Namadhari Naik history in Kannada, Halepaika community history in Kannada, Deevaru caste history in Kannada, Namadhari Naik origin in Kannada, Namadhari Naik culture and traditions in Kannada, Uttara Kannada Namadhari Naik history in Kannada, Namadhari Naik warrior history in Kannada, Halepaika Deevaru Ediga history in Kannada, Namadhari Naik community details in Kannada, Kagodu Satyagraha Namadhari Naik history in Kannada
ನಮ್ಮ ಕರ್ನಾಟಕದ ಕರಾವಳಿ ಮತ್ತು ಮಲೆನಾಡು ಭಾಗಗಳಲ್ಲಿ ಅದರಲ್ಲೂ ವಿಶೇಷವಾಗಿ ಉತ್ತರ ಕನ್ನಡ, ಶಿವಮೊಗ್ಗ, ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ನಾವು ಅತಿ ಹೆಚ್ಚಾಗಿ ಕಾಣುವ ಒಂದು ಪ್ರಮುಖ ಸಮುದಾಯವೆಂದರೆ ಅದು ನಾಮಧಾರಿ ನಾಯ್ಕ ಸಮಾಜ. ಹೊರನೋಟಕ್ಕೆ ಕೇವಲ ಕೃಷಿ ಮತ್ತು ದೈನಂದಿನ ಕಾಯಕದಲ್ಲಿ ತೊಡಗಿಕೊಂಡಿರುವ ಸರಳ ಜನಾಂಗದಂತೆ ಕಾಣುವ ಇವರು, ಒಂದು ಕಾಲದಲ್ಲಿ ನಾಡು ಕಾಯುತ್ತಿದ್ದ ಶೂರರಾಗಿದ್ದರು. ಕದಂಬ, ವಿಜಯನಗರ ಹಾಗೂ ಮೈಸೂರು ಒಡೆಯರ ಕಾಲದಲ್ಲಿ ಇವರು ಖಡ್ಗ ಹಿಡಿದು ನಾಡನ್ನು ರಕ್ಷಿಸಿದ ವೀರ ಯೋಧರು ಹಾಗೂ ಸೇನಾಧಿಪತಿಗಳಾಗಿದ್ದರು.ಇವರನ್ನು ಹಳೆಪೈಕ, ದೀವರು, ಈಡಿಗ ಮತ್ತು ಆರ್ಯ-ಈಡಿಗ ಎಂಬ ಹಲವು ಹೆಸರುಗಳಿಂದ ಕರೆಯಲಾಗುತ್ತದೆ. ಸರ್ಕಾರದ ದಾಖಲೆಗಳಲ್ಲಿ ಇವರನ್ನು ಈಡಿಗ ಮತ್ತು ಕರಾವಳಿಯ ಬಿಲ್ಲವರಂತಹ ಇತರ ಸಮಾನ ಸಮುದಾಯಗಳೊಂದಿಗೆ ಸೇರಿಸಲಾಗಿದೆ.
ಇಂದಿನ ಈ ಲೇಖನದಲ್ಲಿ ನಾವು ನಾಮಧಾರಿ ನಾಯ್ಕ ಸಮಾಜದ ಸಂಪೂರ್ಣ ಇತಿಹಾಸ, ಇವರ ಹೆಸರಿನ ಹಿಂದಿರುವ ಕುತೂಹಲಕಾರಿ ರಹಸ್ಯಗಳು, ಅವರ ಶೌರ್ಯದ ಕಥೆಗಳು ಮತ್ತು ಅವರು ಎದುರಿಸಿದ ಕಷ್ಟಗಳು ಸೇರಿದಂತೆ ಪ್ರತಿಯೊಂದು ರೋಚಕ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ.
Table of Contents
ಹಳೆಪೈಕ ಮತ್ತು ನಾಮಧಾರಿ ನಾಯ್ಕ ಸಮಾಜದ ರೋಚಕ ಇತಿಹಾಸ | Halepaika & Namadhari Naik Community History in Kannada
ಹೆಸರಿನ ಹಿಂದಿನ ರೋಚಕ ರಹಸ್ಯಗಳು: ನಾಮಧಾರಿ, ಹಳೆಪೈಕ ಮತ್ತು ದೀವರು
ಈ ಸಮುದಾಯದ ಪ್ರತಿಯೊಂದು ಹೆಸರಿನ ಹಿಂದೆಯೂ ಒಂದು ದೊಡ್ಡ ಇತಿಹಾಸವೇ ಅಡಗಿದೆ. ಮೊದಲಿಗೆ ನಾಮಧಾರಿ ಎಂಬ ಪದದ ಬಗ್ಗೆ ನೋಡುವುದಾದರೆ, ಆರಂಭದಲ್ಲಿ ಈ ಸಮುದಾಯದವರು ಕನ್ನಡ ನಾಡಿನಲ್ಲಿ ವ್ಯಾಪಕವಾಗಿದ್ದ ಶೈವ ಅಥವಾ ಜೈನ ಧರ್ಮವನ್ನು ಪಾಲಿಸುತಿದ್ದರು ಎಂದು ಕೆಲವರು ಅಭಿಪ್ರಾಯಪಡುತ್ತಾರೆ. ಆದರೆ ಹದಿನಾಲ್ಕನೇ ಶತಮಾನದಲ್ಲಿ, ಶ್ರೀ ವೈಷ್ಣವ ಮಠಾಧೀಶರಾದ ತಿರುಮಲೆ ತಾತಾಚಾರ್ಯರ ಮಾರ್ಗದರ್ಶನದಲ್ಲಿ ಈ ಪ್ರದೇಶದ ಇತರ ಸಮುದಾಯಗಳೊಂದಿಗೆ ಇವರನ್ನೂ ಕೂಡ ವೈಷ್ಣವ ಪಂಥಕ್ಕೆ ತರಲಾಯಿತು. ಅಂದಿನಿಂದ ಇವರು ತಮ್ಮ ಹಣೆಯ ಮೇಲೆ ಊರ್ಧ್ವಪುಂಡ್ರ ಅಥವಾ ನಾಮವನ್ನು ಹಚ್ಚಿಕೊಳ್ಳಲು ಆರಂಭಿಸಿದರು.
ನಾಮಧಾರಿ ಎಂಬ ಪದವು ಅವರ ಈ ವೈಷ್ಣವ ನಿಷ್ಠೆಗೆ ದೊರೆತ ಪ್ರಶಂಸೆಯಾಗಿದೆ. ಇನ್ನು ಇವರ ಉಪನಾಮವಾದ ನಾಯಕ ಅಥವಾ ನಾಯ್ಕ್ ಎಂಬ ಪದಕ್ಕೆ ಸಂಸ್ಕೃತ ಮತ್ತು ಕನ್ನಡದಲ್ಲಿ ಮುಖ್ಯಸ್ಥ ಅಥವಾ ನಾಯಕ ಎಂದೇ ಅರ್ಥವಿದೆ.
ಇವರ ಮತ್ತೊಂದು ಬಹುಮುಖ್ಯ ಹೆಸರು ಹಳೆಪೈಕ. ಕನ್ನಡದಲ್ಲಿ ಹಳೆ ಎಂದರೆ ಪ್ರಾಚೀನ ಹಾಗೂ ಪೈಕ ಎಂದರೆ ಸೈನಿಕ ಎಂದರ್ಥ. ಅಂದರೆ ಈ ನಾಡಿನ ಅತಿ ಪುರಾತನ ಕಾಲದ ಯೋಧರು ಎಂಬ ಹೆಮ್ಮೆ ಈ ಹೆಸರಿನಲ್ಲಿದೆ.
ಹತ್ತನೇ ಶತಮಾನದಲ್ಲಿ ರಚನೆಯಾದ ಆದಿಕವಿ ಪಂಪನ ವಿಕ್ರಮಾರ್ಜುನ ವಿಜಯ ಕೃತಿಯಲ್ಲಿ ಸಾಲಾಗಿಹ ಹಳೆಯಪೈಕರ ಮನೆಗಳವು ಎಂಬ ಉಲ್ಲೇಖವಿದೆ. ಇಲ್ಲಿ ಪಂಪನು ಮಹಾಭಾರತವನ್ನು ತನ್ನ ಸ್ಥಳೀಯ ರಾಜ್ಯಕ್ಕೆ ಅಳವಡಿಸಿಕೊಂಡಿದ್ದರಿಂದ, ಆ ಇಂದ್ರಪ್ರಸ್ಥವು ಇಂದಿನ ಬನವಾಸಿಯಾಗಿರಬಹುದು ಎಂದು ಊಹಿಸಲಾಗಿದೆ. ಕನಿಷ್ಠ ಹತ್ತನೇ ಶತಮಾನದಷ್ಟು ಹಿಂದೆಯೇ ಈ ನಾಡಿನಲ್ಲಿ ಹಳೆಪೈಕರ ಅಸ್ತಿತ್ವ ಎಷ್ಟು ಪ್ರಬಲವಾಗಿತ್ತು ಎಂಬುದಕ್ಕೆ ಇದೊಂದು ದೊಡ್ಡ ಸಾಕ್ಷಿ.
ಇದೇ ಸಮಯದಲ್ಲಿ ಕೋಮಾರಪೈಕ ಅಂದರೆ ಕಿರಿಯ ಸೈನಿಕರು ಎಂಬ ಮತ್ತೊಂದು ಪಡೆ ಹನ್ನೆರಡನೇ ಶತಮಾನದಲ್ಲಿ ಗುಲ್ಬರ್ಗಾ ಭಾಗದಿಂದ ವಲಸೆ ಬಂತು ಎಂದು 1893ರ ಬಾಂಬೆ ಗೆಜೆಟಿಯರ್ ದಾಖಲಿಸಿದೆ.
ಇನ್ನು ಇವರನ್ನು ದೀವ ಅಥವಾ ದೀವರು ಎಂದು ಕರೆಯುವುದಕ್ಕೂ ರೋಚಕ ಕಾರಣವಿದೆ. ಪುರಾತನ ಕಾಲದ ಯುದ್ಧತಂತ್ರಗಳಲ್ಲಿ ರಾತ್ರಿಯ ವೇಳೆ ಕತ್ತಲೆಯಲ್ಲಿ ಯುದ್ಧ ಮಾಡುವುದು ಕೂಡ ಒಂದಾಗಿತ್ತು. ಆ ಸಮಯದಲ್ಲಿ ಪಂಜು ಅಥವಾ ದೀವಿಗೆಯನ್ನು ಹಿಡಿದು ಹೋರಾಡುವ ಸೈನಿಕರಿಗೆ ದೀವರು ಇಂದು ಕರೆಯಲಾಗುತ್ತಿತ್ತು. ಕುಮಾರವ್ಯಾಸನು ತನ್ನ ಹದಿನೈದನೇ ಶತಮಾನದ ಮೇರುಕೃತಿ ಕರ್ಣಾಟ ಭಾರತ ಕಥಾಮಂಜರಿಯಲ್ಲಿ ದೀವಿಗೆ ಹೊತ್ತ ಭಟರುಗಳು ಎಂದು ಇವರನ್ನು ಉಲ್ಲೇಖಿಸಿದ್ದಾನೆ.
ಇದಲ್ಲದೆ ದೀವರು ಎಂದರೆ ದ್ವೀಪವಾಸಿಗಳು ಎಂಬ ಅರ್ಥವೂ ಇದ್ದು, ಇವರು ಶ್ರೀಲಂಕಾದ ದ್ರಾವಿಡ ಮೂಲದವರಾಗಿದ್ದು ವಲಸೆ ಬಂದವರು ಎಂಬ ವಾದವೂ ಇದೆ.
ಆರ್ಯ-ಈಡಿಗ ಎಂಬ ಹೆಸರಿನಲ್ಲಿರುವ ಆರ್ಯ ಎಂಬ ಪದವು ಇವರ ಉತ್ತರದ ಮೂಲವನ್ನು ಸೂಚಿಸುತ್ತದೆ ಎಂದು ಕೆಲವರು ಹೇಳುತ್ತಾರೆ.
ಆಂಥ್ರೊಪೊಲಾಜಿಕಲ್ ಸರ್ವೆ ಆಫ್ ಇಂಡಿಯಾದ ವರದಿ ಮತ್ತು ನೈಜ ಇತಿಹಾಸ
ಈ ಸಮುದಾಯದ ಮೂಲದ ಬಗ್ಗೆ ಆಂಥ್ರೊ ಪೊಲಾಜಿಕಲ್ ಸರ್ವೆ ಆಫ್ ಇಂಡಿಯಾದ ಪೀಪಲ್ ಆಫ್ ಇಂಡಿಯಾ ಸರಣಿಯು ಒಂದು ಕುತೂಹಲಕಾರಿ ದಂತಕಥೆಯನ್ನು ಉಲ್ಲೇಖಿಸಿದೆ. ಇವರ ಪ್ರಕಾರ, ಹಳೇಪೈಕರು ಆಂಧ್ರಪ್ರದೇಶದಿಂದ ವಲಸೆ ಬಂದವರು.
ವಿಜಯನಗರದ ಅರಸ ಗೋಪಾಲಕೃ ಷ್ಣರಾಯನ ಆಳ್ವಿಕೆಯ ಕಾಲದಲ್ಲಿ ರಂಗ ನಾಯ್ಕ ಮತ್ತು ಲಕ್ಷ್ಮೀದೇವಿಯ ಮಗನಾದ ನಾರಾಯಣ ಎಂಬ ಯುವಕನ ನಿಷ್ಠೆ ಮತ್ತು ಪರಾಕ್ರಮವನ್ನು ಮೆಚ್ಚಿದ ರಾಜನು, ಆತನಿಗೆ ಹಳೆಪೈಕ ಎಂಬ ಹಳ್ಳಿಯನ್ನು ಉಡುಗೊರೆಯಾಗಿ ನೀಡಿದನೆಂದೂ ಹೇಳಲಾಗುತ್ತದೆ. ಅಲ್ಲಿಂದ ಹಳೇಪೈಕರು ಹೆಸರು ಬಂತೆಂದು ಉಲ್ಲೇಖಿಸಲಾಗಿದೆ.
ಆದರೆ ಇತಿಹಾಸಕಾರರು ಈ ಸಿದ್ಧಾಂತವನ್ನು ಒಪ್ಪುವುದಿಲ್ಲ. ಏಕೆಂದರೆ ಹತ್ತನೇ ಶತಮಾನದ ಪಂಪನ ಕಾವ್ಯದಲ್ಲಿಯೇ ಹಳೆಪೈಕರ ಉಲ್ಲೇಖವಿರುವಾಗ, ವಿಜಯನಗರದ ಕಾಲದಲ್ಲಿ ಈ ಹೆಸರು ಹುಟ್ಟಿತು ಎಂಬ ಕಥೆ ವಿಶ್ವಾಸಾರ್ಹತೆಯನ್ನು ಕಳೆದುಕೊಳ್ಳುತ್ತದೆ. ಇವೆಲ್ಲದರ ನಡುವೆ ಎದ್ದು ಕಾಣುವ ಸತ್ಯವೇನೆಂದರೆ, ಈ ಜನಾಂಗ ಕರ್ನಾಟಕದ ಮಣ್ಣಿನ ಪುರಾತನ ಸಮರ ಕಲೆಯ ವಾರಸುದಾರರಾಗಿದ್ದರು ಎಂಬುದು.
ಚುಟು ಶಾತಕರ್ಣಿಗಳಿಂದ ಹಿಡಿದು ಮೈಸೂರು ಒಡೆಯರ್ವರೆಗಿನ ರೋಮಾಂಚಕ ಯುದ್ಧ ಪರಂಪರೆ
ಇಂದಿಗೂ, ಉತ್ತರ ಕನ್ನಡ ಮತ್ತು ಶಿವಮೊಗ್ಗ ಭಾಗದ ಹಳ್ಳಿಗಳಲ್ಲಿ ಸಾವಿರ ತಲೆ ಉರುಳಿದರೂ ದೀವರ ತಲೆ ಉರುಳೋದಿಲ್ಲ ಎಂಬ ಜನಪ್ರಿಯ ಗಾದೆಮಾತಿದೆ. ಇದು ಹಳೇಪೈಕರ ಅಪ್ರತಿಮ ಯುದ್ಧ ಕೌಶಲ್ಯ ಮತ್ತು ಮಣಿಯದ ಶೌರ್ಯಕ್ಕೆ ಸಾಕ್ಷಿಯಾಗಿದೆ.
ಪ್ರಾಚೀನ ಕಾಲದ ಚುಟು ಶಾತಕರ್ಣಿಗಳು ಮತ್ತು ಬನವಾಸಿಯ ಕದಂಬರಿಂದ ಹಿಡಿದು ಮಧ್ಯಯುಗದ ವಿಜಯನಗರ ಸಾಮ್ರಾಜ್ಯ ಹಾಗೂ ಕೆಳದಿ ನಾಯಕರವರೆಗಿನ ಎಲ್ಲಾ ಪ್ರಮುಖ ಕನ್ನಡ ರಾಜವಂಶಗಳಿಗೆ ಇವರು ಸೈನಿಕರಾಗಿ, ಮತ್ತು ಸೇನಾ ಮುಖ್ಯಸ್ಥರಾಗಿ ಬೆಂಗಾವಲಾಗಿ ನಿಂತಿದ್ದರು.
ಕೇವಲ ಕರಾವಳಿಗೆ ಮಾತ್ರ ಇವರ ಕೀರ್ತಿ ಸೀಮಿತವಾಗಿರಲಿಲ್ಲ. ಮೈಸೂರು ಅರಮನೆಯ ಇತಿಹಾಸದಲ್ಲೂ ಇವರ ಉಲ್ಲೇಖವಿದೆ. ಮೈಸೂರು ಒಡೆಯರ ಕಾಲದ ಇವರ ಪರಾಕ್ರಮ ವನ್ನು ಹದಿನೇಳನೇ ಶತಮಾನದಲ್ಲಿ ಗೋವಿಂದ ವೈದ್ಯನು ಬರೆದ ಕಂಠೀರವ ನರಸರಾಜ ವಿಜಯ ಕೃತಿಯಲ್ಲಿ ಉಲ್ಲೇಖಿಸಲಾಗಿದೆ. ಮೈಸೂರು ರಾಜರ ಪರವಾಗಿ ಬಿಜಾಪುರ ಸುಲ್ತಾನರ ವಿರುದ್ಧ ಹಳೇಪೈಕ ಪಡೆಗಳು ನಡೆಸಿದ ಭೀಕರ ಯುದ್ಧವನ್ನು ಇದರಲ್ಲಿ ಬಹಳ ರೋಚಕವಾಗಿ ವರ್ಣಿಸಲಾಗಿದೆ. ಮೈಸೂರು ಅರಮನೆಯ ಒಂದು ಹಳೆಯ ವರ್ಣಚಿತ್ರದಲ್ಲಿ ಇಂದಿಗೂ ಹಳೇಪೈಕರ ಸೈನ್ಯದ ಚಿತ್ರಣವನ್ನು ನಾವು ನೋಡಬಹುದು. 
ಇದಲ್ಲದೆ ಕ್ರಿಸ್ತಶಕ 1471ರ ನಾಗಮಂಗಲ ಶಾಸನದಲ್ಲಿ ಲಖನ ನಾಯಕ ಎಂಬ ಹಳೇಪೈಕ ಮುಖ್ಯಸ್ಥನ ಬಗ್ಗೆ ಉಲ್ಲೇಖವಿದೆ. ಶ್ರೀ ರಾಮಾನುಜರಿಗೆ ಗೌರವ ಸಲ್ಲಿಸುವ ಉದ್ದೇಶದಿಂದ, ಈತ ದೇವಲಾಪುರದಲ್ಲಿ ಬರೋಬ್ಬರಿ ನಾನೂರು ಅಡಕೆ ಮರಗಳಿದ್ದ ಜಮೀನನ್ನು ದಾನವಾಗಿ ನೀಡಿದ್ದನಂತೆ. ಇದು ಇವರ ಅಧಿಕಾರ ಮತ್ತು ಭಕ್ತಿಯನ್ನು ಪ್ರತಿಬಿಂಬಿಸುತ್ತದೆ.
ಪೌರಾಣಿಕ ಹಿನ್ನೆಲೆ, ವಿಶಿಷ್ಟ ಸಂಸ್ಕೃತಿ ಮತ್ತು ಕುಲ ದೇವತೆಗಳು
ನಾಮಧಾರಿ ನಾಯ್ಕ ಸಮುದಾಯವು ತಿರುಪತಿಯ ತಿಮ್ಮಪ್ಪ ಅಥವಾ ವೆಂಕಟರಮಣನನ್ನು ತಮ್ಮ ಆರಾಧ್ಯ ದೇವರೆಂದು ಅತ್ಯಂತ ಶ್ರದ್ಧೆಯಿಂದ ಪೂಜಿಸುತ್ತದೆ. ಇದರ ಜೊತೆಗೆ ತಾವು ನೆಲೆಸಿರುವ ಭಾಗದ ಸ್ಥಳೀಯ ಗ್ರಾಮ ದೇವತೆಗಳಿಗೂ ಇವರು ವಿಶೇಷ ಪೂಜೆ ಸಲ್ಲಿಸುತ್ತಾರೆ. ಊರ ಜಾತ್ರೆಗಳು ಮತ್ತು ಬಂಡಿಹಬ್ಬಗಳು ಇವರ ಬದುಕಿನ ಬಹುದೊಡ್ಡ ಸಂಭ್ರಮ.
ಸಾಂಪ್ರದಾಯಿಕ ಕಸುಬುಗಳು, ಪರಿಸರ ಹಾಗೂ ಆಹಾರ ಪದ್ಧತಿ
ರಾಜರ ಕಾಲ ಮುಗಿದು ಯುದ್ಧಗಳು ನಿಂತ ಮೇಲೆ, ಕತ್ತಿ ಹಿಡಿದಿದ್ದ ಈ ಜನಾಂಗ ನೇಗಿಲು ಹಿಡಿದು ಕೃಷಿಗೆ ಇಳಿಯಿತು. ಕಾಲಕ್ರಮೇಣ ಕೃಷಿಯೇ ಇವರ ಮುಖ್ಯ ಕಸುಬಾಗಿ ಬದಲಾಯಿತು. ತಾಳೆ ಮತ್ತು ಈಚಲು ಮರಗಳಿಂದ ಸೇಂದಿ ಅಥವಾ ನೀರಾ ಇಳಿಸುವ ವೃತ್ತಿಯನ್ನು ಕೂಡ ಇವರು ಅಳವಡಿಸಿಕೊಂಡರು.
ಇದು ಒಂದು ಕಾಲದಲ್ಲಿ ಇವರ ಪ್ರಮುಖ ಆದಾಯದ ಮೂಲವಾಗಿತ್ತು. ಇದೇ ಕಾರಣಕ್ಕೆ ಇವರನ್ನು ಈಡಿಗ ಮತ್ತು ದೀವರು ಎಂಬ ಹೆಸರುಗಳಿಂದ ಗುರುತಿಸುವುದು ಇನ್ನಷ್ಟು ಹೆಚ್ಚಾಯಿತು.
ಸಮುದ್ರಕ್ಕೆ ಹತ್ತಿರವಿದ್ದ ಕರಾವಳಿಯ ನಾಮಧಾರಿಗಳು ತೆಂಗಿನ ದೀವರು ಎಂದು ಕರೆಸಿಕೊಂಡರೆ, ಮಲೆನಾಡಿನ ಘಟ್ಟದ ಮೇಲಿರುವವರು ಬೈನೆ ದೀವರು ಎಂದು ಕರೆಯಲ್ಪಟ್ಟರು.
ಬ್ರಿಟಿಷರ ಆಳ್ವಿಕೆ, ಸಾಮಾಜಿಕ ತಾರತಮ್ಯ ಮತ್ತು ಕಾಗೋಡು ಸತ್ಯಾಗ್ರಹ
ಮಧ್ಯಯುಗದಲ್ಲಿ ವೈಭವದಿಂದ ಬದುಕಿದ್ದ ಈ ಜನಾಂಗಕ್ಕೆ ಬ್ರಿಟಿಷರ ಆಗಮನ ಬಹುದೊಡ್ಡ ಪೆಟ್ಟು ನೀಡಿತು. ಇವರ ಕೆಚ್ಚೆದೆಯ ಸ್ವಭಾವವನ್ನು ಕಂಡ ಬ್ರಿಟಿಷರು ಇವರ ಶಸ್ತ್ರಾಸ್ತ್ರಗಳನ್ನು ಕಸಿದುಕೊಂಡರು. ಆರ್ಥಿಕ ಸಂಕಷ್ಟಗಳಿಂದಾಗಿ ಇವರ ಕೈಯಲ್ಲಿದ್ದ ಜಮೀನುಗಳು ಕೈತಪ್ಪಿ, ಬೇರೆಯವರ ಜಮೀನಿನಲ್ಲಿ ದುಡಿಯುವ ಗೇಣಿದಾರರಾಗಿ ಇವರು ಬದಲಾದರು. ಮೂಲ ಗೇಣಿ ಮತ್ತು ಚಾಲ ಗೇಣಿ ಎಂಬ ಅಮಾನವೀಯ ಪದ್ಧತಿಗಳ ಅಡಿಯಲ್ಲಿ ಭೂಮಾಲೀಕರ ಕಠೋರ ಶೋಷಣೆಗೆ ಇವರು ತುತ್ತಾದರು.
ರಾಷ್ಟ್ರಕವಿ ಕುವೆಂಪು ಅವರ ಮಲೆಗಳಲ್ಲಿ ಮದುಮಗಳು ಮತ್ತು ಕಾನೂರು ಹೆಗ್ಗಡಿತಿ ಕಾದಂಬರಿಗಳಲ್ಲಿ ಅಂದಿನ ಹಳೆಪೈಕ ಜನಾಂಗದ ಕಷ್ಟದ ಬದುಕು ಮತ್ತು ಅವರಿಗಾದ ಸಾಮಾಜಿಕ ಅವಮಾನಗಳು ಕಣ್ಣಿಗೆ ಕಟ್ಟುವಂತೆ ಮೂಡಿಬಂದಿವೆ. ದಶಕಗಳ ಕಾಲ ನಡೆದ ಈ ಶೋಷಣೆಯ ವಿರುದ್ಧ ಮಲೆನಾಡಿನ ಗರ್ಭದಿಂದ ಸಿಡಿದಿದ್ದೇ ಐತಿಹಾಸಿಕ ಕಾಗೋಡು ಸತ್ಯಾಗ್ರಹ. 1951ರಲ್ಲಿ ನಡೆದ ಈ ಐತಿಹಾಸಿಕ ರೈತ ಚಳುವಳಿಯಲ್ಲಿ ನಾಮಧಾರಿ ನಾಯ್ಕ ಜನಾಂಗದ ಅನೇಕರು ಹೋರಾಡಿದರು. ಅವರೆಲ್ಲರ ಹೋರಾಟದ ಫಲವಾಗಿಯೇ ಮುಂದೆ ಕರ್ನಾಟಕದಲ್ಲಿ ಉಳುವವನೇ ಭೂಮಿಯ ಒಡೆಯ ಎಂಬ ಕಾಯ್ದೆ ಜಾರಿಗೆ ಬಂದು ಬಡ ರೈತರಿಗೆ ನ್ಯಾಯ ಸಿಕ್ಕಿತು.
ಇಂದಿನ ಸ್ಥಿತಿಗತಿ, ಆಧುನಿಕ ಬದುಕು ಮತ್ತು ಹೆಮ್ಮೆಯ ಸಾಧಕರು
ಇಂದಿನ ದಿನಗಳಲ್ಲಿ ನಾಮಧಾರಿ ನಾಯ್ಕ ಸಮಾಜವು ಶಿಕ್ಷಣ, ರಾಜಕೀಯ ಮತ್ತು ಉದ್ಯೋಗ ಕ್ಷೇತ್ರಗಳಲ್ಲಿ ಬಹಳ ವೇಗವಾಗಿ ಮುಂದೆ ಬಂದಿದೆ. ಕೇವಲ ಕೃಷಿಗೆ ಮಾತ್ರ ಸೀಮಿತವಾಗದೆ ಇಂಜಿನಿಯರಿಂಗ್, ವೈದ್ಯಕೀಯ, ಸರ್ಕಾರಿ ಸೇವೆ ಮತ್ತು ತಂತ್ರಜ್ಞಾನ ರಂಗದಲ್ಲಿ ಇಂದಿನ ಯುವಕರು ಮಿಂಚುತ್ತಿದ್ದಾರೆ. ಜನಸಂಖ್ಯೆಯ ವಿಚಾರಕ್ಕೆ ಬಂದರೆ, ಉತ್ತರ ಕನ್ನಡ ಜಿಲ್ಲೆಯಲ್ಲಿ ಇವರು ಅತಿ ದೊಡ್ಡ ಬಹುಸಂಖ್ಯಾತ ಸಮುದಾಯವಾಗಿದ್ದ್ದು, ಶಿವಮೊಗ್ಗ, ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿಯು ಸಹ ಇವರು ವಾಸಿಸುತ್ತಿದ್ದಾರೆ. ರಾಜಕೀಯವಾಗಿ ಕೂಡ ಈ ಸಮುದಾಯ ಕರ್ನಾಟಕಕ್ಕೆ ಅನೇಕ ನಾಯಕರನ್ನು ನೀಡಿದೆ.
ಇದಾಗಿತ್ತು ನಾಮಧಾರಿ ನಾಯ್ಕ ಅಥವಾ ಹಳೆಪೈಕ ಜನಾಂಗದ ಸಮಗ್ರ ಮತ್ತು ಐತಿಹಾಸಿಕ ಮಾಹಿತಿ. ಈ ಮಾಹಿತಿ ನಿಮಗೆ ಉಪಯುಕ್ತವೆನಿಸಿದರೆ, ದಯವಿಟ್ಟು ನಿಮ್ಮ ಸ್ನೇಹಿತರು ಮತ್ತು ಇತರರೊಂದಿಗೆ ಹಂಚಿಕೊಳ್ಳಿ. ಇದೇ ರೀತಿ, ಇನ್ನಿತರ ವಿಷಯಗಳನ್ನೂ ಸಹ ನೀವು ನಮ್ಮ ಬ್ಲಾಗ್ ನಲ್ಲಿ ಓದಬಹುದು.
ಇದನ್ನೂ ಓದಿ:
- ಈಡಿಗ ಸಮುದಾಯದ ಇತಿಹಾಸ | Ediga Caste History in Kannada
- ಬಿಲ್ಲವ ಸಮುದಾಯ ಇತಿಹಾಸ | Billava Caste History in Kannada
ಈ ಬ್ಲಾಗ್ನಲ್ಲಿರುವ ಎಲ್ಲಾ ವಿಷಯವು ಹಕ್ಕುಸ್ವಾಮ್ಯವನ್ನು ಹೊಂದಿದೆ ಮತ್ತು ಲೇಖಕರ ಅನುಮತಿಯಿಲ್ಲದೆ ನಕಲು ಮಾಡುವುದನ್ನು ಅನುಮತಿಸಲಾಗುವುದಿಲ್ಲ.
All content on this blog is copyrighted, and copying is not allowed without permission from the author.
