಾದಿಗಳಪೂರ್ವ, ಲಿಂಗಪ್ರಸಾದಿಗಳಪೂರ್ವ,
ಜಂಗಮಪ್ರಸಾದಿಗಳಪೂರ್ವ.
ಗುರುಪ್ರಸಾದಿಯಾದಡೆ ಗುರುವಿಟ್ಟ ತಿಟ್ಟದಲ್ಲಿರಬಲ್ಲಡೆ
ಆತ ಗುರುಪ್ರಸಾದಿ.
ಲಿಂಗಪ್ರಸಾದಿಯಾದಡೆ ಲಿಂಗಾರ್ಪಿತವಿಲ್ಲದೆ ಕೊಳ್ಳನಾಗಿ
ಆತ ಲಿಂಗಪ್ರಸಾದಿ.
ಜಂಗಮಪ್ರಸಾದಿಯಾದಡೆ ಮಗುಳ್ದರ್ಪಿಸಬೇಕು.
ಇಂತೀ ತ್ರಿವಿಧಪ್ರಸಾದದ ಮೂಲವ ನಮ್ಮ ಬಸವಣ್ಣ ಕಲಿಸಿದನಾಗಿ,
ನನಗೂ ನಿನಗೂ ಪ್ರಸಾದವೆ ಪ್ರಾಣವೆಂದು,
ಪ್ರಸಾದವ ಹಾರುತ್ತಿರ್ದೆನಯ್ಯಾ, ಕಲಿದೇವಯ್ಯ. ೧೪೮
ಗುರುಭಕ್ತಿಯಲ್ಲಿಪ್ಪ, ಲಿಂಗಭಕ್ತಿಯಲ್ಲಿಪ್ಪ,
ಜಂಗಮಭಕ್ತಿಯಲ್ಲಿಪ್ಪ, ಪ್ರಸಾದದಲ್ಲಿಪ್ಪ,
ಜಂಗಮಕ್ಕೆ ಮಾಡುವಲ್ಲಿಪ್ಪ, ಮಾಡಿಸಿಕೊಂಬಲ್ಲಿಪ್ಪ,
ತನು ಮನ ಧನ ಒಂದಾಗಿ ನಿವೇದಿಸುವಲ್ಲಿಪ್ಪ
ಸಂಪೂರ್ಣಾತ್ಮನೆಂದು ನಿತ್ಯಂಗೆ ನೀವು ಕಾರುಣ್ಯವ ಮಾಡಿದಿರಿ.
ನಿಮ್ಮ ಕಾರುಣ್ಯಕಟಾಕ್ಷದಲ್ಲಿ ಬಸವಮ್ಮನಲ್ಲದೆ ಮಾಡುವರಿಲ್ಲ.
ಆ ಬಸವಣ್ಣ ಹೇಳಿತ್ತ ಮೀರೆ ಕಾಣಾ, ಕಲಿದೇವರದೇವ. ೧೪೯
ಗುರುಮಾರ್ಗಾಚಾರ ಷಟ್ಸ್ಥಲಮಾರ್ಗವಿಡಿದ ಪ್ರಸಾದಿಗಳು
ಲಘುಶಂಕೆಯ ಮಾಡಿದಡೂ ಸರಿಯೆ,
ಭವಿಜನ್ಮಾತ್ಮರ ಕೂಡೆ ಮಾತನಾಡಿದಡೂ ಸರಿಯೆ,
ಗುರುಪಾದೋದಕ[ದಿಂದಾದಡೂ ಸರಿಯೆ],
ಲಿಂಗಪಾದೋದಕದಿಂದಾದಡೂ ಸರಿಯೆ,
ಆರು ವೇಳೆ ಆಚಮನ ಮಾಡುವದು.
ಇದ ಮೀರಿ, ಜಿಹ್ವೆಯಲ್ಲಿ ಬರುವ ಸತ್ಯೋದಕದ ಗುಟುಕ ಕೊಳಲಾಗದು.
ಬಹಿರ್ಭೂಮಿಗೆ ಹೋದ ಬಳಿಕ,
ಸ್ನಾನವಿಲ್ಲದೆ ಲಿಂಗಾರ್ಚನೆ, ಲಿಂಗಾರ್ಪಣಕ್ರಿಯೆಗಳನಾಚರಿಸಲಾಗದು.
ಮೀರಿ ಮಾಡಿದಡೆ, ಭೂತಪ್ರಾಣಿಯೆಂಬೆನಯ್ಯಾ, ಕಲಿದೇವರದೇವ. ೧೫o
ಗುರುಮಾರ್ಗಾಚಾರ ಸತ್ಕ್ರಿಯಾಭಕ್ತಿಜ್ಞಾನವೈರಾಗ್ಯ
ಷಟ್ಸ್ಥಲಮಾರ್ಗವಿಡಿದು
ಆಚರಿಸುವ ಅಚ್ಚಪ್ರಸಾದಿ ನಿಚ್ಚಪ್ರಸಾದಿ ಸಮಯಪ್ರಸಾದಿ
ಸ್ವಯಚರಪರಮೂರ್ತಿಗಳು
ಮೊದಲಾಗಿ ಲಿಂಗಾರ್ಚನೆಯ ವೇಳೆ ತ್ರಿಕಾಲಂಗಳಲ್ಲಿ
ದಂತಪಙ್ತಿಚೇತನ ಪರಿಯಂತರ
ಮಧುರ ಒಗರು ಖಾರ ಆಮ್ಲ ಕಹಿಯುಕ್ತವಾದ ಕಾಷ್ಠದೊಳಗೆ
ಅರ್ಪಿತಕ್ಕೆ ಅಯೋಗ್ಯವಾದುದನುಳಿದು, ಯೋಗ್ಯವಾದ ಕಾಷ್ಠವ
ದ್ವಾದಶಾಂಗುಲವಾದಡೂ ಸರಿಯೆ, ಅಷ್ಟಾಂಗುಲವಾದಡೂ ಸರಿಯೆ,
ಮೀರಿದಡೆ ಷಡಂಗುಲದಿಂದಾಗಲಿ ದಂತಧಾವನ ಕ್ರಿಯೆಗಳ ಮಾಡುವದು.
ದಂತಪಙ್ತಿಯ ಚೇತನ ತಪ್ಪಿದಲ್ಲಿ
ಪರ್ಣದಿಂದಾಗಲಿ, ಗುರುಪಾದೊದಕಮಿಶ್ರವಾದ ವಿಭೂತಿಯಿಂದಲಾ[ಗಲಿ]
ದಂತಪಙ್ತಿಯ ತೀಡಿ, ಮುಖಸ್ನಾನವ ಮಾಡಿ,
ಲಿಂಗಾರ್ಚನೆ ಲಿಂಗಾರ್ಪಣವ ಮಾಡಬೇಕಲ್ಲದೆ
ಇಂತು ಗುರುವಾಕ್ಯವ ಮೀರಿ, ಸಂಸಾರಲಂಪಟದಿಂದ ಹಾಂಗೆ ಭುಂಜಿಸುವಾತಂಗೆ
ಪ್ರಸಾದಿಸ್ಥಲ ಮೊದಲು, ಪರಸ್ಥಲ ಕಡೆಯಾಗಿ
ಪಿಂಡಾದಿ ಜ್ಞಾನಶೂನ್ಯಸ್ಥಲಕ್ಕೆ ಹೊರಗು ನೋಡ, ಕಲಿದೇವರದೇವಾ. ೧೫೧
ಗುರುಲಿಂಗಜಂಗಮದ ಪಾದತೀರ್ಥ ಪ್ರಸಾದದಲ್ಲಿ
ವಿಶ್ವಾಸ ಸಮನಿಸಿದ ಕಾರಣ,
ಶಾಶ್ವತಪದವಿಯ ಪಡೆದರು ಪೂರ್ವಪುರಾತನರು.
ಆ ಸದಾಚಾರದ ಹೊಲಬನರಿಯದೆ
ದೂಷಕ ನಿಂದಕ ಪರವಾದಿಗಳು ನಾನು ಘನ, ತಾನು ಘನವೆಂದು
ದಾಸಿ, ವೇಸಿ, ಹೊಲತಿ, ದೊಂಬತಿ, ಕಬ್ಬಿಲಿಗಿತಿ, ಅಗಸಗಿತಿ, ಬೇಡತಿಯರ
ಅಧರರಸವ ಸೇವಿಸುವ ದುರಾಚಾರಿಯರು,
ಗುರುಲಿಂಗಜಂಗಮಪ್ರಸಾದವನೆಂಜಲೆಂದು
ಹೊಲೆದೈವದೆಂಜಲ ಭುಂಜಿಸಿ, ಮತ್ತೆ ತಮ್ಮ ಕುಲವ ಮೆರೆವ
ಕುಜಾತಿಗಳ ನುಡಿಯ ಕೇಳಲಾಗದೆಂದ, ಕಲಿದೇವಯ್ಯ. ೧೫೨
ಗುರುವಾಗಿ ಉಪದೇಶವ ತೋರಿದನೀತ.
ಲಿಂಗವಾಗಿ ಮನವನಿಂಬುಗೊಂಡಾತನೀತ.
ಜಂಗಮವಾಗಿ ಅರ್ಥಪ್ರಾಣ ಅಭಿಮಾನದ ದರ್ಪವ ಕೆಡಿಸಿದನೀತ.
ಪ್ರಸಾದವಾಗಿ ಎನ್ನ ಸರ್ವಾಂಗವನವಗ್ರಹಿಸಿದಾತನೀತ.
ಪಾದೋದಕವಾಗಿ ಎನ್ನ ಒಳಹೊರಗೆ ತೊಳದಾತನೀತ.
ಕಲಿದೇವರದೇವಾ, ಬಸವಣ್ಣ ತೋರಿದನಾಗಿ
ಪ್ರಭುವೆಂಬ ಮಹಿಮನ ಸಂಗದಿಂದ ಬದುಕಿದೆನು. ೧೫೩
ಗುರುವಾದಡೂ ಬಸವಣ್ಣನಿಲ್ಲದೆ ಗುರುವಿಲ್ಲ.
ಲಿಂಗವಾದಡೂ ಬಸವಣ್ಣನಿಲ್ಲದೆ ಲಿಂಗವಿಲ್ಲ.
ಜಂಗಮವಾದಡೂ ಬಸವಣ್ಣನಿಲ್ಲದೆ ಜಂಗಮವಿಲ್ಲ.
ಪ್ರಸಾದವಾದಡೂ ಬಸವಣ್ಣನಿಲ್ಲದೆ ಪ್ರಸಾದವಿಲ್ಲ.
ಅನುಭಾವವಾದಡೂ ಬಸವಣ್ಣನಿಲ್ಲದೆ ನುಡಿಯಲಾಗದು.
ಇಂತು ಸಂಗಿಸುವಲ್ಲಿ, ನಿಜಸಂಗಿಸುವಲ್ಲಿ, ಸುಸಂಗಿಸುವಲ್ಲಿ,
ಮಹಾಸಂಗಿಸುವಲ್ಲಿ, ಪ್ರಸಾದ ಸಂಗಿಸುವಲ್ಲಿ,
ಕಲಿದೇವಾ ನಿಮ್ಮ ಶರಣ ಬಸವಣ್ಣನ ನಿಲುವು. ೧೫೪
ಗುರುವಾದಡೂ ಲಿಂಗವ ಪೂಜಿಸಬೇಕು.
ಲಿಂಗವಾದಡೂ ದೇವತ್ವವಿರಬೇಕು.
ಜಂಗಮವಾದಡೂ ಲಿಂಗವಿಲ್ಲದೆ ಪ್ರಮಾಣವಲ್ಲ.
ಆದಿಗೆ ಆಧಾರವಿಲ್ಲದೆ ಜಗವೇನೂ ಇಲ್ಲ.
ಅರಿದೆನೆಂದಡೂ ಅಂಗವೇ ಲಿಂಗವಾಗಿರಬೇಕು.
ಕಲಿದೇವರದೇವಯ್ಯನ ಅರಿವುದಕ್ಕೆ ಇದೇ ಮಾರ್ಗ, ಚಂದಯ್ಯ. ೧೫೫
ಗುರುವಿಡಿದು ಲಿಂಗವ ಕಂಡೆ.
ಲಿಂಗವಿಡಿದು ಜಂಗಮವ ಕಂಡೆ.
ಜಂಗಮವಿಡಿದು ಪಾದತೀರ್ಥ ಪ್ರಸಾದವ ಕಂಡೆ.
ಪಾದತೀರ್ಥಪ್ರಸಾದವಿಡಿದು ಪರವ ಕಂಡೆ.
ಇಂತಿವ ತೋರಿದ ಗುರುವಿನಾಜ್ಞೆಯ ಮೀರಿ ನಡೆವ
ದುರಾಚಾರಿಗಳ ಮುಖವ ನೋಡಲಾಗದೆಂದ, ಕಲಿದೇವಯ್ಯ. ೧೫೬
ಗುರುಶಿಷ್ಯ ಸಂಬಂಧದಿರವ ಇನ್ನಾರು ಬಲ್ಲರು ?
ನೆರೆದ ನೆರವಿಗೆ ಹೇಳಲುಂಟೆ ಈ ಮಾತ ?
ಸ್ತ್ರೀಪುರುಷರ ಸ್ನೇಹಕೂಟವ ಮತ್ತೊಬ್ಬರಿಗೆ ಅರುಹಬಾರದು.
ಗುರುಶಿಷ್ಯ ಸಂಬಂಧವನಿನ್ನಾರು ಬಲ್ಲರು, ಕಲಿದೇವಯ್ಯ ? ೧೫೭
ಗುರೂಪದೇಶವ ಕೇಳದವನೆ ನರಕಿ.
ಗುರುವ ಕಂಡು ಶಿರವೆರಗದವನೆ ನರಕಿ.
ಗುರು ಮುಟ್ಟು ಹೊಲೆಜನ್ಮವ ಕಳೆಯದವನೆ ನರಕಿ.
ಗುರುಪಾದದ ಪೂಜೆಯ ಮಾಡದವನೆ ನರಕಿ.
ಗುರುಪ್ರಸಾದದ ರುಚಿಯನರಿಯದವನೆ ನರಕಿ.
ಗುರುಲಿಂಗವ ಚರವೆನ್ನದವನೆ ನರಕಿ.
ಗುರುನಿಂದೆ ಹರನಿಂದೆ ಚರನಿಂದೆಯಾಡುವ
ದುರಾಚಾರಿಗಳ ಮನೆಯಲ್ಲಿ ಆಹಾರವ ಕೊಂಡಡೆ,
ಅಘೋರನರಕ ತಪ್ಪದೆಂದ, ಕಲಿದೇವಯ್ಯ. ೧೫೮
ಗೋಳಕ ಮೂಲಕ ಮುಕ್ತಕ ದಾರುಕ ರುದ್ರಕ ಕರ್ಣಿಕ,
ಈ ಷಟ್ಶಕ್ತಿಗಳು ಈ ಪಟ್ಟಣದ ಭಕ್ತೆಯರು.
ಇವರ ಮನೆಯ ಜಂಗಮ ನಾನು.
ಇವರ ಗಂಡನಿಗಾನು ಒಕ್ಕುದನಿಕ್ಕುವೆನು.
ಇವರೆನಗೆ ತನು ಮನ ಧನವ ನಿವೇದಿಸುವರು.
ಇರ್ದುದ ವಂಚಿಸದೆ ನಿವೇದಿಸುವರು.
ನಾ ಸಹಿತ ಸರ್ವಲಿಂಗಾರ್ಚನೆಯ ಮಾಡುವರು.
ನಾ ಹಿಡಿದುದನೆ ಹಿಡಿವರು, ನಾ ಬಿಟ್ಟುದನೆ ಬಿಡುವರು.
ನಾ ಬಸವಣ್ಣನ ಮನೆಯ ಜಂಗಮವೆಂದು
ಏನ ಹೇಳಿತ್ತ ಕೇಳುವರು.
ನಾ ಮಹಾದ್ವಾರದಲ್ಲಿ ಬಂದೆನೆಂದಡೆ ಎನ್ನೊಡನೆ ಬಂದರು.
ಹಂಸದ್ವಾರದಲ್ಲಿ ಬಂದೆನೆಂದಡೆ ಎನ್ನೊಡನೆ ಬಂದರು.
ಪೂರ್ವದ್ವಾರ ಪಶ್ಚಿಮದ್ವಾರ ಉತ್ತರದ್ವಾರ ದಕ್ಷಿಣದ್ವಾರ
ಇಂತಿವರೊಳಗೆ ಎನ್ನೊಡನೊಡನೆ ಬಂದರು.
ಎನ್ನ ಪ್ರಸಾದವೆ ವಿಶ್ವಾಸವಾಗಿದ್ದರು.
ನಾನಿವರ ಮನೆಯ ಜಂಗಮವು ಕಾಣಾ, ಕಲಿದೇವಯ್ಯಾ. ೧೫೯
ಘಟದೊಳಗೆ ತೋರುವ ಸೂರ್ಯನಂತೆ
ಎಲ್ಲರೊಳಗೆ, ಸರ್ವರಲ್ಲಿ ಶಿವನ ಚೈತನ್ಯವಿಪ್ಪುದು.
ಇದ್ದರೇನು, ಸರ್ವರಿಗೆ ಸಾಧ್ಯವಲ್ಲ.
ಮುಟ್ಟಿ ಮುಟ್ಟದು ಅದು ಕೂಡುವಡೆ,
ಗುರುವಿಂದಲ್ಲದಾಗದು ಕಾಣಾ, ಕಲಿದೇವಾ. ೧೬o
ಚಂದ್ರ ತಾರಾ ಮಂಡಲಕ್ಕೆ ಒಂದೆರಡು ಯೋಜನಪ್ರಮಾಣು
ಹರಿವ ಕಂಗಳು, ಒಂದು ಸಾಸಿವೆರಜ ತನ್ನ ತಾಗದು.
ಛಂದಸ್ಸು ನಿಘಂಟು ವ್ಯಾಕರಣ ಅದ್ವೈತ ವೇದ ಶಾಸ್ತ್ರ
ಪುರಾಣವನೋದಿಕೊಂಡು ಮುಂದಣವರಿಗೆ ಹೇಳುವರಲ್ಲದೆ,
ತನ್ನೊಳಗಣ ಶುದ್ಧಿಯ ತಾನರಿಯದೆ ಅನ್ಯರಿಗೆ ಉಪದೇಶವ ಹೇಳುವ
ಬಿನುಗುಜಾತಿಗಳ ನುಡಿಯ, ಕೇಳಲಾಗದೆಂದ, ಕಲಿದೇವರದೇವಯ್ಯ ೧೬೧
ಜಂಗಮದ ಇಂಗಿತ ಆಕಾರವಾದಾತನೆ ಗುರು.
ಜಂಗಮದ ಭಕ್ತಿಪ್ರಸಾದವುಳ್ಳಾತನೆ ಗುರು.
ಮಂಗಳತರ ಜ್ಞಾನ, ಮೋಕ್ಷವಹ ಉಪದೇಶವಸ್ತುವನೀವಾತನೆ ಗುರು.
ಇಂತಪ್ಪ ಶ್ರೀಗುರುವಿಂಗೆ ಜಗದಾರಾಧ್ಯರೆಂಬೆ ಕಾಣಾ
ಕಲಿದೇವಯ್ಯ. ೧೬೨
ಜಂಗಮದ ಸೇವೆಗೆ ಲಿಂಗವಿರಹಿತವಾಗಿರಬೇಕೆ ?
ಲಿಂಗವೆಂಬುದು ಜಂಗಮದಂಗ.
ಆ ಲಿಂಗವಿಲ್ಲದೆ ಪ್ರಾಣವುಂಟೆ ?
ಹಣ್ಣಿಲ್ಲದ ರುಚಿಯ ಬಯಸುವಂತೆ,
ನಿನ್ನ ಕಾಯಕದ ಕ್ರೀಯೆಲ್ಲವೂ ಲಿಂಗವಾದ ಬಳಿಕ,
ಮತ್ತೇನು ಭಾವ ಭೇದವೆ ? ನೀನೆಂದಂತೆ ಇರಲಿ.
ಆರೆನೆಂದಡೆ ನಿನ್ನ ಮನವ ತಿಳುಹಿಕೊಳು.
ಇದಕ್ಕೆ ಕಲಿದೇವ ಹೊಣೆ.
ಕರಕೊಳ್ಳಾ ಎನ್ನೊಡೆಯನ, ಚಂದಯ್ಯಾ. ೧೬೩
ಜಂಗಮವೆ ಪ್ರಾಣವೆಂಬುದು
ನಿನಗೆ ಹುಸಿಯಾಯಿತ್ತಲ್ಲಾ ಸಂಗನಬಸವಣ್ಣ.
ನಿನಗೆ ಪ್ರಸಾದದ ಪ್ರಸನ್ನತೆಯೆಂಬುದು
ಸಂದೇಹವಾಯಿತ್ತಲ್ಲಾ ಚೆನ್ನಬಸವಣ್ಣ.
ನಿನಗೆ ಕಾಯವೆ ಬಸವಣ್ಣ, ಜೀವವೆ ಚೆನ್ನಬಸವಣ್ಣ.
ಕೇತಯ್ಯಗಳ ಅಳಿವು, ಕಲಿದೇವನ ಉಳಿವಾಯಿತ್ತು. ೧೬೪
ಜಂಗುಳಿದೈವವೆಂಬ ಜವನಿಕೆಯ ಶಿವನೊಡ್ಡಿದನು ನೋಡಾ.
ಲಿಂಗದ ನಿಷ್ಠೆಯನರಿಯದೆ, ಅರುಹಿರಿಯರೆಲ್ಲ
ಮರುಳಾಗಿ ನರಕಕ್ಕಿಳಿದರು
ಆಗಮದ ಶುದ್ಧಿಯನರಿಯದೆ ಅನ್ಯದೈವಕ್ಕೆರಗುವ
ಭಂಗಿತರೊಡನಾಡಿ ಕೆಡಬೇಡವೆಂದ, ಕಲಿದೇವಯ್ಯ. ೧೬೫
ಜಕ್ಕಿ ಜನ್ನಿ ಎಕ್ಕನಾತಿ ಮಾಯಿರಾಣಿ
ಕುಕ್ಕನೂರ ಬಸದಿ ಚೌಡಿ ಮೈಲಾರ
ಜಿನ್ನನು ಕುಂಟಭೈರವ ಮೊದಲಾದ
ಭೂತ ಪ್ರೇತ ಪಿಶಾಚಿ ದೇವರೆಲ್ಲರೂ
ಅಕ್ಕಸಾಲೆಯ ಕುಪ್ಪಟ್ಟಿಗೆ ಬಂದರಾಗಿ,
ಇದೇ ಸುಡುಗಾಡ ಕಾಣಾ, ಕಲಿದೇವರದೇವಯ್ಯ. ೧೬೬
ಜನ್ಮ ಜರೆ ಮರಣ ಭವಭವಾಂತರದಲ್ಲಿ ತೊಳಲುವ,
ನೂರೊಂದುಕುಲ ಹದಿನೆಂಟುಜಾತಿಗಿಕ್ಕಿದ,
ಅನಂತದೈವದುಚ್ಫಿಷ್ಟೋದಕ ಅದರೆಂಜಲನ್ನಪಾನ್ಯವ ತಂದು,
ಶ್ರೀಗುರು ಕರುಣಿಸಿಕೊಟ್ಟ ಇಷ್ಟಲಿಂಗಕ್ಕೆ ನೈವೇದ್ಯವ ಮಾಡಿ
ಭುಂಜಿಸುವ ಮೂಳಹೊಲೆಯರ ಮನೆಯಲ್ಲಿ ಮಾಡಿದ ಪಾಕವನು,
ತ್ರಿವಿಧದೀಕ್ಷಾನ್ವಿತವಾದ ಇಷ್ಟಮಹಾಲಿಂಗಕ್ಕೆ ಅರ್ಪಿಸಿ ಭುಂಜಿಸುವ
ಅಧಮ ಹೊಲೆಯರು, ಶತಸಹಸ್ರವೇಳೆ ಶುನಿಸೂಕರಾದಿಗಳಲ್ಲಿ ಜನಿಸಿ,
ಅಂತ್ಯದಲ್ಲಿ ಕಾಲಕಾಮರ ಪ್ರಳಯಕ್ಕೊಳಗಾಗದೆ ಮಾಣ್ಬರೇನೊ,
ಕಲಿದೇವರದೇವಾ ? ೧೬೭
ಜಲದೈವವೆಂದಡೆ ಶೌಚವ ಮಾಡಲಿಲ್ಲ.
ನೆಲದೈವವೆಂದಡೆ ಕಾಲೂರಿ ನಡೆಯಲಿಲ್ಲ.
ಅಗ್ನಿದೈವವೆಂದಡೆ ತರಿದು ಮೆಲಲಿಲ್ಲ.
ಅಗ್ನಿದೈವವೆಂದಡೆ ಮನೆಗಳು, ತೃಣಾದಿಗಳು ಬೆಂದು ಕೆಟ್ಟೆವೆನಲಿಲ್ಲ.
ವಾಯುದೈವವೆಂದಡೆ ಕೆಟ್ಟಗಾಳಿ
ಮನೆಗೆ ಬಂದಿತ್ತು, ಬಾಗಿಲಿಕ್ಕಿ ಎನಲಿಲ್ಲ.
ಆಕಾಶದೈವವೆಂದಡೆ ಆಕಾಶವ ಹೊರಗುಮಾಡಿ,
ಒಳಗೆ ಮನೆಯ ಕಟ್ಟಲಿಲ್ಲ.
ಚಂದ್ರದೈವವೆಂದಡೆ ಶೀತಗೊಂಡು ಕೆಟ್ಟೆವೆನಲಿಲ್ಲ.
ಸೂರ್ಯದೈವವೆಂದಡೆ ಉಷ್ಣಗೊಂಡು ಕೆಟ್ಟೆವೆನಲಿಲ್ಲ.
ಆತ್ಮದೈವವೆಂದಡೆ ಸಾವು ಕೇಡು ಇಲ್ಲದಿರಬೇಕು.
ಇದು ಕಾರಣ, ನೆಲದೈವವಲ್ಲ, ಜಲದೈವವಲ್ಲ,
ಅಗ್ನಿದೈವವಲ್ಲ, ವಾಯುದೈವವಲ್ಲ,
ಆಕಾಶದೈವವಲ್ಲ, ಚಂದ್ರಸೂರ್ಯ ಆತ್ಮರು ದೈವವಲ್ಲ.
ಕಲಿದೇವಾ, ನಿಮ್ಮ ಶರಣ ಬಸವಣ್ಣನೊಬ್ಬನೆ ದೈವವೆಂದ,
ಮಡಿವಾಳನು. ೧೬೮
ಜಾತಿನಾಲ್ಕುವಿಡದು ಜಂಗಮವ ಮಾಡಬೇಕೆಂಬ
ಗುರುದ್ರೋಹಿಯ ಮಾತ ಕೇಳಲಾಗದು.
ಅದೆಂತೆಂದಡೆ:’ಯತ್ಕುಲಂ ಗುರುಮುಖಂ ಯೋ ತತ್ಕುಲಂ’ ಎಂದುದಾಗಿ.
ಇಂತೆಂಬ ಶ್ರುತಿಯನರಿದು ಸಮಸ್ತ ಕುಲಗೋತ್ರ ಆಶ್ರಮ ನಾಲ್ಕ ಹೇಳಿ,
ಕಳಸ ಪಂಚಕವನಿಕ್ಕಿ, ಹಲವು ಮಂತ್ರವಿಡಿದು ಮಾಡುವ ಭವಿಶೈವದೀಕ್ಷೆಯ
ಅಂಗಲಿಂಗಸಂಬಂಧವನುಳ್ಳ ನಿಜವೀರಶೈವಕ್ಕೆ ಮಾಡುವ
ಅಜ್ಞಾನಿಗಳಿಗೆ ರವಿಸೋಮರುಳ್ಳನ್ನಕ್ಕ ನರಕ ತಪ್ಪದೆಂದ, ಕಲಿದೇವಯ್ಯ. ೧೬೯
ಜೀವರು ಜೀವಿಸಿ ಜೀವನ್ಮುಕ್ತವೆಂತೆಂದರಿಯರು.
ಜೀವಂಗೆ ಆತ್ಮಸ್ಥಲ ಸಲ್ಲದು.
ತಮ್ಮ ಜೀವಾತ್ಮನನು ಶಿವನೆಂದು, ತಮ್ಮ ಶರೀರವನು ಶಿವನೆಂದು
ಅನಂತ ಋಷಿಯ ಅರ್ಚಿಸಿಕೊಂಬರು.
ಆರಾರುವೆಂದಡೆ: ವಶಿಷ್ಠ ವಾಲ್ಮೀಕಿ ಭೃಗು ದಧೀಚಿ
ಕಾಶ್ಯಪ ಅಗಸ್ತ್ಯ ಮಾರ್ಕಂಡೇಯ ಮೊದಲಾದ ಮಹಾಋಷಿಯರು.
ಅವರ ಶಾಪಾನುಗ್ರಹ ಸಾಮಥರ್ಿಕೆಯ ಪೇಳುವಡೆ,
ಅನಂತ ಶ್ರುತಿಗಳೈದಾವೆ, ಅನಂತ ಶಾಸ್ತ್ರಂಗಳೈದಾವೆ.
ಶಿವನ ಕರದೋಯೆನಿಸಬಲ್ಲರು.
ಅಂತಹರು, ಅಕಟಕಟ ಭಕ್ತಿಯ ಕುಳವನರಿಯದೆ, ಭವಭಾರಕರಾದರು.
ಅಂತು ಜೀವನ ಬಲುಹಿಂದಲು ಸುರರು ಖೇಚರರು
ಗರುಡ ಗಂಧರ್ವರು ಸಿದ್ಧವಿದ್ಯಾಧರರು ಗುಹ್ಯಕರು
ಯಕ್ಷರಾಕ್ಷಸರು ಹರಿವಿರಂಚಿಗಳು ಮೊದಲಾದ
ದೈವಂಗಳೆಲ್ಲಾ ಪ್ರಳಯಚಕ್ರಕ್ಕೊಳಗಾದರು.
ಭಾವಾದ್ವೈತರು ವಾಗಾದ್ವೈತರು ಶ್ವಾನಜ್ಞಾನಿಗಳಾಗಿ ಕೆಟ್ಟರು.
ಭಕ್ತರು ಭಕ್ತಿಯ ಸ್ಥಿತಿ ಕುಳವನರಿಯದೆ,
ಧ್ಯಾನ ಮೌನ ಅನುಷ್ಠಾನ ಜಪತಪ ಸಮಾದಿ
ಸಂಜೆ ಹೋಮ ನೇಮ ನಿತ್ಯ ಅಷ್ಟವಿಧಾರ್ಚನೆ ಷೋಡಶೋಪಚಾರ
ಇಂತೀ ವ್ರತ ಭಾವ ಭಕ್ತಿಯ ಮಾಡಿದರಲ್ಲದೆ,
ಭಕ್ತಿದಾಸೋಹವನರಿಯದೆ ಕೆಟ್ಟರು.
ಅಂದು ನಮ್ಮ ಬಸವಣ್ಣ ಸ್ವತಂತ್ರನಾದ ಕಾರಣ,
ಭಕ್ತಿದಾಸೋಹವಳವಟ್ಟಿತ್ತು.
ಲಿಂಗಸ್ಥಲ ಜಂಗಮಸ್ಥಲ ಪ್ರಸಾದಸ್ಥಲವಳವಟ್ಟಿತ್ತು.
ಜಂಗಮ ಲಿಂಗವೆಂಬುದು ಸಂಗನಬಸವಣ್ಣಂಗೆ ಅಳವಟ್ಟಿತ್ತು.
ದ್ವೈತನಲ್ಲ ಅದ್ವೈತನಲ್ಲ ಬಸವಣ್ಣ, ಭಾವಿಯಲ್ಲ ನಿರ್ಭಾವಿಯಲ್ಲ ಬಸವಣ್ಣ.
ದೇಹಿಯಲ್ಲ ನಿರ್ದೆಹಿಯಲ್ಲ ಬಸವಣ್ಣ, ಖಂಡಿತನಲ್ಲ ಅಖಂಡಿತನಲ್ಲ ಬಸವಣ್ಣ.
ಇಂತಪ್ಪ ಬಸವಣ್ಣಂಗೆ ಆವ ಗುಣಂಗಳೂ ಇಲ್ಲ.
ನಿರ್ಗುಣ ನಿರಂಜನ ನಿಸ್ಸೀಮ ಶಿವನು
ಬಸವಣ್ಣನೊಡನೆ ಆಡುತ್ತಿಪ್ಪನು ಹಾಡುತ್ತಿಪ್ಪನು. ಅದು ಕಾರಣ,
ಬಸವಣ್ಣನ ಮನ ಪರುಷ, ಬಸವಣ್ಣನ ನೋಟ ಪರುಷ.
ಭಾವ ಪರುಷ, ನಡೆ ಪುರುಷ, ನುಡಿ ಪರುಷ, ಹಸ್ತ ಪರುಷ.
ತನುಮನಧನವ ನಿವೇದಿಸಿದಾತ ಬಸವಣ್ಣ.
ಲಿಂಗ ಬಸವಣ್ಣ, ಜಂಗಮ ಬಸವಣ್ಣ, ಗುರು ಬಸವಣ್ಣ.
ಆದಿ ಅನಾದಿಯಿಲ್ಲದಂದಿನ ಬಸವಣ್ಣನ ನೆನೆವುದೆ ಪರತತ್ವ.
ಬಸವಣ್ಣನ ನೆನೆವುದೆ ಪರಮಜ್ಞಾನ, ಬಸವಣ್ಣನ ನೆನೆವುದೆ ಮಹಾನುಭಾವ.
ಎಲೆ ಕಲಿದೇವ, ನಿಮ್ಮ ಶರಣ ಬಸವಣ್ಣನ
ಸಮಸ್ತ ಗಣಂಗಳೆಲ್ಲಾ ನೆನೆದು ಶುದ್ಧರಾದರು. ೧೭o
ತದ್ದುತತುರಿ ಬಾವು ಬಗದಳ ಶೀತ ವಾತ ಬಹುಜ್ವರ
ಹೊಟ್ಟೆಬೇನೆ ಕೆಟ್ಟ ಹುಣ್ಣು ಮೈಕುಷ್ಠ ಮೊದಲಾದ
ಮುನ್ನೂರರುವತ್ತು ವ್ಯಾಧಿಗಳ, ಶಿವನು ಹರಿಯಬಿಟ್ಟು ನೋಡುವ.
ಇವೆಲ್ಲ ಶಿವನ ಕರುಣವಾದಲ್ಲದೆ ಹೋಗವು.
ಇದನರಿಯದೆ, ನಾರು ಬೇರ ನಚ್ಚಿದ ಅವಿದ್ಯ ಸಾಧಕರೆಲ್ಲ
ಹತವಾಗಿ ಹೋದರಂದೆ.
ಇಂತಿದ ವಿಚಾರಿಸಿ ತಿಳಿಯದೆ, ಲೋಕದ ಬುದ್ಧಿಗೇಡಿ ಮನುಜರು,
ಸಜ್ಜನಶುದ್ಧಶಿವಾಚಾರಸಂಪನ್ನರಾದ ಜಂಗಮಲಿಂಗದ ಮಾತ ಕೇಳದೆ,
ಅದ್ದನ ಜೋಳ, ಅರಪಾವು ಎಣ್ಣೆಯ ಕೊಂಡು,
ನೋಟಕಾರ್ತಿಯ ಮನೆಗೆ ಹೋಗಿ,
ಅವಳು ಹೇಳಿದ ತಾತುಭೂತದ ಕೋಟಲೆಯ ಕೈಕೊಂಡು ಬಂದು,
ಅವಕ್ಕೂಟವನಟ್ಟಿಕ್ಕಿ,. ಮಿಕ್ಕಿದ ಕೂಳ ತನ್ನಿಷ್ಟಲಿಂಗಕ್ಕೆ ತೋರಿ ತಿಂಬ,
ಲಿಂಗದ್ರೋಹಿಗಳಿಗೆ ಕುಂಭೀಪಾತಕ ನಾಯಕನರಕ, ತಪ್ಪದೆಂದ,
ಕಲಿದೇವಯ್ಯ. ೧೭೧
ತನಗನ್ಯವಾದುದ ನೋಡಿದಡೆ ಭವಿಸಂಗ.
ಸತ್ಯರು ಒಪ್ಪಿದುದನೊಪ್ಪದಿರ್ದಡೆ ಭವಿಸಂಗ.
ಮಾಡಿಕೊಂಡ ವ್ರತವ ಮೀರಿದಡೆ ಭವಿಸಂಗ.
ತಾ ಮಾಡಿದ ಭಕ್ತಿಯನಾಡಿಕೊಂಡಲ್ಲಿ ಭವಿಸಂಗ.
ಇಂತಿವನರಿದಡೆ ಸದ್ಭಕ್ತಿ, ಕಲಿದೇವರದೇವಾ. ೧೭೨
ತನು ಮನ ಧನವೆಲ್ಲ ಶಿವನ ಒಡವೆಯೆಂದಾರಾಧಿಸುವ
ಅನ್ಯದೈವವಿದ್ದವರ ಮನೆಯಲ್ಲಿ ಅನ್ನವ ಕೊಳ್ಳದಾತನೆ ಶಿವವ್ರತಿ.
ಮಿಕ್ಕಿನ ಭೂತಪ್ರಾಣಿಗಳೆಲ್ಲ ಭಕ್ತರೆನಿಸಿಕೊಂಬುದು.
ಮಾತಿನ ಮಾಲೆಗೆ ತನುವ ಕೊಡುವರು, ಮನವ ಕೊಡುವರು,
ಧನವ ಕೊಡುವರು ಶಿವನ ಘನವ ನೆನೆವ ಪ್ರಕಾಶವನರಿಯರು,
ಅನ್ಯಜಾತಿಯ ಹೆಸರಿನ ಭೂತಿನ ಓಗರವ ಭುಂಜಿಸುವರು,
ಮರಳಿ ಶಿವಭಕ್ತರೆನಿಸಿಕೊಂಬ ಅನಾಚಾರಿಯರ
ನುಡಿಯ ಕೇಳಲಾಗದೆಂದ, ಕಲಿದೇವರದೇವಯ್ಯ. ೧೭೩
ತನುಗುಣವಳಿದು ಲಿಂಗಸಂಗಿಯಾದ.
ಮನಗುಣವಳಿದು ಜ್ಞಾನಸಂಬಂಧಿಯಾದ.
ಪ್ರಾಣಗುಣವಳಿದು ಪ್ರಸಾದಸಂಬಂಧಿಯಾದ.
ಭಾವಭ್ರಮೆಯಳಿದು ನಿಜಲಿಂಗಸಂಬಂಧಿಯಾದ.
ಇಂತೀ ಚತುರ್ವಿಧಸಂಬಂಧಿಯಾಗಿ,
ಶೂನ್ಯಸಿಂಹಾಸನವನಿಂಬುಗೊಂಡ,
ಕಲಿದೇವರ ದೇವ, ನಿಮ್ಮ ಶರಣ ಪ್ರಭುದೇವರ ಪಾದಕ್ಕೆ
ನಮೋ ನಮೋ ಎಂಬೆನು. ೧೭೪
ತನುನಷ್ಟ, ಮನನಷ್ಟ, ನೆನಹುನಷ್ಟ, ಭಾವನಷ್ಟ, ಜ್ಞಾನನಷ್ಟ.
ಇಂತು ಪಂಚನಷ್ಟದೊಳಗೆ ನಾ ನಷ್ಟವಾದೆನು.
ಆ ನಷ್ಟದೊಳಗೆ ನೀನು ನಷ್ಟವಾದೆ.
ಕಲಿದೇವರದೇವನೆಂಬ ನುಡಿ, ‘ನಿಶ್ಯಬ್ದಂ ಬ್ರಹ್ಮಮುಚ್ಯತೇ.’ ೧೭೫
ತನುಮುಖಕ್ಕೆ ನೀಡಿದ ಬೋನ ಅನುವಾಗಿ ಅಳವಡದ ಮುನ್ನ,
ಮನಮುಖಕ್ಕೆ ಸರಿಯಾಯಿತ್ತು.
ಮನಮುಖಕ್ಕೆ ನೀಡಿದ ಬೋನ ಅನುವಾಗಿ ಅಳವಡದ ಮುನ್ನ,
ನೋಡನೋಡಲೈಕ್ಯವಾಯಿತ್ತು.
ಆಕಾಶ ಬಾಯಿದೆಗೆದಂತೆ ಆರೋಗಣೆ ಮಾಡುತಿದ್ದನು.
ಮಾಡಿಸುವ ಗರುವರಾರೊ ?
ಕಲಿದೇವರದೇವನ ಅನುವರಿದು ನೀಡುವಡೆ,
ಸಂಗನಬಸವಣ್ಣಂಗಲ್ಲದೆ ಮತ್ತಾರಿಗೂ ಅಳವಡದು. ೧೭೬
ತನುವಳಿಯಿತ್ತು. ಮನವಳಿಯಿತ್ತು, ಭಾವವಳಿಯಿತ್ತು,
ಬಯಕೆಯಳಿಯಿತ್ತು, ನಿಜವಳಿಯಿತ್ತು.
ನಾಮ ಸೀಮೆ ಬಯಲ ಬೆರೆಸಿ,
ಕಲಿದೇವರದೇವನಲ್ಲಿ ಬೆರೆಸಿ ಬೇರಿಲ್ಲದಿರ್ದೆನು. ೧೭೭
ತನುವಿನಲ್ಲಿ ಹೊರೆಯಿಲ್ಲ, ಮನದಲ್ಲಿ ವ್ಯಾಕುಳವಿಲ್ಲ.
ಭಾವದಲ್ಲಿ ಬಯಕೆಯಿಲ್ಲ, ಅರಿವಿನಲ್ಲಿ ವಿಚಾರವಿಲ್ಲ.
ನಿಜದಲ್ಲಿ ಅವಧಾನವಿಲ್ಲ. ನಿರ್ಲೆಪಸಂಗದಲ್ಲಿ ಬಿಚ್ಚಿ ಬೇರಾಗಲಿಲ್ಲ.
ಕಲಿದೇವರದೇವಾ, ನಿಮ್ಮಲ್ಲಿ ಬೆರೆಸಿ ಬೇರಿಲ್ಲದಿರ್ದೆನು. ೧೭೮
ತನ್ನ ತಾನರಿದ ಮಹಾಜ್ಞಾನಿ ಶರಣನು
ಚರಿಸುವ ಕ್ರಮವೆಂತೆಂದಡೆ: ಸ್ಥೂಲವೆಂಬ ಕಂಥೆಯ ತೊಟ್ಟು, ಸೂಕ್ಷ್ಮವೆಂಬ ಟೊಪ್ಪರವನಿಕ್ಕಿ,
ತತ್ವವೆಂಬ ಖರ್ಪರವನಾಂತು, ಸತ್ಯವೆಂಬ ದಂಡವಂ ಪಿಡಿದು,
ಶಾಂತಿಯೆಂಬ ಭಸಿತವಂ ತೊಡೆದು,
ಸುಚಿತ್ತವೆಂಬ ಮಣಿಯ ಕಟ್ಟಿ, ವೈರಾಗ್ಯವೆಂಬ ಹಾವುಗೆಯಂ ಮೆಟ್ಟಿ,
ಮನದೃಢವೆಂಬ ಕೌಪವಂ ಕಟ್ಟಿ, ಆಚಾರವೆಂಬ ಕಂಕಣವನ್ನಿಕ್ಕಿ,
ಕ್ಷಮೆದಮೆಗಳೆಂಬ ಕುಂಡಲಮಂ ಧರಿಸಿ,
ಪರಮಾನಂದದಿಂದ ಸುಳಿದು, ಜಗವ ಪಾವನವ ಮಾಡಲೆಂದು
ಭಕ್ತಿ ಭಿಕ್ಷವಂ ಬೇಡುತ್ತ ಬಂದನಯ್ಯ,
ತನ್ನ ಒಲುಮೆಯ ಶರಣಗರ್ೆ ನಿಜಸುಖವನೀಯಲೆಂದು.
ಕಲಿದೇವರದೇವಾ, ನಿಮ್ಮ ಶರಣ ಪ್ರಭುವೆಂಬ ಜಂಗಮವಂ ಕಂಡು,
ಅರ್ಚಿಸಿ, ಪೂಜಿಸಿ, ಒಕ್ಕುದನುಂಡು, ನಿಶ್ಚಿಂತನಾದೆನಯ್ಯ. ೧೭೯
ತನ್ನ ಪ್ರಾಣಲಿಂಗವನನ್ಯರಿಗೆ ಕೊಟ್ಟು ಮನ್ನಿಸಲೇಕೆ ?
ಗುರುವೆಂದು ಬೆಬ್ಬನೆ ಬೆರೆವವರ ನೋಡಾ ಅಯ್ಯಾ.
ಬಿನ್ನಾಣದಿಂದ ಪಂಚಪರ್ವವ ಮಾಡಿ,
ನಂಬಿಸಿ ಹಣವ ಕೊಂಬ ಲಿಂಗದೆರೆಯರ ನೋಡಾ, ಕಲಿದೇವಯ್ಯ. ೧೮o
ತನ್ನ ಲಿಂಗವ ಬಿಟ್ಟು, ಅನ್ಯಲಿಂಗಕ್ಕೆ ಶರಣೆಂಬ
ಕುನ್ನಿಗಳನೇನೆಂಬೆನಯ್ಯಾ, ಕಲಿದೇವರದೇವ. ೧೮೧
ತಾ ಗುರುಲಿಂಗಜಂಗಮದ ಪಾದಕ್ಕೆರಗಿ
ಲೀಯವಾದ ಬಳಿಕ, ಇದು ಚಿಹ್ನೆ ನೋಡಯ್ಯಾ.
ಗುರುಲಿಂಗಜಂಗಮದ ಪಾದವೆ
ತನ್ನ ಸರ್ವಾಂಗದಲ್ಲಿ ಅಚ್ಚೊತ್ತಿದಂತಾಯಿತ್ತಾಗಿ,
ಅಲ್ಲಿಯೆ ಪಾದಾರ್ಚನೆ, ಅಲ್ಲಿಯೆ ಪಾದೋದಕ ಸೇವನೆ.
ಬೇರೆ ಪೃಥಕ್ ಎಂಬುದಿಲ್ಲಯ್ಯ. ಅದೆಂತೆಂದಡೆ:
ಪರಮಗುರುಲಿಂಗಜಂಗಮದ ಸಂಬಂಧ ಸಮರತಿಯ ಸೋಂಕಿನಲ್ಲಿ,
ಪರಮಾನಂದಜಲವೆ ಪ್ರವಾಹವಾಗಿ,
ಸರ್ವಾಂಗದಲ್ಲಿ ಪುಳಕವಾಗಿ ಹರಿವುತ್ತಿರಲು,
ಆ ಪರಮಸುಖಸೇವನೆಯ ಮಾಡುವಲ್ಲಿ,
ಪಾದೋದಕ ಸೇವನೆಯೆನಿಸಿತ್ತಯ್ಯ.
ಈ ಪರಮಾಮೃತದ ತೃಪ್ತಿ ಬಸವಣ್ಣಂಗಾಯಿತ್ತು.
ಆ ಬಸವಣ್ಣನ ಶ್ರೀಪಾದಕ್ಕೆ ನಮೋ ನಮೋ ಎಂದು
ಬದುಕಿದೆನಯ್ಯಾ, ಕಲಿದೇವಯ್ಯ. ೧೮೨
ತಾರಾಧಾರ ಬಾಹ್ಯವ ಸೋಹಂಭಾವ
ಭಾವಾಂತರ ವಾಮಶಕ್ತಿ ಮೋಹಶಕ್ತಿ
ಕನ್ಯಾಶಕ್ತಿ ಬಾಲಶಕ್ತಿ ಗಣಶಕ್ತಿ ಮಂದಿರಶಕ್ತಿ
ಶಿವದೇವ ಈಶ್ವರ ಮಹಾದೇವ ಪರಾಪರ ಶಿವ
ಇಂತಿವೆಲ್ಲವ ಬಸವಣ್ಣ ತಪ್ಪಿಸಿ,
ಈಸರಿಂದಾದ ಭಕ್ತಿಯ ಪ್ರಭಾವದೊಳಿರಿಸಿ,
ಗತಿಯತ್ತ ಹೊದ್ದಲೀಯದೆ, ಮೋಕ್ಷದತ್ತ ಹೊದ್ದಲೀಯದೆ,
ನಾಲ್ಕೂ ಪದದತ್ತ ಹೊದ್ದಲೀಯದೆ,
ಅಭಿನವ ಕೈಲಾಸದತ್ತ ಹೊದ್ದಲೀಯದೆ,
ಲಿಂಗಾರ್ಚನೆಯ ತೋರಿ, ಜಂಗಮಾರ್ಚನೆಯ ಹೇಳಿ,
ಜಂಗಮನಿರಾಕಾರವೆಂದು ತೋರಿ,
ಆ ಜಂಗಮ ಪ್ರಸಾದವ ಲಿಂಗಕ್ಕಿತ್ತು ಆರೋಗಿಸಿ,
ಬಸವಣ್ಣ ತೋರಿದ ಕಾರಣ,
ನಿರವಯದ ಹಾದಿಯ ಬಸವಣ್ಣನಿಂದ ಕಂಡೆನು ಕಾಣಾ,
ಕಲಿದೇವಯ್ಯ. ೧೮೩
ತಾವು ಭಕ್ತರೆಂದು ಪುರಾತರ ವಚನವ ಕೇಳಿ,
ಆಹಾ ಇನ್ನು ಸರಿಯುಂಟೆಯೆಂದು ಕೈವಾರಿಸುವರು ನೋಡಾ.
ಆ ಪುರಾತರ ವಚನವನೊತ್ತಿ ಹೇಳಹೋದಡೆ,
ನಮಗೆ ಅಳವಡುವುದೆ ಗೃಹಸ್ಥರಿಗೆ ಎಂಬರು.
ಕೇಳಿ ಕೇಳಿ ಸತ್ಯವ ನಂಬದ ಮೂಳರನೇನೆಂಬೆನಯ್ಯಾ,
ಕಲಿದೇವಯ್ಯ? ೧೮೪
ತೊತ್ತು ಶೃಂಗಾರವಾದಡೇನೋ
ಪುರುಷನುಳ್ಳ ಮುತ್ತೈದೆಯ ಸರಿಯಹಳೆ?
ಭಕ್ತರ ನುಡಿಗಡಣ ಸಂಗದಲ್ಲಿರಬೇಕೆಂದು
ಗುರುಸಾಹಿತ್ಯಸಂಬಂಧವ ಮಾಡಿದಡೆ,
ಅವರೆಲ್ಲರೂ ಭಕ್ತರಾಗಬಲ್ಲರೆ ? ಆಗಲರಿಯರು.
ಅದೇನು ಕಾರಣವೆಂದಡೆ: ಸತ್ಯಸದಾಚಾರ ಭಕ್ತಿನಿಷ್ಠೆಯ ನಂಬುಗೆ ಇಲ್ಲವಾದ ಕಾರಣ.
ಅಂಥ ಭಕ್ತಿನಿಷ್ಠೆ ನಂಬುಗೆಹೀನನ ಗೃಹದಲ್ಲಿರುವ
ಸತಿ ಸುತ ಪಿತ ಮಾತೆ ಸಹೋದರ ಬಂಧುಜನ ಭೃತ್ಯದಾಸಿಯರೊಳಗಾಗಿ
ಯಾವನಾನೊಬ್ಬಂಗೆ ಶಿವಾಜ್ಞೆಯಿಂದೆಡರಾಪತ್ತಿಟ್ಟಡೆ,
ಬಂಧನ ರುಜೆ ರೋಗ ಮುಂತಾದವರ ತೆರದಿಂದಾದಡೆಯೂ
ಶಿವಲಿಖಿತ ತುಂಬಿ ಲಿಂಗದೊಳಗಾದಡೆ,
ಪೂರ್ವದ ಶಿವಲಿಂಗವೆಂದು ತಿಳಿವ ನಂಬುಗೆಯಿಲ್ಲದೆ,
ಹಂಬಲಿಸಿ ಹಿಡಿಗೊಂಡು ಭ್ರಮಿಸುತ್ತ,
ತಾವು ಭಕ್ತರಾಗಿ ಕೆಟ್ಟೆವು, ಮನೆದೈವ ಮುನಿದವು,
ಧನಹಾನಿಯಾಯಿತ್ತು, ದರಿದ್ರಎಡೆಗೊಂಡಿತ್ತು,
ಭಕ್ತರಾಗಿ ಕೆಟ್ಟೆವಿನ್ನು, ಹೇಗೆಂಬ ಭ್ರಷ್ಟರ
ಮೆಟ್ಟುವ ನರಕದಲ್ಲಿ, ಕಲಿದೇವಯ್ಯ. ೧೮೫
ತ್ರಿವಿಧ ಮಧ್ಯದ ಶೇಷ, ತ್ರಿಕೂಟ [ಮಧ್ಯದ] ಬೆಳಸು,
ದೇವಮಧ್ಯದ ಪರಿಯಾಣ.
ನಿರ್ಭಾವ ಮಧ್ಯದ ಧಾನ್ಯವನೆ ತಂದು,
ರತ್ನಾಭರಣದ ಭಾಜನದಲ್ಲಿ ಇವನೆಲ್ಲವನು ಸಂಹರಿಸುವೆ.
ಹಿಂದೆ ನೋಡಿಯೂ ಆರುವ ಕಾಣೆ.
ಮುಂದೆ ನೋಡಿಯೂ ಆರುವ ಕಾಣೆ.
ಮಧ್ಯದಲ್ಲಿ ನೋಡುವೈಸಕ್ಕರ,
ನಾ ಮಾಡಿದ ಭಕ್ತಿಯ ಬೇಡಲೆಂದೊಬ್ಬ ಜಂಗಮ ಬಂದಡೆ,
ಕೊಟ್ಟು. ಆ ಭಕ್ತಿಯ ಶೇಷಪ್ರಸಾದದಿಂದ
ಶುದ್ಧನಾದೆ ಕಾಣಾ, ಕಲೀದೇವರದೇವಯ್ಯಾ. ೧೮೬
ದಾಸಿಯ ಸಂಗ ದೇಶವರಿಯೆ ಪಡಗ.
ವೇಶಿಯ ಸಂಗ ಹದಿನೆಂಟುಜಾತಿ ನೂರೊಂದುಕುಲವೆಲ್ಲ
ದೃಷ್ಟಿಸುವ ಮರದ ಕುಳಿ.
ಪರಸ್ತ್ರೀಯ ಸಂಗ ಪಂಚಮಹಾಪಾತಕ, ಅಘೋರನರಕ.
ಇಂತೀ ತ್ರಿವಿಧಸಂಗ ಸಲ್ಲವೆಂಬುದನರಿದು,
ಬಿಡದೆ ಬಳಸುವವ ಗುರುವಾದಡಾಗಲಿ,
ಚರವಾದಡಾಗಲಿ, ಭಕ್ತನಾದಡಾಗಲಿ,
ಇಂತೀ ಗುರುಚರಪರದೊಳಗಾರಾದಡಾಗಲಿ,
ಅವರನು ಪತಿತ ಪಾತಕರೆಂದು ಬಿಟ್ಟುಕಳೆಯದೆ,
ಅವರನು ತನ್ನವರೆಂದು ಮನ್ನಿಸಿ ಒಳಕೊಂಡನಾದಡೆ,
ಅವಂಗೆ ಕುಂಭೀಪಾತಕ, ನಾಯಕನರಕ ತಪ್ಪದೆಂದ,
ಕಲಿದೇವಯ್ಯ. ೧೮೭
ದಾಸಿಯ ಸಂಗವ ಮಾಡುವ ಪಾಪಿಗೆ
ಈಶ್ವರನ ಪೂಜಿಸುವ ಆಶೆಯಬೇಕೆ ?
ವೇಶಿಯ ಸಂಗವ ಮಾಡುವ ದ್ರೋಹಿಗೆ
ಶಿವಪ್ರಸಾದವ ಕೊಂಬ ಆಶೆಯದೇಕೆ ?
ಪರಸ್ತ್ರೀ ಸಂಗವ ಮಾಡುವ ಪಂಚಮಹಾಪಾತಕರಿಗೆ
ಪರಬ್ರಹ್ಮದ ಮಾತಿನ ಮಾಲೆಯ ಅದ್ವೈತವದೇಕೆ ?
ಇಂತಿವರ ನಡೆನುಡಿ ಎಂತಾಯಿತ್ತೆಂದಡೆ,
ಗಿಳಿ ಓದಿ ಹೇಳಿ, ತನ್ನ ಮಲವ ತಾ ತಿಂದಂತಾಯಿತ್ತೆಂದ,
ಕಲಿದೇವಯ್ಯ. ೧೮೮
ದಾಸೋಹವೂ ಭೃತ್ಯಾಚಾರವೂ ಅತಿಪ್ರೇಮವೂ ಕಿಂಕಿಲವೂ
ಸಂಗನಬಸವಣ್ಣಂಗಲ್ಲದೆ ಮತ್ತಾರಿಗೂ ಇಲ್ಲ.
ಇಂತಪ್ಪ ಭಕ್ತಿಯ ಕುಳಸ್ಥಳವನರಿಯದೆ
ಎಲ್ಲರೂ ಅಂದಂತೆ ಅಂದು, ಬಂದಲ್ಲಿಯೆ ಬಂದರು.
ಇದ ನೀಕರಿಸಿ ಜಂಗಮವೆ ಲಿಂಗವೆಂದು,
ಸಂಗಸಾಹಿತ್ಯವಾದ ಬಸವಣ್ಣ.
ನಿಮ್ಮ ಬಸವಣ್ಣನಿಂತಹ ನಿತ್ಯನಯ್ಯಾ, ಕಲಿದೇವರದೇವ. ೧೮೯
ದಾಸೋಹವೆಂಬನ್ನಬರ ಈಶ್ವರ ಪೂಜೆ,
ಆಚಾರದಲ್ಲಿರಬೇಕು.
ಮಾಡೆನೆಂಬ ನೇಮ ಬೇಡ.
ಮಾಡಿಹೆನೆಂಬ ಕೃತ್ಯ ಬೇಡ.
ಈ ಭಾವ ಅಳವಟ್ಟಲ್ಲಿ,
ಕಲಿದೇವಂಗೆ ಭಾವಶುದ್ಧವಾಯಿತ್ತು, ಚಂದಯ್ಯ. ೧೯o
ದೂರದಲರ್ಪಿತವೆಂಬ ದುರಾಚಾರಿಯನೇನೆಂಬೆನಯ್ಯಾ.
ಅಂತರದಲರ್ಪಿತವೆಂಬ ಅನಾಚಾರಿಯನೇನೆಂಬೆನಯ್ಯಾ.
ಭಾವದಲರ್ಪಿತವೆಂಬ ಭ್ರಮಿತರನೇನೆಂಬೆನಯ್ಯಾ.
ಮನದಲ್ಲಿ ಅರ್ಪಿತವೆಂಬ ವ್ರತಗೇಡಿಗಳನೇನೆಂಬೆನಯ್ಯಾ.
ಇಂತೀ ತನ್ನ ಇಷ್ಟಲಿಂಗಕ್ಕೆ ಕೊಟ್ಟು ಕೊಳ್ಳದಿರ್ದಡೆ
ಸತ್ತನಾಯ ಮಾಂಸವ ತಂದು, ಅಟ್ಟದ ಮೇಲಿರಿಸಿ,
ನಿತ್ಯಂ ನವೋಪ್ಪಲವ ತೂಗಿ ತಿಂದಂತೆ ಕಾಣಾ, ಕಲಿದೇವರದೇವಾ. ೧೯೧
ದೇವನೊಬ್ಬನೆ ಜಗವ ಕಾವಾತ, ಕೊಲುವಾತ.
ದೇವರು ಮುನಿದಡೆ ಮರಳಿ ಕಾವವರುಂಟೆ?
ಈ ಸಾವಿಗೊಳಗಾಗಿ ಹೋಹ ಸಮಸ್ತದೈವಂಗಳು,
ಮಹಾದೇವನ ಸರಿಯೆಂದು ಆರಾಧಿಸಿ,
ಅಚಲಿತಪದವಿಯ ಬೇಡುವ ಈರೇಳುಜಾತಿಗಳಿಗೆ,
ಆವಾವ ಕಾಲದಲ್ಲಿ ನರಕ ತಪ್ಪದೆಂದ, ಕಲಿದೇವಯ್ಯ. ೧೯೨
ದೇವರು ಮುಂತಾಗಿ ನಡೆ, ದೇವರು ಮುಂತಾಗಿ ನುಡಿ.
ದೇವರು ಮುಂತಾಗಿ ಅನುಭಾವಿಸಬಲ್ಲಡೆ,
ದೇವ ಬ್ರಾಹ್ಮಣರೆನಿಸಿಕೊಂಡಡೆ ದೇವರು ಮೆಚ್ಚುವನು.
ದೇವ ದಾನವ ಮಾನವ ದೇವನ ಸುದ್ದಿಯನರಿಯದೆ,
ವಾದಿತನಕ್ಕೆ ಹೋರಿಹೋರಿ ನಾಯಸಾವ ಸತ್ತರು.
ಗುರುಲಿಂಗ ಮುಂತಾಗಿ ನಡೆ, ಗುರುಲಿಂಗ ಮುಂತಾಗಿ ನುಡಿ.
ಗುರುಲಿಂಗ ಮುಂತಾಗಿ ಅನುಭಾವಿಸಬಲ್ಲಡೆ
ಗುರುವೆನಿಸಿಕೊಳಬೇಕು.
ಗುರುಲಿಂಗವ ಹಿಂದು ಮಾಡಿ, ತಾ ಮುಂದಾಗಿ,
ಗುರುದೇವನೆನಿಸಿಕೊಂಡಡೆ ಗುರು ತಾ ಮೆಚ್ಚುವನೆ ?
ಗುರುಲಿಂಗಜಂಗಮದ ಪರಿಯವನರಿಯದೆ,
ಸುರೆಯ ದೈವದ ಎಂಜಲ ಭುಂಜಿಸುವವರು,
ತಾವು ಗುರುತನಕ್ಕೆ ಹೋರಿಹೋರಿ ನರಕದಲ್ಲಿ ಬಿದ್ದರು.
ಭಕ್ತಿ ಮುಂತಾಗಿ ನಡೆ, ಭಕ್ತಿ ಮುಂತಾಗಿ ನುಡಿ.
ಭಕ್ತಿ ಮುಂತಾಗಿ ನುಡಿಯ ಅನುಭಾವಿಸಬಲ್ಲಡೆ
ಬಣಜಿಗನು ತಾ ಭಕ್ತನೆ?
ಭಕ್ತಿಯಿಲ್ಲದ ವ್ಯರ್ಥಜೀವಿಗಳು
ಭಕ್ತನ ಸರಿಯೆನಿಸಿಕೊಂಡಡೆ ಶಿವ ಮೆಚ್ಚುವನೆ?
ಸತ್ಯಸದಾಚಾರದ ಹವನನರಿಯದೆ,
ಮೃತ್ಯು ಮಾರಿಯ ಎಂಜಲ ತಿಂದು,
ಮತ್ರ್ಯದಲ್ಲಿ ಹೋರಿಹೋರಿ ವ್ಯರ್ಥವಾಗಿ ಕೆಟ್ಟರು.
ಶಿವಭಕ್ತನು ಗುರುದೇವ ನಮ್ಮ ಬ್ರಾಹ್ಮಣನು
ಬಸವರಾಜದೇವರ ಸಂತತಿಗಲ್ಲದೆ ಮತ್ತಾರಿಗುಂಟು,
ಕಲಿದೇವರದೇವಾ ? ೧೯೩
ದೇಶವಿನೋದಿಗಳಲ್ಲ, ದೇಶಭಾಷಿತರಲ್ಲ.
ದೇಶಾಶ್ರಯವ ತಮ್ಮದೆಂದೆನ್ನರು.
ದಾಸಭಾವದಲ್ಲಿಪ್ಪ ಸದ್ಭಕ್ತರಲ್ಲಿ,
ದೇಶಾಂತರವ ಮಾಡುವರು ಭಕ್ತಿವತ್ಸಲರು, ಭಕ್ತಿನಿಶ್ಚಲರು,
ಕಲಿದೇವಾ ನಿಮ್ಮ ಶರಣರು. ೧೯೪
ದೇಶಾಂತರಿ ದೇಶಾಂತರಿಯೆಂದು ನುಡಿವ ಹುಸಿಭ್ರಷ್ಟರನೇನೆಂಬೆನಯ್ಯಾ.
‘ಏಕಮೂರ್ತಿಸ್ತ್ರಯೋ ಭಾಗಃ ಗುರುಲರ್ಿಂಗಂತ ‘ಜಂಗಮಃ’
ಎಂಬುದನರಿಯದೆ, ದೇಶಾಂತರಿಯೆಂದರೆ ಆರು ಮೆಚ್ಚುವರಯ್ಯ?
ಸುಮ್ಮನಿರಿ ಭೋ, ಬರುಕಾಯರುಗಳಿರಾ.
ದೇಶಾಂತರಿಯಾದರೆ ಮೂರುಲೋಕದ ಕರ್ತನಂತೆ ಶಾಂತನಾಗಿರಬೇಕು.
ಜಲದಂತೆ ಶೈತ್ಯವ ತಾಳಿರಬೇಕು.
ಸೂರ್ಯನಂತೆ ಸರ್ವರಲ್ಲಿ ಪ್ರಭೆ ಸೂಸುತ್ತಿರಬೇಕು.
ಪೃಥ್ವಿಯಂತೆ ಸರ್ವರ ಭಾರವ ತಾಳಿರಬೇಕು.
ಹೀಂಗಾದಡೆ ಮಹಂತಿನ ಕೂಡಲದೇವರೆಂಬೆನಯ್ಯ.
ಹೀಂಗಲ್ಲದೆ ತ್ರಿವಿಧಮಲಗಳ ಭುಂಜಿಸುತ್ತ,
ಗುರುಲಿಂಗಜಂಗಮಕ್ಕೆ ತನುಮನಧನ ಸವೆಯದೆ,
ತಾವೇ ದೇವರೆಂದು, ತಮ್ಮ ಉದರವ ಹೊರೆವ ಶ್ವಾನ ಸೂಕರನಂತೆ,
ಪ್ರಪಂಚಿನ ಗರ್ವಿಗಳ, ದೇಶಾಂತರ, ಮಹಂತರೆನಬಹುದೇನಯ್ಯ?
ಎನಲಾಗದು ಕಾಣಾ, ಕಲಿದೇವರದೇವ. ೧೯೫
ದ್ವೈತಾದ್ವೈತವೆಂಬ ಉಭಯಕರ್ಮವನತಿಗಳೆದ
ಅಂಗಲಿಂಗಸಂಬಂಧವನುಳ್ಳ ನಿಜವೀರಶೈವಸಂಪನ್ನರು,
ನಮ್ಮ ಸ್ವಯಾಂಗಲಿಂಗವನರ್ಚಿಸುವಲ್ಲಿ
ಭವಿಶೈವ ಬಿನ್ನಕಮರ್ಿಗಳಂತೆ ಬೇರಿಟ್ಟು,
ಅಘ್ರ್ಯಪಾದ್ಯ ಆಚಮನವಾದಿಯಾದ ಉಪಪಾತ್ರೆಗಳಲ್ಲಿ ನೀರನೆರೆದು,
ಪಂಚಮಶುದ್ಧಿ ಪಂಚಾಮೃತಾಬಿಷೇಕವ ಮಾಡಿ,
ತನ್ನ ಲಿಂಗವನರ್ಚಿಸಿ, ಪ್ರಸಾದವ ಕೊಂಡೆನೆಂಬ ಜಡಶೈವ
ಬಿನ್ನಕರ್ಮವನುಳ್ಳ ಕುನ್ನಿಗಳು
ಎನ್ನ ಲೋಕಕ್ಕೆ ಹೊರಗೆಂದ, ಕಲಿದೇವಯ್ಯ. ೧೯೬
ಧರಿಸಿ ಭೋ, ಧರಿಸಿ ಭೋ ಮತ್ರ್ಯರೆಲ್ಲರು,
ಮರೆಯದೆ ಶ್ರೀಮಹಾಭಸಿತವ.
ಲೆಕ್ಕವಿಲ್ಲದ ತೀರ್ಥಂಗಳ ಮಿಂದ ಫಲಕಿಂದದು
ಕೋಟಿಮಡಿ ಮಿಗೆ ವೆಗ್ಗಳ.
ಲೆಕ್ಕವಿಲ್ಲದ ಯಜ್ಞಂಗಳ ಮಾಡಿದ ಫಲಕಿಂದದು
ಕೋಟಿಮಡಿ ಮಿಗೆ ವೆಗ್ಗಳ.
ಅದೆಂತೆಂದಡೆ: ಭೀಮಾಗಮದಲ್ಲಿ-
ಸರ್ವತೀಥರ್ೆಷ ಯತ್ಪುಣ್ಯಂ ಸರ್ವಯಜ್ಞೇಷು ಯತ್ಫಲಂ |
ತತ್ಫಲಂ ಕೋಟಿಗುಣಿತಂ ಭಸ್ಮಸ್ನಾನಂ ನ ಸಂಶಯಃ ||
ಇಂತೆಂದುದಾಗಿ,
ಧರಿಸಿ ಭೋ, ಧರಿಸಿ ಭೋ ಮತ್ರ್ಯರೆಲ್ಲರು,
ಮರೆಯದೆ ಶ್ರೀಮಹಾಭಸಿತವ.
ನಮ್ಮ ಕಲಿದೇವರ ನಿಜಚರಣವ ಕಾಣುದಕ್ಕೆ
ಶ್ರೀಮಹಾಭಸಿತವೆ ವಶ್ಯ ಕಾಣಿ ಭೋ. ೧೯೭
ನಂದೀಶ್ವರದೇವರು, ಭೃಂಗೀಶ್ವರದೇವರು,
ವಾಗೀಶ್ವರದೇವರು, ಅಂಗೇಶ್ವರದೇವರು, ಸೂರಿದತ್ತದೇವರು
ಇಂತೀ ಎಲ್ಲಾ ಗಣಂಗಳ ಮಧ್ಯಸ್ಥಾನಕ್ಕೆ ತಂದು,
ಬಸವಣ್ಣ ಸಂಪೂರ್ಣನಾದ ಪರಿಯ ನೋಡಾ, ಕಲಿದೇವರದೇವಾ. ೧೯೮
ನಮಗೆ ಲಿಂಗವುಂಟು,
ನಾವು ಲಿಂಗವಂತರೆಂದು ನುಡಿವರು.
ಮತ್ತೆ ಮರಳಿ ಭವಿಶೈವದೈವಂಗಳಿಗೆರಗುವ
ಈ ಮಂಗಮಾನವರನೇನೆಂಬೆನಯ್ಯಾ,
ಕಲಿದೇವಯ್ಯ. ೧೯೯
ನರರ ಹೊಗಳಿದಡೆ ಗತಿಯಿಲ್ಲ, ಸುರರ ಹೊಗಳಿದಡೆ ಗತಿಯಿಲ್ಲ.
ಹರಿ ಬ್ರಹ್ಮ ಇಂದ್ರ ಚಂದ್ರಾದಿಗಳ ಹೊಗಳಿದಡೆ ಗತಿಯಿಲ್ಲ.
ಪರಸತಿ ಪರಧನಂಗಳಿಗಳುಪಿ,
ದುರ್ಯೊಧನ ಕೀಚಕ ರಾವಣರೆಂಬವರು
ಮರಣವಾಗಿ ಹೋದವರ ಸಂಗತಿಯ ಹೇಳಿಕೇಳಿದಡೇನು ಗತಿಯಿಲ್ಲ.
ಶ್ರೀಗುರುವಿನ ಚರಣವನರಿಯದ
ಕಿರುಕುಳದೈವದ ಬೋಧೆಯ ಹೇಳಿ, ಆನು ಬದುಕಿದೆನೆಂಬ
ಕವಿ ಗಮಕಿ ನಾನಲ್ಲ.
ಹರ ನಿಮ್ಮ ನೆನೆವ ಶರಣರ ಚರಣದ ಗತಿಯಲ್ಲಿಪ್ಪೆನೆಂದ,
ಕಲಿದೇವರದೇವಯ್ಯ. ೨oo
ನವಸಾರ ಅಷ್ಟಸಾರ ದಶಸಾರ
ಪಂಚಸಾರ ಚತುಸ್ಸಾರ ಏಕಸಾರ.
ಇಂತಿವನತಿಗಳೆದ ಮಹಾಮಹಿಮನ ನಿಲವು,
ಲಿಂಗದಲ್ಲಿ ಸಂಪೂರ್ಣ, ಜಂಗಮದಲ್ಲಿ ಅತಿಸಹಜ,
ಪ್ರಸಾದದಲ್ಲಿ ತದ್ಗತ.
ಇಂತು ಸರ್ವಾಂಗದಲ್ಲಿ ಸಂಪೂರ್ಣನಾದ ನಿಜೈಕ್ಯನ ನಿಲವು ಸುಜ್ಞಾನ.
ಸುಜ್ಞಾನಸಿಂಹಾಸನದ ಮೇಲೆಯಿದ್ದು
ನಿಶ್ಚಿಂತನಾಗಿ ಇಪ್ಪುದು, ಕಲಿದೇವಯ್ಯ. ೨o೧
ನಾವು ಪ್ರಾಣಲಿಂಗಿಗಳೆಂದು ಹೇಳುವ ಅಣ್ಣಗಳಿರಾ,
ನೀವು ಪ್ರಾಣಲಿಂಗಿಗಳು ಎಂತಾದಿರಿ ಹೇಳಿರಣ್ಣ?
ಅರಿಯದಿರ್ದಡೆ ಕೇಳಿರಣ್ಣ, ಪ್ರಾಣಲಿಂಗವಾದ ಭೇದಾಭೇದವ.
ಕಾಯದ ಕಳವಳದಲ್ಲಿ ಕೂಡದೆ, ಮನದ ಭ್ರಾಂತಿಗೊಳಗಾಗದೆ,
ಕರಣಂಗಳ ಮೋಹಕ್ಕೀಡಾಗದೆ, ಪ್ರಾಣನ ಪ್ರಪಂಚಿನಲ್ಲಿ ಬೆರೆಯದೆ,
ಜೀವನ ಬುದ್ಧಿಯಲ್ಲಿ ಮೋಹಿಸದೆ, ಹಂಸನ ಆಸೆಗೊಳಗಾಗದೆ
ನಿಷ್ಪ್ರಪಂಚಿಯಾಗಿ, ಗುರುಲಿಂಗಜಂಗಮದ
ಪಾದೋದಕಪ್ರಸಾದದಲ್ಲಿ ಅತಿಕಾಂಕ್ಷೆವುಳ್ಳಾತನಾಗಿ,
ತ್ರಿವಿಧಲಿಂಗದಲ್ಲಿ ಸೂಜಿಗಲ್ಲಿನಂತೆ,
ಎರಕತ್ವವುಳ್ಳಾತನಾಗಿಪ್ಪಾತನೆ ಲಿಂಗಪ್ರಾಣಿ ನೋಡಾ,
ಕಲಿದೇವಯ್ಯ. ೨o೨
ನಾವು ಮೀರಿದ ಸ್ಥಲದ ವಿರಕ್ತರೆಂದು ಹೇಳುವ ಅಣ್ಣಗಳಿರಾ
ನೀವು ಮೀರಿದ ಸ್ಥಲದ ವಿರಕ್ತರಾದ ಬಗೆಯ ಹೇಳಿರಣ್ಣ.
ಅರಿಯದಿರ್ದಡೆ ಹೇಳಿಹೆ ಕೇಳಿರಣ್ಣ,
ಮೀರಿನಿಂದ ವಿರಕ್ತನ ವಿಚಾರದ ಭೇದವ.
ಅನಾದಿ ಚಿದ್ಬಿಂದುವ ಅಧೋದ್ವಾರದಲ್ಲಿ ಬೀಳಗೊಡದೆ,
ಸದ್ಗುರು ಕರುಣಕಟಾಕ್ಷೆಯಿಂದ ಮಹಾಮಂತ್ರವ ಪಡೆದು,
ಆ ಚಿನ್ಮಂತ್ರ ಬಲದಿಂದ ಊಧ್ರ್ವಕ್ಕೆ ಮುಖವ ಮಾಡಿ,
ಮೇಲುಗಿರಿ ಸಿಂಹಾಸನದಲ್ಲಿ ಮೂರ್ತಗೊಂಡಿರುವ
ಪರಶಿವಲಿಂಗದ ಮಹಾಬೆಳಗಿನೊಳಗೆ ಏಕಾರ್ಥವ ಮಾಡಬೇಕು.
ಜಿಹ್ವೆಯ ತುದಿಯ ಅಜ್ಞಾನದ ಹುಸಿ ಕುಶಬ್ದ ಕುರುಚಿಯ ನೀಗಬೇಕು.
ಸದ್ಗುರುಮುಖದಿಂದ ನಿಜನುಡಿ, ಘನಪಾದೋದಕ,
ಪ್ರಸಾದಮಂತ್ರವ ಪಡೆದು, ಸದ್ಭರ್ಮರೂಪದಿಂದಿರಬೇಕು.
ಸರ್ವಾಚಾರಸಂಯುಕ್ತವಾದ ಭಕ್ತನೆ ನಿಜಮುಕ್ತಿಮಂದಿರವೆಂದು,
ಭಾವ ಮನ ಕಾಯ ತುಂಬಿ, ಪರಿಪೂರ್ಣ ತೃಪ್ತನಾದಾತನೆ
ಮೀರಿದ ಸ್ಥಲದ ವಿರಕ್ತ ನೋಡಾ, ಕಲಿದೇವರದೇವ. ೨o೩
ನಾವು ಲಿಂಗೈಕ್ಯ, ಲಿಂಗಾನುಭಾವಿಗಳೆಂದು ಹೇಳುವ ಅಣ್ಣಗಳಿರಾ
ನೀವು ಲಿಂಗೈಕ್ಯ ಲಿಂಗಾನುಭಾವಿಗಳು ಎಂತಾದಿರಿ ಹೇಳಿರಣ್ಣ.
ಅರಿಯದಿರ್ದಡೆ ಗುರುಕೃಪೆಯಿಂದ ಹೇಳಿಹೆನು ಕೇಳಿರಣ್ಣ,
ಲಿಂಗೈಕ್ಯ, ಲಿಂಗಾನುಭಾವದ ಭೇದಾದಿಭೇದವ.
ಸರ್ವಸಂಗಪರಿತ್ಯಾಗವ ಮಾಡಬೇಕು.
ಲೋಕಾಚಾರವ ಮುಟ್ಟದಿರಬೇಕು.
ನುಡಿಯಂತೆ ನಡೆ ದಿಟವಾಗಬೇಕು.
ಸರ್ವಾಚಾರಸಂಪತ್ತಿನಾಚರಣೆಯ,
ಸದ್ಗುರು ಮುಖದಿಂದರಿತು ಆಚರಿಸಬೇಕು.
ನಾನಾರು, ನನ್ನ ಜೀವವೇನು, ನಾ ಬಂದ ಮುಕ್ತಿದ್ವಾರವಾವುದು?
ನಾ ಹೋಗುವ ನಿಜಕೈವಲ್ಯಪದವಾವುದು?
ನನ್ನಿರವೇನೆಂದು ಅರಿದಾಚರಿಸಬಲ್ಲಾತನೆ,
ನಿಜಲಿಂಗೈಕ್ಯ ಲಿಂಗಾನುಭಾವಿ ನೋಡಾ, ಕಲಿದೇವರದೇವ. ೨o೪
ನಾವು ಶರಣರೆಂದು ಒಪ್ಪವಿಟ್ಟು ನುಡಿವ ಅಣ್ಣಗಳಿರಾ
ನೀವು ಶರಣರಾದ ಭೇದವ ಹೇಳಿರಣ್ಣ.
ಅರಿಯದಿರ್ದಡೆ ಕೇಳಿರಣ್ಣ, ಶರಣತ್ವದ ಭೇದಾಭೇದವ.
ತನುವಿನ ಕಾಂಕ್ಷೆಯ ಸುಟ್ಟುರುಹಿ, ಮನದ ಲಜ್ಜೆಯ ಮರೆದು,
ಭಾವದ ಭ್ರಮೆಯ ಹೊಟ್ಟುಮಾಡಿ ತೂರಿ,
ಸದ್ಭಕ್ತಿ ನಿಜನೈಷ್ಠೆಯ ತಿಳಿದು,
ಸತಿಸುತರಿಗೆ ಸದಾಚಾರದ ಸನ್ಮಾರ್ಗವ ತೋರಿ,
ಗುರುಲಿಂಗಜಂಗಮವೆ ಮನೆದೈವ
ಮನದೈವ ಕುಲದೈವವೆಂದು ಭಾವಿಸಿ,
ನಿರ್ವಂಚಕತ್ವದಿಂದ ಅರಿದಾಚರಿಸಬಲ್ಲಾತನೆ,
ಅಚ್ಚಶರಣ ನೋಡಾ, ಕಲಿದೇವರದೇವ. ೨o೫
ನಾವು ಶಿವಪ್ರಸಾದಿಗಳೆಂದು ನುಡಿವ ಅಣ್ಣಗಳಿರಾ
ನೀವು ಶಿವಪ್ರಸಾದಿಗಳೆಂತಾದಿರಿ ಹೇಳಿರಣ್ಣ.
ಅರಿಯದಿರ್ದಡೆ ಶಿವಪ್ರಸಾದದ ಕಲೆನೆಲೆಯ ಕೇಳಿರಣ್ಣ.
ಗುರುಲಿಂಗಜಂಗಮದಿಂದ
ವೇಧಾಮಂತ್ರಕ್ರಿಯಾದೀಕ್ಷೆಯ ಬೆಸಗೊಂಡು,
ತನುಮನಪ್ರಾಣಂಗಳ
ಇಷ್ಟಪ್ರಾಣಭಾವಲಿಂಗಂಗಳಿಗೆ ಮೀಸಲ ಮಾಡಿ,
ನಿರ್ವಂಚಕತ್ವದಿಂದ ಸಮರ್ಪಿಸಿ,
ಭೇದಭಾವವನಳಿದು, ಕ್ಷೀರಕ್ಷೀರ ಬೆರೆದಂತೆ,
ಗುರುಮಾರ್ಗಾಚಾರದಲ್ಲಿ ಆಚರಿಸಬಲ್ಲಾತನೆ
ಶಿವಪ್ರಸಾದಿ ನೋಡಾ, ಕಲಿದೇವರದೇವ. ೨o೬
ನಾವು ಶಿವಭಕ್ತರೆಂದು ಹೇಳುವ ಅಣ್ಣಗಳಿರಾ
ನೀವು ಶಿವಭಕ್ತರೆಂತಾದಿರಣ್ಣ. ಅರಿಯದಿರ್ದಡೆ ಕೇಳಿರಣ್ಣ,
ಶಿವಭಕ್ತನಾದ ನೆಲೆಕಲೆಯ. ಆರುವೈರಿಗಳ ಮುರಿಗಟ್ಟಿ,
ಅಷ್ಟಮದವ ಜಳ್ಳು ಮಾಡಿ ತೂರಿ, ಸಪ್ತವ್ಯಸನಂಗಳ ಕಂಕಣವ ಮುರಿದು,
ಸದ್ಭಕ್ತಿ ನೆಲೆಕಲೆಯ ತಿಳಿದು,
ಅಷ್ಟಾವರಣದ ಗೊತ್ತು ಮುಟ್ಟಿನೋಡಿ,
ಪಂಚಾಚಾರ ಭೇದವ ತಿಳಿದು,
ಷಡ್ವಿಧಲಿಂಗಾಂಗದ ಮೂಲವನರಿದು,
ಷಡ್ವಿಧ ಅರ್ಪಿತಾವಧಾನವನಾಚರಿಸಿ,
ಷಟ್ಸ್ಥಲಮಾರ್ಗವಿಡಿದು ಆಚರಿಸುವ ಸದ್ಭಕ್ತರಿಗೆ
ಅತಿಭೃತ್ಯರಾಗಿ, ಹಮ್ಮುಬಿಮ್ಮುಗಳಿಲ್ಲದೆ,
ನಡೆನುಡಿಸಂಪನ್ನರಾದವರೆ ಶಿವಭಕ್ತರು ನೋಡಾ,
ಕಲಿದೇವರದೇವ. ೨o೭
ನಾವು ಸದ್ವೀರಮಾಹೇಶ್ವರರೆಂದು ಹೇಳುವ ಅಣ್ಣಗಳಿರಾ
ನಿಮ್ಮ ವೀರಮಾಹೇಶ್ವರತ್ವದ ಕುರುಹ ಹೇಳಿರಣ್ಣ.
ಅರಿಯದಿರ್ದಡೆ ಸದ್ವೀರಮಾಹೇಶ್ವರತ್ವದ ಕುರುಹ ಕೇಳಿರಣ್ಣ.
ಪಂಚಮಹಾಪಾತಕಂಗಳ ಬೆರಸದೆ,
ಪೂರ್ವವಳಿದು ಪುನರ್ಜಾತರಾದ ಸದ್ಭಕ್ತರಲ್ಲಿ
ಪಂಚಸೂತಕಂಗಳ ಕಲ್ಪಿಸದೆ,
ಪಂಚಾಚಾರಂಗಳ ಭೇದಿಸಿ, ಅನಾಚಾರಂಗಳ ಸಂಹರಿಸಿ,
ತನ್ನ ನಿಜಚಿತ್ಕಳೆಗಳ ತೋರಿಸಿ,
ಅವರ ಗೃಹವ ಪೊಕ್ಕು, ಪಾದೋದಕಪ್ರಸಾದವ
ಕೊಟ್ಟು ಕೊಳಬಲ್ಲಾತನೆ ಸದ್ವೀರಮಾಹೇಶ್ವರ ನೋಡಾ.
ಕಲಿದೇವರದೇವಾ ೨o೮
ನಿಜಸ್ವಯಂಭು ಕಲಿದೇವಂಗೆ ಪಂಚಾಮೃತದ ಮಾಡುವೆ.
ಕ್ಷೀರಾಧಾರದ ಕೊಡನನು ಅಷ್ಟಾದ್ವಯವೆಂಬ ಸ್ತ್ರೀಯರ ಕೈಯ ಹಿಡಿಸುವೆ.
ಧಾರಾಪೂರ್ವದಲ್ಲಿದ್ದ ಮಧುವನು ಧೀರನ ಕೈಯ ಹಿಡಿಸುವೆ.
ಇವರು ಸಹಿತ ಪಂಚಾಮೃತವಾಯಿತ್ತು ಕಲಿದೇವಂಗೆ. ೨o೯
ನಿತ್ಯ ಸತ್ಯದೊಳಡಗಿ, ಸತ್ಯ ಸದಾಚಾರದೊಳಡಗಿ,
ಆಚಾರ ಅನುಭಾವದೊಳಡಗಿ, ಅನುಭಾವ ಜ್ಞಾನದೊಳಡಗಿ,
ಮಹಾಜ್ಞಾನ ಮನೋಲಯದೊಳಡಗಿ,
ಮನೋಲಯವೇ ಮಹಾಘನವಾಯಿತ್ತು,
ಕಲಿದೇವರದೇವಾ, ನಿಮ್ಮ ನಿಜೈಕ್ಯವು. ೨೧o
ನಿತ್ಯಲಿಂಗಾರ್ಚನೆಯ ಮಾಡದೆ ಒಡಲ ಹೊರೆವನೆ ಹೊಲೆಯ.
ಹತ್ತು ನುಡಿದಡೇ[ನು] ಒಂದೂ ನಿಜವಿಲ್ಲದವನೆ ಹೊಲೆಯ.
ಅರ್ಥದಾಸೆಗೆ ಪ್ರಾಣವ ಹತವ ಮಾಡುವನೆ ಹೊಲೆಯ.
ಸತ್ಯ ಸದ್ಗುಣ ನಿತ್ಯಾಚಾರ ಧರ್ಮವಿಲ್ಲವೆಂಬವನೆ ಹೊಲೆಯ.
ಭಕ್ತಿ ಮುಕ್ತಿಯ ಪಥವ ಹುಸಿಯೆಂಬವನೆ ಹೊಲೆಯ.
ನಿತ್ಯ ಗುರುಲಿಂಗಜಂಗಮ ಪಾದತೀರ್ಥ ಪ್ರಸಾದವಿಲ್ಲವೆಂಬವನೆ ಹೊಲೆಯ.
ಮತ್ತೆ ಪಶುಘಾತಕವ ಮಾಡುವನೆ ಹೊಲೆಯ.
ಇಂತೀ ಏಳುಹೊಲೆಯ ಹಿಂಗಿಸದೆ, ತನ್ನ ಕುಲದ ಹೆಮ್ಮೆಯ ಮೆರೆವ ಕುನ್ನಿಗಳ
ನುಡಿಯ ಕೇಳಲಾಗದೆಂದ, ಕಲಿದೇವಯ್ಯ. ೨೧೧
ನಿನ್ನ ಆಕಾರ ನಿರಾಕಾರವಾಯಿತಲ್ಲಾ ಬಸವಣ್ಣ.
ನಿನ್ನ ಪ್ರಾಣ ನಿಃಪ್ರಾಣವಾಯಿತಲ್ಲಾ ಬಸವಣ್ಣ.
ಲಿಂಗ ಜಂಗಮದ ಮಾಟ ಸಮರ್ಪಿತವಾಯಿತಲ್ಲಾ ಬಸವಣ್ಣ.
ನಿಶ್ಶಬ್ದವೇದ್ಯವಾದೆಯಲ್ಲಾ ಬಸವಣ್ಣ.
ಕಲಿದೇವರದೇವನ ಹೃದಯಕಮಲವ ಹೊಕ್ಕು,
ದೇವರಿಗೆ ದೇವನಾಗಿ ಹೋದೆಯಲ್ಲಾ, ಸಂಗನಬಸವಣ್ಣ. ೨೧೨
ನಿಮ್ಮ ಜಂಗಮಮೂರ್ತಿಯಲ್ಲಿಯೆ ನಿಂದಿತ್ತು.
ಅರ್ಥ ಪ್ರಾಣ ಅಭಿಮಾನ ನಿಮ್ಮ ಜಂಗಮಮೂರ್ತಿಯಲ್ಲಿಯೆ ನಿಂದಿತ್ತು.
ಅಂಗಲಿಂಗಸಂಗ ನಿಮ್ಮ ಜಂಗಮಮೂರ್ತಿಯಲ್ಲಿಯೆ ನಿಂದವು.
ಎನ್ನ ನಡೆಗೆಟ್ಟಿತ್ತು, ನಿಮ್ಮ ಜಂಗಮಮೂರ್ತಿಯಿಂದ.
ಎನ್ನ ನುಡಿಗೆಟ್ಟಿತ್ತು, ನಿಮ್ಮ ಜಂಗಮಮೂರ್ತಿಯಿಂದ.
ಎನ್ನ ನೋಟಗೆಟ್ಟಿತ್ತು, ನಿಮ್ಮ ಜಂಗಮಮೂರ್ತಿಯಿಂದ.
ಎನ್ನ ಮಾಟ ಸಮಾಪ್ತವಾಯಿತ್ತು, ನಿಮ್ಮ ಜಂಗಮಮೂರ್ತಿಯಿಂದ.
ನಿಮ್ಮ ಪ್ರಸಾದದಿಂದ ಎನ್ನ ತನು ಶುದ್ಧವಾಯಿತ್ತು.
ಬಸವಣ್ಣನ ತೋರಿದ ಕಾರಣ, ನಿಮ್ಮ ಜಂಗಮಮೂರ್ತಿಯ ಕಂಡು,
ಬದುಕಿದೆನು ಕಾಣಾ, ಕಲಿದೇವರದೇವಯ್ಯಾ. ೨೧೩
ನಿರಾಳ ನಿತ್ಯವೆಲ್ಲಾ ಸ್ಥಾನ ಚೆನ್ನಾಯಿತ್ತು.
ಎಲ್ಲಾ ಗಣಂಗಳು ಚೆನ್ನಾದರು.
ಸಿದ್ಧಗಣ ಮಂದಿರಗಣ ಚೆನ್ನಾಯಿತ್ತು.
ತಾಂಡವ ಅಂಡವ ಚೆನ್ನಾಯಿತ್ತು.
ತ್ರಿಕಾಂಡವ ಭೂಕಾಂಡವ ಚೆನ್ನಾಯಿತ್ತು.
ದೇವಲೋಕ ಮತ್ರ್ಯಲೋಕ ಚೆನ್ನಾಯಿತ್ತು.
ದೇವಗಣಂಗಳು ಶಿವಗಣಂಗಳು ಚೆನ್ನಾಯಿತ್ತು.
ಮಹಾಲೋಕದ ಮಹಾಗಣಂಗಳು ಚೆನ್ನಾಯಿತ್ತು.
ಅತೀತ ಆಚಾರ ಘನ ಚೆನ್ನಾಯಿತ್ತು.
ಪ್ರಸಾದ ನಿರವಯ ಜಂಗಮ ಚೆನ್ನಾಯಿತ್ತು.
ಗಂಗಾ ಬಸವ ಚೆನ್ನಾಯಿತ್ತು.
ಅನಾಗತಮೂರ್ತಿಯಾದ ಆಕಾರವನು
ಕರಸ್ಥಲದಲ್ಲಿ ಹಿಡಿದು, ಬೆಳಗಾಗಿರ್ದ ಜ್ಞಾನ ಚೆನ್ನಾಯಿತ್ತು.
ಮಾಡಿದ ಎನ್ನನು ಚೆನ್ನ ಮಾಡಿದ,
ಕಲಿದೇವಾ, ನಿಮ್ಮ ಶರಣ ಬಸವ ಚೆನ್ನಬಸವನು. ೨೧೪
ನಿರಾಳ ನಿರ್ಮಾಯ ಘನವಸ್ತುವೆ,
ನಿಮ್ಮ ಬೆಳಗನುಗುಳಿದಡೆ ಪ್ರಸಾದವಾಯಿತ್ತಲ್ಲಾ.
ನಿಮ್ಮುಗುಳಿನ ಕಿಂಚಿತ್ ಸಿಲುಕಿನಿಂದ,
ಅಕ್ಷರಂಗಳು ಮೂರು ಹುಟ್ಟಿದವು.
ನಿಮ್ಮುಗುಳಿನ ಸಿಲುಕಿನಿಂದ ನಾದಬಿಂದುಕಳೆಗಳಾದವು.
ಅಯ್ಯಾ ನಿಮ್ಮುಗುಳಿನ ಸಿಲುಕಿನಿಂದ,
ಇಬ್ಬರು ಹೆಣ್ಣು ಗಂಡು ಮಕ್ಕಳಾದರು.
ಆ ಇಬ್ಬರು ಮಕ್ಕಳಿಂದೈವರು ಮಕ್ಕಳಾದರು.
ನಿಮ್ಮುಗುಳ ಎಂಜಲೆಂದವರ ಕಣ್ಣು ಕಪ್ಪಾದವು.
ಅಯ್ಯಾ ನಿಮ್ಮುಗುಳೆ ಘನಪ್ರಸಾದವೆಂದರಿದೆನು ಕಾಣಾ,
ಕಲಿದೇವಯ್ಯ. ೨೧೫
ನಿರ್ವಾಹವಾಯಿತ್ತಯ್ಯಾ ಬಸವಣ್ಣಂಗೆ ಕಪ್ಪಡಿಯ ಸಂಗಯ್ಯನಲ್ಲಿ.
ಅಕ್ಕನಾಗಾಯಿ ಮಿಂಡ ಮಲ್ಲಿನಾಥ ಹಡಪದ ಅಪ್ಪಣ್ಣ
ಮೊಗವಾಡದ ಕೇಶಿರಾಜ ಕೋಲಶಾಂತಯ್ಯ ಮೊದಲಾದ
ಶಿವಗಣಂಗಳೆಲ್ಲರೂ ಬಸವರಾಜನ ಬಯಲ ಬೆರಸಿದರು.
ಆ ಬಯಲ ಪ್ರಸಾದದಿಂದ,
ನಿರುಪಮ ಪ್ರಭುದೇವರು ಕದಳಿಯಲ್ಲಿ ಬಯಲಾದರು.
ಆ ಬಯಲ ಪ್ರಸಾದದಿಂದ,
ಮೋಳಿಗೆಯ ಮಾರಯ್ಯ ಕಕ್ಕಯ್ಯ ಪಡಿಹಾರಿ ಉತ್ತಣ್ಣ
ಕನ್ನದ ಮಾರಣ್ಣ ಕಲಕೇತ ಬೊಮ್ಮಣ್ಣ ನುಲಿಯ ಚಂದಯ್ಯ
ಹೆಂಡದ ಮಾರಯ್ಯ ಶಂಕರ ದಾಸಿಮಯ್ಯ ಏಕಾಂತ ರಾಮಯ್ಯ
ಮೇದರ ಕೇತಯ್ಯ ಮೊದಲಾದ
ಏಳುನೂರೆಪ್ಪತ್ತು ಅಮರಗಣಂಗಳ ದಂಡು,
ಕೈಲಾಸಕ್ಕೆ ನಡೆಯಿತ್ತು, ಬಂದ ಮಣಿಹ ಪೂರೈಸಿತ್ತು.
ಸಂದ ಪುರಾತನರೆಲ್ಲರು ಎನ್ನ ಮನದ ಮೈಲಿಗೆಯ ಕಳೆದ ಕಾರಣ,
ಕಲಿದೇವರದೇವಯ್ಯಾ,
ಇವರೆಲ್ಲರ ಒಕ್ಕಮಿಕ್ಕಪ್ರಸಾದದ ಬಯಲು ಎನಗಾಯಿತ್ತು. ೨೧೬
ನೆನೆವೆನಯ್ಯಾ ಬಸವಣ್ಣ,
ನಿಮ್ಮ ಚರಣವೆನ್ನ ಮನದಲ್ಲಿ ಸಾಹಿತ್ಯವಹನ್ನಕ್ಕ.
ನೋಡುವೆನಯ್ಯಾ ಬಸವಣ್ಣ,
ನಿಮ್ಮ ಮೂರ್ತಿ ಎನ್ನನವಗವಿಸುವನ್ನಕ್ಕ.
ಪೂಜಿಸುವೆನಯ್ಯಾ ಬಸವಣ್ಣ,
ನಿಮ್ಮ ಪ್ರಸಾದವೆನ್ನ ತನುವಹನ್ನಕ್ಕ.
ನಿಮ್ಮ ಆಹ್ವಾನಿಸುವೆನಯ್ಯಾ ಬಸವಣ್ಣ,
ಅನಿಮಿಷ ನಿಮಿಷ ನಿಮಿಷಗಳಿಲ್ಲವೆಂದೆನಿಸುವನ್ನಕ್ಕ.
ನಿಮ್ಮ ಧ್ಯಾನಿಸುವೆನಯ್ಯಾ ಬಸವಣ್ಣ,
ಜ್ಞಾನಜ್ಞಾನವಿಲ್ಲವೆನಿಸುವನ್ನಕ್ಕ.
ನಿಮ್ಮ ಮೂರ್ತಿಗೊಳಿಸುವೆನಯ್ಯಾ ಬಸವಣ್ಣ,
ಅಹಂ ಸೋಹಂ ಎಂಬ ಶಬ್ದವುಳ್ಳನ್ನಕ್ಕ.
ಬಸವಣ್ಣಾ ಎಂದು ಹಾಡುವೆನಯ್ಯ,
ಎನ್ನ ತನುವಿನ ಗಮನ ನಿರ್ಗಮನವಹನ್ನಕ್ಕ.
ಬಸವಣ್ಣಾ ಬಸವಣ್ಣಾ ಬಸವಣ್ಣಾ ಎನುತಿರ್ದೆನಯ್ಯಾ,
ಕಲಿದೇವರದೇವನೆಂಬ ಶಬ್ದವುಳ್ಳನ್ನಕ್ಕ. ೨೧೭
ನೆನೆವೆನಯ್ಯಾ, ಲೋಹ ಪರುಷದ ಸಂಗದಂತಾಯಿತ್ತಾಗಿ.
ಬಸವಾ ಬಸವಾ ಬಸವಾ ಎಂಬ ಶಬ್ದದೊಳಗೆ
ಎನ್ನ ಗಮನ ನಿರ್ಗಮನವಾಯಿತ್ತು.
ಬಸವಾ ಎಂದೆನಯ್ಯಾ ಕಲಿದೇವರದೇವಾ,
ಕಿಡಿಗೊಂಡ ಅರಗಿನ ಸಂಗದಂತಾಯಿತ್ತಾಗಿ. ೨೧೮
ಪಕ್ಕ ಮುರಿದ ಕೋಳಿಯಂತೆ ಬೆಕ್ಕಿನ ಬಾಧೆಗೆ ಸಿಕ್ಕಬೇಡವೆಂದು,
ಗುರುಲಿಂಗಜಂಗಮದ ಪಾದತೀರ್ಥಪ್ರಸಾದದ ದಿಕ್ಕ ತೋರೆ,
ದೀಕ್ಷೆಯ ಕೊಟ್ಟ, ಮಾರ್ಗವ ಮೀರಿ,
ಮರಳಿ ಮಕ್ಕಳು ಮಾತಾಪಿತರು ಬಂಧುಗಳು ಭವಿಗಳಾಗಿರಲು,
ಅವರ ಮುಖವ ಬಿಡಲಾರದೆ ಕೂಳಿನಾಸೆ ಮಾಡಿ ಹೋದೆನೆಂದಡೆ,
ಕೋಳಿ ತಾನು ಬೆಕ್ಕು ನಾಯಿ[ಯಿದ್ದ]ಗೃಹಕೆ
ಗುಟುಕಕೊಳಹೋದ ತೆರನಾಯಿತ್ತು, ಕಲಿದೇವರದೇವಯ್ಯ. ೨೧೯
ಪದ್ಮದೊಳಗಣ ಪತ್ರದೊಳಗಣ ದ್ವಿದಳದೊಳಗಣ
ಸ್ವರದ ಬಯಕೆಯೊಳಗಣ ಕರ್ಣಿಕಾಕುಹರದೊಳಗಣ
ಅಜಸ್ಥಲದೊಳಗಣ ಅಹಿಮಧ್ಯದೊಳಗಣ
ಹಲವುಕೋಟಿ ಪತ್ರದೊಳಗಣ ಕುಹರ ಪದ್ಮಮಧ್ಯದೊಳಗಣ
ಪ್ರಾಣವಿಪ್ಪುದೆಂದು ಆತ್ಮನೆ ನಿಶ್ಚೈಸುವೆನೆನುತ,
ಅನಂತಯೋಗಿಗಳು ಸಂಸಾರದ ವರ್ಮವ ಕೆಡಿಸಿಹೆವೆಂದು,
ಅನಂತನಾಳದಲ್ಲಿ ನಿರ್ಬಂಧವ ಮಾಡಿ ಅಮೃತರಾದೆಹೆವೆಂದು,
ಅಮೃತವ ದಣಿಯಲುಂಡೆಹೆವೆಂದು,
ನಾನಾ ಕುಟಿಲವಾದ ಭಾವದಲ್ಲಿ ಐದಾರೆ ಕಾಣೆವಯ್ಯ.
ನಿಮ್ಮ ಶಿವಾಚಾರದ ಕುಳವನರಿಯದೆ,
ಅನೇಕರು ಬಂಧನದಲ್ಲಿ ಸಿಲುಕಿದರು ಕಾಣಯ್ಯ.
ನೀವು ಚತುರ್ವಿಧಸ್ಥಲ ಮಂಟಪವ ಮಾಡಿದ ಸಿಂಹಾಸನದ ಮೇಲಿರ್ದು
ನಿತ್ಯರಿಗೆ ಭಕ್ತಿಯನೀವುದ ಕಂಡ ಭಕ್ತರು ನಿತ್ಯರು.
ನಿಮಗೆ ಶರಣಾಗತಿವೊಕ್ಕೆ, ಮಹಾಪ್ರಸಾದ.
ದೇವಾತ್ಮನು ಪರಿಭವಕ್ಕೆ ಬಪ್ಪನೆಯೆಂದಡೆ, ಅದು ಹುಸಿ ಕಾಣಿರೊ.
ಆ ಆತ್ಮನಿಪ್ಪ ನೆಲೆಯ ಕೇಳಿರೊ.
ಗುರುಭಕ್ತಿಯಲ್ಲಿಪ್ಪ, ದಾಸೋಹದಲ್ಲಿಪ್ಪ, ಅರ್ಪಿತ ಪ್ರಸಾದದಲ್ಲಿಪ್ಪ,
ಮಾಡುವಲ್ಲಿಪ್ಪ, ಮಾಡಿಸಿಕೊಂಬಲ್ಲಿಪ್ಪ,
ತನುಮನಧನವೊಂದಾಗಿ ನಿವೇದಿಸುವಲ್ಲಿಪ್ಪ,
ಪರಿಪೂರ್ಣಾತ್ಮವೆಂದು ನಿತ್ಯರಿಗೆ ನೀವು ಕಾರುಣ್ಯವ ಮಾಡಿದಿರಿ.
ನಿಮ್ಮ ಕರುಣಕಟಾಕ್ಷದಲ್ಲಿ ಬಸವಣ್ಣನಲ್ಲದೆ ಮಾಡುವರಿಲ್ಲ,
ಮಾಡಿಸಿಕೊಂಬವರಿಲ್ಲ. ಅದು ಕಾರಣ,
ನಿಮ್ಮ ಬಸವಣ್ಣ ಹೇಳಿತ್ತ ಮೀರೆ ಕಾಣಾ, ಕಲಿದೇವಯ್ಯ. ೨೨o
ಪದ್ಮಾಸನದಲ್ಲಿ ಕುಳ್ಳಿರ್ದು ಲಿಂಗಾರ್ಚನೆಯ ಮಾಡುವರ ತೋರಾ ಎನಗೆ.
ಸ್ವರೂಪಿನಲ್ಲಿ ನಿಂದು, ಜಂಗಮಕ್ಕೆ
ಜಂಗಮದಾಸೋಹವ ಮಾಡುವರ ತೋರಾ ಎನಗೆ.
ಮನ ನಿಜರೂಪಿನಲ್ಲಿ ಗುರುಸಿಂಹಾಸನವನೇರಿ ಪರಿಣಾಮವಳವಟ್ಟು,
ಪ್ರಸಾದವ ಗ್ರಹಿಸುವರ ತೋರಾ ಎನಗೆ.
ಇಂತಪ್ಪವರ ಸಂಗದಲ್ಲಿರಿಸು ಕಲಿದೇವಯ್ಯಾ, ನಾ ನಿನ್ನ ಬಲ್ಲೆ.
ನನಗೆಯೂ ನಿನಗೆಯೂ ಇಂತಪ್ಪವರಪೂರ್ವ. ೨೨೧
ಪರದೈವ ಪರಧನ ಪರಸ್ತ್ರೀ ಪರನಿಂದೆ ಪರಹಿಂಸೆಯಲ್ಲಿ
ಚರಿಸುವ ಹೊಲೆಯರಿಗೆ, ಕ್ರಿಯಾದೀಕ್ಷೆಯ ಮಾಡುವನೊಬ್ಬ
ಗುರುದ್ರೋಹಿ ನೋಡಾ, ಕಲಿದೇವರದೇವ. ೨೨೨
ಪರಧನ ಪರಸತಿಗಳುಪಿದಡೆ,
ಮುಂದೆ ನರಕವೆಂದು ಗುರುವಾಕ್ಯ ಸಾರುತಿದೆ.
ಪರಧನ ಪರಸತಿಗಳುಪಿ
ಹತವಾಗಿ ಹೋದ ದುರ್ಯೊಧನ.
ಪಾಂಡವರ ಕಥೆಯ ಕೇಳಿ,
ಹರಿವ ನದಿಯ ಮಿಂದು, ಗೋದಾನ ಮಾಡುವ
ನರಕಿಗಳ ನುಡಿಯ ಕೇಳಲಾಗದೆಂದ, ಕಲಿದೇವರದೇವ ೨೨೩
ಪರಮವಿಭೂತಿಯ ಹಣೆಯಲ್ಲಿ ಧರಿಸಿ,
ಕೊರಳಲ್ಲಿ ರುದ್ರಾಕ್ಷಿಯ ಧರಿಸಿ,
ಗುರು ಕೊಟ್ಟ ಲಿಂಗವ ಕರದಲ್ಲಿ ಧರಿಸಿ,
ಮರಳಿ ಮತ್ತೆ ಧರೆಯ ಪ್ರತಿಷ್ಠೆಗೆರಗುವ
ನರಕಿಜೀವಿಗಳನೇನೆಂಬೆನಯ್ಯಾ, ಕಲಿದೇವಯ್ಯ. ೨೨೪
ಪರಸ್ತ್ರೀಯರ ನೋಡುವ ಕಣ್ಣು,
ಲಿಂಗವ ನೋಡಿದ ಅವರಿಗೆ ಲಿಂಗವಿಲ್ಲ.
ಪರಬ್ರಹ್ಮವ ನುಡಿವ ನಾಲಿಗೆಯಲ್ಲಿ,
ಪರಸ್ತ್ರೀಯರ ಅಧರಪಾನವ ಕೊಂಡಡೆ, ಪ್ರಸಾದಕ್ಕೆ ದೂರ.
ಘನಲಿಂಗವ ಪೂಜಿಸುವ ಕೈಯಲ್ಲಿ,
ಪರಸ್ತ್ರೀಯರ ತೋಳು ಕುಚವ ಮುಟ್ಟಿದಡೆ,
ತಾ ಮಾಡುವ ಪೂಜೆ ನಿಷ್ಫಲ. ಇದರಿದಡೆ ವ್ರತ.
ಅಲ್ಲದಿರ್ದಡೆ, ಸುರೆಯ ಒಳಗೆ ತುಂಬಿ,
ಹೊರಗೆ ಬೂದಿಯ ಪೂಸಿದಂತಾಯಿತ್ತು, ಕಲಿದೇವಾ. ೨೨೫
ಪರ್ವತಕ್ಕೆ ಕಂಬಿ ಕಾವಡಿಯ ಜೀಯರು ದ್ವಿಜರೊಯ್ವರಲ್ಲದೆ
ಜಂಗಮದೇವರೊಯ್ವರೆ?
ಆ ಜಂಗಮದೇವರ ಮೇಲೆ ಹೊರಿಸುವನೆ ಭಕ್ತ ?
ಅವರು ಭಕ್ತರೊಡೆಯರಲ್ಲ.
ಅವರು ದೇವಲೋಕ ಮತ್ರ್ಯಲೋಕಕ್ಕೆ ಹೊರಗು.
ಹೊಯ್ಯೋ ಡಂಗುರವ, ಕಲಿದೇವರು ಸಾಕ್ಷಿಯಾಗಿ. ೨೨೬
ಪಾದೋದಕ ಪ್ರಸಾದದಿಂದ ಮೇಲೆ ಪರವಿಲ್ಲವಾಗಿ,
ಗುರುವಿಡಿದು ಲಿಂಗವ ಕಂಡೆ.
ಲಿಂಗವಿಡಿದು ಜಂಗಮವ ಕಂಡೆ.
ಪ್ರಸಾದದಿಂದ ಪರವ ಕಂಡೆ.
ಪರವ ತೋರಿದ ಗುರುವಿನಾಜ್ಞೆಯನು ಮೀರುವ
ದುರಾತ್ಮರೆನ್ನ ಮುಖಕ್ಕೆ ತೋರದಿರು, ಕಲಿದೇವರದೇವಯ್ಯಾ. ೨೨೭
ಪಾಪಿಗೆ ಪ್ರಾಯಶ್ಚಿತ್ತವುಂಟು.
ಪರವಾದಿಗೆ ಪ್ರಾಯಶ್ಚಿತ್ತವುಂಟು.
ಶಿವಭಕ್ತನಾಗಿ ಅನ್ಯದೈವವ ಪೂಜಿಸುವಂಗೆ
ಪ್ರಾಯಶ್ಚಿತ್ತವಿಲ್ಲವೆಂದ, ಕಲಿದೇವಯ್ಯ. ೨೨೮
ಪುರವರಾಧೀಶ್ವರರೆಲ್ಲರೂ ಪುರದೊಡೆಯ ಬಸವಣ್ಣ ಎಂದೆಂಬರು.
ಅಮರಾಧೀಶ್ವರರೆಲ್ಲರೂ ಅಮರಪತಿ ಬಸವಣ್ಣ ಎಂದೆಂಬರು.
ಕೈಲಾಸಾಧಿಪತಿಗಳೆಲ್ಲರೂ ಶಿವಲಿಂಗ ಬಸವಣ್ಣ ಎಂದೆಂಬರು.
ದೇವಸಮೂಹವೆಲ್ಲ ಮಹಾಲಿಂಗ ಬಸವಣ್ಣ ಎಂದೆಂಬರು.
ಪಂಚವಕ್ತ್ರಗಣಂಗಳೆಲ್ಲರೂ ಪಂಚಲಿಂಗ ಬಸವಣ್ಣ ಎಂದೆಂಬರು.
ಸಾಲೋಕ್ಯ ಸಾಮೀಪ್ಯ ಸಾರೂಪ್ಯ ಸಾಯುಜ್ಯಗಣಂಗಳೆಲ್ಲರೂ
ಪದವೀವ ಬಸವಣ್ಣ ಎಂದೆಂಬರು.
ನಾಗಲೋಕದವರೆಲ್ಲರೂ ಸಕಲಾಧಾರ ಬಸವಣ್ಣ ಎಂದೆಂಬರು.
ಮತ್ರ್ಯಲೋಕದವರೆಲ್ಲರೂ ಗುರುಲಿಂಗ ಬಸವಣ್ಣ ಎಂದೆಂಬರು.
ಭಕ್ತ ಬಸವಣ್ಣ ಎಂದೆಂಬರು, ಸೋಹಿ ದಾಸೋಹಿ ಬಸವಣ್ಣ ಎಂದೆಂಬರು.
ತನುಮನಧನವ ಗುರುಲಿಂಗಜಂಗಮಕ್ಕೆ ನಿವೇದಿಸುವಾತ ಬಸವಣ್ಣ ಎಂದೆಂಬರು.
ಇದು ಕಾರಣ, ನಾನು ಬಸವಣ್ಣ ಬಸವಣ್ಣ ಬಸವಣ್ಣ ಎಂದು
ಬಯಲಾದೆನು ಕಾಣಾ, ಕಲಿದೇವರದೇವ. ೨೨೯
ಪೃಥ್ವಿ ಲಿಂಗವೆಂದು ಗತವಾದರು ಹಲಬರು.
ಅಪ್ಪು ಲಿಂಗವೆಂದು ತಪ್ಪಿದರು ಶಿವಪಥವ ಹಲಬರು.
ತೇಜ ಲಿಂಗವೆಂದು ವಾದಿಗಳಾದರು ಹಲಬರು.
ವಾಯು ಲಿಂಗವೆಂದು ಘಾಸಿಯಾದರು ಹಲಬರು.
ಆಕಾಶ ಲಿಂಗವೆಂದು ಶೂನ್ಯವಾದಿಗಳಾದರು ಹಲಬರು.
ಇಂತೀ ಹುಸಿಶಬ್ಧವ ತೊಡೆದು,
ನಿಜಲಿಂಗ ನಿಜಜಂಗಮ ನಿತ್ಯಪ್ರಸಾದದ ನಿಜವ ತೋರಿ,
ಎನ್ನ ಬದುಕಿಸಿದಾತ ಬಸವಣ್ಣ ಕಾಣಾ, ಕಲಿದೇವಯ್ಯ. ೨೩o
ಪೃಥ್ವಿಯ ಗುಣವುಳ್ಳಡೆ ಭಕ್ತ.
ಅಪ್ಪುವಿನ ಗುಣವುಳ್ಳಡೆ ಮಾಹೇಶ್ವರ.
ಅಗ್ನಿಯ ಗುಣವುಳ್ಳಡೆ ಪ್ರಸಾದಿ.
ವಾಯುವಿನ ಗುಣವುಳ್ಳಡೆ ಶರಣ. ಆತ್ಮನ ಗುಣವುಳ್ಳಡೆ ಐಕ್ಯ.
ಇಂತೀ ಕ್ಷಮೆದಮೆಶಾಂತಿಸೈರಣೆಯುಳ್ಳಾತನೆ ಷಟ್ಸ್ಥಲಬ್ರಹ್ಮಿ.
ಇದು ಕಾರಣ, ಗುರುಲಿಂಗದಲ್ಲಿ ವಿಶ್ವಾಸ,
ಚರಲಿಂಗದಲ್ಲಿ ಸದ್ಭಕ್ತಿಯುಳ್ಳಾತನೆ ಭಕ್ತ ಮಾಹೇಶ್ವರ.
ಪರಬ್ರಹ್ಮದಲ್ಲಿ ಪರಿಣಾಮವುಳ್ಳಾತನೆ ಪ್ರಸಾದಿ.
ತನ್ನ ತಾನರಿದು, ಇದಿರ ಮರೆದಾತನೆ ಪ್ರಾಣಲಿಂಗಿ.
ಅನುಪಮಜ್ಞಾನದಿಂದ ತನ್ನ ನಿಜಸ್ವರೂಪವ ತಿಳಿಯಬಲ್ಲಾತನೆ ಶರಣ.
ಪಿಂಡಬ್ರಹ್ಮಾಂಡವನೊಳಕೊಂಡು
ಚಿದಾನಂದಬ್ರಹ್ಮದಲ್ಲಿ ಕೂಡಬಲ್ಲಾತನೆ ಐಕ್ಯ.
ಇಂತಪ್ಪ ವರ್ಮಾದಿ ವರ್ಮವನರಿಯದ ಅದ್ವೈತಿಗಳೆಲ್ಲ,
ಭವಕ್ಕೆ ಬೀಜರಯ್ಯಾ, ಕಲಿದೇವರದೇವ. ೨೩೧
ಪೃಥ್ವಿಯ ಚಿತ್ತದ ಪಂಚಕರ್ಮೆಂದ್ರಿಯಂಗಳೈದೂ
ಲಿಂಗೈಕ್ಯವಾದವು, ಬಸವಣ್ಣ ನಿಮ್ಮಿಂದ.
ಅಪ್ಪುವಿನ ಬುದ್ಧಿಯ ಪದಾರ್ಥಂಗಳೈದೂ
ಲಿಂಗೈಕ್ಯವಾದವು, ಬಸವಣ್ಣ ನಿಮ್ಮಿಂದ.
ಅಗ್ನಿಯ ಅಹಂಕಾರ ಪಂಚೇಂದ್ರಿಯಂಗಳೈದೂ
ಲಿಂಗೈಕ್ಯವಾದವು, ಬಸವಣ್ಣ ನಿಮ್ಮಿಂದ.
ವಾಯುವಿನ ಮನದ ಪಂಚಪ್ರಾಣವಾಯುಗಳೈದೂ
ಲಿಂಗೈಕ್ಯವಾದವು, ಬಸವಣ್ಣ ನಿಮ್ಮಿಂದ.
ಆಕಾಶದ ಸುಜ್ಞಾನದ ಜ್ಞಾನಂಗಳೈದೂ
ಲಿಂಗೈಕ್ಯವಾದವು, ಬಸವಣ್ಣ ನಿಮ್ಮಿಂದ.
ಆತ್ಮನ ಪರಮಾತ್ಮನ ಹಸ್ತಂಗಳೈದೂ
ಲಿಂಗೈಕ್ಯವಾದವು, ಬಸವಣ್ಣ ನಿಮ್ಮಿಂದ.
ಇಂತಿವೆಲ್ಲವೂ ಲಿಂಗೈಕ್ಯವಾದವು ಬಸವಣ್ಣ ನಿಮ್ಮಿಂದ.
ಕಲಿದೇವಾ, ನಿಮ್ಮ ಶರಣ ಸಂಗನಬಸವಣ್ಣನ ಶ್ರೀಪಾದಕ್ಕೆ
ನಮೋ ನಮೋ ಎನುತಿರ್ದೆನು. ೨೩೨
ಪೃಥ್ವಿಯ ಮೇಲಣ ಶಿಲೆಯ ತಂದು, ಪ್ರತಿಮೆಗಳ ಮಾಡಿ,
ಕಲ್ಲುಕುಟಿಗನಲ್ಲಿಯೆ ಗುರುವಾದ, ಕಲ್ಲು ಶಿಷ್ಯನಾದ.
ಹಿಂದಣಾದಿಯನರಿಯದ ಗುರು,
ಮುಂದೆ ವೇದಿಸಲಿಲ್ಲದ, ಉಪದೇಶಕೊಳ್ಳಲರಿಯದ ಶಿಷ್ಯ,
ಈ ಎರಡೂ ಕಲ್ಲಕುಟಿಗನ ಕಲ್ಲಿನಂತೆ ಕಾಣಾ, ಕಲಿದೇವಯ್ಯ. ೨೩೩
ಪ್ರಣಮ ಪ್ರಜ್ವಲಿತವಾಯಿತ್ತು, ಪ್ರಸಾದ ನಿಂದ ಸ್ಥಲವು.
ಪ್ರಸಾದ ಪ್ರಜ್ವಲಿತವಾಯಿತ್ತು, ಅನುಭಾವ ನಿಂದ ಸ್ಥಲವು.
ಅನುಭಾವ ಪ್ರಜ್ವಲಿತವಾಯಿತ್ತು.
ಇಂತಾ ಮಹಾಘನವು ಕಲಿದೇವಾ,
ನಿಮ್ಮ ಶರಣ ಬಸವಣ್ಣನ ನಿಜೈಕ್ಯದ ನಿಲವು. ೨೩೪
ಪ್ರಥಮಕಾಲದಲ್ಲಿ ದೇವಗಣ, ಮಹಾಗಣ,
ಕಿನ್ನರಗಣ, ಆಳಾಪಗಣಸಹಿತ ಸಂಗನಬಸವಣ್ಣ.
ಗಣಪ್ರಸಾದಿಯಾಗಿ ಮತ್ರ್ಯಲೋಕಕ್ಕೆ ಮಹವ ತಂದು,
ಶಿವಗಣಂಗಳ ಮಾಡಿದಾತ ಬಸವಣ್ಣ.
ಸ್ವರೂಪ ಸಾರಾಯವ ಪದಾರ್ಥವೆಂದಾತ ಬಸವಣ್ಣ.
ಕಲಿದೇವಯ್ಯ,
ನಿಮ್ಮ ಶರಣನಿಂತಹ ಘನಮಹಿಮ, ನೋಡಯ್ಯಾ. ೨೩೫
ಪ್ರಾಣಾಪಾನ ಮೊದಲಾದ ದಶವಾಯುಗಳ ಇಚ್ಫೆಯಲ್ಲಿ ಸುಳಿದಾಡದು.
ಜ್ಞಾನದಲ್ಲಿ ಬೆಳೆವುದು, ನಿರಾಲಂಬದಲ್ಲಿ ಆಡುವುದು,
ಹೃದಯಕಮಲ ಪದ್ಮಪತ್ರದುಸುರನಾಲಿಸಿ,
ಸಂಪುಟಜಂಗಮದಾಟವನಾಡುವುದು,
ಲಿಂಗದ ನೋಟವ ನೋಡುವುದು, ಮಹಾಪ್ರಸಾದದಲ್ಲಿ ಬೆಳೆವುದು,
ಕಲಿದೇವಾ, ನಿಮ್ಮ ಶರಣ ಬಸವಣ್ಣನ ನಿಲವಿದು. ೨೩೬
ಬಂದೆಹೆನೆಂಬ ಸುಖವ ಹೆರೆಹಿಂಗಿದವರುಂಟೆ ?
ಕಂಡ ನಿಧಾನವ ಬೇಡ ಎಂದವರುಂಟೆ
ಕಲಿದೇವಯ್ಯ ತಾನೆ ಬಂದೆಹೆನೆಂದಡೆ,
ಬೇಡ ಎನಲೇತಕೆ, ಎಲೆ ಚಂದಯ್ಯ. ೨೩೭
ಬಕಾರವೆ ಗುರುವಯ್ಯಾ, ಸಕಾರವೆ ಲಿಂಗವಯ್ಯಾ,
ವಕಾರವೆ ಜಂಗಮವಯ್ಯಾ, ಅದೆಂತೆಂದಡೆ: ಬಕಾರಂ ಗುರುರೂಪಂ ಚ ಸಕಾರಂ ಲಿಂಗಮೂರ್ತಿ ಹಿ|
ವಕಾರಂ ಚರಮಾಖ್ಯಾತಂ ತ್ರಿವಿಧಂ ತತ್ತ ್ವನಿಶ್ಚಯಂ||
ಇಂತೆಂದುದಾಗಿ.
ಉದಯ ಮಧ್ಯ ಸಾಯಂಕಾಲದಲ್ಲಿ,
ಬಸವಾ ಬಸವಾ ಬಸವಾ ಎಂದು ಮಜ್ಜನಕ್ಕೆರೆವ
ಮಹಾಮಹಿಮರ ತೋರಾ, ಕಲಿದೇವರದೇವ. ೨೩೮
ಬಲಕೆ ಮುರಿದನು ಪೌಳಿಯ ಉತ್ತರ ಬಾಗಿಲಲ್ಲಿ.
ತಲೆವಾಗಿ ಹೊಕ್ಕ ಗತಿಯ ಪವಣಿನಲ್ಲಿ ಧವಳಾರವ.
ಪಶ್ಚಿಮದ್ವಾರದಿಂದ ತ್ರಿವಿಧಗತಿಯ ಶೂನ್ಯಸಿಂಹಾಸನದ ಮೇಲೆ
ಮುಕ್ತಕೇಶದ ಪರಮ ಗುರುರಾಜನೇರಿದ, ಕಲಿದೇವರದೇವನು. ೨೩೯
ಬಸವ ಮೊದಲಾದ ಮಹಾಪ್ರಮಥಣಂಗಳ ಸಮೂಹಕ್ಕೆ ಕಾರಣರಾದ,
ಮತ್ರ್ಯಲೋಕದ ಮಹಾಗಣಂಗಳ ಅಂಶೋದ್ಧಾರಕರಾದ,
ಲಿಂಗಾಚಾರ ಭಕ್ತಮಾಹೇಶ್ವರರ ಪಾಣಿಗ್ರಹಣ ಕ್ರಿಯಾಶಕ್ತಿಯರು
ಸದಾವಾಸ ಪರಿಯಂತರ ಇಷ್ಟಮಹಾಲಿಂಗವ
ತಮ್ಮ ಅಂಗವ ಬಿಟ್ಟು ಅಗಲಿಸಲಾಗದು.
ನಿರಂತರ ಶ್ರೀಗುರುಲಿಂಗಜಂಗಮದ ಚರಣೋದ್ಧೂಳನವನ್ನು
ಲಲಾಟದಲ್ಲಿ ತ್ರಿಪುಂಡ್ರ ರೇಖೆಗಳ ಧರಿಸಿ,
ಮಂತ್ರಸ್ಮರಣೆಯಿಂದ ಲಿಂಗಜಂಗಮಕ್ಕೆ ಪಾಕವ ಮಾಡಿ ಸಮರ್ಪಿಸಿ,
ಕುಶಬ್ದವನಳಿದು ಆಚರಿಸುವದೆ ಸತ್ಯಸದಾಚಾರ.
ಈಸನ್ಮಾರ್ಗವ ಬಿಟ್ಟು, ಭವಿಪ್ರಾಣಿಗಳಂತೆ ಸರ್ವಾಂಗಕ್ಕೆ ಹಚ್ಚೆಯನೂರಿಸಿಕೊಂಡು,
ಲಲಾಟದಲ್ಲಿ ಕುಂಕುಮಗಂಧದ ಬೊಟ್ಟು, ಏಕಾಂತವಾಸದಲ್ಲಿ ಹಲವುಪ್ರಸಂಗ.
ಭವಿಜನ್ಮಾತ್ಮರು ತೊಳೆದು ಹೊದಿಕೆ, ಅವರ ಸಂಸರ್ಗ ಮೊದಲಾದ
ದುಃಕೃತ್ಯವ ಮಾಡಿದಲ್ಲಿ ಕಂಡು ಸುಮ್ಮನಿರಲಾಗದು.
ಭಕ್ತಮಾಹೇಶ್ವರರು ಆ ಸ್ತ್ರೀಯರಿಗೆ ಪ್ರತಿಜ್ಞೆಯ ಮಾಡುವದು.
ಅದ ಮೀರಿದಡೆ ಅವರಿಂದ ಪಾಕವ ಕೊಳ್ಳಲಾಗದು.
ಈ ಮಾರ್ಗವನಾಚರಿಸದಿರ್ದಂಥ ಭಕ್ತನಲ್ಲಿ, ಗುರುಚರಮೂರ್ತಿಗಳು,
ಅವನ ಮನೆಯ ಹೊಕ್ಕು, ಲಿಂಗಾರ್ಚನೆ ಲಿಂಗಾರ್ಪಣವ ಮಾಡಲಾಗದು.
ಗುರುವಾಕ್ಯವ ಮೀರಿ, ಅರ್ಥದಿಚ್ಫೆಗೆ ಹೊಕ್ಕು ಬೆರಸಿದಡೆ,
ಅನಾದಿ ಗುರುಲಿಂಗಜಂಗಮ ಭಕ್ತಪ್ರಸಾದಕ್ಕೆ ಹೊರಗಾಗಿ,
ಅಂತ್ಯದಲ್ಲಿ ಶತಸಹಸ್ರ ವೇಳೆ ಶುನಿಸೂಕರಾದಿಗಳಲ್ಲಿ
ಬಪ್ಪುದು ತಪ್ಪದು ನೋಡಾ, ಕಲಿದೇವರದೇವ. ೨೪o
ಬಸವಣ್ಣ ಮಾಡಲಿಕೆ ಗುರುವಾಯಿತ್ತು.
ಬಸವಣ್ಣ ಮಾಡಲಿಕೆ ಲಿಂಗವಾಯಿತ್ತು.
ಬಸವಣ್ಣ ಮಾಡಲಿಕೆ ಜಂಗಮವಾಯಿತ್ತು.
ಬಸವಣ್ಣ ಮಾಡಲಿಕೆ ಪ್ರಸಾದವಾಯಿತ್ತು.
ಬಸವಣ್ಣ ಮಾಡಲಿಕೆ ಈರೇಳುಲೋಕವಾಯಿತ್ತು.
ಬಸವಣ್ಣನಿಂದಾದ ಕಲಿದೇವಯ್ಯ. ೨೪೧
ಬಸವಣ್ಣನ ಕಿರುಗೊಳಗೆ
ನಾಗಲೋಕದ ನಾಗಗಣಂಗಳೆನಿಸುವುದು.
ಬಸವಣ್ಣನ ಜಾಣು ಜಂಘಯೆ
ಮತ್ರ್ಯಲೋಕದ ಮಹಾಗಣಂಗಳೆನಿಸುವುದು.
ಬಸವಣ್ಣನ ನಾಭಿಯೆ
ದೇವಲೋಕದ ದೇವಗಣಂಗಳೆನಿಸುವುದು.
ಮೇಲಣ ಘನವ ಹೊಗಳುವಡೆ ಎನ್ನಳವಲ್ಲ ಕಲಿದೇವಾ.
ಇನ್ನು ಹೊಗಳುವಡೆ ನಿನ್ನಳವಲ್ಲವೆ ಬಸವಣ್ಣನ. ೨೪೨
ಬಸವಣ್ಣನ ನೆನೆದೆನ್ನ ತನು ಬಯಲಾಯಿತ್ತು.
ಬಸವಣ್ಣನ ನೆನೆದೆನ್ನ ಮನ ಬಯಲಾಯಿತ್ತು.
ಬಸವಣ್ಣನ ನೆನೆದೆನ್ನ ಭಾವ ಬಯಲಾಯಿತ್ತು.
ಕಲಿದೇವಯ್ಯ ನಿಮ್ಮ ಶರಣ, ಮಹಾಮಹಿಮ
ಸಂಗನಬಸವಣ್ಣನ ನೆನೆನೆನೆದು,
ಎನ್ನ ಸರ್ವಾಂಗ ಲಿಂಗವಾಯಿತ್ತೆಂದರಿದೆನಯ್ಯಾ. ೨೪೩
ಬಸವಣ್ಣನ ನೆನೆವುದೆ ಷೋಡಶೋಪಚಾರ.
ಬಸವಣ್ಣನ ನೆನೆವುದೆ ಪರಮತತ್ವ.
ಬಸವಣ್ಣನ ನೆನೆವುದೆ ಮಹಾನುಭಾವ.
ಕಲಿದೇವಾ, ನಿಮ್ಮ ಶರಣ ಬಸವಣ್ಣನ ನೆನೆದು,
ಸಮಸ್ತಗಣಂಗಳೆಲ್ಲರೂ ಅತಿಶುದ್ಧರಾದರಯ್ಯ. ೨೪೪
ಬಸವಣ್ಣನ ಬಳಿಯಯ್ಯಾ ಗಂಗೆವಾಳುಕಸಮಾರುದ್ರರು.
ಬಸವಣ್ಣನ ಫಲವಯ್ಯಾ ಓಂ ನಮಃ ಶಿವಾಯ ಎಂಬವರೆಲ್ಲರು.
ಬಸವಣ್ಣನ ಆಜ್ಞೆಯಯ್ಯಾ ಎಲ್ಲ ಶಿವಾರ್ಚಕರು.
ಬಸವಣ್ಣನ ಘನವಯ್ಯಾ ತನುದಾಸೋಹಿಗಳು.
ಬಸವಣ್ಣನ ಧನವಯ್ಯಾ ಪಾದೋಕಪ್ರಸಾದಿಗಳು.
ಬಸವಣ್ಣನ ಮನವಯ್ಯಾ ತನುಪದಾರ್ಥವ ಮಾಡಿ,
ಗುರುಲಿಂಗಜಂಗಮಕ್ಕರ್ಪಿಸುವರು.
ಬಸವಣ್ಣ ಮಾಡಿದ ಅನುಗಳಯ್ಯಾ,
ಕನಸಿನಲ್ಲಿ ಮನಸಿನಲ್ಲಿ ಶಿವಶಿವಾ ಎಂಬರೆಲ್ಲರು.
ಬಸವಣ್ಣನ ಬಂಧುಗಳಯ್ಯಾ ಎಲ್ಲಾ ಶಿವಲಾಂಛನಿಗಳು.
ಬಸವಣ್ಣನ ಪ್ರಸಾದಿಗಳಯ್ಯಾ.
ಬಸವಣ್ಣನ ನಾಮಾಮೃತವ ನೆನೆವರೆಲ್ಲರು.
ಎಲೆ ಕಲಿದೇವರದೇವಾ, ಬಸವಣ್ಣನ ಆಜ್ಞೆಯಲ್ಲಿ ನೀನಿರ್ದೆಯಾಗಿ,
ಎಲ್ಲ ಶಿವಭಕ್ತರ ತನುಮನಧನಸಹಿತ ನಾನಾದೆನಯ್ಯಾ. ೨೪೫
ಬಸವಣ್ಣಾ ಎಂದಡೆ, ಚೆನ್ನಬಸವಣ್ಣಾ ಎಂದಡೆ,
ಪ್ರಭುದೇವಾ ಎಂದಡೆ, ಮಹಾದೇವಾ ಎಂದಡೆ,
ಮಹಾಸ್ಥಾನದಲ್ಲಿರ್ದು ಕರೆದಡೆ,
ಓ ಎನುತಿರ್ದೆ ಕಾಣಾ, ಕಲಿದೇವರದೇವಾ. ೨೪೬
ಬಹುಜಲವಂ ಬಿಟ್ಟು, ಚಿಲುಮೆಯ ತೆರೆಗಡದು.
ನೆಲಶುದ್ಧ ಸೌಕರ್ಯವಲ್ಲದೆ ಅದು ಶೀಲವಲ್ಲ.
ಉಪ್ಪ ಬಿಟ್ಟು ಸಪ್ಪೆಯನುಂಡಡದು ಮನದ ಹೇಸಿಕೆಯಿಲ್ಲದೆ ಅದು ದೃಢವ್ರತವಲ್ಲ.
ವ್ರತ ನಿಶ್ಚಿಯವಾವುದೆಂದಡೆ,
ಪರಸ್ತ್ರೀ ಪರಧನ ಪರದೂಷಣಯವನರಿದು ಬಿಟ್ಟಡೆ,
ಅದು ಅರುವತ್ತಾರುವ್ರತವೆಂದೆ, ಕಲಿದೇವರದೇವ. ೨೪೭
ಬಾಲನಹನೂಮ್ಮೆ, ಲೋಲನಹನೊಮ್ಮೆ,
ವೃದ್ಧನಹನೊಮ್ಮೆ, ಮತ್ತನಹನೊಮ್ಮೆ,
ಹೊಳೆದು ತೋರುತಲೊಮ್ಮೆ ತೋರಿ ಅಡಗುತಲೊಮ್ಮೆ.
ವಿಶ್ವವ ನೋಡಿ ಬೆರಗಾಗುತ್ತಮಿರೆ, ಇದ್ದ ಠಾವಿನಲ್ಲಿ
ಮುಂದೆ ತೋರುತ್ತವಿರಲು, ಸಂಪ್ರದಾಯದವರು
ಒಡನೊಡನೆ ಹರಿದುಬಂದು, ಹೇಳುತ್ತಿರಲು,
ಹರಿದು ಬಂದು ಹತ್ತೆಸಾರಿದ,
ಬಸವನ ಮಹಮನೆಯ ತಲೆಯೆತ್ತಿ ನೋಡಿದ.
ಮುಗಿಲ ಮೂಲೆ ತಪ್ಪದೆ ಕುಸುರಿಗೆಲಸಗಳ,
ನಂದಿಯ ಮಂಟಪಗಳ,
ಮೇಲುಪ್ಪರಿಗೆಯ ಭದ್ರಂಗಳ ನೋಡಿ ತಲೆದೂಗುತ್ತ,
ಕಲಿದೇವರದೇವ, ಬಸವನ ಮಹಮನೆಯ
ಪ್ರದಕ್ಷಿಣ ಬಂದು, ದ್ವಾರದ ಮುಂದೆ ನಿಂದಿರ್ದನು, ೨೪೮
ಬಿಂದುವ ಹರಿದು, ನಾದವನತಿಗಳೆದು,
ಕಳೆಯ ಬೆಳಗ ಸಾಧಿಸಿ,
ಅಸಾಧ್ಯ ಸಾಧಕನಾದೆಯಲ್ಲಾ ಬಸವಣ್ಣ.
ಕಾಯವ ಹೊದ್ದದೆ, ಮಾಯವ ಸೋಂಕದೆ.
ನಿರಾಳವಾಗಿ ನಿಂದೆಯಲ್ಲಾ ಬಸವಣ್ಣ.
ನಾ ನಿನ್ನನವಗ್ರಹಿಸಿಕೊಂಡು, ಸಂದುಭೇದವಿಲ್ಲದಿದ್ದಲ್ಲಿ,
ಹೊಗಳಲಿಂಬುಂಟೆ ಬಸವಣ್ಣ.
ಕಲಿದೇವರದೇವನು ಕಾಯಗೊಂಡಿಪ್ಪುದು,
ನಿನ್ನಿಂದಲಾನು ಕಂಡೆ ನೋಡಾ, ಸಂಗನಬಸವಣ್ಣ. ೨೪೯
ಬಿಂದುವ ಹರಿದೆಯಲ್ಲಾ ಬಸವಣ್ಣ.
ನಾದವ ಸಿಂಹಾಸನವ ಮಾಡಿಕೊಂಡು ಇದ್ದೆಯಲ್ಲಾ ಬಸವಣ್ಣ.
ಅಷ್ಟಗುಣಂಗಳ ನಷ್ಟವ ಮಾಡಿದೆಯಲ್ಲಾ
ನಿಜಲಿಂಗ ಬಸವಣ್ಣ.
ಶುಕ್ಲಶೋಣಿತ ಮೇಧಸ್ಸು ಇವರಿಂದಾದ
ಕಾಯವೆತ್ತ ಹೋಯಿತ್ತಯ್ಯಾ ಘನಲಿಂಗ ಬಸವಣ್ಣ.
ಭಕ್ತಿಯ ರೂಪುಗೆಟ್ಟು ಮತ್ತೊಂದು ರೂಪಾದೆಯಲ್ಲಾ
ನಿರೂಪಿ ಬಸವಣ್ಣ.
ಶೂನ್ಯಪ್ರಸಾದಿಯಲ್ಲ, ನಿಶ್ಯೂನ್ಯಪ್ರಸಾದಿಯಲ್ಲ.
ಆವ ಪ್ರಸಾದವನೂ ಸೋಂಕದ ಪ್ರಸಾದಿ.
ಯೋನಿಜನಲ್ಲದ, ಅಯೋನಿಜಲ್ಲದ, ನಿಜಮೂರ್ತಿಯೆನಿಸುವ ಬಸವಣ್ಣ.
ಭಕ್ತಿಯ ಹರಹಿಹೋದೆಯಲ್ಲಾ ಬಸವಣ್ಣ.
ಮೂರ್ತನಲ್ಲದ, ಅಮೂರ್ತನಲ್ಲದ ಲಿಂಗವ
ತೋರಿದೆಯಲ್ಲಾ ಬಸವಣ್ಣ.
ನಿರವಯವಾಗಿ ಹೋದನು ನಮ್ಮ ಬಸವರಾಜನು.
ಬೆಳಗನುಟ್ಟು ಬಯಲಾಗಿ ಹೋದನು ನಮ್ಮ ಬಸವಲಿಂಗನು.
ಬಸವಣ್ಣ ಬಸವಣ್ಣ ಬಸವಣ್ಣ ಎನಲಮ್ಮೆನು,
ಎನ್ನ ವಾಙಶನಕ್ಕಗೋಚರನಾಗಿ.
ಬಸವಣ್ಣಂಗೆ ಶರಣೆಂಬ ಪಥವ ತೋರಯ್ಯಾ,
ಕಲಿದೇವರದೇವ. ೨೫o
ಬಿತ್ತು ಬೆಳಸು ಸರ್ವಜೀವಕಿವನೊಬ್ಬನೆ.
ಮತ್ತೆ ಮರಳಿ ಅನ್ಯದೈವಕ್ಕೆರಗಬೇಕೊ?
ಪೃಥ್ವೀರಾಜವನಾಳುವವರು,
ಕಾದಿ ಹೋದವರ ಗೋತ್ರವಧೆಯಂ ಮಾಡಿ,
ಸತ್ತುಹೋದ ಪಾಂಡವರು.
ಜಗಕ್ಕೆ ಬಿತ್ತು ಬೆಳೆಯ ಕೊಟ್ಟನೆಂಬ
ನೀತಿಹೀನರ ನುಡಿಯ ಕೇಳಲಾಗದೆಂದ, ಕಲಿದೇವರದೇವ. ೨೫೧
ಬಿದ್ದು ಸತ್ತ ಬಸುವ ತಿಂಬ ಹೊಲತಿಗೆ ಹೊಲೆಗಂಡು,
ಶುದ್ಧನೀರ ಮಿಂದಡೆ,
ಅವಳ ಮೊದಲ ಹೊಲೆ ಹೋಯಿತ್ತೆ ?
ಮದ್ದವ ಸೇವಿಸುವ ಹೊಲೆಯರು,
ದೈವಕ್ಕೆರಗಿ, ಕುಲದಲ್ಲಿ ಶುದ್ಧರಹೆವೆಂಬ ಪರಿಯೆಂತೊ ?
ಮಲಭಾಂಡದ ಕುಲವೆಲ್ಲಾ ಒಂದೆ.
ಗೆಲುವಿಂಗೆ ಹೆಣಗುವ ಹದಿನೆಂಟುಜಾತಿಗಳು,
ಗುರುವಿನ ನೆಲೆಯನರಿಯದೆ,
ಕೆಟ್ಟಪ್ರಾಣಿಗಳನೇನೆಂಬೆನಯ್ಯಾ, ಕಲಿದೇವರದೇವ ? ೨೫೨
ಬೆಕ್ಕು ನಾಯಿ ಸೂಳೆ ಸುರೆ ತಾಳಹಣ್ಣು
ಅನ್ಯದೈವ ಭವಿಮಿಶ್ರವುಳ್ಳವರ ಮನೆಯಲ್ಲಿ,
ನಂಟುತನದ ದಾಕ್ಷಿಣ್ಯಕ್ಕಾಗಲಿ,
ನೆಂಟರ ದಾಕ್ಷಿಣ್ಯಕ್ಕಾಗಲಿ ಅದಲ್ಲದೆ,
ಮತ್ತೆ ತನ್ನ ಒಡಲ ಕಕ್ಕುಲತೆಗಾಗಿ ಹೋಗಿ ಹೊಕ್ಕು,
ಅವರುಗಳಲ್ಲಿ ಅನ್ನ ಪಾನವ ಕೊಂಡೆನಾದಡೆ,
ಹೊಲೆಗೇರಿಯ ಹಂದಿಯ ಮುಸುಡ
ಮೂಸಿ ನೋಡಿದಂತಾಯಿತ್ತು, ಅವನ ಮಾಟ,
ಕಲಿದೇವಯ್ಯ ನೀವು ಸಾಕ್ಷಿಯಾಗಿ. ೨೫೩
ಬೋಳಿಗೇಕೊ ತ್ರಿಭಸ್ಮಸುರೇಖೆ ?
ಗುರುವಿಗೇಕೊ ಕೊನರು ? ಜಂಗಮಕ್ಕೇಕೊ ಭರವಶ ?
ಲಿಂಗಕ್ಕೇಕೊ ಮುನ್ನೀರು ? ಭಕ್ತಂಗೇಕೊ ಖ್ಯಾತಿಯ ಲಾಭ ?
ಇಂತಿವರು ತಾಳಬಿಟ್ಟು ಕುರಸವ ಕೊಂಡು,
ದಡಿಗಿಡಾಗಿ ಹೊಡೆಯಿಸಿಕೊಳಬೇಡ.
ಮುಂದೆ ಮೇಲಣವರುಹ ನೋಡಿ,
ಬದುಕೆಂದನು ಮಾಚಯ್ಯ, ಕಲಿದೇವರದೇವಾ. ೨೫೪
ಬ್ರಹ್ಮನ ಹೆಂಡಿರ ಮಕ್ಕಳ ಹಿಡಿತಂದು,
ಅಡಿಗೆಯ ಮಾಡಿಸಿದಾತ ಬಸವಣ್ಣ.
ವಿಷ್ಣುವಿನ ಸಾಸಿರದೇಳುನೂರು ಕುಮಾರಿಯರ
ಹಿಡಿತಂದು, ದಹಿಸಿದಾತ ಬಸವಣ್ಣ.
ರುದ್ರರ ರುದ್ರಗಣಂಗಳ ಹಿಡಿತಂದು,
ಸ್ವಾಮಿಭೃತ್ಯಾಚಾರಸಂಬಂಧವ ಮಾಡಿಸಿದಾತ ಬಸವಣ್ಣ.
ಆ ಬಸವಣ್ಣಂಗೆ ಪ್ರಸಾದವೆ ನೆಲೆಯಾದುದು,
ಕಲಿದೇವಯ್ಯಾ. ೨೫೫
ಬ್ರಾಹ್ಮಣದೈವವೆಂದು ಆರಾಧಿಸಿದ [ಕಾರಣ]
ಗೌತಮಗೆ ಗೋವಧೆಯಾಯಿತ್ತು.
ಬ್ರಾಹ್ಮಣದೈವವೆಂದು ಆರಾಧಿಸಿದ ಕಾರಣ ಕರ್ಣನ ಕವಚ ಹೋಯಿತ್ತು.
ಬ್ರಾಹ್ಮಣದೈವವೆಂದು ಆರಾಧಿಸಿದ ಕಾರಣ ನಾಗಾರ್ಜುನನ ತಲೆ ಹೋಯಿತ್ತು.
ಬ್ರಾಹ್ಮಣದೈವವೆಂದು ಆರಾಧಿಸಿದ ಕಾರಣ ದಕ್ಷಂಗೆ ಕುರಿದಲೆಯಾಯಿತ್ತು.
ವಿಷ್ಣುದೈವವೆಂದು ಆರಾಧಿಸಲು ಬಲಿಗೆ ಬಂಧನವಾಯಿತ್ತು.
ವಿಷ್ಣುದೈವವೆಂದು ಆರಾಧಿಸಿದ ಕಾರಣ
ಪಾಂಡವರಿಗೆ ದೇಶಾಂತರ ಯೋಗವಾಯಿತ್ತು.
ವಿಷ್ಣುದೈವವೆಂದು ಆರಾಧಿಸಲು ಪರಶುರಾಮ ಸಮುದ್ರಕ್ಕೆ ಗುರಿಯಾದ.
ವಿಷ್ಣುದೈವವೆಂದು ಆರಾಧಿಸಲು ವ್ಯಾಸನ ತೋಳು ಆಕಾಶಕ್ಕೆ ಹೋಯಿತ್ತು.
ಈ ದೃಷ್ಟವಿದ್ದು, ಮಾಯಿರಾಣಿಯ ದೈವವೆಂದು ಆರಾಧಿಸಿದ ಕಾರಣ
ತಲೆಯಲ್ಲಿ ಕೆರವ ಕಟ್ಟಿ, ಕೊರಳಲ್ಲಿ ಕವಡೆಯ ಕಟ್ಟಿ,
ಬೇವನುಟ್ಟು, ಜಾವಡಿ ಅರಿಯ ಲಜ್ಜೆ ಹೋಯಿತ್ತು.
ಮುಂದೆ ಭೈರವ ದೇವರೆಂದು ಆರಾಧಿಸಿದ ಕಾರಣ
ಕರುಳ ಬೆರಳ ಖಂಡಿಸಿ ತುತ್ತು ತುತ್ತಿಗೆ ಅಂತರಂಗ ಬಹಿರಂಗವಾಯಿತ್ತು.
ಮುಂದೆ ಜಿನನ ದೈವವೆಂದು ಆರಾಧಿಸಿದ ಕಾರಣ
ಜೈನ ಮಾಡಿದ ಕರ್ಮ ನಿಷ್ಕರ್ಮವಾದುದಾಗಿ ನರರ ಹಾಡಿದಡೆ ಗತಿಯಿಲ್ಲ,
ಕೇಳಿದರೆ ಗತಿಯಿಲ್ಲ
ಹರ ನಿಮ್ಮ ಶರಣರ ಶ್ರೀಪಾದವೆ ಗತಿಯಾಗಿದ್ದೆ ನೋಡಾ.
ಹರ ನಿಮ್ಮ ಶರಣರ ಒಲವಿಂದ
ತುತ್ತು ಬುತ್ತಿಗೆ ಬೆನ್ನುಹತ್ತುವ ಮಾರಿ ಮಸಣಿ ಮೈಲಾರ
ಹೊನ್ನ ಲಕ್ಷ್ಮಿಗಳು ಅರ್ಥ ಅಯುಷ್ಯವ ಕೊಡಬಲ್ಲವೆ ?
ಒಡೆಯನಿಲ್ಲದ ಮನೆಯ ತುಡುಗುಣಿನಾಯಿ ಹೊಗುವಂತೆ,
ಜಡದೇಹಿಗಳ ತನುವ ಕಾಡುತಿಹವೆಂದಾ ಕಲಿದೇವಯ್ಯ. ೨೫೬
ಭಕ್ತ ಭಕ್ತರೆಂದು ನುಡಿವಿರಿ,
ಭಕ್ತರೆಂತಾದಿರೋ ನೀವು ?
ನಿತ್ಯ ನಿರಂಜನಲಿಂಗ ಹಸ್ತದೊಳಗಿದ್ದು,
ಪೃಥ್ವಿಯ ಮೇಲಣ ಪ್ರತಿಷ್ಠೆಗೆರಗುವ
ವ್ಯರ್ಥರನೇನೆಂಬೆನಯ್ಯಾ, ಕಲಿದೇವಯ್ಯ ? ೨೫೭
ಭಕ್ತ ಮಾಹೇಶ್ವರರ ಇಷ್ಟಲಿಂಗವು,
ಶಕ್ತಿಸಂಪುಟದಿಂದ ಉತ್ಕೃಷ್ಟವಾದರೆ,
ಕಾಯವಳಿದೆನೆಂಬ ಕರ್ಮವ ನೋಡಾ.
ಕಾಯವಳಿದು ಕರ್ಮಕ್ಕೆ ಗುರಿಯಾಗದೆ
ಮುನ್ನಿನಂತೆ ಪೂಜಿಸುವ ಮುಕ್ತರ ತೋರಿಸಯ್ಯಾ.
ಅದೆಂತೆಂದಡೆ: ಅನಾದಿಪ್ರಣಮ, ಆದಿಪ್ರಣಮ, ಅಂತ್ಯಪ್ರಣಮ,
ನಾದಪ್ರಣಮ, ಅನಾದ ಪ್ರಣಮವೆಂಬ
ಪಂಚಪ್ರಣಮಂಗಳ ಪಂಚಸ್ಥಾನದಲ್ಲಿ ಪ್ರತಿಷ್ಠಿಸಿ,
ನಾ ನೀನೆಂಬ ಆನಂದವ ಆರುಹಿಸಿಕೊಟ್ಟನಯ್ಯಾ ಶ್ರೀಗುರು.
ಇಂತೀ ಭೇದಾದಿಭೇದದ ಆದಿಯನರಿಯದೆ,
ಕಾಯವಳಿದೆಹೆನೆಂಬ ಕರ್ಮಭಾಂಡಿಗಳ ಮೆಚ್ಚುವನೆ,
ಕಲಿದೇವರದೇವ. ೨೫೮
ಭಕ್ತನಾದಡೆ ತ್ರಿವಿಧದ ಮೇಲಣಾಸೆಯಳಿದಿರಬೇಕು.
ವಿರಕ್ತನಾದಡೆ ಧರಿತ್ರಿಯ ವರ್ಗದವರಿಗೊಳಗಾಗಿರದಿರಬೇಕು.
ಜಂಗಮವಾದಡೆ ಅನ್ಯರ ಬಲೆಗೆ ಸಿಲುಕದಿರಬೇಕು.
ಗುರುವಾದಡೆ ಲೇಸ ಕಂಡು ಚರಿಸದಿರಬೇಕು.
ಲಿಂಗವಾದಡೆ ತ್ರಿಶಕ್ತಿಯಿಚ್ಫೆಯಿಲ್ಲದಿರಬೇಕು.
ಕಲಿದೇವಾ, ನಿಮ್ಮ ಶರಣ [ಧರೆಯ] ಪಾವನವ ಮಾಡಿದ ಪರಿಣಾಮಕ್ಕೆ
ನಮೋ ನಮೋ ಎನುತಿರ್ದೆನು. ೨೫೯
ಭಕ್ತರ ಭಾವವ ನೋಡಲೆಂದು
ಸಾಕಾರವಾದ ಲಿಂಗವು ನಿರಾಕಾರವಾದುದಿಲ್ಲವೆ ?
ಭಕ್ತರ ಭಾವವ ನೋಡಲೆಂದು
ಕೆಂಬಾವಿಯ ಭೋಗಣ್ಣಗಳೊಂದಿಗೆ ಹೋದುದಿಲ್ಲವೆ ?
ಭಕ್ತರ ಭಾವವ ನೋಡಲೆಂದು
ಇಷ್ಟಲಿಂಗವು ಅಪ್ಪುವಿನಲ್ಲಿ ಅಡಗಿದುದಿಲ್ಲವೆ ?
ಭಕ್ತರ ಭಾವವ ನೋಡಲೆಂದು
ಇಷ್ಟಲಿಂಗವು ಅಗ್ನಿಯಲ್ಲಿ ಅಳಿದುದಿಲ್ಲವೆ ?
ಭಕ್ತರ ಭಾವವ ನೋಡಲೆಂದು
ಇಷ್ಟಲಿಂಗವು ಶಕ್ತಿಸಂಪುಟದಿಂದ ಉತ್ಕೃಷ್ಟವಾದುದಿಲ್ಲವೆ ?
ಭಕ್ತರ ಭಾವವ ನೋಡಲೆಂದು
ಇಷ್ಟಲಿಂಗವು ಪೃಥ್ವಿಯಲ್ಲಿ ಸ್ಥಾಪ್ಯವಾದಡೇನು ?
ಎತ್ತಿ ಧರಿಸೂದೆ ಭಕ್ತ ವಿರಕ್ತರಿಗೆ, ಮುಕ್ತಿಯ ಪಥವಯ್ಯ.
ಅದೆಂತೆಂದಡೆ: ಉಂಬಲ್ಲಿ ಉಡುವಲ್ಲಿ ಕೊಂಬಲ್ಲಿ ಕೊಡುವಲ್ಲಿ,
ಅರಿದೆ ಮರದೆನೆಂಬ ನಾನಾ ಸಂದೇಹದ ಕೀಲ ಕಳೆದು,
ಇಷ್ಟಲಿಂಗದ ಪೂಜೆ, ಚರಲಿಂಗದ ದಾಸೋಹವ ಮಾಡಬಲ್ಲಡೆ,
ಕಲಿದೇವರದೇವನ ನಿಜವ ಕಾಣಬಹುದು ಕಾಣಾ, ಚಂದಯ್ಯ. ೨೬o
ಭಕ್ತವತ್ಸಲ ಕಲ್ಲಿದೇವನ ಶರಣರು ಮಹಾಪುರುಷರು.
ಕಾಮಕ್ರೋಧಾದಿಗಳಂ ನಂದಿಸುವರು.
ಮದ ಮತ್ಸರಾದಿಗಳ ಸಿಂಹಾಸನವ ಮಾಡಿಕೊಂಬರು.
ಆಶೆಯಾಹಾರಕ್ಕೆ ಕೈಯಾನರು.
ದೇಶವೆನ್ನರು, ದೇಶಾಂತರವ ಮಾಡುವರು,
ಕಲಿದೇವಾ ನಿಮ್ಮ ಶರಣರು. ೨೬೧
ಭವಬಂಧನಂಗಳ ಮೀರಿ ನಿಂದ ಭಕ್ತಮಾಹೇಶ್ವರರು,
ಕಾಮ, ಕ್ರೋಧ, ಲೋಭ, ಮೋಹ, ಮದ, ಮತ್ಸರಂಗಳ ಹೊದ್ದದೆ,
ಕ್ಷಮೆ, ದಯೆ, ಶಾಂತಿ, ಸೈರಣೆ, ಸತ್ಯನಿತ್ಯವೆಂಬ
ಷಡ್ಗುಣಸಂಪದಂಗಳ ಪ್ರಸಾದಿ ಪ್ರಾಣಲಿಂಗಿ ಶರಣ ಐಕ್ಯ
ನಿರಾವಯದಾಚಾರವಿಡಿದಾಚರಿಸುವರೆ ನಿಜಮುಕ್ತರು ನೋಡಾ
ಅಪ್ರಮಾಣ ಅಗಮ್ಯ ಅಗೋಚರ ನಿಷ್ಕಲಂಕ ಕಲಿದೇವರದೇವ. ೨೬೨
ಭಾವದಿಂದರ್ಪಿತವೆಂಬ ವ್ರತಗೇಡಿಗಳ ಮಾತ ಕೇಳಲಾಗದು.
ಅಂತರಂಗದಿಂದರ್ಪಿತವೆಂಬನಾಚರಿಗಳ ಮಾತ ಕೇಳಲಾಗದು.
ದೂರದಿಂದರ್ಪಿತವೆಂಬ ದುರಾಚಾರಿಗಳ ಮಾತ ಕೇಳಲಾಗದು.
ಕಾಯದ ಮೇಲಣ ಲಿಂಗದಲ್ಲಿ,
ಭಾವಶುದ್ಧಿಯಿಂದೊಡಂಬಡಿಸಿ ಕೊಟ್ಟು ಕೊಳಬಲ್ಲನೆ ಬಲ್ಲ.
ಸಕಲಪದಾರ್ಥಂಗಳ ರೂಪ ತಂದು, ಸಾಕಾರದಲ್ಲಿ ಅರ್ಪಿಸದೆ ಕೊಂಡಡೆ,
ನಾಯಡಗು ನರಮಾಂಸವಯ್ಯಾ, ಕಲಿದೇವಯ್ಯ. ೨೬೩
ಭಾವದಿಂದಲಾದ ಶೇಷವ ಕ್ರೀಗರ್ಪಿಸುವೆ.
ಕ್ರೀಯಿಂದಲಾದ ಶೇಷವ ನಿಃಕ್ರೀಗರ್ಪಿಸುವೆ.
ನಿಃಕ್ರೀಯಿಂದಲಾದ ಶೇಷವ ಭಕ್ತಿಗರ್ಪಿಸುವೆ.
ಭಕ್ತಿಯಿಂದಲಾದ ಶೇಷವ ಜಂಗಮಕ್ಕರ್ಪಿಸುವೆ.
ಜಂಗಮದಿಂದಾದ ಶೇಷವ ಪ್ರಸಾದಕ್ಕರ್ಪಿಸುವೆ.
ಪ್ರಸಾದದಿಂದಾದ ಶೇಷವ ಲಿಂಗಕ್ಕರ್ಪಿಸುವೆ.
ಲಿಂಗದಿಂದಾದ ಜ್ಞಾನ, ಜ್ಞಾನದಿಂದ ತೃಪ್ತನಾದೆ ಕಾಣಾ,
ಕಲಿದೇವರದೇವಯ್ಯ. ೨೬೪
ಭಾವಮೂರ್ತಿಯಾಗಬೇಕು ಆದಿಲಿಂಗಕ್ಕೆ.
ಅರಿವುಮೂರ್ತಿಯಾಗಬೇಕು ದಾಸೋಹಕ್ಕೆ.
ಹರಿವುಮೂರ್ತಿಯಾಗಬೇಕು ಜಂಗಮಲಿಂಗಕ್ಕೆ.
ಭಕ್ತಿಮೂರ್ತಿಯಾಗಬೇಕು ಪ್ರಸಾದಕ್ಕೆ.
ನಿರ್ಭಾವಮೂರ್ತಿಯಾಗಬೇಕು ಅನುಭಾವಕ್ಕೆ.
ಜ್ಞಾನಮೂರ್ತಿಯಾಗಬೇಕು ಸ್ವಾನುಭಾವಕ್ಕೆ.
ಇಂತೀ ಪ್ರಜ್ವಲಿತವಾದ ತನುವಿನ ಸಂಗದಲಿರ್ಪ,
ಕಲಿದೇವಯ್ಯ. ೨೬೫
ಮಡಿಯ ಹೇರಿದ ಕತ್ತೆ ಉಡುವೆತ್ತ ಬಲ್ಲುದು,
ಉಡುವಾತ ಬಲ್ಲನಲ್ಲದೆ, ಕವಿಯ ಮಾತ ಕವಿ ಬಲ್ಲನು.
ನಾಲಗೆ ಬಲ್ಲದು ರುಚಿಯ.
ಭವದುಃಖಿಯೆತ್ತ ಬಲ್ಲನು ಲಿಂಗದ ಪರಿಯ.
ಮಡಿವಾಳ ಮಡಿವಾಳ ಎಂದು ನುಡಿವುದು ಜಗವೆಲ್ಲ.
ಹರಿಗೊಬ್ಬ ಮಡಿವಾಳನೆ ?
ಮಡಿಯಿತು ಕಾಣಾ ಈರೇಳು ಭುವನವೆಲ್ಲ,
ಮಡಿವಾಳ ಮಾಚಯ್ಯನ ಕೈಯಲ್ಲಿ.
ಮುಂದೆ ಮಡಿದಾತ ಪ್ರಭುದೇವರು,
ಹಿಂದೆ ಮಡಿದಾತ ಬಸವಣ್ಣ.
ಇವರಿಬ್ಬರ ಕರುಣದ ಕಂದನು ನಾನು ಕಲಿದೇವಯ್ಯಾ. ೨೬೬
ಮಧುರದ ಗುಣವ ಇರುಹೆ ಬಲ್ಲುದು.
ವಾಯುವಿನ ಗುಣವ ಸರ್ಪ ಬಲ್ಲುದು.
ಗೋತ್ರದ ಗುಣವ ಕಾಗೆ ಬಲ್ಲುದು.
ವೇಳೆಯ ಗುಣವ ಕೋಳಿ ಬಲ್ಲುದು.
ಇದು ಕಾರಣ, ಮನುಷ್ಯಜನ್ಮದಲ್ಲಿ ಬಂದು,
ಶಿವಜ್ಞಾನಾನುಭವವನರಿಯದಿರ್ದಡೆ,
ಆ ಕಾಗೆ ಕೋಳಿಗಿಂದ ಕರಕಷ್ಟ ಕಾಣಾ, ಕಲಿದೇವರದೇವ. ೨೬೭
ಮರಣವಿಲ್ಲದ ಮಹಿಮನ ನಿಲವ ತನ್ನಲ್ಲಿ ನೋಡಿ,
ಶರಣೆಂಬುದಲ್ಲದೆ ಮರೆಯಬಹುದೆ, ತೆರಹಿಲ್ಲದ ನಿಲವು ?
ಕಲಿದೇವರದೇವನು
ಕರಸ್ಥಲದೊಳೈದಾನೆ ಕಾಣಾ, ಚೆನ್ನಬಸವಣ್ಣ. ೨೬೮
ಮರಹು ಬಂದುದೆಂದರಿದು ಅರಿವ ನೆಲೆ ಮಾಡಿ,
ಅರಿವ ಕೊಟ್ಟ ಗುರುವಿನ ಕೈಯಲ್ಲಿ ಮಹವ ಕೊಂಡೆ ನಾನು.
ಎನ್ನ ಅರಿವನಾಯತದಲ್ಲಿರಿಸಿ ನಿಲ್ಲಿಸಿ,
ನಿಜಸ್ವಾಯತವ ಮಾಡಿದ ಕಾರಣ,
ಅರಿವು ಅರಿವನಾರಡಿಗೊಂಡಿತ್ತು,
ಮರಹು ಮರಹನಾರಡಿಗೊಂಡಿತ್ತು,
ಮಾಯೆ ಮಾಯೆಯನಾರಡಿಗೊಂಡಿತ್ತು,
ಕರ್ಮ ಕರ್ಮವನಾರಡಿಗೊಂಡಿತ್ತು,
ಕಲಿದೇವಯ್ಯಾ, ನಿಮ್ಮ ಶರಣ ಬಸವಣ್ಣನ ಕೃಪೆಯಿಂದ. ೨೬೯
ಮಲೆತು ಮೆಟ್ಟುತ್ತ, ತನುವನೊಲೆವುತ್ತ,
ತಲೆದೂಗಿ ಮನವನಲ್ಲಾಡಿಸಿ ನೋಡಿದ.
ಭುವನ ಭುವನೇಶ್ವರನ ಹಿಂದು ಮುಂದ ನೋಡಿ ನಗುತ್ತ,
ಮುತ್ತಿನ ತೋರಣಕ್ಕೆ ಹಾರೈಸಿ,
ಬಸವನರಮನೆಯ ಹೊಕ್ಕ, ಕಲಿದೇವರದೇವ. ೨೭o
ಮಾಚಿತಂದೆಯ ಕೈಯಲಾಗದು.
ಹೋಚಿತಂದೆಯ ಕೈಯಲಾಗದು.
ಇಚ್ಫೆಗೆಟ್ಟಂತೆ ಇರಲಾಗದು.
ಅಚ್ಚೊತ್ತಿದಂತೆ ಇರಬೇಕು ಅತಿ ಚೋದ್ಯವಾಗಿ.
ಎಚ್ಚರಿಕೆಯ ಮುಚ್ಚುಮರಹಿಲ್ಲದೆ ಬೆಚ್ಚಂತಿರಬೇಕು.
ಮಚ್ಚು ಪಲ್ಲಟವಾಗದೆ ಅಚ್ಚರಿಯ ಭಕ್ತಿಭರಿತನಾಗಿರಬೇಕು.
ಕಲಿ ಕರುಳನೊತ್ತಿ ಮುಂದಕ್ಕೆ ನಡೆವನಲ್ಲದೆ,
ಎಡೆಗೋಲನಾಸೆ ಮಾಡುವನೆ ಹೇಳಾ ?
ಕಲಿದೇವರದೇವನ ಅಂಕೆಗೆ ಝಂಕೆಗೆ,
ಬೆಚ್ಚಿ ಬೆದರಿ ಓಡದಿರು. ವೀರಕಂಕಣವ ಕಟ್ಟಾ, ಸಂಗನಬಸವಣ್ಣ. ೨೭೧
ಮಾಡುವ ಭಕ್ತಂಗೆ, ಒಲಿದ ದೇವಂಗೆ ಭೇದವುಂಟೆ ಅಯ್ಯಾ ?
ಕಾಯದೊಳಗೆ ಕಾಯವಾಗಿಪ್ಪ,
ಪ್ರಾಣದೊಳಗೆ ಪ್ರಾಣವಾಗಿಪ್ಪ.
ಅರಿದೆಹೆನೆಂದಡೆ ತಾನೆಯಾಗಿಪ್ಪ.
ಅರಸಿ ಬಯಸಿದಡೆ ನಡೆದುಬಹನು.
ಕಲಿದೇವರದೇವನ ಬರವನೀಗಳೆ ತೋರಿ ಕೊಟ್ಟಿಹೆನು ಕೇಳಾ,
ಸಂಗನಬಸವಣ್ಣ. ೨೭೨
ಮಾಡುವಾತ ಕಲಿದೇವ,
ಮಾಡಿಸಿಕೊಂಬಾತ ಕಲಿದೇವ.
ಮಾಡುವ ಮಾಡಿಸಿಕೊಂಬವೆರಡರ ಚೈತನ್ಯ, ಬಸವಣ್ಣ.
ಸ್ಥೂಲವನು ಸೂಕ್ಷ್ಮವ ಮಾಡಿ ಅನುಕರಿಸಿ,
ಕರಸ್ಥಲದಲ್ಲಿ ತೋರಿದ ಬಸವಣ್ಣ.
ಆ ಬಸವಣ್ಣನ ಸಂಗದಿಂದ ಬದುಕಿದೆ ಕಾಣಾ, ಕಲಿದೇವಯ್ಯ. ೨೭೩
ಮಾರಾರಿಯ ಬೆಸನದಿಂದ ಧಾರುಣಿಗವತರಿಸಿ,
ಸಾರಾಯದ ಸದ್ಭಕ್ತಿಯ ತೋರಿದನು ಶಿವಶರಣರೆಲ್ಲರಿಗೆ.
ಭಕ್ತಿಯ ಸಂಚವ, ಮುಕ್ತಿಯ ಭೇದವ,
ಸತ್ಯಶರಣರಿಗೆಲ್ಲ ಉಪದೇಶವ ಮಾಡಿ,
ನಿತ್ಯಲಿಂಗಾರ್ಚನೆಯೊಳಗೆನ್ನನಿರಿಸಿ ರಕ್ಷಿಸಿದಾತ,
ಬಸವಣ್ಣ ಕಾಣಾ, ಕಲಿದೇವರದೇವ. ೨೭೪
ಮುನ್ನ ಗುರುವಿಂಗೆ ಜ್ಞಾನವಿಲ್ಲ.
ಇನ್ನು ಶಿಷ್ಯಂಗೆ ಜ್ಞಾನವಿಲ್ಲ.
ಇಂತವರ ಮಗನಹ ಕುನ್ನಿಗಳನೇನೆಂಬೆ.
ಗುಹೇಶ್ವರಾ, ಅದು ಕಾರಣ ತನ್ನ ಗುರುವಲ್ಲದೆ,
ಅನ್ಯಹಸ್ತ ಮಂಡೆಯ ಮೇಲೆ ಬಿದ್ದಡೆ,
ಆ ಭಕ್ತಿ ಮುನ್ನವೆ ಹಾಳದುದು ಎಂದ, ಕಲಿದೇವಯ್ಯ. ೨೭೫
ಮುನ್ನ ಶಿವ ಕೊಟ್ಟ ಆಯುಷ್ಯವುಂಟೆಂದು,
ವ್ಯಾಘ್ರವ ಗುಹೆಯಿಂ ಇನ್ನು ತೆಗೆವರುಂಟೆ ?
ಉನ್ನತ ಉತ್ಪತ್ಯವೆಲ್ಲಾ ಶಿವನಿಂದಾಯಿತ್ತು.
ನಿನ್ನ ಧನವನುಂಡು, ತಮ್ಮ ಅಜ್ಞಾನದಿಂದ ತಾವರಿಯದೆ ಹೋಗಿ,
ತನ್ನ ಕಾಡಿನ ಮೇಲೆ ಕಾಗೆಗೆ ಕಾಳ ಚಲ್ಲಿ, ಪಿತರುಂಡೆರೆಂದು
ಕುನ್ನಿಗಳು ಮರುಳಾದರು ನೋಡಾ, ಕಲಿದೇವರದೇವ. ೨೭೬
ಮೂರನೊಳಕೊಂಡು ಆರ ಮೀರಿ ನಿಂದ
ಘನವನೇನೆಂಬೆನಯ್ಯಾ ? ನುಡಿವಡೆ ವಾಚಾತೀತ,
ನೋಡುವಡೆ ಕಂಗಳೆರಡೆಯ್ದವಯ್ಯಾ.
ಮಹದ ಬೆಳಗೆ ತಾನಾಗಿ ನಿಂದ, ಮರುಳ ಶಂಕರದೇವರ ನಿಲವ,
ಬಸವಣ್ಣನಿಂದ ಕಂಡು ಬದುಕಿದೆ ಕಾಣಾ, ಕಲಿದೇವರದೇವ. ೨೭೭
ಮೂರುಸ್ಥಲದ ಮೂಲವನರಿಯರು.
ಪುಣ್ಯಪಾಪವೆಂಬ ವಿವರವನರಿಯರು. ಇಹಪರವೆಂಬುದನರಿಯರು.
ಇವರನೆಂತು ಮಹಂತಿನ ದೇವರೆಂಬೆನಯ್ಯಾ ?
ಹೊನ್ನ ವಸ್ತ್ರದವನ ಬಾಗಿಲಕಾಯ್ವ ಪಶುಪ್ರಾಣಿಗಳ
ದೇವರೆನ್ನಬಹುದೇನಯ್ಯಾ ?
ಜಗದ ಕರ್ತನ ವೇಷವ ಧರಿಸಿಕೊಂಡು,
ಸರ್ವರಿಗೆ ಬೇಡಿ ಕೊಟ್ಟಡೆ ಒಳ್ಳೆಯವ,
ಕೊಡದಿರ್ದಡೆ ಕೆಟ್ಟವನು.
ಪಾಪಿ ಚಾಂಡಾಲಿ ಅನಾಚಾರಿ ಎಂದು ದೂಷಿಸಿ,
ಒಳಹೊರಗೆಂದು ಬೊಗಳುವ ಮೂಳಮಾನವರಿಗೆ
ಮಹಂತಿನ ಆಚರಣೆ ಎಲ್ಲಿಯದೊ ? ಇಲ್ಲವೆಂದ, ಕಲಿದೇವರದೇವ. ೨೭೮
ಮೃಡನನೊಂದು ದೈವಕ್ಕೆ ಪಡಿಗಟ್ಟಿ ನುಡಿವನ ಬಾಯಲ್ಲಿ,
ಬಿಡದೆ ನೆಟ್ಟುವೆನೈದಾರು ಗೆಜ್ಜೆಯ ಗೂಟಗಳನು.
ಭೂಮಂಡಲದೊಳಗೆ ಕಲಿದೇವಂಗೆ
ಹುಲುದೈವವ ಸರಿಯೆಂದು ನುಡಿವನ ಬಾಯ,
ಎಡದ ಕಾಲ ಕೆರಹಿಂದ ಬಡಿಯೆಂದ, ಮಡಿವಾಳ ಮಾಚಯ್ಯ. ೨೭೯
ರಂಗದಕ್ಕಿಯ ಹೊಯಿಯೆಂದು ನಿಂದ ನಾಲ್ವರಿಗೆ,
ತಂದಲ್ಲಿ ಶ್ರೀಕಳಸವ ಹಿಡಿಸಿ, ಭಕ್ತಿಗೆ ಚೆಂದವಾಯಿತ್ತು.
ಮುಂದಲ್ಲಿ ಏನ ಬೇಡಲುಂಟು ?
ಬೆಂದ ಮನೆಯಲ್ಲಿ ಹುರಿಗಾವಲಿಯಾದಡೆಯೂ ಬರಲಿಯೆಂದು,
ಶ್ರೀಕಳಸಕ್ಕೆ ದಂಡವನಾಗಳೆ ಕೊಡುವರೆ, ಕಲಿದೇವಯ್ಯಾ. ೨೮o
ರೂಪನರ್ಪಿತವ ಮಾಡುವರು ತಮತಮಗೆ,
ರುಚಿಯನರ್ಪಿತವ ಮಾಡುವ ಭೇದವನರಿಯರು ನೋಡಾ.
ಅವರನೆಂತು ಭಕ್ತನೆಂಬೆ ? ಅವರನೆಂತು ಪ್ರಸಾದಿಗಳೆಂಬೆ ?
ರೂಪನು ಲಿಂಗಕ್ಕೆ ಕೊಟ್ಟು, ರುಚಿಯ ತಾವು ಭುಂಜಿಸುವ
ವ್ರತಗೇಡಿಗಳಿಗೆ ಪ್ರಸಾದವುಂಟೆ ? ಕಲಿದೇವಯ್ಯ. ೨೮೧
ಲಿಂಗ ಬೆರಗಿನ ಪರಮಸುಖಿಯನೇನೆಂಬೆನಯ್ಯಾ !
ಕಂಗಳ ಕಳೆಯ ಸಂಗವನಗಲಿದ,
ಅಂಗವಿರಹಿತನನೇಂದುಪಮಿಸುವೆ !
ನೋಟದಲ್ಲಿ ಅನಿಮಿಷ, ಕೂಟದಲ್ಲಿ ನಿಸ್ಸಂಗಿ,
ಎಡೆಯಾಟದಲ್ಲಿ ನಿರ್ಗಮನ, ನಿಂದಲ್ಲಿ ನಿರಾಳ,
ಸುಳಿದಲ್ಲಿ ಪರಿಪೂರ್ಣ, ಘನಕ್ಕೆ ಘನಮಹಿಮ.
ಕಲಿದೇವಾ, ನಿಮ್ಮ ಶರಣ
ಪ್ರಭುದೇವರ ಶ್ರೀಪಾದಕ್ಕೆ ನಮೋ ನಮೋ ಎನುತಿರ್ದೆನು. ೨೮೨
ಲಿಂಗದ ನಿಧಿಯೆ ಬಸವಾ.
ಜಂಗಮದ ವಾರಿಧಿಯೆ ಬಸವಾ.
ಪ್ರಸಾದದ ತವನಿಧಿಯೆ ಬಸವಾ.
ಅನುಭಾವದ ಮೇರುವೆ ಬಸವಾ.
ಮಹವನೊಡಗೂಡಿದ ತನು
ಬಸವಣ್ಣನೊ, ಕಲಿದೇವನೋ ? ೨೮೩
ಲಿಂಗವೇದಿ ಬಂದೆನ್ನಂಗಣವ ಮೆಟ್ಟಿದಡೆ
ಹೆಂಡತಿ ಗಂಡನನರಿವಂತೆ ಅರಿವೆ.
ಅವರ ಬೆನ್ನಲ್ಲಿ ಬಂದ ಮಂದಿ ಹಲವಾದಡೆ
ಅದಕ್ಕೆ ಪ್ರೀತಿ ಪ್ರೇಮವ ಮಾಡಿ,
ಇಚ್ಫೆಯಲ್ಲಿ ಗಂಡನ ನೆರೆವಂತೆ ನೆರೆವೆ, ಕಲಿದೇವಯ್ಯ. ೨೮೪
ಲಿಂಗಾಂಗಿಗಳೆಂದು ಒಪ್ಪವಿಟ್ಟು ನುಡಿದ ಅಣ್ಣಗಳಿರಾ
ನೀವು ಲಿಂಗಾಂಗಿಗಳೆಂತಾದಿರಿ ಹೇಳಿರಣ್ಣ.
ಅರಿಯದಿರ್ದಡೆ ಕೇಳಿರಣ್ಣ, ಅಂಗ ಲಿಂಗವಾದ ಭೇದವ.
ಪರದೈವವ ನೆನೆಯದೆ, ಪರಸ್ತ್ರೀಯರ ಮುಟ್ಟದೆ,
ಪರದ್ರವ್ಯವ ಅಪಹರಿಸದೆ, ಪರನಿಂದ್ಯವ ಮಾಡದೆ,
ಪರಹಿಂಸೆಗೊಡಂಬಡದೆ, ಪರಪಾಕವ ಮುಟ್ಟದೆ,
ಪರವಾದವ ಕಲ್ಪಿಸದೆ,
ಪರಾತ್ಪರವಾದ ಸತ್ಯಶುದ್ಧ ಕಾಯಕವ ಮಾಡಿ,
ನಿರ್ವಂಚಕತ್ವದಿಂದ ಗುರುಲಿಂಗಜಂಗಮಕ್ಕೆ ಸಮರ್ಪಿಸಿ,
ಅವರಿಗೆ ಅತಿಭೃತ್ಯರಾಗಿ ಆಚರಿಸುವರೆ
ಲಿಂಗಾಂಗಿಗಳು ನೋಡಾ, ಕಲಿದೇವರದೇವ. ೨೮೫
ಲಿಂಗೈಕ್ಯ ಲಿಂಗವಂತ ಲಿಂಗಪ್ರಾಣಿ ಪ್ರಾಣಲಿಂಗಿಗಳೆಂದೆನಬಹುದು.
ಉದಯಕಾಲ ಮಧ್ಯಾಹ್ನ ಕಾಲ ವಿಚಿತ್ರಕಾಲ ತ್ರಿಕಾಲ
ಲಿಂಗಾರ್ಚಕರೆಂದೆನಬಹುದು, ಎನಬಹುದು.
ಹೊನ್ನು ಹೆಣ್ಣು ಮಣ್ಣು ತ್ರಿವಿಧವ ತೋರಿದ
ನಿಷ್ಪೃಹರೆಂದೆನಬುಹುದು, ಎನಬಹುದು.
ಧಾರಣೆ ಪಾರಣೆ ಒಡಲ ದಂಡಣೆ ಕರಣ ದಂಡಣೆ
ಉಳ್ಳವರೆಂದೆನಬಹುದು.
ಶೀಲವಂತರು ಸಂಬಂಧಿಗಳು ಒರತೆಯಗ್ಘ[ವ]ಣಿಯ
ನೇಮಿಗಳೆಂದೆನಬುಹು, ಎನಬಹುದು.
ನೇಮ ವ್ರತ ಪಾಕದ್ರವ್ಯವ ಒಲ್ಲೆವೆಂದೆನಬಹುದು, ಎನಬಹುದು.
ಶುದ್ಧಶೈವ ಪೂರ್ವಶೈವ ವೀರಶೈವವೆಂದೆನಬುಹುದು, ಎನಬಹುದು.
ಸರವೇದಿಗಳು ಶಬ್ದವೇದಿಗಳು
ಮಹಾನುಭಾವಿಗಳೆಂದೆನಬಹುದು, ಎನಬಹುದು.
ಇಂತಿವರೆಲ್ಲರೂ
ಶಿವಪಥದೊಳಗೆ ಮಾಡುತ್ತ ಆಡುತ್ತ ಇದ್ದರಲ್ಲದೆ
ಒಂದರ ಕುಳವು ತಿಳಿಯದು ನೋಡಾ.
ಆ ಒಂದು ದಾಸೋಹದಲ್ಲಿ ಬಸವಣ್ಣ ಸ್ವತಂತ್ರ.
ಆ ಲಿಂಗವು ಬಸವಣ್ಣನ ಒಡನೊಡನೆ ಆಡುತಿರ್ದನು ನೋಡಾ. ೨೮೬
ಲೋಕಾಚಾರಿಯಲ್ಲದ ಶರಣ, ಸ್ತುತಿನಿಂದೆಯಿಲ್ಲದ ಶರಣ.
ಶತ್ರುಮಿತ್ರರಿಲ್ಲದ ಶರಣ, ಸಂಪತ್ತು ಆಪತ್ತುಗಳಿಲ್ಲದ ಶರಣ.
ಸುಳಿದು ಸೂತಕಿಯಲ್ಲ, ನಿಂದು ಬದ್ಧನಲ್ಲ,
ಕಲಿದೇವಯ್ಯಾ, ನಿಮ್ಮ ಶರಣ ಪ್ರಭುದೇವರು. ೨೮೭
ಲೋಕಾದಿಲೋಕ ಹದಿನಾಲ್ಕು ಲೋಕಕ್ಕೆ ಕರ್ತ,
ಒಬ್ಬನೇ ಶಿವನೆಂದು ಶ್ರುತಿಶಾಸ್ತ್ರಗಳು ಸಾರುತ್ತಿವೆ.
ಗುರುದೀಕ್ಷೆಯ ಕೊಟ್ಟ ಮಾರ್ಗವ ಮೀರಿದವಂಗೆ
ಸೂಕರಜನ್ಮ ತಪ್ಪದೆಂದು ಶ್ರುತಿ ಸಾಕ್ಷಿಯ ಹೊಗಳುತ್ತಿವೆ.
ಹರನು ಹರಿಗೆ ಸರಿಯೆಂದಾರಾಧಿಸುವ
ದುರಾಚಾರಿಗಳ ನುಡಿಯ ಕೇಳಲಾಗದೆಂದ,
ಕಲಿದೇವರದೇವಯ್ಯ. ೨೮೮
ವಚನದ ರಚನೆಯ ನುಡಿವ ಬಯಲುರಂಜಕರೆಲ್ಲ
ಭಕ್ತರಪ್ಪರೆ ಅಯ್ಯಾ ?
ವಚನ ತನ್ನಂತಿರದು, ತಾನು ವಚನದಂತಿರ.
ಅದೆಂತೆಂದಡೆ: ತನುಮನಧನವನೆಲ್ಲ ಹಿಂದಿಟ್ಟುಕೊಂಡು,
ಮಾತಿನ ಬಣಬೆಯ ಮುಂದಿಟ್ಟುಕೊಂಡು,
ಒಡೆಯನ ಕಂಡು ನಾಯಿ ಬಾಲವ ಬಡಿದುಕೊಂಬಂತೆ,
ಆ ತೆರನಾಯಿತೆಂದ ಕಲಿದೇವರದೇವಯ್ಯ. ೨೮೯
ವಾಯದ ಮಾಯದ ಸಂಭ್ರಮದೊಳಗೆ
ಸಿಲುಕಿತ್ತು ನೋಡಾ ಭುವನವೆಲ್ಲ.
ಮಾಯಕ್ಕೆ ಹೊರಗಾದ ನಿರ್ಮಾಯನ ಕಂಡೆನು.
ತಾನೆಂಬ ನುಡಿಗೆ ನಾಚಿ, ನಾನೆಂಬ ನುಡಿಗೆ ಹೇಸಿ,
ತಾನು ತಾನಾದ ಘನಮಹಿಮನು.
ಕಾಯದಲ್ಲಿ ಕುರುಹಿಲ್ಲ, ಭಾವದಲ್ಲಿ ಭ್ರಮೆಯಿಲ್ಲ.
ಜ್ಞಾನ ತಾನೆಂಬ ಭೇದವಿಲ್ಲ.
ಸಾವಯನಲ್ಲ ನಿರವಯನಲ್ಲ,
ಕಲಿದೇವರದೇವಾ, ನಿಮ್ಮ ಶರಣ ಚೆನ್ನಬಸವಣ್ಣ. ೨೯o
ವಿಭೂತಿಯನಿಟ್ಟು, ರುದ್ರಾಕ್ಷಿಯಂ ಧರಿಸಿ,
ಪಂಚಾಕ್ಷರಿಯಂ ಜಪಿಸಿ, ಕೃತಾರ್ಥರಾದೆವೆಂಬ
ಪಂಚಮಹಾಪಾತಕರು ನೀವು ಕೇಳಿರೊ.
ಅದೆಂತಂದಡೆ, ವಿಭೂತಿಯನಿಟ್ಟು ವಿಶ್ವಾಸವಿಲ್ಲವಾಗಿ,
ರುದ್ರಾಕ್ಷಿಯ ಧರಿಸಿ ರುದ್ರಗಣಂಗಳನರಿಯರಾಗಿ,
ಪಂಚಾಕ್ಷರಿಯ ಜಪಿಸಿ ಪಂಚಮಹಾಪಾತಕವ ಬಿಡರಾಗಿ,
ಅವಾವೆಂದಡೆ: ಹುಸಿ ಕೊಲೆ ಕಳವು ಪಾರದ್ವಾರ
ತಾಮಸ ಭಕ್ತಸಂಗ, ಇಂತಿವ ಬಿಡದನ್ನಕ್ಕರ
ಶಿವಭಕ್ತನೆನಿಸಿಕೊಳಬಾರದು ನೋಡಾ, ಅದೆಂತೆಂದಡೆ: ಸರ್ವಾಚಾರ ಪರಿಭ್ರಷ್ಟಃ ಶಿವಾಚಾರಸ್ಯ ಮೇಲನಮ್ |
ಶಿವಾಚಾರ ಪರಿಭ್ರಷ್ಟೋ ನರಕೇ ಕಾಲಮಕ್ಷಯಮ್ ||
ಎಂದುದಾಗಿ.
ಕಸಗೊಂಡ ಭೂಮಿಯಲ್ಲಿ ಸಸಿ ಪಲ್ಲವಿಸುವುದೆ ?
ಹುಸಿಯಿದ್ದಲ್ಲಿ ಶಿವಭಕ್ತಿ ನೆಲೆಗೊಂಬುದೆ ?
ಬಸವಗತಿಯೆನುತ ಹಿರಿದಾಗಿ ಭಸಿತವ ಪೂಸಿಕೊಂಡಿರ್ದ
ಕುನ್ನಿಗಳೆಲ್ಲರೂ ಸದ್ಭಕ್ತರಾಗಬಲ್ಲರೆ ?
ಅಶನ ಭವಿಪಾಕ ತಿಂಬುದೆಲ್ಲವೂ ಅನ್ಯದ್ಯೆವದೆಂಜಲು.
ಮತ್ತೆ ಮರಳಿ ವ್ಯಸನಕ್ಕೆ ದಾಸಿ ವೇಸಿ ಹೊಲತಿ ಮಾದಗಿತ್ತಿ ಡೊಂಬತಿ
ಮೊದಲಾದವರಿಗೆ ಹೇಸದೆ ಆಶೆಯ ಮಾಡುವವರ
ಭಕ್ತಿಯ ತೆರನೆಂತೆಂದಡೆ: ಸೂಕರನ ದೇಹವ ತೊಳೆದಡೆ, ಅದು ಕೂಡ
ಅಶುದ್ಧದೊಳಗೆ ಹೊರಳಿದ ತೆರನಾಯಿತ್ತೆಂದ, ಕಲಿದೇವರದೇವ. ೨೯೧
ವಿಷ್ಣು ದೇವರೆಂದು ಆರಾಧಿಸುವಿರಿ
ವಿಷ್ಣು ದೇವರಾದಡೆ ತಾನೇರುವ ವಾಹನ
ಗರುಡನಲ್ಲಿ ಉತ್ತಿ ಉಣ್ಣಬಾರದೆ ಅಯ್ಯಾ.
ಬ್ರಹ್ಮ ದೇವರೆಂದು ಆರಾಧಿಸುವಿರಿ,
ಬ್ರಹ್ಮ ದೇವರಾದಡೆ ತಾನೇರುವ ವಾಹನ
ಹಂಸೆಯಲ್ಲಿ ಉತ್ತಿ ಉಣ್ಣಬಾರದೆ ಅಯ್ಯಾ.
ಮೈಲಾರ ದೇವರೆಂದು ಆರಾಧಿಸುವಿರಿ,
ಮೈಲಾರ ದೇವರಾದಡೆ ತಾನೇರುವ ವಾಹನ
ಕುದುರೆಯಲ್ಲಿ ಉತ್ತಿ ಉಣ್ಣಬಾರದೆ ಅಯ್ಯಾ.
ಭೈರವನೆ ದೇವರೆಂದು ಆರಾಧಿಸುವಿರಿ,
ಭೈರವನೆ ದೇವರಾದಡೆ ತಾನೇರುವ ವಾಹನ
ಚೇಳಿನಲ್ಲಿ ಉತ್ತಿ ಉಣ್ಣಬಾರದೆ ಅಯ್ಯಾ.
ಇದು ಕಾರಣ, ನಾಗಲೋಕದ ನಾಗಗಣಂಗಳು ಕೊಂಬುದು,
ಬಸವಣ್ಣನ ಪ್ರಸಾದ.
ಮತ್ರ್ಯಲೋಕದ ಮಹಾಗಣಂಗಳು ಕೊಂಬುದು
ಬಸವಣ್ಣನ ಪ್ರಸಾದ.
ದೇವಲೋಕದ ದೇವಗಣಂಗಳು ಕೊಂಬುದು
ಬಸವಣ್ಣನ ಪ್ರಸಾದ.
ಇಂತೀ ನಮ್ಮ ಬಸವಣ್ಣನ ಪ್ರಸಾದ
ಉಂಬುತ್ತ ಉಡುತ್ತ, ಕೊಂಬುತ್ತ ಕೊಡುತ್ತ,
ಅನ್ಯದೈವಕ್ಕೆರಗಿ ಆರಾಧಿಸುವ ಕುನ್ನಿಗಳನೆನ್ನ ಮುಖಕ್ಕೆ ತೋರದಿರಯ್ಯಾ,
ಕಲಿದೇವರದೇವಯ್ಯ ನಿಮ್ಮ ಧರ್ಮ. ೨೯೨
ವೇದ ವಿಪ್ರರ ಬೋಧೆ, ಶಾಸ್ತ್ರ ಸಂತೆಯ ಮಾತು.
ಪುರಾಣ ಪುಂಡರ ಗೋಷ್ಠಿ, ಆಗಮ ಅನೃತದ ನುಡಿ.
ತರ್ಕ ವ್ಯಾಕರಣ ಕವಿತ್ವ ಪ್ರೌಡಿ.
ಇಂತಿವರಂಗದ ಮೇಲೆ ಲಿಂಗವಿಲ್ಲದ ಭಾಷೆ.
ಇದು ಕಾರಣ, ತನ್ನೊಳಗನರಿದ
ಅನುಭಾವಿಯಿಂದ ಘನವಿಲ್ಲೆಂದ, ಕಲಿದೇವ. ೨೯೩
ವೇದದಿಂದ ವೆಗ್ಗಳವಿಲ್ಲವೆಂಬಿರಿ, ವೇದ ಶಿವನ ಕಂಡುದಿಲ್ಲ.
ಶಾಸ್ತ್ರದಿಂದ ವೆಗ್ಗಳವಿಲ್ಲ]ವೆಂಬಿರಿ, ಶಾಸ್ತ್ರ ಶಿವನ ಕಂಡುದಿಲ್ಲ.
ವೇದವೆಂಬುದು ವಿಪ್ರರ ಬೋಧೆ.
ಶಾಸ್ತ್ರವೆಂಬುದು ಸಂತೆಯ ಗೋಷ್ಠಿ.
ಅನುಭಾವದಿಂದ ತನ್ನೊಳಗಣ ತನುವ,
ತಾನರಿತಂಥ ಭಕ್ತರಿಂದ ವೆಗ್ಗಳವಿಲ್ಲವೆಂದ, ಕಲಿದೇವರದೇವಯ್ಯ. ೨೯೪
ವೇದವನೋದಿದಡೇನು? ಶಾಸ್ತ್ರವ ಕಲಿತಡೇನು?
ಮಾಘವ ಮಿಂದಡೇನು? ಮೂಗ ಹಿಡಿದಡೇನು?
ಹಲ್ಲ ಕಿರಿದಡೇನು? ಬಾಯ ಹುಯ್ದುಕೊಂಡಡೇನು?
ಉಟ್ಟುದನೊಗೆದಡೇನು? ಮಟ್ಟಿಯನಿಟ್ಟಡೇನು?
ಮಂಡೆಯ ಬಿಟ್ಟಡೇನು? ತಿಟ್ಟನೆ ತಿರುಗಿದಡೇನು?
ಕಣ್ಣು ಮುಚ್ಚಿದಡೇನು? ಕೈಗಳ ಮುಗಿದಡೇನು?
ಬೊಟ್ಟನಿಟ್ಟಡೇನು? ಬಯಲಿಂಗೆ ನೆನೆದಡೇನು?
ಮುಸುಡ ಹಿಡಿದಡೇನು? ಮೌನದಲ್ಲಿರ್ದಡೇನು?
ಅವಕ್ಕೆ ಶಿವಗತಿ ಸಿಕ್ಕದು.
ಕುಲವಳಿದು ಛಲವಳಿದು ಮದವಳಿದು ಮತ್ಸರವಳಿದು,
ಗುರುಕಾರುಣ್ಯವ ಪಡೆದು, ಅಂಗದ ಮೇಲೆ ಲಿಂಗವ ಧರಿಸಿ,
ಗುರುಲಿಂಗಜಂಗಮಕ್ಕೆ ಭಕ್ತಿಯ ಮಾಡಬಲ್ಲಡೆ,
ಶಿವಗತಿ ಸಿಕ್ಕುವುದು.
ಶಿವಭಕ್ತನಾಗಿ ಸತ್ಯ ಸದಾಚಾರ ಭಕ್ತಿವಿಡಿದು ನಡೆಯಬಲ್ಲಡೆ,
ಕೈಲಾಸದ ಬಟ್ಟೆ ಬೇರಿಲ್ಲವೆಂದ, ಕಲಿದೇವಯ್ಯ. ೨೯೫
ವೇದವೆಂಬುದು ಮಾಯಿಕದ ಕೈಯವಿಕಾರದಲ್ಲಿ ಹುಟ್ಟಿತ್ತು.
ಆಗಮವೆಂಬುದು ಮಾಯಿಕದ ಬಾಯವಿಕಾರದಲ್ಲಿ ಹುಟ್ಟಿತ್ತು.
ಶಾಸ್ತ್ರವೆಂಬುದು ಮಾಯಿಕದ ವೇಷವಿಕಾರದಲ್ಲಿ ಹುಟ್ಟಿತ್ತು.
ಪುರಾಣವೆಂಬುದು ಮಾಯಿಕದ ಕಾಲವಿಕಾರದಲ್ಲಿ ಹುಟ್ಟಿತ್ತು.
ಇದು ಕಾರಣ, ಇವ ತೋರಿ ಕಳೆದು,
ಮಹಾಸ್ಥಲದಲ್ಲಿ ನಿಂದವರುಗಳಲ್ಲದೆ,
ಮಹಾಲಿಂಗ ಕಲಿದೇವರದೇವನೊಲ್ಲನು. ೨೯೬
ವೇಷವ ಹೊತ್ತವರ, ಬಿಟ್ಟಿಯ ಹೊತ್ತವರೆಂಬೆ.
ಪಸರನಿಕ್ಕುವರ ಕಂಚಗಾರರೆಂಬೆ.
ಲಿಂಗವ ತೋರಿ ಉಂಬವರ ಬಂಗಾರರೆಂಬೆ.
ಡವಡಂಬಟ್ಟ ಬೆವಹಾರವ ಲಾಭವಾಗಿ ಬದುಕುವ,
ಫಲದಾಯರೆಲ್ಲರೂ ಧರ್ಮ ಕಾಮ ಮೋಕ್ಷದಲ್ಲಿ ಸಿಕ್ಕಿದರೆಂಬೆ.
ಅಲ್ಲಿಂದತ್ತ ನಿಮ್ಮ ಶ್ರೀಚರಣದ ಸೇವೆಯ ಮಾಡುವ,
ಲಿಂಗನಿಷ್ಠೆ ನಿಜೈಕ್ಯರ ಕರೆದು ಎನಗೆ ತೋರಾ, ಕಲಿದೇವಯ್ಯ. ೨೯೭
ವ್ರತ ನೇಮ ಸಪ್ಪೆ ಒರತೆ ಮುಂತಾದ ನೀರ್ವಿಡಿಯ ನೇಮವಂ ತಾಳಿ,
ಅಂಗನೆಯರ ಸಂಗಸುಖವ ಮೆಚ್ಚಿ,
ಲಿಂಗವ ಕೊಂಡಾಡುವ ಬಾಯಲ್ಲಿ ಹೆಂಗಳ ಅಧರವಂ ಚುಂಬಿಸೆ,
ಲಿಂಗಜಂಗಮದ ಪ್ರಸಾದ ಹೋಯಿತ್ತು.
ಇಷ್ಟಲಿಂಗ ಹಿಡಿವ ಕೈಯಲ್ಲಿ ಬಟ್ಟಿತ್ತು ಕುಚವ ಹಿಡಿದು,
ಉಚ್ಚೆಯ ಬಚ್ಚಲ ತೋಡುವ ಕಸ್ತುಕಾರರನೊಪ್ಪೆನೆಂದ.
ಇಂತಪ್ಪವರ ಭಕ್ತರೆಂದಡೆ, ಮೆಟ್ಟುವ ನರಕದಲ್ಲಿ, ಕಲಿದೇವರದೇವ. ೨೯೮
ವ್ರತಸ್ಥನರಿ[ದು] ವ್ರತಕ್ಕೆ ಗುರಿಯಹನಲ್ಲದೆ,
ಗುರುವ ಕಾಣ, ಲಿಂಗವ ಕಾಣ, ಜಂಗಮವ ಕಾಣ.
ಪಾದೋದಕ ಪ್ರಸಾದಕ್ಕೆ ಅವನಂದೇ ದೂರ.
ಸಾವಿರನೋಂಪಿಯ ನೋಂತು,
ಪಾರದ್ವಾರವ ಮಾಡಿದಂತಾಯಿತ್ತು, ಅವನ ವ್ರತ.
ಬಂದ ಜಂಗಮದ ಕಪ್ಪರ ಕಮಂಡಲ,
ತಮ್ಮ ಭಾಂಡ ಭಾಜನವ ಸೋಂಕಿಹವೆಂಬ
ಮುತ್ತಮುದಿಹೊಲೆಯನ ಮುಖವ ನೋಡಲಾಗದು.
ಅವನ ಮನೆಯಲುಂಡ ಜಂಗಮ,
ಮೂವಟ್ಟಲು ಈರಿಲು ಮೂರುದಿನ ಸತ್ತ ಹಂದಿಯ
ಕೂಳನುಂಡಂತೆ, ಕಲಿದೇವರದೇವಾ. ೨೯೯
ಶಬ್ದ ಸ್ಪರ್ಶ ರೂಪು ರಸ ಗಂಧ
ಪಂಚವಿಷಯ ಸಂಗತವಾವುದೆಂದಡೆ: ಶಬ್ದಗುರು, ಸ್ಪರ್ಶಲಿಂಗ, ರೂಪುಜಂಗಮ,
ರಸಪ್ರಸಾದ, ಗಂಧ ಅನುಭಾವ.
ಇಂತೀ ಪಂಚವಿಂಶತಿಯವನಲ್ಲವೆನಬಲ್ಲನಾಗಿ ಬಸವಣ್ಣನು.
ಮನ ಬುದ್ಧಿ ಚಿತ್ತ ಅಹಂಕಾರ ಚತುರ್ವಿಧ ಸ್ಥೂಲವಾವುದೆಂದಡೆ: ಮನ ಧ್ಯಾನ ಬುದ್ಧಿ ವಂಚನೆ ಇಲ್ಲದುದು.
ಚಿತ್ತ ದಾಸೋಹ ಅಹಂಕಾರ ಜ್ಞಾನ
ಇವರಲ್ಲಿ ಮಾಡಬಲ್ಲನಾಗಿ ಬಸವಣ್ಣನು.
ಸತ್ವ ರಜ ತಮವೆಂಬೀ ತ್ರಿಕರಣವಾವುದೆಂದಡೆ: ಸತ್ವಶುದ್ಧ ರಜಸಿದ್ಧ ತಮಪ್ರಸಿದ್ಧ.
ಇಂತೀ ತ್ರಿವಿಧ ಸನ್ನಹಿತನಾಗಿ ಬಸವಣ್ಣನು.
ಕಾಮ ಕ್ರೋಧ ಲೋಭ ಮೋಹ ಮದ ಮತ್ಸರವಾವುದೆಂದಡೆ: ಕಾಮ ಪೂಜೆ, ಕ್ರೋಧ ಅನಿಮಿಷ,
ಲೋಭ ಭಕ್ತಿ, ಮೋಹ ಅಷ್ಟವಿಧಾರ್ಚನೆ,
ಮದ ಷೋಡಶೋಪಚಾರ
ಮತ್ಸರ ಭವಂ ನಾಸ್ತಿ ಎಂದೆನಬಲ್ಲನಾಗಿ ಬಸವಣ್ಣನು,
ಮಹಾದೇವನು ಬಸವಣ್ಣನು, ಮಹಾಲಿಂಗವು ಬಸವಣ್ಣಂಗೆ
ಮತ್ತೇನು ಅಪ್ರತಿಮ ಕಾಣಾ, ಕಲಿದೇವಯ್ಯ. ೩oo
ಶರಣ ನಾದದೊಳಡಗಿ, ನಾದ ಪರನಾದದೊಳಡಗಿ,
ಪರನಾದ ಸುನಾದದೊಳಡಗಿ,
ಈ ನಾದ ಪರನಾದ ಸುನಾದವೆಂಬ ತ್ರಿಭಾವ ತ್ರಿಕೂಟನಾದ,
ಸ್ಥಿರಪ್ರಣಮನಾದದೊಳಡಗಿ,
ಆ ಸ್ಥಿರಪ್ರಣಮನಾದ, ಪ್ರಜ್ವಲಿಪ ನಾದದೊಳಡಗಿ,
ಕಲಿದೇವ ನಿಮ್ಮ ಶರಣ, ನಾದಸ್ವರೂಪನಾದ. ೩o೧
ಶರಣಂಗೆ ಕಟ್ಟಿದಿರ ಕರ್ಪುರ ಜ್ಯೋತಿಯಂತೆ,
ಸಚರಾಚರ ಸಂಭ್ರಮ ಸೂತಕ ಪಾತಕವೆಂಬ ಘೋಷಣೆಗಳು ಹುಟ್ಟದಂದು,
ದೇವಲೋಕ ಮತ್ರ್ಯಲೋಕ ನಾಗಲೋಕ ಹುಟ್ಟದಂದು,
ಹುಟ್ಟಿಸುವಾಗ ಕರೆಸದರವೆಯೆನ್ನಾಧಾರಪಥ,
ಪಲ್ಲವಿಸಿ ಗರ್ಭವಾಯಿತ್ತೆಂದು.
ಮಹಾದೇವಂಗೆ ದೇವಗಣಂಗಳು ಬಿನ್ನಹಂ ಮಾಡುವಲ್ಲಿ,
ಪ್ರಾಣ ಗರ್ಭಿತರುಂಟೆ ? ಅತಿಥರುಂಟೆ ?
ಕ್ಷೀರಸಾಗರದ ನಡುವೆ ಜವುಳು ನೀರುಂಟೆ ?
ಸಂವಿತ್ತು ಸಿಂಹಾಸನದ ಮೇಲೆ ಕಂದನೈದಾನೆ.
ಇಂದು ಶಿವನು ಶಕ್ತಿಯ ಕೂಡಿಯಾಳಾಪವೊಕ್ಕನು ಕಾಣಾ.
ಕಾರುಣ್ಯದ ವಾಹನವನೇರಿಕೊಂಡು,
ಅಷ್ಟಗುಣವಿರಹಿತನು, ತ್ರಿವಿಧಗುಣ ನಷ್ಟನು, ಸದ್ಗುಣ ಸಿಂಹಾಸನನು
ಸಪ್ತಸ್ವರಹಾರದೊಳು, ಘನದೇಹಾರದೊಳು ಹೇಳುವೆ.
ಎನ್ನೊಡೆಯ ಬಂದುದ ಕಂಡು ಬಲವಿಡಿದೆ, ದೃಢವಿಡಿದೆ,
ಜ್ಞಾನವಿಡಿದೆ, ಕಲಿದೇವಾ, ನಿಮ್ಮ ಬಸವನಡಿವಿಡಿದು ಘನವಾದೆ.
ನಮೋ ನಮೋ ಎಂಬೆ ನಿಮ್ಮ ಸಂಗನಬಸವಣ್ಣಂಗೆ. ೩o೨
ಶರಣು ಶರಣು ಎನ್ನ ಬಿನ್ನಪವನಧರಿಸಯ್ಯಾ.
ಬಸವಣ್ಣನೆ ಗುರುರೂಪಾಗಿ ಮತ್ರ್ಯಕ್ಕೆ ಬಂದ.
ಚೆನ್ನಬಸವಣ್ಣನೆ ಲಿಂಗರೂಪಾಗಿ ಮತ್ರ್ಯಕ್ಕೆ ಬಂದ.
ಪ್ರಭುವೆ ನೀವು ಜಂಗಮರೂಪಾಗಿ ಮತ್ರ್ಯಕ್ಕೆ ಬಂದಿರಿ.
ಭಕ್ತಿಯ ಬೆಳವಿಗೆಗೆ ಬಸವಣ್ಣನೆ ಕಾರಣಿಕನಾದ.
ಅರಿವಿನ ಬೆಳವಿಗೆಗೆ ಚೆನ್ನಬಸವಣ್ಣನೆ ಕಾರಣಿಕನಾದ.
ಈ ಇಬ್ಬರನೂ ಒಳಗೊಂಬ ಮಹಾಘನಕ್ಕೆ ನೀವು ಕಾರಣಿಕರಾದಿರಿ.
ಇಂತು ಗುರುಲಿಂಗಜಂಗಮವೊಂದೆ ಭಾವವಲ್ಲದೆ ಭಿನ್ನಭಾವವುಂಟೆ ?
ಬಸವಣ್ಣ ಚೆನ್ನಬಸವಣ್ಣನ ಬಿನ್ನಪವ ಮೀರದೆ,
ಬಿಜಯಂಗೆಯ್ವುದಯ್ಯಾ ಕಲಿದೇವರದೇವ. ೩o೩
ಶರೀರ ತಾ ಮುನ್ನ ಮರಹು, ಶರೀರ ಅವಧಾನ ತಾ ಮುನ್ನ ಮರಹು.
ಮನ ತಾ ಮುನ್ನವೆ ಮರಹು.
ಮನವೆಂಬ ಮರ್ಕಟನ ಮರವೆಯ ನೆನಹು ತಾ ಮುಂದೆ ಮರಹು.
ಮನದಾಳಾಪನೆ ತಾ ಮುನ್ನವೆ ಮರಹು.
ಮನಶರೀರ ಭಾವಂಗಳನರಿದು ನೋಡಾ, ತಿಳಿದು ನೋಡಾ ಎಚ್ಚೆತ್ತು ನೋಡಾ.
ಸತ್ಯನಿತ್ಯ ಶಬ್ದನಿತ್ಯ ಊಧ್ರ್ವಮುಖದಲ್ಲಿ ಉತ್ಪತ್ಯವ ಮಾಡುವೆನೆಂದು,
ಕರುಣೆ ನಿತ್ಯಸಿಂಹಾಸನದ ಮೇಲೆ ದಯವನೆ ಚರಣವ ಮಾಡಿ,
ಮೂರ್ತಗೊಂಡು ಕಾರುಣ್ಯದಿಂ ನೋಡಿದ ಶಿವನು.
ಉದಯಕಾಲ ವಿನೋದಕಾಲ ಶಿವನನು,
ಮಹಾದಯವನು ಬೇಡುವ ಬನ್ನಿರಯ್ಯಾ.
ಮನದಲ್ಲಿ ದಾಸೋಹ ಪರಿಪೂರ್ಣವಾಗಿ, ದಾಸೋಹವ ಬೇಡುವ ಬನ್ನಿರಯ್ಯಾ.
ಸಂಸಾರಸಾಗರದೊಳದ್ದಿ ಹೋದರೆಂದು,
ಮಾಯೆಯೆಂಬ ಕಾಲನು ಬಿನ್ನಹಂ ಮಾಡಿದನು.
ಬ್ರಹ್ಮನರ್ಥ ವಿಷ್ಣುವರ್ಥ ರುದ್ರಾದಿಗಳರ್ಥ ವೇದಶಾಸ್ತ್ರಾಗಮಪುರಾಣಂಗಳರ್ಥ.
ಸಪ್ತಕೋಟಿ ಮಹಾಮಂತ್ರಂಗಳರ್ಥ ದೇವಾದಿದೇವಂಗಳರ್ಥ.
ವೇದಮಂತ್ರವಿಡಿದು ಪ್ರಾಣಘಾತಕರಾಗಿ ದ್ವಿಜರೆಲ್ಲ ಅದ್ದಿಹೋದರೆಂದು,
ಮಾಯೆಯೆಂಬ ಕಾಲನು ಎಲ್ಲರ ಹಿಂದೆ ಇಕ್ಕಿಕೊಂಡು,
ಶಿವಂಗೆ ಬನ್ನಹಂ ಮಾಡುವಲ್ಲಿ, ಗಣಂಗಳು ಅದ್ದಿಹೋದುದುಂಟೆಯೆಂದು,
ನಂದಿಕೇಶ್ವರದೇವರು ಬೆಸಗೊಂಡರು.
ಆ ನಿರೂಪಕ್ಕೆ ಮಾಯೆಯೆಂಬ ಕಾಲನು ಕರ್ಣವ ಮುಚ್ಚಿ,
ಸ್ವಯಸ್ವಹಸ್ತಂಗಳಂ ಮುಗಿದು,
ಹೀಗೆಂದು ನಿರೂಪವ ಕರುಣಿಸಿಕೊಡುವರೆ ದೇವಯೆಂದು,
ಎನ್ನ ನಿಮರ್ಿಸಿದವರಾರು? ತ್ರಿಭುವನಂಗಳ ಮಾಡಿದವರಾರು?
ಗಣಂಗಳದ್ದಿ ಹೋದುದುಂಟೆ ದೇವ?
ಯಂತ್ರವಾಹಕ ನೀನು, ಸಕಲಪಾವಕ ನೀನು.
ನಿತ್ಯಭಕ್ತರು ನಿತ್ಯರು, ನಿಮ್ಮ ಗಣಂಗಳು ದಯಾಪಾರಿಗಳು.
ನಿಮ್ಮ ಶರಣರ ನೆನಹಿಂದ,
ಸಮಸ್ತಲೋಕದವರುಗಳಿಗೆ ಚೈತನ್ಯಾತ್ಮವಹುದು.
ಅವಧಾರವಧಾರೆಂದು ಬಿನ್ನಹಂ ಮಾಡಿ,
ಮತ್ತೆ ಕಾಲನು ನಿತ್ಯ ಸಿಂಹಾಸನದ ಮೇಲೆ ಕುಳಿತಿರ್ದು,
ಭಕ್ತಿನಿತ್ಯ ದಾಸೋಹವಂ ಮಾಡಲಿಕೆ ಕರ್ಮವೆಲ್ಲಿಯದು.
ಮಹಾದಾನಿ ಕರುಣವಿಡಿದೆತ್ತಿದಿರೆನುತ ತಿರುಗಿದನು ತನ್ನವರು ಸಹಿತಿತ್ತ.
ಅತ್ತ ಮಹಾಸಂಪಾದನೆಯಲ್ಲಿ ಶರಣ ಬಸವಣ್ಣನಿಗೆ
ಶರಣೆನುತಿರ್ದೆ ಕಾಣಾ, ಕಲಿದೇವರದೇವ. ೩o೪
ಶಿವ ತಾನೀತ ಮತ್ರ್ಯಲೋಕವ ಪಾವನವ ಮಾಡಲು,
ಗುರು ತಾನೀತ ಎನ್ನ ಭವರೋಗವ ವೇಧಿಸಲು,
ಭಕ್ತ ತಾನೀತ ಎನಗೆ ವಿಸ್ತಾರವಾಗಿ.
ಎನಗೆ ಜಂಗಮ ತಾನೀತ ಅನಾದಿ ಸಂಸಿದ್ಧ ಘನಮಹಿಮನಾಗಿ.
ಲಿಂಗ ತಾನೀತ ಎನಗೆ ಪ್ರಾಣಲಿಂಗ ತಾನಾಗಿ.
ಎನ್ನ ವಿಸ್ತಾರ ತಾನೀತ ಎನ್ನ ನಿಲುಕಡೆಯ ತಾನಾಗಿ.
ಎನ್ನ ಸರ್ವಸ್ವಾಯತವ ಮಾಡಿದ ಮಹಿಮ ತಾನೀತ ಕಾಣಾ,
ಕಲಿಗೆದೇವರದೇವ, ನಿಮ್ಮ ಶರಣ ಬಸವಣ್ಣ. ೩o೫
ಶಿವನೊಡ್ಡಿದ ಮಾಯಾಗುಣದಿಂದ ತನ್ನ ತಾನರಿಯದೆ,
ಅಜ್ಞಾನದಿಂದ ಎಂಬತ್ತನಾಲ್ಕುಲಕ್ಷ ಜೀವರಾಶಿಗಳ
ಯೋನಿಯಲ್ಲಿ ಹುಟ್ಟಿ ಹುಟ್ಟಿ,
ಶಿವಕಾರುಣ್ಯದಿಂದ ಮನುಷ್ಯಜನ್ಮಕ್ಕೆ ಬಂದು,
ಆ ಮನುಷ್ಯಜನ್ಮದೊಳಗಧಿಕವಾದ ಶಿವಭಕ್ತಿಯ ಪಡೆದು,
ಆ ಶಿವಭಕ್ತಿಯ ನೆಮ್ಮಿ ಸತ್ಯಸದಾಚಾರವಿಡಿದು ನಡೆದು.
ಏಕಲಿಂಗನಿಷ್ಠೆಯಿಂದ ತನ್ನ ಕಷ್ಟ ಭವಂಗಳ ಗೆಲದಿರ್ದಡೆ,
ಮೆಟ್ಟುವ ನರಕದೊಳಗೆ, ಕಲಿದೇವಯ್ಯ. ೩o೬
ಶಿವಭಕ್ತನಾಗಿ ಭವಿಶ್ಯೆವದ್ಯೆವಕ್ಕೆ ಶರಣೆಂದನಾದೆಡೆ,
ಭವಹರಲಿಂಗದ ಚೇತನವದಂದೇ,
ತೊಲಗುವುದೆಂದ ಕಲಿದೇವಯ್ಯ. ೩o೭
ಶಿವಭಕ್ತಿ ಸಂಗದಿಂದಾದುದಲ್ಲ.
ಸಪ್ತಸ್ವರದಿಂದ ನುಡಿವ ನುಡಿಯಲ್ಲ.
ಉಷ್ಣದಿಂದಾಗುವ ಗಮನದಿಂದ ನಡೆವ ನಡೆಯಲ್ಲ.
ಜೀವನ ಸಂಗಸುಖದಲಾದ ಜೀವಾತ್ಮನಲ್ಲ.
ರೇಚಕ ಪೂರಕ ಕುಂಭಕವೆಂಬ
ಸ್ತ್ರೀಯರ ಉಚ್ವಾಸ ನಿಶ್ವಾಸವೆನಿಸಿಕೊಂಬುದಲ್ಲ.
ಸಪ್ತವ್ಯಸನ ಉದರಾಗ್ನಿ ಉಳ್ಳುದಲ್ಲ.
ಅಜನಾಳ ಸೋಹೆಯಲ್ಲಿ ಸುಳಿವುದಲ್ಲ.
ಸತಿಪುರುಷರ ಮಥನದಿಂದಾದುದಲ್ಲ.
ಮಹಾಘನವು ತನುವಿಡಿದು ನಿಂದ ನಿಲವ, ಮಹವೆಂದೇ ಕಾಬುದು.
ಜಂಗಮ ನೋಟ, ಪ್ರಸಾದ ತದ್ಗತ.
ಆವ ವರ್ಣವೂ ಇಲ್ಲದ ಭಕ್ತ, ಕಲಿದೇವನಿಂದಲಾದನು. ೩o೮
ಶಿವಭಕ್ತಿಸಂಪುಟವಾದ ಮಹಾಮಹಿಮರ ನಿಲವು,
ನಾದದ ಉತ್ಪತ್ಯವ ಸೋಂಕದು.
ಬಿಂದುವಿನಾಶ್ರಯದಲ್ಲಿ ಬೆಳೆಯದು.
ಶುಕ್ಲಶೋಣಿತವೆಂಬ ಪಂಚವರ್ಣಾಶ್ರಯವನು ಹೊದ್ದದು.
ಅಷ್ಟದಳಕಮಲವ ಮುಟ್ಟದು.
ಪ್ರಾಣ ಅಪಾನ ವ್ಯಾನ ಉದಾನ ಸಮಾನ
ನಾಗ ಕೂರ್ಮ ಕೃಕರ ದೇವದತ್ತ ಧನಂಜಯವೆಂಬ
ದಶವಾಯುಗಳಿಚ್ಫೆಯಲ್ಲಿ ಸುಳಿದಾಡದು.
ಜ್ಞಾನದಲ್ಲಿ ಬೆಳೆವುದು, ನಿರಾಲಂಬದಲ್ಲಿ ಆಡುವುದು.
ಹೃದಯಕಮಲಪದ್ಮಪತ್ರ ಉಸಿರನಾಲಿಸಿ,
ಶಿರಸಂಪುಟದ ಜಂಗಮದಾಟವನಾಡುವುದು.
ಲಿಂಗದ ನೋಟವ ನೋಡುವುದು, ಮಹಾಘನದಲ್ಲಿ ಬೆಳೆವುದು,
ನಿಜನಿರಾಳದಲ್ಲಿ ನಿವಾಸಿಯಾಗಿಪ್ಪುದು
ಕಲಿದೇವಾ, ನಿಮ್ಮ ಶರಣ ಬಸವಣ್ಣನ ನಿಲವು. ೩o೯
ಶಿವಾಚಾರ ಘನವೆಂಬುದ ಕೇಳಿ, ಭವಿಜಾತವಳಿದು,
ಪುನರ್ಜಾತನಾಗಿ, ಅಂಗದ ಮೇಲೆ ಲಿಂಗವ ಧರಿಸಿ,
ಆ ಲಿಂಗಜಂಗಮವನಾರಾಧಿಸಿ, ಪ್ರಸಾದವ ಕೊಂಡು,
ಭಕ್ತರಾಗಿ ಮುಕ್ತಿಯ ಪಡೆದೆನೆಂಬವರ ಹೆದರಿಸಿ,
ಜರೆದು ಝಂಕಿಸಿ ಕೆಡೆನುಡಿದು, ಆಚಾರವ ಬಿಡಿಸಿ,
ಅವರ ಹಿಂದಣ ಭವಿಶೈವದೈವಂಗಳ ಹಿಡಿಸಿ,
ತಮ್ಮಂತೆ ನರಕದೊಳಗಾಳಬೇಕೆಂದು,
ನಿಮ್ಮ ಮುನ್ನಿನ ಹಿರಿಯರ ಬೆನ್ನಬಳಿವಿಡಿದು ಬಂದ
ಕುಲದೈವ ಮನೆದೈವ ಬಿಟ್ಟು,
ಈ ಲಿಂಗಜಂಗಮಭಕ್ತಿಯ ಮಾಡಬೇಡೆಂದು
ಹೇಳುವ ಕುನ್ನಿಗಳ ನುಡಿಯ ಕೇಳಲಾಗದೆಂದ, ಕಲಿದೇವಯ್ಯ. ೩೧o
ಶ್ರೀಗುರುವೆ ಕರ್ತನೆಂದು ಪ್ರಸಾದ ಕೊಂಬ
ಪ್ರಸಾದದೇಹಿಗಳು, ನೀವು ಕೇಳಿ ಭೋ.
ಪ್ರಸಾದವಾಯತವನಾಯತವೆಂಬ ಅನಾಚಾರಿಗೆ
ಸದಾಚಾರದ ಶುದ್ಧಿಯೆಲ್ಲಿಯದೊ ?
ಈ ತ್ರಿವಿಧ ಅಚೇತನಂಗೆ ಮುಕ್ತಿಯುಂಟೆಂಬ
ಮೂಕೊರೆಯರ ನೋಡಾ.
ಈ ಮಹಾದಿವ್ಯಪ್ರಸಾದ ಸುಖವನರಿದು,
ಚೆನ್ನಬಸವೇಶ್ವರನುದ್ಭವಿಸಿದನು.
ಈ ಪ್ರಸಾದಕ್ಕೆ ಅಯತ ಅನಾಯತವೆಂಬ
ಅನಾಚಾರಿಯ ಮುಖವನೆನಗೆ ತೋರದಿರು.
ಇಂತಪ್ಪ ಮಹಾಪ್ರಸಾದವ ಕೊಂಡು,
ನಾನು ಬದುಕಿದೆನಯ್ಯಾ, ಕಲಿದೇವಯ್ಯ. ೩೧೧
ಶ್ವಾನ ಮುಟ್ಚಿದ ಎಂಜಲನು ಮಾನವರು ಕೇಳ್ವರು.
ಶ್ವಾನನಿಂದ ಕರಕಷ್ಟ ಸುರೆ ದೈವದ ಎಂಜಲ ತಂದು,
ಆನಂದವೆಂಬ ಲಿಂಗಕ್ಕೆ ತೋರಿ, ಭುಂಜಿಸುವಂಗೆ
ಆ ಶ್ವಾನ ಸೂಕರ ಗಂಗೆಯ ಮಿಂದ ತೆರನಂತೆ, ಕಲಿದೇವರದೇವಾ. ೩೧೨
ಸಂಸಾರಸಾರಾಯದ ತನಿರಸವ ಹಿಂಡಿ ಹಿಳಿದಾಡಿದ.
ಕೈಯ ಸವರಿಕೊಂಡು ಹರಿದು ಹತ್ತುವನಲ್ಲ, ಮರಳಿ ನೋಡುವನಲ್ಲ.
ಇಂತಪ್ಪ ವೀರರುಂಟೆ? ಇಂತಪ್ಪ ದಿರರುಂಟೆ?
ಇಂತಪ್ಪ ಪೌರುಷದ ಚರಿತನಾಗಿ ಮಾಯೆಯಂ ಹಿಂಗಿಸಿ,
ಮುಯ್ಯಾಂತು ಮುಂದಣ ನಿಲವನಾಗುಮಾಡಿದ ನಿಜೈಕ್ಯ.
ನಿರ್ವಯಲ ನಿಃಪತಿಗೆ ನಿಜವಾಗಿ, ನಿರಾಳದೊಳಗೆ
ತಾನೆ ತೊಳಲುತಿರ್ದನು. ಕಲಿದೇವಾ,
ನಿಮ್ಮ ಲಿಂಗೈಕ್ಯ ಪ್ರಭುದೇವರ ಶ್ರೀಪಾದಕ್ಕೆ ಭೃಂಗವಾಗಿರ್ದೆನು. ೩೧೩
ಸತ್ತು ಗುರುವಿನ ಕಾರುಣ್ಯವ ಕೊಂಬ ಶಿಷ್ಯಂಗೆ
ಭಕ್ತಿ ವಿಸ್ತರಿಸುವುದು, ಕತರ್ಾರ ನೆಲೆಗೊಂಬ.
ಕೊಟ್ಟುದನು ಮರೆದು ಬಳಸುವ
ಮಿಟ್ಟೆಯ ಭಂಡರನೇನೆಂಬೆ ಹೇಳಾ, ಕಲಿದೇವರದೇವಯ್ಯ. ೩೧೪
ಸತ್ತು ಚಿತ್ತು ಆನಂದ ನಿತ್ಯಪರಿಪೂರ್ಣನೆಂದೆಂಬರು.
ನಾನದ ಮನದಲ್ಲಿ ಹಿಡಿದು ಮಾತಾಡುವೆನಲ್ಲದೆ ಕ್ರೀಯಿಂದ ಕಾಣೆ.
ಸತ್ತೆ ಗುರು, ಚಿತ್ತೆ ಲಿಂಗ, ಆನಂದವೆ ಜಂಗಮ.
ನಿತ್ಯವೆ ಪ್ರಸಾದ, ಪರಿಪೂರ್ಣವೆ ಪಾದೋಕವೆಂಬುದನವಗ್ರಹಿಸಿ ನಿಂದು,
ಜಂಗಮಕ್ಕೆ ಭಕ್ತನಾದೆನಯ್ಯಾ.
ನಿತ್ಯನಾಗಿ ನಿಮ್ಮ ಜಂಗಮಕ್ಕೆ ವಂದಿಸುವೆ.
ಆನಂದದಿಂದ ನಿಮ್ಮ ಜಂಗಮದ ಪಾದೋದಕವ ಕೊಂಬೆ.
ಪರಿಪೂರ್ಣನಾಗಿ ನಿಮ್ಮನರ್ಚಿಸಿ ಪೂಜಿಸಿ ಪರವಶನಪ್ಪೆ ನಾನು.
ಭಕ್ತಿಪ್ರಸಾದ ಮುಕ್ತಿಪ್ರಸಾದ ನಿತ್ಯಪ್ರಸಾದವ
ನಿಮ್ಮ ಜಂಗಮದಲ್ಲಿ ವರವ ಪಡೆದು,
ಕಲಿದೇವರದೇವಾ, ನಿಮ್ಮ ಶರಣ ಪ್ರಭುದೇವರ
ಶ್ರೀಪಾದದಲ್ಲಿ ಮನಮಗ್ನನಾಗಿರ್ದೆನಯ್ಯ. ೩೧೫
ಸತ್ತು ಮಣ್ಣಾಗಿ ಹೋದ ಮಾತಾಪಿತರುಗಳು
ತಮ್ಮ ಸಂತಾನವಾಗಿ ಜನಿಸಿ ಬಂದರೆಂದು
ಹೆತ್ತು ಹೆಸರಿಟ್ಟು ಕರೆವರಯ್ಯಾ.
ಕಾಗೆಯ ಬಾಯ ಕರಗದ ಬಾಯೋಗರವ ಕೊಂಡು
ಅನ್ಯದೈವಂಗಳ ಪೂಜಿಸುವ ಲೋಗರವರ
ಕೈಯಲುಪದೇಶವ ಮಾಡಿಸಿಕೊಂಡ ಶಿಷ್ಯಂಗೆ
ಉಪದೇಶವ ಕೊಟ್ಟ ಗುರುವಿಂಗೆ
ಅವರಿಬ್ಬರಿಗೆಯೂ ಅಜ್ಞಾನಭವಂ ನಾಸ್ತಿಯಾಗದೆ
ಭವಸಾಗರದೊಳಗವರಿಬ್ಬರೂ ಅಳುತ್ತ
ಮುಳುಗುತ್ತಲಿಹರು ಕಾಣಾ, ಕಲಿದೇವರದೇವ. ೩೧೬
ಸತ್ಯರು ನಿತ್ಯರು ಮುಕ್ತರೆಂದು ಅರ್ತಿಗೊಳ್ಳುತ್ತ ನುಡಿವರು.
ಭಕ್ತಿ ಸದಾಚಾರದ ವರ್ತನೆಯ ಸತ್ಯರು ಹೇಳ ಹೋದಡೆ
ನಮಗೆ ತೀರುವುದೆ ಸಂಸಾರಿಗಳಿಗೆಂಬ
ವ್ಯರ್ಥರನೇನೆಂಬೆನಯ್ಯಾ ಕಲಿದೇವಯ್ಯ. ೩೧೭
ಸತ್ಯಸದಾಚಾರ ಭಕ್ತಿಯನರಿಯದೆ
ಬರಿದೆ ಭಕ್ತರೆಂಬುದ ನೋಡಾ.
ಮತ್ತೆ ಮರಳಿ ಮನೆದೈವ ಕುಲದೈವಕೆರಗುತ್ತ
ಭಕ್ತರೆಂದು ನುಡಿದಡೆ ನರಕದಲ್ಲಿ ಮೆಟ್ಟುವನೆಂದ
ಕಲಿದೇವಯ್ಯ. ೩೧೮
ಸತ್ಯಸದ್ಭಕ್ತಿಸದಾಚಾರ ಸತಿ್ಕೃಯಾ ಸಮ್ಯಗ್ಜ್ಞಾನ ಸದ್ವರ್ತನೆ ಸದ್ಭಾವ
ಷಟ್ಸ್ಥಲಮಾರ್ಗಸದ್ಭಕ್ತ ಮಾಹೇಶ್ವರಶರಣಗಣಂಗಳು
ಸದಾವಾಸ ಪರಿಯಂತರ ನೀಚಾಶ್ರಯಗಳ ಹೊದ್ದಲಾಗದು.
ಅದೆಂತೆಂದಡೆ, ಈಚಲಮರದಿಂದ ಮನೆಯ ಕಟ್ಟಲಾಗದು.
ಆ ಗಿಡದ ನೆರಳಲ್ಲಿ ಅರ್ಚನೆ ಅರ್ಪಣ ಶಯನ ಆಸನ
ಮೊದಲಾದ ಕೃತ್ಯಗಳ ಮಾಡಲಾಗದು.
ಪಾಕವ ಮಾಡುವಲ್ಲಿ ಅದರ ಕಾಷ್ಠದಲ್ಲಿ ಅಡಿಗೆಯ ಮಾಡಲಾಗದು.
ಅಣಬೆ ಇಂಗು ಹಾಕಿ ಭವಿಜನ್ಮಾತ್ಮರ ದರ್ಶನ ಸ್ಪರ್ಶನ
ಸಂಭಾಷಣೆಯಿಂದ ಪಾಕವ ಮಾಡಲಾಗದು.
ತಥಾಪಿಸಿ ಮಾಡಿದ ಪಾಕವ ಶರಣಗಣಂಗಳು ಲಿಂಗಾರ್ಪಿತವ ಮಾಡಲಾಗದು.
ಲಿಂಗಬಾಹ್ಯರು ಆಚಾರಭ್ರಷ್ಟರು ಭವಿಸಂಪರ್ಕರು
ಗುರುಲಿಂಗಜಂಗಮದ್ರೋಹಿಗಳು ಮೊದಲಾದವರ ಸಮ್ಮುಖದಲ್ಲಿ
ಅರ್ಚನೆ ಅರ್ಪಣಕ್ರಿಯೆಗಳ ಮಾಡಲಾಗದು.
ಅವರು ಮಾಡಿದ ಪಾಕವ ಪರಶಿವಲಿಂಗಕ್ಕೆ ಅರ್ಪಿಸಲಾಗದು.
ಪಾದೋದಕಪ್ರಸಾದದ್ರೋಹಿಗಳ ಸಮಪಙ್ತಿಯ ಮಾಡಲಾಗದು.
ಅವರಾರಾರೆಂದಡೆ, ಗಣಸಮೂಹದಲ್ಲಿ ಪ್ರಸಾದವ ಕೈಕೊಂಡು,
ಸಾವಧಾನ ಭಕ್ತಿಯಿಂದ ಮುಗಿದು, ತಾನೊಬ್ಬನೆ ಏಕಾಂತವಾಸದಲ್ಲಿ
ಸಾವಧಾನ ಭಕ್ತಿಯನುಳಿದು, ಲಿಂಗಕ್ಕೆ ಕೊಡದೆ, ತನ್ನ ಅಂಗವಿಕಾರದಿಂದ,
ಮನಬಂದಂತೆ ಸೂಸಾಡಿ ಭುಂಜಿಸುವನೊಬ್ಬ ಪಾದೋದಕಪ್ರಸಾದದ್ರೋಹಿ.
ಸಮಪಙ್ತಿಯಲ್ಲಿ ತನ್ನ ಅಂಗವಿಕಾರದಿಂದ ನನಗೆ ಓಗರವಾಯಿತ್ತೆಂದು,
ಪ್ರಸಾದಿಸ್ಥಲಹೀನರ ಕರದು ಕೊಡುವನೊಬ್ಬ ಪಾದೋದಕಪ್ರಸಾದದ್ರೋಹಿ.
ತಾ ಮುಗಿದ ಸಮಯದಲ್ಲಿ ಮಧುರ ಒಗರು ಕಾರ ಹುಳಿ ಕಹಿ ಅತಿಯಾಸೆಯಿಂದ
ನೀಡಿಸಿಕೊಂಡು, ಜಿಗುಪ್ಸೆ ಹುಟ್ಟಿ,
ಕಡೆಗೆ ಬಿಸುಟನೊಬ್ಬ ಪಾದೋದಕ ಪ್ರಸಾದದ್ರೋಹಿ.
ಗುರುಲಿಂಗಜಂಗಮದಿಂದ ಪಾದೋದಕಪ್ರಣಮ ಪ್ರಸಾದಪ್ರಣಮವ ಪಡೆದು,
ಮತ್ತಾ ಗುರುಲಿಂಗಜಂಗಮನಿಂದೆಯ
ಮಾಡುವನೊಬ್ಬ ಪಾದೋದಕಪ್ರಸಾದದ್ರೋಹಿ.
ಇಂತಪ್ಪ ಪರಮದ್ರೋಹಿಗಳ ದರ್ಶನದಿಂದ
ಪಾದಾರ್ಚನೆ ಅರ್ಪಣಗಳ
ಮಾಡಲಾಗದು ನೋಡಾ, ಕಲಿದೇವರದೇವ. ೩೧೯
ಸನ್ಮಾರ್ಗದ ವಿಚಾರವ ಸದ್ಗುರು ಮುಖದಿಂ ತಿಳಿದು,
ತನ್ನಂತರಂಗ ಬಹಿರಂಗದ ಸಂದುಸಂಶಯವ ಪರಿಹರಿಸಿ,
ನಿಶ್ಚಿಂತನಾಗಿ ನಿಜದಲ್ಲಿ ನಿಂದು, ಅಂಗಕ್ಕಾಚಾರವ ಸಂಬಂಧಿಸಿ,
ಮನಕ್ಕೆ ಅರಿವಿನಾಚರಣೆಯ ನೆಲೆಗೊಳಿಸಿ,
ಆತ್ಮಂಗೆ ಸತ್ಕ್ರೀಯಾ ಸಮ್ಯಕ್ಯಜ್ಞಾನವ ಬೋಧಿಸಿ,
ಪ್ರಾಣಕ್ಕೆ ಲಿಂಗಮಂತ್ರಧಾರಣವ ಮಾಡಿ,
ಜೀವ ಪರಮರಿಗೆ ಚಿದ್ಘನಪಾದೋದಕಸಾದಭೋಗವನಿತ್ತು,
ಅವಕ್ಕೆ ತಾನಾಶ್ರಯನಾಗಿ, ತನ್ನ ನಿಜದಲ್ಲಿ ನಿಂದು
ನೋಡಬಲ್ಲಾತನೆ ಶಿವಯೋಗಿ ನೋಡಾ, ಕಲಿದೇವರದೇವ. ೩೨o
ಸಾಧನೆಯ ಕಲಿತು ಆಣೆಯ ತಪ್ಪಿಸಲರಿಯದವನ
ಕೈಯಲಿ ಅಲಗಿದ್ದಡೇನಯ್ಯ ?
ಮಾಡುವದಕ್ಕೆ ಕರ್ಮ ದುರಿತದ ವರ್ಮವನರಿಯದವನು
ಸಕಲಶಾಸ್ತ್ರವನೋದಿದಡೇನಯ್ಯ ?
ಗಿಳಿಯೋದಿ ತನ್ನ ಅಶುದ್ಭವ
ತನ್ನ ಮೂಗಿನಲ್ಲಿ ಕಚ್ಚಿ ತೆಗೆದಂತೆ ಆಯಿತ್ತೆಂದ,
ಕಲಿದೇವರದೇವಯ್ಯ. ೩೨೧
ಸಿಂಹದ ಮುಂದೆ [ಜಿಂಕೆಯ] ಜಿಗಿದಾಟವೆ ?
ಪ್ರಳಯಾಗ್ನಿಯ ಮುಂದೆ ಪತಂಗದಾಟವೆ ?
ಸೂರ್ಯನ ಮುಂದೆ ಕೀಟದಾಟವೆ ?
ನಿಮ್ಮ ಮುಂದೆ ಎನ್ನಾಟವೆ, ಕಲಿದೇವರದೇವಾ ? ೩೨೨
ಸುಖವೊಂದು ಕೋಟ್ಯಾನುಕೋಟಿ ಬಂದಲ್ಲಿ ಬಸವಣ್ಣನ ನೆನೆವೆ.
ದುಃಖವೊಂದು ಕೋಟ್ಯಾನುಕೋಟಿ ಬಂದಲ್ಲಿ ಬಸವಣ್ಣನ ನೆನೆವೆ.
ಲಿಂಗಾರ್ಚನೆಯ ಮಾಡುವಲ್ಲಿ ಬಸವಣ್ಣನ ನೆನೆವೆ.
ಜಂಗಮಾರ್ಚನೆಯ ಮಾಡುವಲ್ಲಿ ಬಸವಣ್ಣನ ನೆನೆವೆ.
ಬಸವಣ್ಣನ ನೆನೆದಲ್ಲದೆ ಭಕ್ತಿಯಿಲ್ಲ. ಬಸವಣ್ಣನ ನೆನೆದಲ್ಲದೆ ಮುಕ್ತಿಯಿಲ್ಲ.
ಇದು ಕಾರಣ, ಬಸವಣ್ಣ ಬಸವಣ್ಣ
ಎನುತಿರ್ದೆನು ಕಾಣಾ, ಕಲಿದೇವಯ್ಯ. ೩೨೩
ಸೂಳೆ ಸುರೆ ಬೆಕ್ಕು ನಾಯಿ ಅನ್ಯದೈವ ತಾಳಹಣ್ಣು
ಇಷ್ಟುಳ್ಳನ್ನಕ್ಕರ ಅವ ಭಕ್ತನೆ ? ಅಲ್ಲ ಅಲ್ಲ.
ಅವ ಶಿವದ್ರೋಹಿ, ಅವ ಗುರುದ್ರೋಹಿ.
ಹಂದಿ ಹಂದಿಯ ಹೇಲ ತಿಂದು,
ಒಂದರ ಮೋರೆಯನೊಂದು ಮೂಸಿ ನೋಡುವಂತೆ ಕಾಣಾ,
ಕಲಿದೇವರದೇವ. ೩೨೪
ಸೋಮವಾರಕ್ಕೆ ಮೀಸಲೆಂದು
ಊರ ಹೊರಗಣ ದೈವವ ಆರಾಧಿಸಿ,
ಅವಕ್ಕೆ ಇಕ್ಕಿದ ಮಿಕ್ಕಿನ ಕೂಳ ಸೋಮಧರಗರ್ಪಿತವೆಂಬವರ
ಭಕ್ತಿಯ ತೆರ ಎಂತಾಯಿತ್ತೆಂದಡೆ,
ಗ್ರಾಮ ಸೂಕರನು ಶುನಕನು ಗಂಗೆಯನೀಸಿ
ಅಶುದ್ಧ ಭುಂಜಿಸಿದ ತೆರನಾಯಿತ್ತೆಂದ, ಕಲಿದೇವಯ್ಯ. ೩೨೫
ಸ್ಥಾವರಲಿಂಗ ಜಂಗಮವೆಂಬುದನಾರು ಬಲ್ಲರಯ್ಯಾ, ಬಸವಣ್ಣನಲ್ಲದೆ ?
ಎಲ್ಲಿ ಸ್ಥಾವರವಿದ್ದಲ್ಲಿ ನೋಡಲಾಗದು, ಮನದಲ್ಲಿ ನೆನೆಯಲಾಗದು.
ಲಿಂಗಕ್ಕಾದಡೆಯೂ ಜಂಗಮಬೇಕು, ಜಂಗಮವಿಲ್ಲದ ಲಿಂಗವುಂಟೆ ?
ಗುರುವಿಂಗಾದಡೆಯೂ ಜಂಗಮಬೇಕು, ಜಂಗಮವಿಲ್ಲದ ಗುರುವುಂಟೆ ?
ಎಲ್ಲಿ ಜಂಗಮವಿದ್ದಲ್ಲಿ ಗುರು ಲಿಂಗ ಜಂಗಮ ಪಾದೋದಕ
ಪ್ರಸಾದ ಅನುಭಾವ ಸನ್ನಹಿತವಾಗಿಹುದು.
ಇಂತಿವರ ಭೇದವ ಬಸವಣ್ಣ ಬಲ್ಲನು.
ಆ ಬಸವಣ್ಣನ ಶ್ರೀಪಾದಕ್ಕೆ ಅಹೋರಾತ್ರಿಯೊಳೆದ್ದು,
ನಮೋ ನಮೋ ಎಂಬೆನು ಕಾಣಾ, ಕಲಿದೇವಯ್ಯ. ೩೨೬
ಸ್ವಯ ಚರ ಪರವೆಂಬ ತ್ರಿವಿಧ ಗುರುಗಳಲ್ಲಿ
ಪಾದೋದಕ ಪ್ರಸಾದವ ಕೊಳಲಾಗದು.
ಪರಿಣಾಮಿ ನಿರುಪಾಧಿ ಪರಿಪೂರ್ಣವೆಂಬ ತ್ರಿವಿಧ ಜಂಗಮದಲ್ಲಿ
ಪಾದೋದಕ ಪ್ರಸಾದವ ಕೊಳಬೇಕೆಂದಾತ, ನಮ್ಮ ಕಲಿದೇವರದೇವ. ೩೨೭
ಹಣದಾಸೆಗೆ ಹದಿನೆಂಟುಜಾತಿಯ ಭಕ್ತರ ಮಾಡಿ,
ಲಿಂಗವ ಕೊಟ್ಟು ಲಿಂಗದ್ರೋಹಿಯಾದ.
ಪ್ರಸಾದವ ನೀಡಿ ಪ್ರಸಾದದ್ರೋಹಿಯಾದ.
ಪಂಚಾಕ್ಷರಿಯ ಹೇಳಿ ಪಂಚಮಹಾಪಾತಕಕ್ಕೊಳಗಾದ.
ಇಂತೀ ಹೊನ್ನ ಹಂದಿಯ ಕೊಂದು,
ಬಿನ್ನಾಣದಲ್ಲಿ ಕಡಿದುತಿಂಬ ಕುನ್ನಿಗಳನೇನೆಂಬೆನಯ್ಯಾ,
ಕಲಿದೇವರದೇವ. ೩೨೮
ಹರ ಹರ ಶಿವ ಶಿವ ಗುರುವೆ ಕರಸ್ಥಲದ ಶಾಂತಲಿಂಗ,
ಜಂಗಮ ಭಕ್ತ ಶರಣಗಣಂಗಳ ಚರಣವ ನೆನೆಯದೆ,
ಧರೆಯ ಮೇಲೆ ನೆಲಸಿಪ್ಪ ಭವಿಶೈವದೈವಂಗಳ ನೆನೆವ
ನರಕಿನಾಯಿಗಳನೇನೆಂಬೆನಯ್ಯಾ ಕಲಿದೇವಯ್ಯ. ೩೨೯
ಹರನೊಡ್ಡಿದ ಮಾಯೆ, ಹರಿಯ ಹತ್ತು ಭವಕ್ಕೆ ತಂದಿತ್ತು.
ಅರುಹನೆಂಬವನ ಬತ್ತಲೆ ಬರಿಸಿತ್ತು.
ಪರವು ತಾನೆಂಬ ಬ್ರಹ್ಮನ ಶಿರವ ಹೋಗಾಡಿತ್ತು.
ಗುರುಲಿಂಗಜಂಗಮದ ಹವಣನರಿಯಬೇಕೆಂದು
ತಂದೆ ತಾಯಿ ಗುರುವೆಂದು ಹೊತ್ತು ತಿರುಗಿದ ಚೌಂಡಲಯ್ಯ
ಒಂದೆ ಬಾಣದಲ್ಲಿ ಗುರಿಯಾಗಿ ಸತ್ತ ಕೇಡ ನೋಡಾ.
ಇಂತಿದನರಿಯದೆ ಮರದ ನರಜೀವಿಗಳು
ಸುರೆಯ ದೈವದ ಸೇವೆಯ ಮಾಡಿ, ಇತ್ತ ಹರನ ಹೊಗಳಿ,
ವೇದ ಶಾಸ್ತ್ರ ಪುರಾಣಾಗಮಂಗಳನರಿತರಿತು,
ಮರಳಿ ಅನ್ಯದೈವಕ್ಕೆರಗುವ ದುರಾತ್ಮರಿಗೆ
ಇಹಪರವಿಲ್ಲವೆಂದ, ಕಲಿದೇವರದೇವ. ೩೩o
ಹಲಂಬರ ನಡುವೆ ಕುಳ್ಳಿರ್ದ ಗುರುವಿಂಗೆ
ಶಿಷ್ಯನು ಸಾಷ್ಟಾಂಗವೆರಗಿ,
ಶರಣೆಂದು ಪಾದವ ಹಿಡಿದುಕೊಂಡು
ನನಗುಪದೇಶವ ಮಾಡಬೇಕೆಂದು ಬಿನ್ನಹಂ ಮಾಡಿದಡೆ,
ನಾನುಪದೇಶವ ಮಾಡಲಮ್ಮೆನು.
ನಿಮ್ಮನುಜ್ಞೆಯಿಂದುಪದೇಶವ ಮಾಡಲೇ ಎಂದು
ಆ ಹಲರಿಗೆ ಬಿನ್ನಹಂ ಮಾಡಲಿಕೆ,
ಆ ಹಲರಿಗೆ ಕೊಟ್ಟ ನಿರೂಪವಿಡಿದು,
ಉಪದೇಶವ ಮಾಡುವ ಗುರು,
ಹಲರ ಮನೆಯ ಬಾರಿಕನೆಂದ ಕಲಿದೇವರದೇವ. ೩೩೧
ಹಲಬರ ನಡುವೆ ಕುಳ್ಳಿರ್ದು,
ಗುರುಲಿಂಗಜಂಗಮ ವಿಭೂತಿ ವೀಳ್ಯವ ಹರಿದು ಕೊಟ್ಟು,
ಆ ಗುರುವಿನಲ್ಲಿ ಕಾರುಣ್ಯವೇಕೆಂದು ಎದ್ದಾಡುವ ಗುರು.
ಹಲಬರ ಬಾರಿಕ ಕಾಣಾ, ಕಲಿದೇವಯ್ಯ. ೩೩೨
ಹಲವುಕಾಲದ ಋಷಿಯರೆಲ್ಲರೂ
ಶಿವಭಕ್ತಿಯ ನೆಲೆಯನರಿತು ಬ್ರಾಹ್ಮಣರೆನಿಸಿಕೊಂಡರು.
ಇವರ ನೆಲೆಯನರಿಯದ ನಿಂದಕರು
ಗೆಲವಿಂಗೆ ಹೆಣಗುವ ಪರಿಯ ನೋಡಾ.
ಹಲವು ದೈವಂಗಳಿಗೆರಗಿ ಕುಲದಲ್ಲಿ ಶಿಷ್ಟರೆನಿಸಿಕೊಂಬರು.
ಮೊದಲೆ ಹುಟ್ಟಿದ ರುದ್ರನ ಹೆಸರ ಹೇಳಿ,
ಬ್ರಾಹ್ಮಣನಲ್ಲದ ಭುಜದಲ್ಲಿ ತೊಡೆಯಲ್ಲಿ
ಅಂಗದಲ್ಲಿ ಹುಟ್ಟಿದ ಶೂದ್ರ ವೈಶ್ಯ ಕ್ಷತ್ರಿಯಂಗೆ
ಹೊಡೆವಡುವ ಗುರುದ್ರೋಹಿಗಳು
ತಮ್ಮ ಹೆಸರು ವೇದಬ್ರಾಹ್ಮಣರೆನಿಸಿಕೊಂಡು,
ಗೋವನರ್ಚಿಸಿ ಪೂಜಿಸಿ ಅನಂತ ಪರಿಯಲ್ಲಿ ಶರಣೆಂಬರು.
ಮರಳಿ ಗೋಹಿಂಸೆಯ ಮಾಡುವರು.
ಗೋನಾಯಿಗಳು ನುಡಿದಂತೆ ನಡೆಯರು,
ನುಡಿ ಹೊಲೆ ಹಿಂಗದು.
ಇಂತಿವರ ವೇದಬ್ರಾಹ್ಮಣರೆಂದವರಿಗೆ
ನಾಯಕನರಕ ತಪ್ಪದೆಂದ ಕಲಿದೇವರದೇವ. ೩೩೩
ಹಸಿವು ತೃಷೆ ವ್ಯಸನಕ್ಕೆ ಕುದಿ ಕುದಿದು
ಸಚರಾಚರದೊಳಗೆಲ್ಲ ಲಯವಾಗಿ ಹೋದರಲ್ಲ.
ಉದರವ ಹೊರೆವ ಕೋಟಿವೇಷಧಾರಿಗಳೆಲ್ಲ
ಜಂಗಮವಪ್ಪರೇ ? ಅಲ್ಲ.
ಲಿಂಗಸ್ಥಲವನರಿಯರು, ಜಂಗಮಸ್ಥಲವನರಿಯರು,
ಪ್ರಸಾದಿಸ್ಥಲವನರಿಯರು.
ಇಂತೀ ತ್ರಿವಿಧಸ್ಥಲವನರಿಯದ ಕಾರಣಾ
ಅವರ ಗಾವಿಲರ ಮಕ್ಕಳೆಂಬೆ, ಕಲಿದೇವರದೇವಾ. ೩೩೪
ಹಿಂದೆ ಅನಾದಿಕಾಲದಲ್ಲಿ ಲೆಕ್ಕವಿಲ್ಲದ ಯುಗಂಗಳು ಹೋದವು.
ದ್ವಯಮುಖರು ಅದ್ವಯಮುಖರು ಸ್ವತಂತ್ರಮುಖರು
ಸನ್ನಹಿತಮುಖರು ಉಗ್ರಮುಖರು ಉತ್ಪತ್ಯಕ್ಕೆ ಹೊರಗಾದ ಮುಖರು
ಸ್ಥಿತಿಗತಿಯಿಂದರಿಯದ ಮುಖರು ಸರ್ವವಿಸ್ತೀರ್ಣದೊಳಗುಳ್ಳ ಮುಖರು
ಅಷ್ಟತನುಮೂರ್ತಿ ಮೊದಲಾದ ಅನಂತಮೂರ್ತಿಗಳೆಲ್ಲ
ದೇವಾರಾಧನೆ ಪೂಜಕರಾದರಲ್ಲದೆ ಭಕ್ತಮುಖರಲ್ಲ.
ಸಂಸಾರ ಸಂಗದೊಳಗಿದ್ದವರಲ್ಲ. ಇಂಥ ಮುಖರೆಲ್ಲ ಅಂತಿರಲಿ.
ಇಲ್ಲದ ನಿರವಯವ ಆಕಾರಕ್ಕೆ ತಂದು,
ಜಂಗಮಲಿಂಗವೆನಿಸಿ ಸಾಹಿತ್ಯವ ಮಾಡಿದಾತ ಬಸವಣ್ಣನು.
ಇದನರಿದು ಧನ್ಯನಾದೆನೆಂಬೀತ ಪರುಷದೊಳಗು.
ಈ ಕ್ರಮವನರಿಯದೆ, ಅನಂತ ಮತವ ಹಿಡಿದು ಭೂಭಾರಕರಾದರು.
ಅವರ ಮುಟ್ಟಿ, ಲಿಂಗಕ್ಕೆ ಕೊಟ್ಟು ಕೊಂಡಡೆ ಪ್ರಸಾದವಾಗದೆಂದು
ಜಂಗಮಕ್ಕೆ ಅರ್ಪಿಸಿದ ನಿತ್ಯಪ್ರಸಾದವೆನಗೆ ಬಸವಣ್ಣನ ಪ್ರಸಾದ.
ಆ ಬಸವಣ್ಣನ ಪ್ರಸಾದವೆ ಎನಗೂ ನಿನಗೂ ವಿಸ್ತಾರವಾಗಿತ್ತು ಕಾಣಾ,
ಕಲಿದೇವಯ್ಯ. ೩೩೫
ಹುಟ್ಟದ ಬೀಜವಿರ್ದಡೇನಯ್ಯಾ ಧರೆಯೊಳಗೆ ?
ಅಟ್ಟುಣ್ಣಬಾರದ ಮಡಕೆ ಇರ್ದಡೇನಯ್ಯಾ ಮನೆಯೊಳಗೆ ?
ಶಿವ ನಿಮ್ಮ ಮುಟ್ಟದ ಮನವಿರ್ದಡೇನಯ್ಯಾ ತನುನಿನೊಳಗೆ ?
ಕೆಚ್ಚಲ ಕಚ್ಚಿದ ಉಣ್ಣೆ ಬಲ್ಲುದೆ ಕ್ಷೀರದ ರುಚಿಯ ?
ಬಚ್ಚಲೊಳಗಣ ಬಾಲ್ಪುಳು ಬಲ್ಲುದೆ ನಿಚ್ಚಳದ ನೀರಸುಖವ ?
ನಿಚ್ಚನಿಚ್ಚಲೋದುವ ಗಿಳಿ ಬಲ್ಲುದೆ ತನಗೆ ಬಹ ಬೆಕ್ಕಿನ ಬಾಧೆಯ ?
ಹುಚ್ಚುಕೊಂಡ ನಾಯಿ ಬಲ್ಲುದೆ ತನ್ನ ಸಾಕಿದೊಡೆಯನ ?
ಇದು ಕಾರಣ, ಒಡಲ ಪಡೆದಡೇನು ?
ಮಡದಿಯ ನೆರಹಿದಡೇನು ? ಒಡವೆಯ ಗಳಿಸಿದಡೇನು ?
ಶಿವನೆ ನಿಮ್ಮನರಿಯದ ಮನುಜನ ಒಡಲೆಂಬುದು,
ಹೊಲೆಜೋಗಿಯ ಕೈಯ ಒಡೆದ ಸೋರೆಯಂತೆ ಕಾಣಾ,
ಕಲಿದೇವಯ್ಯ. ೩೩೬
ಹುಟ್ಟಿದ ಕಲ್ಲಿಗೆ, ನೆಟ್ಟ ಪ್ರತಿಷ್ಠಗೆ
ಕಟ್ಟಿದ ಲಿಂಗವಡಿಯಾಗಿ ಬೀಳುವ
ಲೊಟ್ಟಿಗುಡಿಹಿಗಳನೇನೆಂಬೆನಯ್ಯಾ. ಕಲಿದೇವರದೇವ. ೩೩೭
ಹುಟ್ಟಿಸುವ ಹೊಂದಿಸುವ
ಶಿವನ ನಿಷ್ಠಯಿಲ್ಲದ ಸಾಹಿತ್ಯವ ಕೊಂಡು,
ಕ್ರೀಯಿಲ್ಲದಿರ್ದಡೆ ಭಕ್ತರೆಂತೆಂಬೆನಯ್ಯ ?
ಅಟ್ಟ ಕೂಳೆಲ್ಲವಂ ಅನ್ಯದೈವದ ಹೆಸರ ಹೇಳಿ
ಭುಂಜಿಸುವ ಚೆಟ್ಟಿ ಮಾಳ ಅಕ್ಕತದಿಗಿಯೆಂದು
ತಮ್ಮ ಗೋತ್ರಕ್ಕೆ ಬೊಟ್ಟನಿಡುವರು.
ಮುಖ್ಯರಾಗಬೇಕೆಂದು ಅಟ್ಟ ಅಡಿಗೆ ಮೀಸಲವೆಂದು
ಅಶುದ್ಧವ ತಿಂಬ ಕಾಗೆಗೆ ಕೂಳ ಚೆಲ್ಲಿ,
ತಮ್ಮ ಪಿತರುಂಡರೆಂದು
ಮಿಕ್ಕ ಕೂಳ ತಮ್ಮ ಲಿಂಗಕ್ಕೆ ತೋರಿ ಭುಂಜಿಸುವ
ಭಕ್ತರೆನಿಸಿಕೊಂಬ ಭ್ರಷ್ಟಜಾತಿಗಳು
ಕೆಟ್ಟಕೇಡಿಂಗೆ ಕಡೆಯಿಲ್ಲವೆಂದ, ನಮ್ಮ ಕಲಿದೇವರದೇವ. ೩೩೮
ಹುಲಿಯ ಕೊಂದು, ಲಿಂಗಕ್ಕೆ ಬೋನವ ಮಾಡಿದಾತ ಬಸವಣ್ಣ.
ಕರಡಿಯ ಕೊಂದು, ಲಿಂಗಕ್ಕೆ ಬೋನವ ಮಾಡಿದಾತ ಬಸವಣ್ಣ.
ಹಾವಿನ ಪರಿಯಾಣವ ಮಾಡಿಕೊಡಬಲ್ಲಾತ ಬಸವಣ್ಣ ಕಾಣಾ,
ಕಲಿದೇವರದೇವ. ೩೩೯
ಹೆಣ್ಣಿಗಾಗಿ ಸತ್ತಡೆ ಜನನ ಮರಣ.
ಹೊನ್ನಿಗಾಗಿ ಸತ್ತಡೆ ಜನನ ಮರಣ.
ಮಣ್ಣಿಗಾಗಿ ಸತ್ತಡೆ ಜನನ ಮರಣ.
ಪರಧನ ಪರಸತಿಗಾಗಿ ಸತ್ತಡೆ ಜನನ ಮರಣ.
ಶಿವಭಕ್ತನಾಗಿ ಏಕಲಿಂಗನಿಷ್ಠಾಸಂಪನ್ನನಾಗಿ,
ಶಿವಾಚಾರಕ್ಕಾಗಿ ಸತ್ತಡೆ ಮುಕ್ತಿಯೆಂದ ಕಲಿದೇವಯ್ಯ. ೩೪o
ಹೆತ್ತ ತಾಯಿ ತಂದೆ ಬಂಧು ಬಳಗ ಗತಿ ಸುತರಾದ ಸೋದರರುಗಳಲ್ಲಿ
ಭವಿಯಾಗಿದ್ದವರ ಮೋಹ ಬಿಟ್ಟಲ್ಲದೆ ಶಿವಭಕ್ತಿಯ ನೆಲೆ ಸಿಕ್ಕದು.
ಭಕ್ತಿಯ ಪಥವನರಿಯದೆ,
ಯುಕ್ತಿಹೀನರು ತಮ್ಮ ಹೆತ್ತ ತಾಯಿ ತಂದೆಯ ಲೋಭಕ್ಕೆ
ಸಾಹಿತ್ಯ ಸಂಬಂಧವ ಕೊಂಡು, ಮೃತ್ಯುಮಾರಿಯ ಎಂಜಲತಿಂಬ
ನಾಯಿಯ ಹೊಲೆಸೂತಕ ಬಿಡದೆ ಹೋಯಿತ್ತು.
ಕಟ್ಟಿದ ಕೂರಲಗಿನ ಮೊನೆಯಲ್ಲಿ ಸಿಕ್ಕಿಕೊಂಡು ಸತ್ತು ಹೋದವರ
ಸಿಂಹದ ಹೋಲಿಕೆಗೆ ಮರನ ಚೋಹವ ಮಾಡಿ,
ಹೊತ್ತುಕೊಂಡು [ಬೀ]ರಗೂಳನುಂಬ ದುಃಕಮರ್ಿಗಳ
ಶಿವಭಕ್ತಂಗೆ ಸರಿಯೆಂದು ಬೊಗಳುವ ನಾಯಿಗೆ
ಹತ್ತೆಂಟುಬಾರಿ ತಿರುಗುವ ನರಕ ತಪ್ಪದೆಂದ,
ಕಲಿದೇವರದೇಯ್ಯ. ೩೪೧
ಹೊಗಬಾರದು ಕಲ್ಯಾಣವನಾರಿಗೆಯೂ
ಹೊಕ್ಕಡೇನು ? ಕಲ್ಯಾಣದ ಸ್ಥಾನಮಾನಂಗಳ ನುಡಿಯಬಾರದು.
ಈ ಕಲ್ಯಾಣದ ಕಡೆಯ ಕಾಣಬಾರದು.
ಕಲ್ಯಾಣದೊಳಗೆ ಹೊಕ್ಕೆಹೆವೆಂದು ಕಲ್ಯಾಣ ಚರಿತ್ರರಾದೆಹೆವೆಂದು
ದೇವ ದಾನವ ಮಾನವರೆಲ್ಲರೂ ಭಾವಿಸುತ್ತಿರ್ದುರು ನೋಡಯ್ಯಾ ಕಲ್ಯಾಣವನು.
ಅನಂತಮೂರ್ತಿಗಳು ಅನಂತ ಸ್ಥೂಲಮೂರ್ತಿಗಳು
ಅನಂತ ಸೂಕ್ಷ್ಮಮೂರ್ತಿಗಳು ಅನಂತ ಮಂತ್ರಧ್ಯಾನರೂಪರು
ಪುಣ್ಯಕ್ಕೆ ಅಭಿಲಾಷೆಯ ಮಾಡುವವರು ಪೂಜಕರು ಯೋಗಿಗಳು
ಭೋಗಿಗಳು ದ್ವೈತರು ಅದ್ವೈತರು ಕಾಮಿಗಳು ನಿಷ್ಕಮರ್ಿಗಳು ಅಶ್ರಿತರು
ಅದೆಂತು ಹೊಗಬಹುದಯ್ಯಾ ಕಲ್ಯಾಣವನು ?
ಲಿಂಗದೃಷ್ಟಂಗಲ್ಲದೆ ಲಿಂಗವೇದ್ಯಂಗಲ್ಲದೆ
ಲಿಂಗಗಂಭೀರಂಗಲ್ಲದೆ ಪ್ರಸಾದ ಕುಳಾನ್ವಯಂಗಲ್ಲದೆ
ಆಸೆಗೆಡೆಗುಡದಿಪ್ಪುದೆ ಕಲ್ಯಾಣ.
ಸರ್ವಾಂಗ ವರ್ಣವಳಿದು ಕುಲಮದ ತಲೆದೋರದೆ
ಭಕ್ತಿ ನಿತ್ಯವಾದುದೆ ಕಲ್ಯಾಣ.
ಈ ಕಲ್ಯಾಣವೆಂಬ ಮಹಾಪುರದೊಳಗೆ
ಬಸವಣ್ಣನೂ ನಾನೂ ಕೂಡಿ ಹದುಲಿರ್ದೆವು ಕಾಣಾ, ಕಲಿದೇವಯ್ಯ. ೩೪೨
ಹೊನ್ನು ಹೆಣ್ಣು ಮಣ್ಣನಾವರಿಸಿಕೊಂಡು,
ಒಡವೆ ಆಭರಣಂಗಳ ಹಲ್ಲಣಿಸಿಕೊಂಡು ಬಂದು,
ಸರ್ವರಿಗೆ ಶಾಸ್ತ್ರೋಪದೇಶವ ಹೇಳುವರು ವೇಷಧಾರಿಗಳು.
ಸೂಳೆಯರಂತೆ ತಮ್ಮ ಉಪಾಧಿಕೆಗೆ ಒಡಲಾಸೆಗೆ
ಹಿತವಚನ ನುಡಿವರು.
ಇಂತಪ್ಪ ಪ್ರಪಂಚಿನ ವೇಷಡಂಭಕ ಧೂರ್ತಲಾಂಛನಧಾರಿಗಳಿಗೆ
ಮಹಂತಿನ ದೇವರೆನ್ನಬಹುದೆ ? ಎನಲಾಗದು.
ಅದೇನು ಕಾರಣವೆಂದಡೆ,
ತಮ್ಮಾದಿಯ ನಿಲುವ ತಾವರಿಯರು.
ಷಟ್ಸ್ಥಲದ ನಿರ್ಣಯವ ಏನೆಂದರಿಯರು.
ಆಚಾರದನುಭಾವದಂತರಂಗದ ಮೂಲವ
ಮುನ್ನವೇ ಅರಿಯರು.
ಇಂತಿದನರಿಯದ ಪಶುಪ್ರಾಣಿಗಳಿಗೆ
ಜಂಗಮವೆನ್ನಬಹುದೆ ? ಎನ್ನಲಾಗದಯ್ಯಾ, ಕಲಿದೇವರದೇವ. ೩೪೩
ಹೊರಗಿದ್ದಾನೆಂಬೆನೆ ಒಳಗು ತಾನೆ ನೋಡಾ.
ಒಳಗಿದ್ದಾನೆಂಬೆನೆ ಹೊರಗು ತಾನೆ ನೋಡಾ.
ಒಳಹೊರಗು ಸರ್ವಾಂಗ ಸನ್ನಹಿತವಾಗಿದ್ದ
ಸಮರಸದ ಮಹಿಮನನು ತಿಳಿದು ನೋಡಾ.
ಅಗಲಲಿಲ್ಲದ ಘನವ ಅಗಲಿದೆನೆಂಬ ಮಾತು,
ಶಿವಶರಣರ ಮನಕೆ ಬಹುದೆ ?
ಮರಣವಿಲ್ಲದ ಮಹಿಮನ ನಿಲವ
ತನ್ನಲ್ಲಿ ನೋಡಿ ಶರಣೆಂಬುದಲ್ಲದೆ ಮರೆಯಬಹುದೆ ?
ತೆರಹಿಲ್ಲದ ನಿಲವು.
ಕಲಿದೇವರದೇವನು ಕರಸ್ಥಲದೊಳಗೆ ಅಯಿದಾನೆ ಕಾಣಾ,
ಚನ್ನಬಸವಣ್ಣ. ೩೪೪
ಹೋದ ದಿವಸ ವಿಷವೆಂದರಿವುದು ಮನದಲ್ಲಿ.
ಬರುವ ದಿವಸ ಸುಧಾಸಮವೆಂದರಿವುದು ಸದ್ಭಾವದಲ್ಲಿ.
ಹೋದಂತೆ ಹೋದಡೆ ಕಲಿದೇವರ ಕಾಂಬ ಪರಿಯೆಂತೊ,
ಸಿದ್ಧರಾಮಯ್ಯಾ ? ೩೪೫
ಮಡಿವಾಳ ಮಾಚಿದೇವರ ವಚನಗಳು (madivala machideva vachanagalu) ಸಮಾನತೆ, ಸತ್ಯ ಮತ್ತು ಮಾನವೀಯ ಮೌಲ್ಯಗಳ ಮಹತ್ವವನ್ನು ಬೋಧಿಸುವ ಶ್ರೇಷ್ಠ ಸಾಹಿತ್ಯಕ ಆಸ್ತಿಯಾಗಿದೆ. ಈ ಲೇಖನದಲ್ಲಿ ಅವರ ಜೀವನ, ತತ್ತ್ವಗಳು ಮತ್ತು 345 ವಚನಗಳ ಸಂಗ್ರಹದ ಕುರಿತು ಸಮಗ್ರ ಮಾಹಿತಿ ನೀಡಲು ಪ್ರಯತ್ನಿಸಲಾಗಿದೆ.
ಮಡಿವಾಳ ಮಾಚಿದೇವ ಅವರ ಯಾವ ವಚನ (vachana of madivala machideva in kannada) ನಿಮಗೆ ಇಷ್ಟವಾಯಿತು ಎಂದು ಕಾಮೆಂಟ್ ಮೂಲಕ ತಿಳಿಸಿ. ನಾವು ನೀಡಿದ ಮಾಹಿತಿಯಲ್ಲಿ ಏನಾದರೂ ತಪ್ಪು ಅಥವಾ ಅಪೂರ್ಣತೆ ಇದ್ದರೆ, ದಯವಿಟ್ಟು ಕಾಮೆಂಟ್ ಮಾಡಿ ತಿಳಿಸಿ. ಈ ಲೇಖನ ನಿಮಗೆ ಉಪಯುಕ್ತವೆನಿಸಿದರೆ, ಇತರರೊಂದಿಗೆ ಹಂಚಿಕೊಳ್ಳಿ ಮತ್ತು ವಚನ ಸಾಹಿತ್ಯದ ಮಹತ್ವವನ್ನು ಪ್ರಚಾರಗೊಳಿಸಲು ಸಹಕರಿಸಿ.
ಇದನ್ನೂ ಓದಿ:
- 150+ ಬಸವಣ್ಣನವರ ವಚನಗಳು | Basavanna Vachanagalu in Kannada
- 450+ ಅಕ್ಕಮಹಾದೇವಿಯವರ ವಚನಗಳು | Akkamahadevi Vachanagalu in Kannada
- 100+ ಅಲ್ಲಮ ಪ್ರಭು ವಚನಗಳು | Allama Prabhu Vachanagalu in Kannada
- 279+ ಅಂಬಿಗರ ಚೌಡಯ್ಯನವರ ವಚನಗಳು | Ambigara Choudayya Vachanagalu in Kannada
- 250+ Neelambike Vachanagalu in Kannada (ನೀಲಾಂಬಿಕೆ ವಚನಗಳು)