Balija community history in Kannada, Balija caste origin, Balija Caste History in Kannada, Balija history in Kannada, Balija Nayak history, Balija community Vijayanagara empire, Aihole Ainnurruvar trade guild, Balija Kapu relationship, Balija sub castes, Balija community in Karnataka, Balija reservation status in Karnataka, ಬಲಿಜ ಜಾತಿಯ ಮೂಲ, ಬಲಿಜ ಸಮುದಾಯದ ವಂಶಾವಳಿ, ಬಲಿಜ ನಾಯಕರ ಇತಿಹಾಸ

ದಕ್ಷಿಣ ಭಾರತದ ಇತಿಹಾಸದಲ್ಲಿ ಬಲಿಜ ಸಮುದಾಯವು ವ್ಯಾಪಾರ, ಸೇನಾ ಸೇವೆ, ಆಡಳಿತ ಮತ್ತು ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ಮಹತ್ವದ ಪಾತ್ರ ವಹಿಸಿದೆ. ಈ ಲೇಖನದಲ್ಲಿ ಬಲಿಜ ಸಮುದಾಯದ ಹುಟ್ಟು, ಪೌರಾಣಿಕ ನಂಬಿಕೆಗಳು, ಪ್ರಾಚೀನ ವ್ಯಾಪಾರ ಸಂಘಗಳು, ವಿಜಯನಗರ ಸಾಮ್ರಾಜ್ಯದಲ್ಲಿನ ಪ್ರಾಬಲ್ಯ ಮತ್ತು ಆಧುನಿಕ ಕಾಲದ ಪ್ರಗತಿಯ ಬಗ್ಗೆ ತಿಳಿಯೋಣ.
Table of Contents
ಬಲಿಜ ಸಮುದಾಯದ ಇತಿಹಾಸ | Balija Caste History in Kannada
ಬಲಿಜ ಹೆಸರಿನ ಮೂಲ ಮತ್ತು ಪೌರಾಣಿಕ ಹಿನ್ನೆಲೆ
ಬಲಿಜ ಎಂಬ ಪದ ಹೇಗೆ ಬಂತು ಎಂಬುದರ ಬಗ್ಗೆ ಭಾಷಾವಿಜ್ಞಾನಿಗಳು ಮತ್ತು ಇತಿಹಾಸಕಾರರಲ್ಲಿ ಅನೇಕ ಆಸಕ್ತಿದಾಯಕ ಸಿದ್ಧಾಂತಗಳಿವೆ.
ಸಂಸ್ಕೃತ ಭಾಷೆಯಲ್ಲಿ ‘ಬಲಿ’ ಎಂದರೆ ತ್ಯಾಗ, ಸಮರ್ಪಣೆ ಅಥವಾ ಅಗಾಧವಾದ ಶಕ್ತಿ ಎಂದರ್ಥ, ‘ಜ’ ಎಂದರೆ ಜನಿಸಿದವನು ಎಂಬ ಅರ್ಥವಿದೆ. ಹಾಗಾಗಿ ತ್ಯಾಗ ಮತ್ತು ಬಲದಿಂದ ಹುಟ್ಟಿದವರೇ ಬಲಿಜರು ಎಂಬುದು ಒಂದು ಜನಪ್ರಿಯ ನಂಬಿಕೆಯಾಗಿದೆ.
ಇನ್ನೊಂದು ಸಿದ್ಧಾಂತದ ಪ್ರಕಾರ ಪ್ರಾಚೀನ ಕಾಲದಲ್ಲಿ ವ್ಯಾಪಾರ ಮಾಡುವವರನ್ನು ‘ವಲಂಜಿಯರ್’, ‘ಬಣಂಜ’ ಅಥವಾ ‘ಬಲಂಜ’ ಎಂದು ಕರೆಯಲಾಗುತ್ತಿತ್ತು.
ತಮಿಳು ಮತ್ತು ಹಳೆಗನ್ನಡದಲ್ಲಿ ವಲಂಜಿಯರ್ ಎಂದರೆ ವ್ಯಾಪಾರಿಗಳ ದೊಡ್ಡ ಗುಂಪು ಎಂದರ್ಥ. ಇದೇ ಬಲಂಜ ಅಥವಾ ಬಣಂಜ ಎಂಬ ಪದವು ಶತಮಾನಗಳ ಕಾಲಾನಂತರ ಜನರ ಬಾಯಲ್ಲಿ ‘ಬಲಿಜ’ ಎಂದು ಮಾರ್ಪಟ್ಟಿದೆ ಎಂದು ಇತಿಹಾಸಕಾರರು ಅಭಿಪ್ರಾಯ ಪಡುತ್ತಾರೆ.
ಪೌರಾಣಿಕವಾಗಿ ಈ ಸಮುದಾಯದ ಹುಟ್ಟಿನ ಬಗ್ಗೆ ಅನೇಕ ರೋಚಕವಾದ ಕಥೆಗಳಿವೆ.
ಗಾಜುಲು ಬಲಿಜ ಸಮುದಾಯದ ನಂಬಿಕೆಯ ಪ್ರಕಾರ, ಪಾರ್ವತಿ ದೇವಿಯು ಪರಶಿವನಿಗಾಗಿ ಅತಿ ಸುಂದರವಾಗಿ ಕಾಣಲು ತಪಸ್ಸು ಮಾಡುತ್ತಿದ್ದಳಂತೆ.
ಈ ಪ್ರಯತ್ನದಲ್ಲಿ ಆಕೆಯು ಪವಿತ್ರ ಅಗ್ನಿಯ ಶಕ್ತಿಯನ್ನು ಆವಾಹಿಸಿದಾಗ, ಆ ಅಗ್ನಿಯಿಂದ ಒಬ್ಬ ವ್ಯಕ್ತಿ ಹೊರಹೊಮ್ಮಿದನು.
ಆ ವ್ಯಕ್ತಿಯು ತನ್ನೊಂದಿಗೆ ವಿವಿಧ ಸೌಂದರ್ಯ ವರ್ಧಕ ಸಾಮಗ್ರಿಗಳನ್ನು ತಂದಿದ್ದನು. ಆ ವ್ಯಕ್ತಿಯೇ ಗಾಜುಲು ಬಲಿಜ ಸಮುದಾಯದ ಮೂಲಪುರುಷ ಎಂದು ನಂಬಲಾಗಿದೆ.
ಎಡ್ಗರ್ ಥರ್ಸ್ಟನ್ ಮತ್ತು ರಂಗಾಚಾರಿ ಅವರ ದಾಖಲೆಗಳ ಪ್ರಕಾರ, ತೆಲುಗು ವ್ಯಾಪಾರಿ ವರ್ಗವಾದ, ಬಲಿಜರು ಬೆಂಕಿಯಿಂದ ಜನಿಸಿದವರು.
ಚಾಮುಂಡೇಶ್ವರಿ ದೇವಿಯು ಯಜ್ಞಕುಂಡದ ಪವಿತ್ರ ಅಗ್ನಿಗೆ ಅಕ್ಕಿಯನ್ನು ಎಸೆದಾಗ, ಆ ಅಗ್ನಿಯಿಂದ ಉದ್ಭವಿಸಿದ ವೀರರ ವಂಶಸ್ಥರೇ ಬಲಿಜ ಸಮುದಾಯದರು ಎಂದು ಹೇಳಲಾಗುತ್ತದೆ. ಹಾಗಾಗಿಯೇ ಈ ಸಮುದಾಯದವರು ಹುಟ್ಟಿನಿಂದಲೇ ಧರ್ಮ ರಕ್ಷಕರು ಮತ್ತು ವೀರರು ಎಂಬ ಮಾತು ಬೆಳೆದುಬಂದಿದೆ.
ಇನ್ನೊಂದು ಪೌರಾಣಿಕ ಕಥೆಯ ಪ್ರಕಾರ, ಇವರು ಚಂದ್ರವಂಶದ ಕ್ಷತ್ರಿಯರು ಎಂದೂ, ಪೌರಾಣಿಕ ಮಹಾರಾಜನಾದ ಬಲಿ ಚಕ್ರವರ್ತಿಯ ವಂಶಸ್ಥರು ಎಂದೂ ಹೇಳಲಾಗುತ್ತದೆ.
ಮೂಲ ನೆಲೆ ಮತ್ತು ಭೌಗೋಳಿಕ ವಲಸೆ
ಬಲಿಜ ಸಮುದಾಯದ ಇತಿಹಾಸ ಮತ್ತು ವಲಸೆಯ ಹಿನ್ನೆಲೆಯನ್ನು ನೋಡುವುದಾದರೆ, ಬಲಿಜ ಸಮುದಾಯವು ಕಾಪು ಸಮುದಾಯದೊಂದಿಗೆ ನಿಕಟ ನಂಟು ಹೊಂದಿದೆ ಎನ್ನಲಾಗುತ್ತದೆ.
ಇವರು ಉತ್ತರದಿಂದ ದಕ್ಷಿಣಕ್ಕೆ ವಲಸೆ ಬಂದವರೆಂದು ನಂಬಲಾಗಿದ್ದು, ಕಾಂಪಿಲ್ಯ ಮತ್ತು ಮಿಥಿಲಾ ಪ್ರದೇಶಗಳಿಂದ ದಕ್ಷಿಣದತ್ತ ವಲಸೆ ಹೋದ ಇಂಡೋ-ಆರ್ಯನ್ ‘ಕಾಮ್ಪು’ ಬುಡಕಟ್ಟಿನಿಂದ ಬಂದವರು ಎಂದು ಹೇಳಲಾಗುತ್ತದೆ. ಕಾಪು ಸಮುದಾಯದಲ್ಲಿ ಯಾರು ವ್ಯಾಪಾರದಲ್ಲಿ ತೊಡಗಿಕೊಂಡರೋ ಅವರನ್ನು ಬಲಿಜರೆಂದು ಕರೆಯಲಾಯಿತು.
ಇನ್ನು ವ್ಯಾಪಾರಿಗಳ ರಕ್ಷಣೆಗಾಗಿ ಶಸ್ತ್ರ ಹಿಡಿದವರು ‘ಬಲಿಜ ನಾಯಕಲು’ ಅಥವಾ ‘ಬಲಿಜ ನಾಯ್ಡು’ ಎನಿಸಿಕೊಂಡರು.
ಇತಿಹಾಸಕಾರರ ಪ್ರಕಾರ, ಈ ಬಲಿಜ ಅಥವಾ ಕಾಪು ಸಮುದಾಯದವರು ಶಾತವಾಹನ ರಾಜವಂಶ ಹಾಗೂ ಇತರ ಪ್ರಾಚೀನ ರಾಜವಂಶಗಳಿಗೆ ಕಾರಣವಾದ ‘ಕೋಸಾರ್’ ಬುಡಕಟ್ಟಿನೊಂದಿಗೆ ಆಳವಾದ ಬೇರುಗಳನ್ನು ಹೊಂದಿದ್ದಾರೆ.
ಪ್ರಾಚೀನ ಕಾಲದ ಬೃಹತ್ ವ್ಯಾಪಾರ ಮತ್ತು ಅಯ್ಯಾವೊಳೆ ಐನೂರು
ಒಂಬತ್ತು ಮತ್ತು ಹತ್ತನೇ ಶತಮಾನದ ಕಾಲಘಟ್ಟಕ್ಕೆ ಹೋದರೆ, ಪ್ರಾಚೀನ ದಕ್ಷಿಣ ಭಾರತದಲ್ಲಿ, ಅದರಲ್ಲೂ ವಿಶೇಷವಾಗಿ ನಮ್ಮ ಕರ್ನಾಟಕದ ಬಾಗಲಕೋಟೆ ಜಿಲ್ಲೆಯ ಐಹೊಳೆಯಲ್ಲಿ, ‘ಐಹೊಳೆ ಐನೂರು’ ಅಥವಾ ‘ಅಯ್ಯಾವೊಳೆ ಐನೂರು’ ಎಂಬ ಅತಿ ದೊಡ್ಡ ಮತ್ತು ಶಕ್ತಿಶಾಲಿ ವ್ಯಾಪಾರಿ ಸಂಘವಿತ್ತು.
ಇವರನ್ನು ಶಾಸನಗಳಲ್ಲಿ ನಾನಾದೇಶಿ, ವೀರ ಬಣಂಜರು ಮತ್ತು ವಲಂಜಿಯರ್ ಎಂದೆಲ್ಲಾ ಕರೆಯಲಾಗಿದೆ. ಈ ಬೃಹತ್ ವ್ಯಾಪಾರಿ ಸಂಘದ ಪ್ರಮುಖ ಸದಸ್ಯರೇ ಇಂದಿನ ಬಲಿಜ ಸಮುದಾಯದ ಮೂಲ ಪುರುಷರು.
ಇವರು ಕೇವಲ ಒಂದು ಊರಿಗೆ ಅಥವಾ ರಾಜ್ಯಕ್ಕೆ ಸೀಮಿತವಾದ ವ್ಯಾಪಾರಿಗಳಾಗಿರಲಿಲ್ಲ. ಆನೆ, ಕುದುರೆ, ರೇಷ್ಮೆ, ಮುತ್ತು, ರತ್ನ, ಚಿನ್ನ, ಏಲಕ್ಕಿ ಮತ್ತು ಲವಂಗಗಳಂತಹ ಬೆಲೆಬಾಳುವ ವಸ್ತುಗಳನ್ನು ದೇಶ ವಿದೇಶಗಳಿಗೆ ರಫ್ತು ಮಾಡುತ್ತಿದ್ದರು. ಶ್ರೀಲಂಕಾ, ಮಲೇಷ್ಯಾ, ಇಂಡೋನೇಷ್ಯಾ ಮತ್ತು ಸುಮಾತ್ರಾ ದ್ವೀಪಗಳವರೆಗೂ ಇವರ ವ್ಯಾಪಾರ ಹಬ್ಬಿತ್ತು.
ಕಾಕತೀಯರ ಕಾಲದ ಶಾಸನಗಳಲ್ಲಿ ಇವರನ್ನು ‘ವೀರ ಬಲಂಜ್ಯರು’ ಎಂದು ಉಲ್ಲೇಖಿಸಲಾಗಿದೆ. ಇವರು ಸಾಮ್ರಾಜ್ಯದ ಪ್ರಮುಖ ತೆರಿಗೆ ಸಂಗ್ರಹಕಾರರಾಗಿಯೂ ಕಾರ್ಯನಿರ್ವಹಿಸುತ್ತಿದ್ದರು. ಈ ಕಾಲದಲ್ಲೇ ‘ಶೆಟ್ಟಿ ಬಲಿಜ’ ಹಾಗೂ ‘ಬಲಿಜ ನಾಯ್ಡು’ ಎಂಬ ಪ್ರಮುಖ ಶಾಖೆಗಳು ರೂಪುಗೊಂಡವು.
ಈ ವ್ಯಾಪಾರಿಗಳ ಬಳಿ ‘ಎರಿವೀರರು’ ಎಂಬ ತಮ್ಮದೇ ಆದ ಬೃಹತ್ ಖಾಸಗಿ ಸೈನ್ಯಗಳಿದ್ದವು. ವ್ಯಾಪಾರದ ಸರಕುಗಳನ್ನು ಕಾಡುಗಳ ಮಧ್ಯೆ ಸಾಗಿಸುವಾಗ ಕಳ್ಳಕಾಕರಿಂದ ರಕ್ಷಿಸಲು ಇವರು ಈ ಸೈನ್ಯವನ್ನು ಕಟ್ಟಿಕೊಂಡಿದ್ದರು. ಇವರು ಎಷ್ಟೊಂದು ಪ್ರಬಲರಾಗಿದ್ದರೆಂದರೆ, ಆ ಕಾಲದ ಚೋಳ, ಚೇರ, ಹೊಯ್ಸಳ ರಾಜರು-ಗಳೂ ಕೂಡ ಯುದ್ಧದ ಸಮಯದಲ್ಲಿ ಇವರ ಸೈನ್ಯದ ಸಹಾಯ ಪಡೆಯುತ್ತಿದ್ದರು.
ರಾಜರಿಗೂ ಸಾಲ ಕೊಡುವಷ್ಟು ಹಣಕಾಸಿನ ಬಲ ಮತ್ತು ಶತ್ರುಗಳನ್ನು ಸದೆಬಡಿಯುವ ತೋಳ್ಬಲ ಎರಡನ್ನೂ ಹೊಂದಿದ್ದ ಈ ಸಮುದಾಯ ಪ್ರಾಚೀನ ಭಾರತದ ಆರ್ಥಿಕತೆಯ ನಿಜವಾದ ಬೆನ್ನೆಲುಬಾಗಿತ್ತು.
ವಿಜಯನಗರ ಸಾಮ್ರಾಜ್ಯದ ಸ್ವರ್ಣಯುಗ ಮತ್ತು ನಾಯಕ ಅರಸರ ಆಳ್ವಿಕೆ
ಬಲಿಜ ಸಮುದಾಯದ ರಾಜಕೀಯ ಮತ್ತು ಸೇನಾ ಪ್ರಾಬಲ್ಯದ ನಿಜವಾದ ಸುವರ್ಣಯುಗ ಶುರುವಾಗಿದ್ದು ಹದಿನಾಲ್ಕನೇ ಶತಮಾನದಲ್ಲಿ ವಿಜಯನಗರ ಸಾಮ್ರಾಜ್ಯ ಸ್ಥಾಪನೆಯಾದಾಗ.
ಇತಿಹಾಸವನ್ನು ಸೂಕ್ಷ್ಮವಾಗಿ ಓದಿದರೆ, ವಿಜಯನಗರದ ಅರಸರು ಇಡೀ ದಕ್ಷಿಣ ಭಾರತವನ್ನು ಆಳುತ್ತಿದ್ದಾಗ ಅವರ ಅತಿ ದೊಡ್ಡ ಬೆಂಬಲ ಶಕ್ತಿಯಾಗಿದ್ದವರೇ ಈ ಬಲಿಜ ನಾಯಕರು ಮತ್ತು ದಂಡನಾಯಕರು.
ವಿಜಯನಗರದ ಕಾಲದಲ್ಲಿ ನಗದು ಆಧಾರಿತ ಆರ್ಥಿಕತೆಯನ್ನು ವಿಸ್ತರಿಸಲು ತೆರಿಗೆ ಸಂಗ್ರಹಿಸುವ ಜವಾಬ್ದಾರಿಯನ್ನು ಬಲಿಜರಿಗೆ ವಹಿಸಲಾಗಿತ್ತು.
ಚಕ್ರವರ್ತಿ ಶ್ರೀಕೃಷ್ಣದೇವರಾಯನಿಗೂ ಸಹ ಬಲಿಜ ಅಥವಾ ಕಾಪು ಮೂಲದ ಹಿನ್ನೆಲೆ ಇತ್ತು ಎಂದು ಇತಿಹಾಸಕಾರರು ಅಭಿಪ್ರಾಯಪಡುತ್ತಾರೆ.
ಕೇವಲ ವ್ಯಾಪಾರಿಗಳಾಗಿದ್ದ ಬಲಿಜರು, ವಿಜಯನಗರದ ಕಾಲದಲ್ಲಿ ತಮ್ಮ ಕೈಯಲ್ಲಿದ್ದ ತಕ್ಕಡಿಯನ್ನು ಕೆಳಗಿಟ್ಟು ಕತ್ತಿ ಹಿಡಿದು ಸಾಮ್ರಾಜ್ಯದ ರಕ್ಷಣೆಗೆ ನಿಂತರು. ಪ್ರಾಂತ್ಯಗಳ ಆಡಳಿತಾಧಿಕಾರಿಗಳಾಗಿ, ಮಂತ್ರಿಗಳಾಗಿ ಮತ್ತು ಮಹಾದಂಡನಾಯಕರಾಗಿ ಬೆಳೆದರು. ಶ್ರೀ ಕೃಷ್ಣದೇವರಾಯನ ಆಸ್ಥಾನದಲ್ಲಿ ಅತಿ ಹೆಚ್ಚು ಸೇನಾಪತಿಗಳು ಇದೇ ಸಮುದಾಯಕ್ಕೆ ಸೇರಿದವರಾಗಿದ್ದರು.
ತುಳುವ ವಂಶದ ನರಸ ನಾಯಕನ ಕಾಲದಿಂದಲೂ ಬಲಿಜ ಸಮುದಾಯ ವಿಜಯನಗರದ ರಾಜಕೀಯದಲ್ಲಿ ಅತಿಮುಖ್ಯ ಪಾತ್ರ ವಹಿಸಿತ್ತು.
ವಿಜಯನಗರ ಸಾಮ್ರಾಜ್ಯವನ್ನು ಆಳಿದ ಕೊನೆಯ ರಾಜವಂಶವಾದ ‘ಅರವೀಡು ವಂಶ’ ಮತ್ತು ಕೊನೆಯ ಅರಸ ಅಳಿಯ ರಾಮರಾಯ ‘ಕೋಟ ಬಲಿಜ’ ವಂಶಕ್ಕೆ ಸೇರಿದವರಾಗಿದ್ದರು.
ವಿಜಯನಗರ ಸಾಮ್ರಾಜ್ಯದ ಅಧೀನದಲ್ಲಿ ಮಧುರೈ, ತಂಜಾವೂರು ಮತ್ತು ಜಿಂಜಿಯಲ್ಲಿ ಆಳ್ವಿಕೆ ನಡೆಸಿದ ಪ್ರಖ್ಯಾತ ‘ನಾಯಕ’ ರಾಜರುಗಳು ಇದೇ ಬಲಿಜ ಸಮುದಾಯಕ್ಕೆ ಸೇರಿದವರಾಗಿದ್ದರು.
ಇವರು ಮೊದಲು ವಿಜಯನಗರದ ಸಾಮಂತರಾಗಿ ಆಡಳಿತ ಶುರುಮಾಡಿ, ನಂತರ ಸ್ವತಂತ್ರ ರಾಜರಾಗಿ ದಕ್ಷಿಣ ಭಾರತದಲ್ಲಿ ಕಲೆ, ಸಾಹಿತ್ಯ ಮತ್ತು ವಾಸ್ತುಶಿಲ್ಪಕ್ಕೆ ಅದ್ಭುತ ಕೊಡುಗೆಗಳನ್ನು ನೀಡಿದರು.
ತಮಿಳುನಾಡಿನ ಪ್ರಖ್ಯಾತ ಮಧುರೈ ಮೀನಾಕ್ಷಿ ಅಮ್ಮನವರ ದೇವಾಲಯದ ಇಂದಿನ ಭವ್ಯತೆಗೆ ಮತ್ತು ಅಲ್ಲಿರುವ ಸಾವಿರ ಕಂಬದ ಮಂಟಪದ ನಿರ್ಮಾಣಕ್ಕೆ ಬಲಿಜ ಅರಸರ ಕೊಡುಗೆ ಅಪಾರವಾಗಿದೆ. ಇವರ ಕಾಲದಲ್ಲಿ ತೆಲುಗು ಮತ್ತು ಸಂಸ್ಕೃತ ಸಾಹಿತ್ಯಕ್ಕೂ ಅಪಾರ ಪ್ರೋತ್ಸಾಹ ಸಿಕ್ಕಿತು.
ಅಷ್ಟೇ ಅಲ್ಲ, ಶ್ರೀಲಂಕಾದ ಪ್ರಖ್ಯಾತ ಕ್ಯಾಂಡಿ ಸಾಮ್ರಾಜ್ಯವನ್ನು ಆಳಿದ ಕೊನೆಯ ರಾಜ ಶ್ರೀ ವಿಕ್ರಮ ರಾಜಸಿಂಹ ಕೂಡ ಇದೇ ಸಮುದಾಯದಕೆ ಸೇರಿದವನು ಎನ್ನಲಾಗುತ್ತದೆ.
ಸಾಮ್ರಾಜ್ಯದ ಪತನ, ವಲಸೆ ಮತ್ತು ಪಾಳೇಗಾರರ ಕಾಲ
ಹದಿನಾರನೇ ಶತಮಾನದ ಮಧ್ಯಭಾಗದಲ್ಲಿ ನಡೆದ ರಕ್ಕಸ ತಂಗಡಿ ಅಥವಾ ತಾಳಿಕೋಟೆ ಯುದ್ಧದಲ್ಲಿ ವಿಜಯನಗರ ಸಾಮ್ರಾಜ್ಯ ಪತನವಾದಾಗ ದಕ್ಷಿಣ ಭಾರತದ ರಾಜಕೀಯ ಚಿತ್ರಣವೇ ತಲೆಕೆಳಗಾಯಿತು.
ಸಾಮ್ರಾಜ್ಯ ಛಿದ್ರವಾದ ಮೇಲೆ ಬಲಿಜ ಸಮುದಾಯದ ಸೇನಾಪತಿಗಳು ಮತ್ತು ದಂಡನಾಯಕರು ತಮ್ಮ ಪ್ರಾಣರಕ್ಷಣೆ ಹಾಗೂ ಹೊಸ ನೆಲೆಗಳಿಗಾಗಿ ಬೇರೆ ಬೇರೆ ಕಡೆ ವಲಸೆ ಹೋಗಬೇಕಾಯಿತು.
ಅನೇಕರು ಕರ್ನಾಟಕ, ಆಂಧ್ರಪ್ರದೇಶ ಮತ್ತು ತಮಿಳುನಾಡಿನ ವಿವಿಧ ಭಾಗಗಳಲ್ಲಿ ನೆಲೆಸಿ ಸಣ್ಣ ಸಣ್ಣ ಪ್ರಾಂತ್ಯಗಳನ್ನು ಆಳುವ ‘ಪಾಳೇಗಾರರಾಗಿ’ ಮಾರ್ಪಟ್ಟರು.
ವಿಜಯನಗರದ ರಾಜರು ತಮ್ಮ ಅಧಿಕಾರವನ್ನು ಭದ್ರಪಡಿಸಿಕೊಳ್ಳಲು ಜಾರಿಗೆ ತಂದ ಪಾಳೇಗಾರ ವ್ಯವಸ್ಥೆಯ ಅಡಿಯಲ್ಲಿ, ಸೈನ್ಯವನ್ನು ಒದಗಿಸುವ ಷರತ್ತಿನ ಮೇಲೆ ಸ್ಥಳೀಯ ಆಡಳಿತದ ಹಕ್ಕುಗಳನ್ನು ಪಡೆದ ಪ್ರಮುಖ ಪಾಳೇಗಾರರು ಈ ಸಮುದಾಯದವರೇ ಆಗಿದ್ದರು.
ಚಿತ್ರದುರ್ಗ, ಬಳ್ಳಾರಿ, ಕೋಲಾರ, ತುಮಕೂರು, ರಾಯಲಸೀಮೆ ಮತ್ತು ಮಧುರೈ ಸುತ್ತಮುತ್ತಲಿನ ಭಾಗಗಳಲ್ಲಿ ನೂರಾರು ವರ್ಷಗಳ ಕಾಲ ಈ ಬಲಿಜ ಪಾಳೇಗಾರರು ಆಡಳಿತ ನಡೆಸಿದರು.
ಇವರು ಕೇವಲ ಯುದ್ಧ ಮಾಡಲಿಲ್ಲ, ಬದಲಾಗಿ ತಮ್ಮ ಸ್ಥಳೀಯ ಪ್ರದೇಶಗಳಲ್ಲಿ ದೊಡ್ಡ ದೊಡ್ಡ ಕೆರೆಗಳನ್ನು ಕಟ್ಟಿಸಿದರು, ಶತ್ರುಗಳ ದಾಳಿಯಿಂದ ಜನರನ್ನು ರಕ್ಷಿಸಲು ಭದ್ರವಾದ ಕೋಟೆಗಳನ್ನು ನಿರ್ಮಿಸಿದರು ಮತ್ತು ಸ್ಥಳೀಯ ಕೃಷಿಗೆ ಅಪಾರ ಉತ್ತೇಜನ ನೀಡಿದರು. ಸ್ಥಳೀಯ ಜನರಿಗೆ ನ್ಯಾಯ ಒದಗಿಸುವ ನಾಯಕರಾಗಿ ಇವರು ಜನಪ್ರಿಯರಾದರು.
ವಿಜಯನಗರದ ಪತನದ ನಂತರ ನಡೆದ ಈ ಬೃಹತ್ ವಲಸೆಯ ಕಾರಣದಿಂದಲೇ ಇಂದು ಬಲಿಜರು ದಕ್ಷಿಣ ಭಾರತದ ಪ್ರಮುಖ ರಾಜ್ಯಗಳಾದ್ಯಂತ ವ್ಯಾಪಕವಾಗಿ ಹಂಚಿಹೋಗಿದ್ದಾರೆ.
ಸಾಂಪ್ರದಾಯಿಕ ವೃತ್ತಿಗಳು, ಒಳಪಂಗಡಗಳು ಮತ್ತು ವಿಶಿಷ್ಟ ಸಂಸ್ಕೃತಿ
ವೃತ್ತಿಯ ಆಧಾರದ ಮೇಲೆ ಮತ್ತು ವಾಸಿಸುವ ಪ್ರದೇಶದ ಆಧಾರದ ಮೇಲೆ ಬಲಿಜ ಸಮುದಾಯದಲ್ಲಿ ಕಾಲಕ್ರಮೇಣ ಅನೇಕ ಒಳಪಂಗಡಗಳು ಸೃಷ್ಟಿಯಾದವು.
ಗಾಜಿನ ಬಳೆಗಳನ್ನು ತಯಾರಿಸುವ ಮತ್ತು ಮಾರುವವರನ್ನು ‘ಗಾಜುಲ ಬಲಿಜ’ ಎಂದು ಕರೆಯಲಾಯಿತು. ಅದೇ ರೀತಿ ಕೃಷಿ ಮತ್ತು ಸಾಮಾನ್ಯ ವ್ಯಾಪಾರದಲ್ಲಿ ತೊಡಗಿಕೊಂಡವರು ‘ಗವರ ಬಲಿಜ’ರಾದರು.
ಮುತ್ತು ರತ್ನಗಳನ್ನು ಮಾರುವವರು, ತಿರುಪತಿ ತಿಮ್ಮಪ್ಪನ ದಾಸಯ್ಯನ ವೃತ್ತಿ ಮಾಡುವ ದಾಸ ಬಲಿಜರು, ಶೆಟ್ಟಿ ಬಲಿಜರು, ಪೆರಿಕ ಬಲಿಜರು ಹೀಗೆ ಹತ್ತಾರು ಒಳಪಂಗಡಗಳು ಹುಟ್ಟಿಕೊಂಡವು.
ಇತಿಹಾಸಕಾರ ಡೇವಿಡ್ ವೆಸ್ಟ್ ರುಡ್ನರ್ ಅವರ ಪ್ರಕಾರ, ಹತ್ತೊಂಬತ್ತನೇ ಶತಮಾನದಲ್ಲಿ ಯೋಧರಾಗಿದ್ದ ‘ಬಲಿಜ ನಾಯಕ’ರಿಂದ ಬೇರ್ಪಟ್ಟು ‘ಬಲಿಜ ಚೆಟ್ಟಿ’ ಎಂಬ ವ್ಯಾಪಾರಿ ವರ್ಗವೂ ಹುಟ್ಟಿಕೊಂಡಿತು.
ಇವರು ವ್ಯಾಪಾರಕ್ಕಾಗಿ ಮತ್ತು ಆಡಳಿತಕ್ಕಾಗಿ ಊರಿಂದ ಊರಿಗೆ ಚಲಿಸುತ್ತಿದ್ದರಿಂದ ಇವರ ಸಂಸ್ಕೃತಿಯಲ್ಲಿ ವಿವಿಧ ಭಾಷೆ ಮತ್ತು ಆಚರಣೆಗಳ ಸುಂದರ ಮಿಶ್ರಣವನ್ನು ನಾವು ಕಾಣಬಹುದು.
ಇಂದಿಗೂ ಕರ್ನಾಟಕದಲ್ಲಿ ಮತ್ತು ತಮಿಳುನಾಡಿನಲ್ಲಿರುವ ಬಹುಪಾಲು ಬಲಿಜ ಸಮುದಾಯದವರ ಮಾತೃಭಾಷೆ ತೆಲುಗು ಆಗಿರುವುದಕ್ಕೆ ಇವರ ಐತಿಹಾಸಿಕ ವಲಸೆಯೇ ಕಾರಣ. 
ಬ್ರಿಟಿಷರ ಆಗಮನ ಮತ್ತು ಬದಲಾದ ಸಾಮಾಜಿಕ ಪರಿಸ್ಥಿತಿ
ಬ್ರಿಟಿಷರ ಆಗಮನವು ಬಲಿಜ ಸಮುದಾಯದ ಬದುಕಿನಲ್ಲಿ ಬಹು ದೊಡ್ಡ ಬದಲಾವಣೆ ತಂದಿತು. ಹದಿನೆಂಟು ಮತ್ತು ಹತ್ತೊಂಬತ್ತನೇ ಶತಮಾನದ ವೇಳೆಗೆ, ಕತ್ತಿ ಹಿಡಿದು ಆಳುತ್ತಿದ್ದ ಸ್ಥಳೀಯ ಪಾಳೇಗಾರರ ಅಧಿಕಾರವನ್ನು ಬ್ರಿಟಿಷರು ಸಂಪೂರ್ಣವಾಗಿ ಹತ್ತಿಕ್ಕಿದರು. ಬ್ರಿಟಿಷರು ಜಾರಿಗೆ ತಂದ ಶಸ್ತ್ರಾಸ್ತ್ರ ಕಾಯ್ದೆಗಳಿಂದಾಗಿ ಬಲಿಜರು ತಮ್ಮ ಖಾಸಗಿ ಸೈನ್ಯಗಳನ್ನು ಕಳೆದುಕೊಳ್ಳಬೇಕಾಯಿತು.
ಇನ್ನೊಂದೆಡೆ, ಬ್ರಿಟಿಷರ ಈಸ್ಟ್ ಇಂಡಿಯಾ ಕಂಪನಿಯು ವ್ಯಾಪಾರದ ಮೇಲೆ ಸಂಪೂರ್ಣ ಅಧಿಕಾರ ಸಾಧಿಸಿದ್ದರಿಂದ ಬಲಿಜರ ಸಾಂಪ್ರದಾಯಿಕ ವ್ಯಾಪಾರಗಳಿಗೂ ಮತ್ತು ಅಂತರರಾಷ್ಟ್ರೀಯ ರಫ್ತು ವಹಿವಾಟಿಗೂ ದೊಡ್ಡ ಪೆಟ್ಟು ಬಿತ್ತು. ಸ್ಥಳೀಯ ಕರಕುಶಲ ವಸ್ತುಗಳು ಮತ್ತು ಬಳೆಗಳ ವ್ಯಾಪಾರ ಕುಸಿಯಿತು.
ಅನಿವಾರ್ಯವಾಗಿ ಈ ಸಮುದಾಯದ ಅನೇಕರು ತಮ್ಮ ಮೂಲ ಕಸುಬುಗಳನ್ನು ಬಿಟ್ಟು ಜೀವನ ನಿರ್ವಹಣೆಗಾಗಿ ಕೃಷಿಯತ್ತ ಮುಖ ಮಾಡಬೇಕಾಯಿತು. ಮತ್ತೆ ಕೆಲವರು ಹಳ್ಳಿಗಳಲ್ಲಿ ಸಣ್ಣ ಪುಟ್ಟ ಕಿರಾಣಿ ವ್ಯಾಪಾರಗಳಿಗೆ ಸೀಮಿತರಾದರು.
ಆದರೆ, ವ್ಯಾಪಾರಿ ಬುದ್ಧಿ ಮತ್ತು ಮುನ್ನಡೆಸುವ ನಾಯಕತ್ವದ ಗುಣ ಬಲಿಜ ಸಮುದಾಯದವರ ರಕ್ತದಲ್ಲೇ ಇದ್ದುದರಿಂದ, ಅವರು ಈ ಕಷ್ಟದ ಪರಿಸ್ಥಿತಿಯಲ್ಲೂ ಕುಗ್ಗಲಿಲ್ಲ.
ಮದ್ರಾಸ್ ಪ್ರಾಂತ್ಯದಲ್ಲಿ ಬ್ರಿಟಿಷರ ಆಡಳಿತದ ಕಾಲದಲ್ಲಿ ಅವರು ಬಹಳ ಬೇಗನೆ ಆಧುನಿಕ ಇಂಗ್ಲಿಷ್ ಶಿಕ್ಷಣದತ್ತ ಒಲವು ತೋರಿದರು. ಅನೇಕರು ಸರ್ಕಾರಿ ಉದ್ಯೋಗಗಳನ್ನು ಪಡೆದರು, ಹೊಸ ತಂತ್ರಜ್ಞಾನ ಆಧಾರಿತ ಗಿರಣಿಗಳನ್ನು ಮತ್ತು ವ್ಯಾಪಾರಗಳನ್ನು ಶುರು ಮಾಡಿ ಮತ್ತೆ ಆರ್ಥಿಕವಾಗಿ ಮೇಲೆ ಬರುವ ಯಶಸ್ವಿ ಪ್ರಯತ್ನ ಮಾಡಿದರು.
ಆಧುನಿಕ ಬಲಿಜ ಸಮುದಾಯ, ಪ್ರಖ್ಯಾತ ಸಾಧಕರು ಮತ್ತು ಪ್ರಸ್ತುತ ಸವಾಲುಗಳು
ಸ್ವಾತಂತ್ರ್ಯಾನಂತರದ ಭಾರತದಲ್ಲಿ ಬಲಿಜ ಸಮುದಾಯವು ಶಿಕ್ಷಣ, ರಾಜಕೀಯ, ಸಿನೆಮಾ ಮತ್ತು ಉದ್ಯಮ ಕ್ಷೇತ್ರಗಳಲ್ಲಿ ಮತ್ತೆ ತನ್ನ ಛಾಪನ್ನು ಬಲವಾಗಿ ಮೂಡಿಸಿದೆ.
ಇಂದು ಕರ್ನಾಟಕದಲ್ಲಿ ಬೆಂಗಳೂರು, ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ಚಿತ್ರದುರ್ಗ ಮತ್ತು ಮೈಸೂರು ಭಾಗಗಳಲ್ಲಿ ಇವರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ನೆರೆಯ ಆಂಧ್ರಪ್ರದೇಶ ಮತ್ತು ತೆಲಂಗಾಣದಲ್ಲಿ ಇವರನ್ನು ಕಾಪು ಅಥವಾ ಬಲಿಜ ಎಂದು, ತಮಿಳುನಾಡಿನಲ್ಲಿ ನಾಯ್ಡು ಅಥವಾ ಚೆಟ್ಟಿಯಾರ್ ಎಂದು ಕರೆಯಲಾಗುತ್ತದೆ.
ಆಧುನಿಕ ಭಾರತದ ಸಾಮಾಜಿಕ ಇತಿಹಾಸವನ್ನು ನೋಡಿದಾಗ, ಸಾಮಾಜಿಕ ನ್ಯಾಯಕ್ಕಾಗಿ ಮತ್ತು ಜಾತಿ ನಿರ್ಮೂಲನೆಗಾಗಿ ಬಲವಾಗಿ ಹೋರಾಡಿದ ತಮಿಳುನಾಡಿನ ಮಹಾನ್ ಸಮಾಜ ಸುಧಾರಕ ಪೆರಿಯಾರ್ ಇ.ವಿ.ರಾಮಸ್ವಾಮಿ ಅವರು ಇದೇ ಬಲಿಜ ಸಮುದಾಯದಿಂದ ಬಂದವರು.
ಕೇವಲ ರಾಜಕೀಯವಷ್ಟೇ ಅಲ್ಲದೆ, ಕರ್ನಾಟಕ ಮತ್ತು ಆಂಧ್ರಪ್ರದೇಶದ ಅನೇಕ ಪ್ರಮುಖ ಮಂತ್ರಿಗಳು, ಸಾವಿರಾರು ಕೋಟಿ ವಹಿವಾಟು ನಡೆಸುವ ಯಶಸ್ವಿ ಉದ್ಯಮಿಗಳು, ಜನಪ್ರಿಯ ಸಿನೆಮಾ ತಾರೆಯರು, ನಿರ್ದೇಶಕರು ಮತ್ತು ಶಿಕ್ಷಣ ತಜ್ಞರು ಇದೇ ಬಲಿಜ ಸಮುದಾಯಕ್ಕೆ ಸೇರಿದ್ದಾರೆ.
ಇಷ್ಟೆಲ್ಲಾ ವೈಭವದ ಇತಿಹಾಸ, ಸಂಸ್ಕೃತಿ ಮತ್ತು ಸಾಧನೆಗಳಿದ್ದರೂ ಇಂದಿನ ದಿನಗಳಲ್ಲಿ ಬಲಿಜ ಸಮುದಾಯ ಕೆಲವು ಗಂಭೀರ ಸಾಮಾಜಿಕ ಸವಾಲುಗಳನ್ನು ಎದುರಿಸುತ್ತಿದೆ.
ಮೀಸಲಾತಿ ಮತ್ತು ಸಾಮಾಜಿಕ ನ್ಯಾಯದ ವಿಚಾರದಲ್ಲಿ ಈ ಸಮುದಾಯವು ಇಂದಿಗೂ ಸರ್ಕಾರದ ಮಟ್ಟದಲ್ಲಿ ನಿರಂತರ ಹೋರಾಟಗಳನ್ನು ಮಾಡುತ್ತಲೇ ಇದೆ. ಕರ್ನಾಟಕದಲ್ಲಿ ಮೀಸಲಾತಿ ವರ್ಗೀಕರಣದ ವಿಚಾರದಲ್ಲಿ ಸಮುದಾಯಕ್ಕೆ ನ್ಯಾಯ ಸಿಗಬೇಕು ಎಂಬ ಕೂಗು ದಶಕಗಳಿಂದಲೂ ಕೇಳಿ ಬರುತ್ತಲೇ ಇದೆ.
ಬಲಿಜ ಸಮುದಾಯದ ಇತಿಹಾಸವು ವ್ಯಾಪಾರ, ಸಾಹಸ, ಆಡಳಿತ, ಕಲೆ ಮತ್ತು ಸಾಮಾಜಿಕ ಪ್ರಗತಿಯ ದೀರ್ಘ ಪಯಣವನ್ನು ಪ್ರತಿಬಿಂಬಿಸುತ್ತದೆ. ಪ್ರಾಚೀನ ಐಹೊಳೆ ಐನೂರಿನ ವ್ಯಾಪಾರ ಸಂಘದಿಂದ ವಿಜಯನಗರ ಸಾಮ್ರಾಜ್ಯದ ನಾಯಕರು ಮತ್ತು ಪಾಳೇಗಾರರವರೆಗೆ, ಈ ಸಮುದಾಯವು ದಕ್ಷಿಣ ಭಾರತದ ಇತಿಹಾಸದಲ್ಲಿ ತನ್ನದೇ ಆದ ಮಹತ್ವದ ಸ್ಥಾನವನ್ನು ಪಡೆದಿದೆ.
ಈ ಐತಿಹಾಸಿಕ ಮಾಹಿತಿಯು ಬಲಿಜ ಸಮುದಾಯದ ಹಿನ್ನೆಲೆ, ಸಂಸ್ಕೃತಿ ಮತ್ತು ಸಾಧನೆಗಳನ್ನು ಅರ್ಥಮಾಡಿಕೊಳ್ಳಲು ಸಹಾಯವಾಗುತ್ತದೆ. ಬಲಿಜ ಸಮುದಾಯದ ಇತಿಹಾಸ, ವಲಸೆ, ವ್ಯಾಪಾರ ಸಂಘಗಳು ಮತ್ತು ವಿಜಯನಗರ ನಾಯಕರ ಕುರಿತ ಇನ್ನಷ್ಟು ಮಾಹಿತಿಗಳನ್ನು ಮುಂದಿನ ಲೇಖನಗಳಲ್ಲಿ ತಿಳಿಯಬಹುದು.
ಇದನ್ನೂ ಓದಿ:
- ಬಣಜಿಗ ಸಮುದಾಯದ ಸಂಪೂರ್ಣ ಇತಿಹಾಸ | Banajiga Caste History in Kannada
- ಶೆಟ್ಟಿ ಸಮುದಾಯದ ಇತಿಹಾಸ | Shetty Caste History in Kannada
ಈ ಮಾಹಿತಿ ನಿಮಗೆ ಉಪಯುಕ್ತವೆನಿಸಿದರೆ, ದಯವಿಟ್ಟು ನಿಮ್ಮ ಸ್ನೇಹಿತರು ಮತ್ತು ಇತರರೊಂದಿಗೆ ಹಂಚಿಕೊಳ್ಳಿ. ಇದೇ ರೀತಿ, ಇನ್ನಿತರ ವಿಷಯಗಳನ್ನೂ ಸಹ ನೀವು ನಮ್ಮ ಬ್ಲಾಗ್ ನಲ್ಲಿ ಓದಬಹುದು.
ಈ ಬ್ಲಾಗ್ನಲ್ಲಿರುವ ಎಲ್ಲಾ ವಿಷಯವು ಹಕ್ಕುಸ್ವಾಮ್ಯವನ್ನು ಹೊಂದಿದೆ ಮತ್ತು ಲೇಖಕರ ಅನುಮತಿಯಿಲ್ಲದೆ ನಕಲು ಮಾಡುವುದನ್ನು ಅನುಮತಿಸಲಾಗುವುದಿಲ್ಲ.
All content on this blog is copyrighted, and copying is not allowed without permission from the author.
